ಅಮೆರಿಕನ್ನರಲ್ಲಿ ಭಯ ಹುಟ್ಟಿಸಿದ ಟ್ರಂಪ್ ಕಾರ್ಯಕಾರಿ ಆದೇಶಗಳು: ಸರ್ವಾಧಿಕಾರಿ ಆಡಳಿತಕ್ಕೆ ನಾಂದಿಯೇ?

Date:

Advertisements
ಅಧಿಕಾರ ವಹಿಸಿಕೊಂಡ ಮೊದಲ ದಿನವೇ 100 ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಇದು ತಮ್ಮದೇ ಪಕ್ಷದಿಂದ ತಮಗೆ ಬೆಂಬಲ ಸಿಗುವುದಿಲ್ಲ ಎಂದು ಭಾವಿಸಿದಂತಿದೆ ಅಥವಾ ತಾವು ಭಾರೀ ಕ್ರಿಯಾಶೀಲ ವ್ಯಕ್ತಿಯೆಂದು ಬಿಂಬಿಸಿಕೊಳ್ಳಲು ಹಾತೊರೆಯುತ್ತಿರುವಂತಿದೆ.

ಅಧಿಕಾರ ವಹಿಸಿಕೊಂಡ ಮೊದಲ ದಿನವೇ 100 ಕಾರ್ಯಕಾರಿ ಆದೇಶಗಳಿಗೆ (ಎಕ್ಸಿಕ್ಯುಟಿವ್ ಆರ್ಡರ್) ಸಹಿ ಹಾಕುವುದಾಗಿ ಟ್ರಂಪ್ ಕಳೆದವಾರ ಘೋಷಿಸಿದ್ದಾರೆ. ಈ ಆದೇಶದ ಮೂಲಕ ಅವರು ಅಮೆರಿಕ ಕಾಂಗ್ರೆಸ್‌ (ಸಂಸತ್‌) ಅನುಮೋದನೆ ಪಡೆಯದೆಯೇ ಫೆಡರಲ್ ಸರ್ಕಾರದ ಕಾರ್ಯಾಚರಣೆ ನಿರ್ವಹಿಸಲು ಮುಂದಾಗಿದ್ದಾರೆ. ಆ ಮೂಲಕ ತನ್ನ ಸರ್ವಾಧಿಕಾರಿ ಧೋರಣೆಯುಳ್ಳ ಆಡಳಿತ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ.

ಆದರೆ, ಸಾಮಾನ್ಯವಾಗಿ ಕಾರ್ಯಕಾರಿ ಆದೇಶ ಎಂಬುದು ಬಿಕ್ಕಟ್ಟಿನ ಸಮಯದಲ್ಲಿ ನೀಡಲಾಗುವ ವಿಶೇಷ ಅಧಿಕಾರವಾಗಿದೆ. ಆ ಆದೇಶಗಳು ತುರ್ತು ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವ ಉದ್ದೇಶವನ್ನು ಹೊಂದಿರುತ್ತವೆ. ಆದಾಗ್ಯೂ, ಈ ಕಾರ್ಯಕಾರಿ ಆದೇಶಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಕೂಡ ಅವಕಾಶವಿದೆ. ಅಂತಹ ಆದೇಶಗಳನ್ನು ರದ್ದುಗೊಳಿಸುವಂತೆ ನಿರ್ದೇಶಿಸುವ ಅಧಿಕಾರವನ್ನು ನ್ಯಾಯಾಲಯವೂ ಹೊಂದಿದೆ ಎಂಬುದು ಗಮನಾರ್ಹ.

ಇತ್ತೀಚೆಗೆ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ ಚುನಾಯಿತರಾಗಿದ್ದಾರೆ. 2025 ಜನವರಿ 20ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಆದರೆ, ಅವರು ಮಾಡಲು ಹೊರಟಿರುವುದೇನು ಎಂಬುದು ಮುಖ್ಯ ಸಂಗತಿ. ಅಮೆರಿಕ ಸರ್ಕಾರದಲ್ಲಿ ಪ್ರಮುಖ ಬದಲಾವಣೆಗಳನ್ನು ತರುವುದಾಗಿ ಕಳೆದ ತಿಂಗಳು ಟ್ರಂಪ್‌ ಘೋಷಿಸಿದ್ದಾರೆ. ಅವರ ಘೋಷಣೆಯು ಮುಖ್ಯವಾಗಿ ನಾಲ್ಕು ಪ್ರಮುಖ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡಿದೆ.

