ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಯಾಣಿಸುತ್ತಿದ್ದ ಕಾರು ಮಂಗಳವಾರ ಮುಂಜಾನೆ ಅಪಘಾತಕ್ಕೀಡಾಗಿದ್ದು, ಸಚಿವೆ, ಅವರ ಸಹೋದರ ಹಾಗೂ ಕಾರು ಚಾಲಕನಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿದಂತೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಾರು ಚಾಲಕ ಜಿ ಶಿವಪ್ರಸಾದ್ ವಿರುದ್ಧ ಮಂಗಳವಾರ ಪ್ರಕರಣ ದಾಖಲಾಗಿತ್ತು. ಇದೀಗ, ಶಿವಪ್ರಸಾದ್ ಅವರು ಟ್ರಕ್ ಚಾಲಕನೊಬ್ಬನ ವಿರುದ್ಧ ದೂರು ದಾಖಲಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ ಟ್ರಕ್ ಚಾಲಕನ ವಿರುದ್ಧವೂ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟ್ರಕ್ ಚಾಲಕನ ವಿರುದ್ದ ದೂರು ನೀಡಿರುವ ಶಿವಪ್ರಸಾದ್, “ಟ್ರಕ್ ಚಾಲಕ ತಮ್ಮ ಕಾರನ್ನು ಓವರ್ಟೇಕ್ ಮಾಡುವ ಪ್ರಯತ್ನಸಿ, ಕಾರಿಗೆ ಗುದ್ದಿದ್ದಾರೆ. ಪರಿಣಾಮ ಅಪಘಾತ ಸಂಭವಿಸಿದೆ. ಘಟನೆಗೆ ಟ್ರಕ್ ಚಾಲಕನ ಅಜಾಗರೂಕ ಚಾಲನೆಯೇ ಕಾರಣ. ಕಾರಿಗೆ ಟ್ರಕ್ ಗುದ್ದಿದ್ದರಿಂದ ತಮ್ಮ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆಯಿತು” ಎಂದು ಆರೋಪಿಸಿದ್ದಾರೆ.
“ನಾನು ಸಚಿವರ ಸರ್ಕಾರಿ ಕಾರನ್ನು ಚಲಾಯಿಸುತ್ತಿದ್ದೆ. ಕಿತ್ತೂರು ಬಳಿಯ ಅಂಬಡಗಟ್ಟಿ ಸಮೀಪ ನಮ್ಮ ಮುಂದೆ ಲೇನ್ 1ರಲ್ಲಿ ಕಂಟೇನರ್ ಟ್ರಕ್ ಹೋಗುತ್ತಿತ್ತು. ಅದರ ಚಾಲಕ ಯಾವುದೇ ಮುನ್ಸೂಚನೆ ಕೊಡದೆ ಎಡಬದಿಗೆ ಟ್ರಕ್‌ಅನ್ನು ತಿರುಗಿಸಿದರು. ಕಾರನ್ನು ರಕ್ಷಣವೇ ಎಡಬದಿಗೆ ತೆಗೆದುಕೊಂಡರೂ, ಕಾರಿನ ಬಲಬದಿಗೆ ಟ್ರಕ್ ತಾಗಿತು. ಹೀಗಾಗಿ, ಕಾರು ನಿಯಂತ್ರಣ ತಪ್ಪಿ ಸರ್ವಿಸ್ ರಸ್ತೆಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆಯಿತು. ಅಪಘಾತ ಎಸಗಿದ ಟ್ರಕ್ ಚಾಲಕ, ಅಪಘಾತವಾಗಿದ್ದನ್ನು ಕಂಡರೂ ವಾಹನ ನಿಲ್ಲಿಸದೇ ಹೋಗಿದ್ದಾನೆ” ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಅವರ ದೂರಿನ ಆಧಾರದ ಮೇಲೆ ಅಪರಿಚಿತ ಟ್ರಕ್ ಚಾಲಕನ ವಿರುದ್ದ ಬಿಎನ್ಎಸ್ ಕಾಯ್ದೆಯ ಸೆಕ್ಷನ್ 281, 125ಎ, 125 ಬಿ ಹಾಗೂ ಭಾರತೀಯ ಮೋಟಾರು ವಾಹನ ಕಾಯ್ದೆಯಡಿ 134, 187 ಅಡಿ ಪ್ರಕರಣ ದಾಖಲಾಗಿದೆ. ಕಿತ್ತೂರು ಪೊಲೀಸ್ ಠಾಣೆಯ ಪೊಲೀಸರು ತನಿಖೆ ಆರಂಭಿದ್ದಾರೆ.
ಮಂಗಳವಾರ ಅಪಘಾತ ಸುದ್ದಿ ವರದಿಯಾದಾಗ, ರಸ್ತೆಯಲ್ಲಿ ನಾಯಿ ಅಡ್ಡ ಬಂದಿತ್ತು. ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿತ್ತು. ಈ ಬಗ್ಗೆ ಕಾರು ಚಾಲಕ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ, ಅವರು ಪೊಲೀಸರಿಗೆ ದೂರು ನೀಡಿದ್ದು, ಅಪಘಾತಕ್ಕೆ ಟ್ರಕ್ ಚಾಲಕನ ಅಜಾಗರೂಕ ಚಾಲನೆಯೇ ಕಾರಣವೆಂದು ಆರೋಪಿಸಿದ್ದಾರೆ.