ಜನಪರ ಮತ್ತು ತಳಸಮುದಾಯಗಳ ಅಸ್ಮಿತೆಗಾಗಿ ಕಾರ್ಯಕ್ರಮಗಳು ನಡೆಯುತ್ತಿರುವುದು ಬಹಳ ದೊಡ್ಡ ವಿಚಾರ. ಈ ನಿಟ್ಟಿನಲ್ಲಿ ಸಾಂಸ್ಕೃತಿಕ ಸಂಸ್ಥೆಗಳು ಗಟ್ಟಿಯಾಗಬೇಕಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್ ಹೇಳಿದರು.
ಕೋಲಾರ ನಗರ ಹೊರವಲಯದ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ 213ನೇ ಹುಣ್ಣಿಮೆ ಹಾಡು ಹಾಗೂ ಈದಿನ ವಿಶೇಷ ಸಂಚಿಕೆ ಮತ್ತು ನ್ಯೂಸ್ ಆಪ್ ಬಿಡುಗಡೆ ಸಮಾರಂಭದಲ್ಲಿ ಗದ್ದುಗೆ ಗೌರವ ಸ್ವೀಕರಿಸಿ ಬಳಿಕ ಮಾತನಾಡಿದರು.
ಸಾಮಾನ್ಯವಾಗಿ ಹೋರಾಟಗಳು, ಮೆರವಣಿಗೆಗಳು ಕಾರ್ಯಕ್ರಮಗಳು ಮನರಂಜನೆಗಾಗಿ ಅಲ್ಲ, ಅವು ನಮ್ಮ ಅರಿವಿನ ಕಾರ್ಯಕ್ರಮಗಳು. ಪ್ರತಿಯೊಂದು ಕಾರ್ಯಕ್ರಮಗಳಲ್ಲು ಬದ್ಧತೆ ಇರಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳು ತಳಸಮುದಾಯಗಳ ಬದುಕಿಗೆ ಸಂಬಂಧಪಟ್ಟಿರಬೇಕು ಎಂದು ಹೇಳಿದರು.

ಬಿನ್ನಬೆದವ ಮಾಡಬೇಡಿರಿ, ಬಾಯಲ್ಲಿ ಬೆಲ್ಲ ಎದೆಯಲ್ಲಿ ಕತ್ತರಿ ಅನ್ನೋ ಜಾತಿಗರ ಸಂಘವ ಮಾಡಲೂಬೇಡಿರಿ ಮುಂತಾದ ತತ್ವಪದಗಳ ಸಾಲುಗಳನ್ನು ಮೆಲುಕು ಹಾಕುವ ಮೂಲಕ ಹೋರಾಟ ಗೀತೆಗಳ ಸಂದೇಶವನ್ನು ರವಾನಿಸಿದರು.
ಈದಿನ ಡಾಟ್ ಕಾಮ್‌ನ ಎಚ್‌ವಿ ವಾಸು ಮಾತನಾಡಿ, ಈದಿನ ಡಾಟ್ ಕಾಮ್ ಕೇವಲ ಒಂದು ಮಾಧ್ಯಮ ಸಂಸ್ಥೆ ಅಲ್ಲ. ಇದು ಇಡೀ ರಾಜ್ಯದಲ್ಲಿರುವ ಜನಸಾಮಾನ್ಯರು ತಮ್ಮ ಭಾಗದ ಸುದ್ದಿಗಳನ್ನು ಬರೆದು ಕಳಿಸುವ ನಿಟ್ಟಿನಲ್ಲಿ ತರಭೇತಿ ನೀಡುವ ಸಂಸ್ಥೆ. ನಾಗರೀಕ ಪತ್ರಕರ್ತರನ್ನು ಹುಟ್ಟಿಹಾಕುವ ಸಂಸ್ಥೆ. ಇದೀಗ ತನ್ನ ಎರಡು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಕ್ಷೇತ್ರಗಳನ್ನು ಒಳಗೊಂಡಂತೆ ಒಂದು ವಿಶೇಷಾಂಕವನ್ನು ಬಿಡುಗಡೆ ಮಾಡಿದೆ. ಎಲ್ಲರೂ ಇದನ್ನು ಕೊಂಡು ಓದಬೇಕು ಎಂದು ಮನವಿ ಮಾಡಿದರು.