Advertisements

1. ವಲಸೆ: ಟ್ರಂಪ್ ಅವರು ಹಾಲಿ ಅಧ್ಯಕ್ಷ ಬೈಡನ್ ಅವರ ನೀತಿಗಳನ್ನು ರದ್ದುಗೊಳಿಸಲು ಮುಂದಾಗಿದ್ದಾರೆ. ಜೊತೆಗೆ, ಮೆಕ್ಸಿಕೊ ಮತ್ತು ಅಮೆರಿಕ ಗಡಿಯಲ್ಲಿ ದೈತ್ಯ ಗೋಡೆಯ ನಿರ್ಮಾಣವನ್ನು ಪುನರಾರಂಭಿಸಲು ಬಯಸಿದ್ದಾರೆ. ಲ್ಯಾಟಿನ್ ಅಮೆರಿಕದಿಂದ ವಲಸೆಯನ್ನು ನಿಲ್ಲಿಸುವುದು ಮತ್ತು ಅಮೆರಿಕಾದ ಇತಿಹಾಸದಲ್ಲಿ ಅತಿದೊಡ್ಡ ಗಡಿಪಾರು ಕಾರ್ಯಾಚರಣೆಯನ್ನು ನಡೆಸುವುದು ಅವರ ಉದ್ದೇಶವಾಗಿದೆ. ಅಮೆರಿಕ ನೆಲದಲ್ಲಿ ಜನಿಸಿದ ಜನರು ಸ್ವಯಂಚಾಲಿತವಾಗಿ ಪೌರತ್ವ ಪಡೆಯುವ ಹಕ್ಕನ್ನು ಕೂಡ ರದ್ದುಗೊಳಿಸುವ ಕಾರ್ಯಕಾರಿ ಆದೇಶ ಹೊರಡಿಸುವುದಾಗಿಯೂ ಅವರು ಹೇಳಿದ್ದಾರೆ.

2. ಸಂಪ್ರದಾಯವಾದಿ ನೀತಿಗಳು: ಜನಾಂಗೀಯ ಮತ್ತು ಲಿಂಗ ನ್ಯಾಯ ಕಾರ್ಯಕ್ರಮಗಳನ್ನು ರದ್ದುಗೊಳಿಸುವುದಾಗಿ ಟ್ರಂಪ್ ಭರವಸೆ ನೀಡಿದ್ದಾರೆ. ಸರ್ಕಾರದಾದ್ಯಂತ ವೈವಿಧ್ಯತೆ, ಸಮಾನತೆ ಮತ್ತು ಒಳಗೊಳ್ಳುವಿಕೆ (DEI -diversity, equality, inclusion) ಕಾರ್ಯಕ್ರಮಗಳನ್ನು ರದ್ದುಗೊಳಿಸುವುದು, ಮಹಿಳಾ ಕ್ರೀಡೆಗಳಿಂದ ಲೈಂಗಿತ್ವ ಅಲ್ಪಸಂಖ್ಯಾತ ಮಹಿಳೆಯರನ್ನು ಹೊರಗಿಡುವ ಆದೇಶಗಳನ್ನು ಹೊರಡಿಸಲು ಯೋಜಿಸಿದ್ದಾರೆ.

3. ನ್ಯಾಯಾಲಯದ ಪ್ರಕರಣಗಳು: 2020ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ಟ್ರಂಪ್, ನಂತರದಲ್ಲಿ ಗಲಭೆಗಳಿಗೆ ಪ್ರಚೋದನೆ ನೀಡಿದ್ದರು. ಹೀಗಾಗಿ, ಅವರ ಅನೇಕ ಬೆಂಬಲಿಗರು ಇನ್ನೂ ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ. ವಿಚಾರಣೆ ಎದುರಿಸುತ್ತಿದ್ದಾರೆ. ಆ ಗಲಭೆಗಳಲ್ಲಿ ಆರೋಪಿಯಾಗಿರುವವರಿಗೆ ಕ್ಷಮಾದಾನ ಮಾಡುವ ಮೂಲಕ, ಅವರನ್ನು ರಕ್ಷಿಸಲು ಟ್ರಂಪ್ ಬಯಸಿದ್ದಾರೆ. ಈ ಬಗ್ಗೆ ಭರವಸೆಯನ್ನೂ ನೀಡಿದ್ದಾರೆ.

4. ಆರ್ಥಿಕ ಕ್ರಮಗಳು: ಆರ್ಥಿಕ ನಿಯಮಗಳನ್ನು ಕಡಿತಗೊಳಿಸಲು ಮತ್ತು ತೈಲ, ನೈಸರ್ಗಿಕ ಅನಿಲ ಹೊರತೆಗೆಯುವ ಕೈಗಾರಿಕೆಗಳಿಗೆ ಅನುಮತಿ ನೀಡಲು ಹಾಗೂ ಹವಾಮಾನ ನೀತಿಗಳನ್ನು ಹಿಂತೆಗೆದುಕೊಳ್ಳಲು ಟ್ರಂಪ್ ಯೋಜಿಸಿದ್ದಾರೆ. ಒಂದು ವರ್ಷದೊಳಗೆ ಇಂಧನ ಬೆಲೆಗಳನ್ನು 50%ರಷ್ಟು ಕಡಿಮೆ ಮಾಡಲು ಮತ್ತು ವಿದ್ಯುತ್ ವಾಹನಗಳಿಗೆ ನೀಡಲಾಗುತ್ತಿರುವ ಬೆಂಬಲವನ್ನು ಕಡಿತಗೊಳಿಸುವುದು ಅವರ ಗುರಿಯಾಗಿದೆ.

