ವ್ಯಕ್ತಿಯೊಬ್ಬ ತನ್ನ ಎರಡನೇ ಪತ್ನಿಯ ಮಾತು ಕೇಳಿ ಮೊದಲ ಪತ್ನಿಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಇಂಚಲ ಗ್ರಾಮದಲ್ಲಿ ನಡೆದಿದೆ.
ಇಂಚಲ ಗ್ರಾಮದ ಶಮಾ ಪಠಾಣ್(25) ಕೊಲೆಯಾದ ಮಹಿಳೆಯಾಗಿದ್ದು, ಆರೋಪಿತರನ್ನು ರಿಯಾಜ್ ಸಾಹೇಬ ಖಾನ ಪಠಾಣ್ ಮತ್ತು ಫರ್ಜಾನಾ ರಿಯಾಜ್ ಪಠಾಣ್(28) ಎಂದು ಗುರುತಿಸಲಾಗಿದೆ. ಇಬ್ಬರು ಆರೋಪಿಗಳೂ ತಲೆಮರೆಸಿಕೊಂಡಿದ್ದಾರೆ.
ಕೊಲೆ ಆರೋಪಿ ರಿಯಾಜ್ ಕಳೆದ ಒಂದು ವರ್ಷದ ಹಿಂದೆ ಫರ್ಜಾನಾ ಎಂಬುವವರನ್ನು ಎರಡನೇ ಮದುವೆಯಾಗಿದ್ದ. ಮೊದಲನೇ ಹೆಂಡತಿ ಶಮಾ ಹಾಗೂ ರಿಯಾಜ್ ನಡುವೆ ವೈಮನಸ್ಸು ಉಂಟಾಗಿ ಹೊಂದಾಣಿಕೆ ಆಗದಿರುವ ಕಾರಣ ಅವಳು ತನ್ನ ತವರುಮನೆ ಇಂಚಲ ಗ್ರಾಮಕ್ಕೆ ಬಂದು ವಾಸವಾಗಿದ್ದಳು.
“ಆರೋಪಿ ತನ್ನ ಎರಡನೇ ಹೆಂಡತಿ ಫರ್ಜಾನಾಳನ್ನೂ ಕೂಡಾ ಇಂಚಲ ಗ್ರಾಮಕ್ಕೆ ಕರೆದುಕೊಂಡು ಬಂದು ಇಬ್ಬರಿಗೂ ಬೇರೆ ಮನೆ ಮಾಡಿದ್ದನು. ಎರಡನೇ ಹೆಂಡತಿ ಫರ್ಜಾನಾಳ ಕುಮ್ಮಕ್ಕಿನಿಂದ ತಾನು ಮೊದಲ ಪತ್ನಿಯನ್ನು ಕೊಲ್ಲುವುದಾಗಿ ಯತ್ನಿಸಿದ್ದು, ಶಮಾ ಮನೆಯಲ್ಲಿ ಮಲಗಿದಾಗ ಮುಖ ಮತ್ತು ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ” ಎಂದು ದಾವಲಸಾಬ ಮಕ್ತುಮ ಸಾಬ ಬುಡ್ಡನ್ನವರ ಮುರಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಬೆಳಗಾವಿ | ಅಪ್ರಾಪ್ತೆಯರ ಮೇಲೆ ಸಾಮೂಹಿಕ ಅತ್ಯಾಚಾರ; ವಿಡಿಯೊ ತೋರಿಸಿ ಬೆದರಿಸುತ್ತಿದ್ದ ಆರೋಪಿಗಳ ಬಂಧನ
ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ ಪಿ ಬಸರಗಿ, ಡಿವೈಎಸ್‌ಪಿ ಚಿದಂಬರ, ಪಿಐ ವೀರೇಶ ಮಠಪತಿ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