ಕನ್ನಡ ಉಪನ್ಯಾಸಕರಾದ ಜೆ ಜಿ ನಾಗರಾಜ್ ಮಾತನಾಡಿ, ನಾನು ಸಹ ಈದಿನ ಡಾಟ್ ಕಾಮ್ ಅಭಿಮಾನಿ. ಇಂದು ಈದಿನ ಡಾಟ್ ಕಾಮ್‌ನ ವಿಶೇಷ ಸಂಚಿಕೆ ಬಿಡುಗಡೆಯಾಗಿರುವುದು ಸಂತಸದ ವಿಚಾರ. ಈದಿನ ನೈಜತೆಯನ್ನು ಹೇಳುವ ಡಿಜಿಟಲ್ ಮಾಧ್ಯಮ ಸಂಸ್ಥೆಯಾಗಿದ್ದು ಎಲ್ಲರೂ ಈ ಸಂಸ್ಥೆಯನ್ನು ಬೆಂಬಲಿಸೋಣ ಎಂದು ಹೇಳಿದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಮಹಾ ಕುಂಭಮೇಳ ಯಾರಿಗಾಗಿ, ಯಾತಕ್ಕಾಗಿ?
ಆದಿಮ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರಾದ ಎನ್ ಮುನಿಸ್ವಾಮಿ, ಕೋಲಾರ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಾಥ್ ಎನ್, ಅಥ್ಲೆಟಿಕ್ ತರಭೇತುದಾರ ಬೀರಮಾನಹಳ್ಳಿ ಶ್ರೀನಿವಾಸ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದೇ ವೇಳೆ ಆರ್ ಲಕ್ಷ್ಮೀ ನಾರಾಯಣ ಅನುವಾದ, ಮೈಕೊ ಶಿವಶಂಕರ್ ಬೆಳಕು, ತುರಾಂಡಳ್ಳಿ ಶ್ರೀನಿವಾಸ್ ಸಂಗಿತ, ರಾಮಕೃಷ್ಣ ಬೆಳ್ತೂರ್ ನಿರ್ದೇಶನ, ಮಾಲೂರು ಶ್ರೀನಿವಾಸ್ ನಿರ್ಮಿಸಿರುವ ಬೆಂಗಳೂರಿನ ನವರಸ ನಟನ ಅಕಾಡೆಮಿ ಅಭಿನಯದ ತಂಡದಿಂದ “ಇನ್ನೊಬ್ಬ ದ್ರೋಣಾಚಾರ್ಯ” ನಾಟಕ ಉತ್ತಮ ಪ್ರದರ್ಶನ ಕಂಡಿತು.
ಕಾರ್ಯಕ್ರಮದಲ್ಲಿ ಆದಿಮ ಕಾರ್ಯದರ್ಶಿ ಕೊಮ್ಮಣ್ಣ, ಅಮಾಸ ಕೆ.ವಿ ನಾಯಕ್, ಜನಶಕ್ತಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಗೆ ಸಿರಿಮನೆ, ಜಾಗೃತ ಕರ್ನಾಟಕದ ಗಂಗಾಧರ್ ಮುಳುಗುಂದ, ಡಿಎಸ್‌ಎಸ್ ಮುಖಂಡ ವಿಜಯ್ ಕುಮಾರ್, ಕಿತಂಡೂರು ವೆಂಕಟರಾಮ್, ಛಾಯಾಗ್ರಾಹಕರಾದ ಸುಬ್ರಹ್ಮಣ್ಯ, ಸಂವಾದ ಸಂಸ್ಥೆಯ ಸಬೀನಾ, ಈದಿನ ಡಾಟ್ ಕಾಮ್‌ನ ಜಿಲ್ಲಾ ಸಂಯೋಜಕ ವಿಜಯ್ ಕುಮಾರ್ ಗಜ್ಜರಹಳ್ಳಿ, ನಾಗರೀಕ ಪತ್ರಕರ್ತ ಸುನಿಲ್ ಮುಳ್ಳಹಳ್ಳಿ ಸೇರಿದಂತೆ ಮುಂತಾದವರು ಹಾಜರಿದ್ದರು.