ಈ ಕ್ರಮಗಳು ಅವರ ಮುಂಬರುವ (2028) ಅಧ್ಯಕ್ಷೀಯ ಚುನಾವಣೆಗೆ ಈಗಿನಿಂದಲೇ ಅಜೆಂಡಾವಾಗಿ ಮಾರ್ಪಡುತ್ತವೆ. ಅವರ ಈ ಭರವಸೆಗಳು ವ್ಯಾಪಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಮಾತ್ರವಲ್ಲದೆ, ಕಾರ್ಯನಿರ್ವಾಹಕ ಆದೇಶ ಹೊರಡಿಸುವ ಘೋಷಣೆಯು ಅಮೆರಿಕ ಸರ್ಕಾರದ ಕಾರ್ಯನಿರ್ವಹಣೆಯ ವಿಧಾನವನ್ನು ಬದಲಾಯಿಸುತ್ತದೆ ಎಂಬುದನ್ನು ಸೂಚಿಸುತ್ತದೆ.

ಈ ವರದಿ ಓದಿದ್ದೀರಾ?: 70 ಗಂಟೆ, 90 ಗಂಟೆ ಕೆಲಸ: ಉದ್ಯೋಗಿಗಳ ರಕ್ತ ಹೀರುವುದು ಲಾಭಕೋರ ಬಂಡವಾಳಿಗರ ಸಂಚು

ಅಮೆರಿಕ ಸರ್ಕಾರವು ಅಧಿಕಾರದ ಮೂರು ಘಟಕಗಳನ್ನು ಆಧರಿಸಿದೆ. ಅಧ್ಯಕ್ಷ ಘಟಕ, ಶಾಸಕಾಂಗ ಘಟಕ ಹಾಗೂ ನ್ಯಾಯಾಂಗ ಘಟಕ. ಅಧ್ಯಕ್ಷ ಸ್ಥಾನವು ಕಾರ್ಯನಿರ್ವಾಹಕ ಘಟಕವನ್ನು ಪ್ರತಿನಿಧಿಸುತ್ತದೆ. ಅಧ್ಯಕ್ಷರ ತುರ್ತು ಅಧಿಕಾರಗಳ ಬಳಕೆಯು ಶಾಸಕಾಂಗ ಮತ್ತು ನ್ಯಾಯಾಂಗದ ಮೇಲೆ ಕಾರ್ಯನಿರ್ವಾಹಕ ಘಟಕದ ಅಧಿಕಾರವನ್ನು ಹೇರುತ್ತದೆ.

ಜೊತೆಗೆ, ಟ್ರಂಪ್ ಘೋಷಿಸಿರುವ ಕೆಲವು ಕ್ರಮಗಳು ಸಾಂವಿಧಾನಿಕ ಸವಾಲುಗಳನ್ನು ಎದುರಿಸಬಹುದು. ಕಾರ್ಯಕಾರಿ ಆದೇಶಗಳನ್ನು ಅಂಗೀಕರಿಸುವ ಮೂಲಕ, ಅವರು ಅಮೆರಿಕ ಶಾಸಕಾಂಗವನ್ನು ಕಡೆಗಣಿಸಲು ಟ್ರಂಪ್‌ ಮುಂದಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. ಇದು ವಿಚಿತ್ರ ನಡೆ. ಏಕೆಂದರೆ ಅವರ ರಿಪಬ್ಲಿಕನ್ ಪಕ್ಷವು ಶಾಸಕಾಂಗದಲ್ಲಿ ಬಹುಮತವನ್ನು ಹೊಂದಿದೆ. ಸೆನೆಟ್‌ನಲ್ಲಿ 53 ಸ್ಥಾನಗಳನ್ನು ಮತ್ತು ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್‌ನಲ್ಲಿ ಸರಳ ಬಹುಮತವನ್ನು ಹೊಂದಿದೆ. ಶಾಸಕಾಂಗದ ನೆರವಿನೊಂದಿಗೆ ಟ್ರಂಪ್‌ ಆಡಳಿತ ನಡೆಸಬಹುದು. ನೀತಿ-ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಆದಾಗ್ಯೂ, ತಮ್ಮದೇ ಪಕ್ಷದಿಂದ ತನಗೆ ತ್ವರಿತ ಬೆಂಬಲ ಸಿಗುವುದಿಲ್ಲ ಎಂದು ಟ್ರಂಪ್ ಭಾವಿಸಿದಂತಿದೆ ಅಥವಾ ತಾವು ಭಾರೀ ಕ್ರಿಯಾಶೀಲ ವ್ಯಕ್ತಿಯೆಂದು ಬಿಂಬಿಸಿಕೊಳ್ಳಲು ಹಾತೊರೆಯುತ್ತಿರುವಂತಿದೆ.

ಕನ್ನಡಕ್ಕೆ: ಸೋಮಶೇಖರ್ ಚಲ್ಯ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X