ಆಸ್ತಿಯಲ್ಲಿ ಪಾಲು ಕೊಡಲಿಲ್ಲವೆಂದು ಮೊದಲ ಪತ್ನಿ, ಮಗ, ಆಕೆಯ ಅಣ್ಣ ಹಾಗೂ ತಂದೆ ಸೇರಿ ಮಚ್ಚಿನಿಂದ ತಲೆಗೆ ಹೊಡೆದು ಪತಿಯ ಕೊಲೆ ಮಾಡಿಸಿದ್ದರು. ಕೊಲೆ ನಂತರ ತಲೆಮರೆಸಿಕೊಂಡಿದ್ದ ಪ್ರಕರಣದ ಪ್ರಮುಖ ಆರೋಪಿಯನ್ನು ದಾವಣಗೆರೆ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಚನ್ನಗಿರಿ ತಾಲೂಕಿನ ಅಜ್ಜಿಹಳ್ಳಿ ಗ್ರಾಮದಲ್ಲಿ ನಡೆದಿದ್ದ ಕೊಲೆ ಪ್ರಕರಣದ ಪ್ರಮುಖ ಆರೋಪಿ ರಂಗಸ್ವಾಮಿ ಟಿ ಎನ್ ಮೈಕಲ್ ರಂಗ ಎಂಬಾತನನ್ನು ಚನ್ನಗಿರಿ ಪೊಲೀಸರು ಬಂಧಿಸಿದ್ದಾರೆ.
ಚನ್ನಗಿರಿ ತಾಲೂಕಿನ ಅಜ್ಜಿಹಳ್ಳಿ ಗ್ರಾಮದ ವಾಸಿಯಾದ ಹನುಮಂತಪ್ಪ ಜಮೀನಿನಲ್ಲಿ ಪಾಲು ಕೊಡಲಿಲ್ಲವೆಂದು ಇವರ ಮೊದಲ ಹೆಂಡತಿ ಆಶಾ ಮತ್ತು ಮಕ್ಕಳು ಆಕೆಯ ಅಣ್ಣ ರಂಗಸ್ವಾಮಿ, ಮಗ ಲಿಖಿತ್, ತನ್ನ ತಂದೆ ವಿ ಟಿ ನಾಗರಾಜಪ್ಪ ಸೇರಿ ಹನುಮಂತಪ್ಪನನ್ನು ಕೊಲೆ ಮಾಡುವ ಸಂಚು ರೂಪಿಸಿದ್ದರು.
ರಂಗಸ್ವಾಮಿಯು 2024ರ ನವೆಬಂರ್ 28ರಂದು ಬೆಳಿಗ್ಗೆ ಸುಮಾರು7ರ ಸಮಯದಲ್ಲಿ ಅಜ್ಜಿಹಳ್ಳಿ ಗ್ರಾಮದ ರಸ್ತೆಯಲ್ಲಿ ಬೈಕಿನಲ್ಲಿದ್ದ ಹನುಮಂತಪ್ಪನನ್ನು ಹಿಂಬಾಲಿಸಿಕೊಂಡು ಹೋಗಿ ಮಚ್ಚಿನಿಂದ ತಲೆಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದನು. ಈ ಸಂಬಂಧ ಪ್ರಕರಣ ದಾಖಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಕಾಲುವೆಯಲ್ಲಿ ಈಜಲು ಹೋದ ಯುವಕ ನೀರುಪಾಲು
ಹನುಮಂತಪ್ಪನನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ರಂಗಸ್ವಾಮಿ ಟಿ ಎನ್ ಮೈಕಲ್ ರಂಗ ಎಂಬಾತನ ಪತ್ತೆಗೆ ಬಲೆ ಬೀಸಲಾಗಿತ್ತು. ಆರೋಪಿ ಸಿಕ್ಕಿರಲಿಲ್ಲ, ಇದೀಗ ಪೊಲೀಸರ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಪ್ರಕರಣದ ಮೊದಲ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದ ಆರೋಪಿ ಬಂಧಿಸಿದ ಚನ್ನಗಿರಿ ಪೊಲೀಸರಿಗೆ ಎಸ್‌ಪಿ ಉಮಾ ಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.