ಮಾಜಿ ಸಭಾಧ್ಯಕ್ಷ ಕೆ ಆರ್ ರಮೇಶ್ ಕುಮಾರ್ ಅವರು ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನಲಾದ ಅರಣ್ಯ ಜಮೀನಿನ ಜಂಟಿ ಸರ್ವೆ ಕಾರ್ಯ ಬುಧವಾರ ಆರಂಭವಾಗಿದೆ.
ಜಿಲ್ಲಾಡಳಿತ ದಿನಾಂಕ ನಿಗದಿ ಮಾಡಿಕೊಂಡು, ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಹೊಸಹುಡ್ಯ ಗ್ರಾಮದ ಜಿಗಲಕುಂಟೆ ಅರಣ್ಯ ಪ್ರದೇಶದ ಸರ್ವೆ ನಂಬರ್ 1 ಮತ್ತು 2ರ ಜಮೀನಿನ ಜಂಟಿ ಸಮೀಕ್ಷೆ ಹೈಕೋರ್ಟ್ ನಿರ್ದೇಶನದಂತೆ ಇಂದು ಜಂಟಿ ಸರ್ವೆ ಕಾರ್ಯ ನಡೆಸುತ್ತಿದೆ.
ಅರ್ಜಿದಾರ ಮಾಜಿ ಸಚಿವ ಕೆ.ಆರ್.ರಮೇಶ್ ಕುಮಾರ್ ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ. ಜಿಲ್ಲಾಧಿಕಾರಿ ಎಂ.ಆರ್.ರವಿ ನೇತೃತ್ವದಲ್ಲಿ ನಡೆಯುತ್ತಿದ್ದು, ಡಿಸಿಎಫ್ ಸರೀನಾ ಸಿಕ್ಕಲಿಗಾರ್, ಡಿಡಿಎಲ್‌ಆರ್ ಸಂಜಯ್, ಉಪವಿಭಾಗಾಧಿಕಾರಿ ಡಾ.ಮೈತ್ರಿ, ಶ್ರೀನಿವಾಸಪುರ ತಹಶೀಲ್ದಾರ್ ಜಿ.ಎನ್.ಸುಧೀಂದ್ರ ಸರ್ವೇಯಲ್ಲಿ ಇದ್ದಾರೆ.
ಜಿನಗುಲಕುಂಟೆ ಅರಣ್ಯ ಪ್ರದೇಶದಲ್ಲಿ ರಮೇಶಕುಮಾರ್ 61.39 ಎಕರೆ ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನುವ ಆರೋಪವಿದೆ. ಸೂಕ್ತ ದಾಖಲೆಗಳೊಂದಿಗೆ ಸ್ಥಳಕ್ಕೆ ಹಾಜರಾಗುವಂತೆ ರಮೇಶ್ ಕುಮಾರ್‌ಗೆ ಸೂಚನೆ ನೀಡಲಾಗಿತ್ತು.ಆ ಪ್ರಕಾರ ರಮೇಶ್ ಕುಮಾರ್ ಸ್ಥಳಕ್ಕೆ ಬಂದು ದಾಖಲೆ ಒಪ್ಪಿಸಿ, ಸಹಿ ಹಾಕಿ ಸಮೀಕ್ಷೆ ಕಾರ್ಯಕ್ಕೆ ಸಹಕಾರ ನೀಡಿದ್ದಾರೆ. ಹೊಸಹುಡ್ಯ ಸುತ್ತಮುತ್ತ ಪೊಲೀಸರನ್ನು ನಿಯೋಜಿಸಲಾಗಿದೆ. ನಾಲ್ಕು ತಂಡಗಳನ್ನು ರಚಿಸಿದ್ದು, ರೋವರ್ ಉಪಕರಣ ಬಳಸಿ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪ್ರಕರಣ ಹಿನ್ನೆಲೆ
ಶ್ರೀನಿವಾಸಪುರ ವಲಯದಲ್ಲಿ ಬಡವರು ಒತ್ತುವರಿ ಮಾಡಿಕೊಂಡಿದ್ದ ಸಾವಿರಾರು ಎಕರೆ ಜಮೀನನ್ನು ತೆರವುಗೊಳಿಸಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳು, ಬಲಾಢ್ಯರ ಜಮೀನನ್ನು ತೆರವುಗೊಳಿಸುತ್ತಿಲ್ಲ. ಜಿನಗಲಕುಂಟೆ ಅರಣ್ಯ ಭೂಮಿ ಒತ್ತುವರಿಯನ್ನು ತೆರವುಗೊಳಿಸಲು ಮುಂದಾಗುತ್ತಿಲ್ಲ ಎಂದು ಕೇಂದ್ರ ಅರಣ್ಯ ಇಲಾಖೆಗೆ ಕೆಲವರು ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಕೇಂದ್ರ ಅರಣ್ಯ ಇಲಾಖೆಯು ಕೂಡಲೇ ಒತ್ತುವರಿ ತೆರವುಗೊಳಿಸಿ ವರದಿ ನೀಡುವಂತೆ ರಾಜ್ಯ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ರಾಜ್ಯ ಮಟ್ಟದ ಅಧಿಕಾರಿಗಳು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದ್ದರು.
ಪ್ರಕರಣವನ್ನು ವಿಲೇ ಮಾಡಿದ್ದ ಕರ್ನಾಟಕ ಹೈಕೋರ್ಟ್ ಕೆ.ಆರ್. ರಮೇಶಕುಮಾರ್ ಅವರ ಉಪಸ್ಥಿತಿಯಲ್ಲಿ ಜಂಟಿ ಸರ್ವೆ ನಡೆಸಿ, ಅರಣ್ಯ ಜಮೀನು ಒತ್ತುವರಿ ಆಗಿರುವುದು ಕಂಡು ಬಂದಲ್ಲಿ ತೆರವುಗೊಳಿಸಿ ಕ್ರಮ ಜರುಗಿಸಬೇಕೆಂದು ಸೂಚಿಸಿತ್ತು. ಆದರೆ, ಜಂಟಿ ಸರ್ವೆ ನಡೆದಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು