ರೂಪಾಯಿ ಮೌಲ್ಯ ಹಿಂದೆಂದೂ ಕಾಣದಂತಹ ಕುಸಿತ ಕಂಡಿದೆ, ದೇಶದ ಆರ್ಥಿಕಸ್ಥಿತಿ ಹಳ್ಳ ಹಿಡಿದು ಕೂತಿದೆ. ಇದಕ್ಕೆ ಕಾರಣ ಯಾರು? ಕಳೆದ ಹನ್ನೊಂದು ವರ್ಷಗಳಿಂದ ಅಚ್ಛೇ ದಿನ್, ವಿಶ್ವಗುರು, ಅಮೃತಕಾಲದ ಬಗ್ಗೆ ಭಜನೆ ಮಾಡುತ್ತಿರುವ ಮೋದಿಯಲ್ಲವೇ?
‘ಅಮೆರಿಕದಲ್ಲಿ ಜನವರಿ ತಿಂಗಳಿನಲ್ಲಿ ಹಣದುಬ್ಬರ ಏರಿಕೆಯಾಗುವ ನಿರೀಕ್ಷೆಯಿದೆ. ಇದು ಡಾಲರ್ ಬಲಗೊಳ್ಳಲು ಸಹಕಾರಿಯಾಗಲಿದೆ. ಆಗ ಮತ್ತೆ ರೂಪಾಯಿಯು ಒತ್ತಡಕ್ಕೆ ಸಿಲುಕುವ ಸಾಧ್ಯತೆಯಿದೆ’ ಎಂದು ಮಿರೇ ಅಸೆಟ್ ಶೇರ್ಖಾನ್ ಸಂಸ್ಥೆಯ ಸಂಶೋಧನಾ ವಿಶ್ಲೇಷಕ ಅನುಜ್ ಚೌಧರಿ, ಹೊಸವರ್ಷದ ಆರಂಭದಲ್ಲಿ ಹೇಳಿದ್ದರು.
ಇದಕ್ಕೆ ಪೂರಕವಾಗಿ, ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಜನವರಿ 20ರಂದು ಅವರು ಅಧಿಕಾರ ವಹಿಸಿಕೊಳ್ಳಲಿರುವುದು, ಡಾಲರ್ ಗಟ್ಟಿಗೊಳಿಸುವ ಕಡೆ ಗಮನ ಹರಿಸಿರುವುದು ನಿರೀಕ್ಷಿತವೇ ಆಗಿತ್ತು. ಇದು ಸಹಜವಾಗಿಯೇ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿತ್ತು. ಡಾಲರ್ ಎದುರು ರೂಪಾಯಿ ಮೌಲ್ಯ ಶೇ. 8ರಿಂದ 12ರಷ್ಟು ಕುಸಿಯಬಹುದು ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ಕೂಡ ಅಂದಾಜಿಸಿತ್ತು.
ಆರ್ಥಿಕ ವಿಶ್ಲೇಷಕರ ನಿರೀಕ್ಷೆ ಮತ್ತು ಅಂದಾಜಿನಂತೆ ರೂಪಾಯಿ ಮೌಲ್ಯ ಮೊನ್ನೆ ಡಾಲರ್ ಎದುರು ಒಂದೇ ದಿನ 66 ಪೈಸೆಗಳಷ್ಟು ಕುಸಿತ ಕಂಡಿತ್ತು. ಡಾಲರ್ ಬೆಲೆ 86.40ಕ್ಕೆ ಏರಿತ್ತು. ಇದು ಕಳೆದ ಎರಡು ವರ್ಷಗಳಲ್ಲಿ ರೂಪಾಯಿ ಕಂಡ ಸಾರ್ವಕಾಲಿಕ ದಾಖಲೆ ಕುಸಿತವಾಗಿದೆ.
ಈ ಪರಿಯ ಕುಸಿತವು ದೇಶದ ಆರ್ಥಿಕ ಕ್ಷೇತ್ರದ ಕಳವಳಕ್ಕೆ ಕಾರಣವಾಗಿದೆ. ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು ಈಗ ತೀರಾ ಕನಿಷ್ಠ ಮಟ್ಟಕ್ಕೆ ಬಂದಿದೆ. ಈ ಮಟ್ಟದಿಂದ ರೂಪಾಯಿ ಮೌಲ್ಯವು ತಕ್ಷಣಕ್ಕೆ ಚೇತರಿಕೆ ಕಂಡುಕೊಳ್ಳುವ ಸಾಧ್ಯತೆ ಬಹಳ ಕಡಿಮೆ. ಮುಂದಿನ ದಿನಗಳಲ್ಲಿ ರೂಪಾಯಿ ಮತ್ತಷ್ಟು ದುರ್ಬಲಗೊಳ್ಳುವ ಸಾಧ್ಯತೆ ಇದೆ.
ಈ ವಿದ್ಯಮಾನವು ಭಾರತದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ. ಅದು ತೀರಾ ಕಳವಳಕಾರಿ ಸಂಗತಿಯಾಗಿದೆ. ತಡೆಗೆ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ದೇಶದ ಆರ್ಥಿಕ ಸ್ಥಿತಿ ಅಪಾಯಕ್ಕೆ ಸಿಲುಕಲಿದೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ.
2004ರಿಂದ 2014ರವರೆಗೆ, ದೇಶದ ಪ್ರಧಾನಿಯಾಗಿದ್ದ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಕಾಲದಲ್ಲಿಯೂ ರೂಪಾಯಿ ಮೌಲ್ಯ ಕುಸಿದಿತ್ತು. ಆದರೆ ಈ ಮಟ್ಟಕ್ಕಲ್ಲ. ಹಾಗೆಯೇ ದೇಶದ ಆರ್ಥಿಕ ಬೆಳವಣಿಗೆಯ ದರ ಮಂದಗತಿಯಲ್ಲಿ ಸಾಗಿತ್ತು. ಆದರೆ ಪಾತಾಳ ಮುಟ್ಟಿರಲಿಲ್ಲ. ಸಿಂಗ್ ಕಾಲದಲ್ಲಿ ದೇಶದ ಆರ್ಥಿಕ ಬೆಳವಣಿಗೆಯ ದರ ಶೇ. 8ಕ್ಕಿಂತ ಮೇಲಿತ್ತು. ಆದರೆ, ಪ್ರಧಾನಿ ಮೋದಿಯವರ ಕಾಲದಲ್ಲಿ ಅದನ್ನು ಶೇ. 5ರಿಂದ 6ಕ್ಕೂ ಏರಿಸಲಾಗಿಲ್ಲ. ಇದು ಮೋದಿಯವರ ವೈಫಲ್ಯ ಎನ್ನದೆ ವಿಧಿ ಇಲ್ಲ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮೋದಿಯವರು ಗಳಿಸಿದ ಡಿಗ್ರಿಗಳು ಮತ್ತು ಮಾಹಿತಿ ಹಕ್ಕು ಎಂಬ ತುಕ್ಕು ಹಿಡಿದ ಹತಾರು
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದರೆ ಏನಾಗುತ್ತದೆ? ವಿದೇಶಿ ವಿನಿಮಯ ನಡೆಯುವುದು ಡಾಲರ್‍ನಲ್ಲಾದ್ದರಿಂದ, ಅದು ನೇರವಾಗಿ ಆಮದು-ರಫ್ತು ವಹಿವಾಟಿನ ಮೇಲೆ ಪರಿಣಾಮ ಬೀರುತ್ತದೆ. ದೇಶದ ಆರ್ಥಿಕ ಸ್ಥಿತಿ ಏರುಪೇರಾಗುತ್ತದೆ.
ಮೊದಲಿಗೆ, ರೂಪಾಯಿ ಮೌಲ್ಯ ಕುಸಿತದಿಂದಾಗಿ ಕಚ್ಚಾ ತೈಲ(ಪೆಟ್ರೋಲ್-ಡೀಸೆಲ್)ದಂತಹ ಅತ್ಯಂತ ಅವಶ್ಯಕವಾದ ಸರಕುಗಳ ಆಮದು ವೆಚ್ಚ ಹೆಚ್ಚಾಗುತ್ತದೆ. ಅಗತ್ಯ ವಸ್ತುಗಳು ಹಾಗೂ ಇತರ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಅಲ್ಲದೆ, ವಿದೇಶಿ ಹೂಡಿಕೆ ಇಳಿಕೆಯಾಗುತ್ತದೆ. ವಿದೇಶದಿಂದ ಸಾಲ ಪಡೆದ ಭಾರತೀಯ ಕಂಪನಿಗಳ ಮೇಲೆ ಆರ್ಥಿಕ ಹೊರೆ ಹೆಚ್ಚಾಗುತ್ತದೆ. ಸಾಲದ ಕಂತಿನ ಮೊತ್ತ ಪಾವತಿಸುವುದು ಕಷ್ಟವಾಗುತ್ತದೆ. ಇದರಿಂದಾಗಿ ಕಂಪನಿಯ ಆರ್ಥಿಕ ಸ್ಥಿತಿ ಅಸ್ತವ್ಯಸ್ತವಾಗುತ್ತದೆ. ಬೇರೆ ದೇಶಗಳಿಗೆ ಪ್ರವಾಸ ಹೋಗುವವರು ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಅದೇ ರೀತಿ ವಿದೇಶದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ವೆಚ್ಚದಲ್ಲೂ ಏರಿಕೆಯಾಗುತ್ತದೆ. ಇದು ಸಹಜವಾಗಿಯೇ ಆಮದು ಶುಲ್ಕ ಹೆಚ್ಚಳವಾಗಿ, ದೇಶೀಯವಾಗಿ ಹಣದುಬ್ಬರಕ್ಕೆ ಕಾರಣವಾಗುತ್ತದೆ. ಹಣದುಬ್ಬರದಿಂದ ಕೊಳ್ಳುವ ಶಕ್ತಿ ಕುಂಠಿತಗೊಳ್ಳುತ್ತದೆ. ಇದು ನೇರವಾಗಿ ಜನರ ಜೇಬಿಗೆ ಕತ್ತರಿ ಹಾಕುತ್ತದೆ. ಸಾಮಾನ್ಯ ಜನರ ಬದುಕನ್ನು ದುರ್ಭರಗೊಳಿಸುತ್ತದೆ.
ರೂಪಾಯಿ ಮೌಲ್ಯ ಕಳೆದುಕೊಳ್ಳುವುದು ಅಥವಾ ದುರ್ಬಲಗೊಳ್ಳುವುದು ದೇಶದ ಅರ್ಥವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ನಿಜವಾದರೂ, ಇದರಿಂದ ರಫ್ತು ವಲಯಕ್ಕೆ ಅನುಕೂಲವಾಗುತ್ತದೆ. ಡಾಲರ್ ರೂಪದಲ್ಲಿ ದೇಶಕ್ಕೆ ಹಣ ಹರಿದುಬಂದರೆ, ದೇಶದ ಅರ್ಥವ್ಯವಸ್ಥೆ ಚೇತರಿಕೆ ಕಾಣುತ್ತದೆ ಎಂಬುದು ಆರ್ಥಿಕ ತಜ್ಞರ ವಾದ.
ಸದ್ಯಕ್ಕೆ ದೇಶದ ರಫ್ತು ವಹಿವಾಟಿನಲ್ಲಿ ಮುಂಚೂಣಿಯಲ್ಲಿರುವ ಕ್ಷೇತ್ರವೆಂದರೆ, ಜವಳಿ ಉದ್ಯಮ. ಅದನ್ನು ಬಿಟ್ಟರೆ ಮಾಹಿತಿ ತಂತ್ರಜ್ಞಾನ ವಲಯ, ಫಾರ್ಮಾಸ್ಯುಟಿಕಲ್, ರತ್ನ-ಆಭರಣ ಮತ್ತು ವಾಹನ ಉದ್ಯಮ. ಈ ಉದ್ಯಮಗಳಿಗೆ ಆಳುವ ಸರ್ಕಾರ ಉತ್ತೇಜನ ನೀಡಿದರೆ, ಅವುಗಳ ಬೆಳವಣಿಗೆಗೆ ತಕ್ಕಂತೆ ರಫ್ತು ನೀತಿ ರೂಪಿಸಿದರೆ, ದೇಶಿ ಉತ್ಪಾದನೆ ಹೆಚ್ಚಾಗುತ್ತದೆ. ದುಡಿಯುವ ಕೈಗಳಿಗೆ ಉದ್ಯೋಗ ದೊರಕುತ್ತದೆ. ಜನರ ನಡುವೆ ಹಣ ಹರಿದಾಡುತ್ತದೆ, ಕೊಳ್ಳುವ ಶಕ್ತಿ ಹೆಚ್ಚುತ್ತದೆ.
ಹಾಗೆಯೇ ಭಾರತದ ಸರಕು ಮತ್ತು ಸೇವೆಗಳಿಗೆ ಬೇಡಿಕೆ ಸೃಷ್ಟಿಯಾಗುತ್ತದೆ. ದೇಶಗಳ ನಡುವಿನ ವ್ಯಾಪಾರ ಕೊರತೆಯ ಅಂತರ ಕಡಿಮೆಯಾಗುತ್ತದೆ. ವಿದೇಶಿ ಕಂಪನಿಗಳು ಡಾಲರ್‌ನಲ್ಲಿ ಹಣ ಪಾವತಿ ಮಾಡುವುದರಿಂದ ಭಾರತದ ಕಂಪನಿಗಳು ರೂಪಾಯಿ ಲೆಕ್ಕದಲ್ಲಿ ಹೆಚ್ಚು ಹಣ ಗಳಿಸುತ್ತವೆ. ಅದು ದೇಶದ ಆರ್ಥಿಕತೆಗೆ ಶಕ್ತಿ ತುಂಬುತ್ತದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮಹಾ ಕುಂಭಮೇಳ ಯಾರಿಗಾಗಿ, ಯಾತಕ್ಕಾಗಿ?
ಆದರೆ ದೇಶದ ವಾಸ್ತವ ಸ್ಥಿತಿ ಹಾಗಿಲ್ಲ. ಪ್ರಧಾನಿ ಮೋದಿಯವರೇ ದೇಶದಲ್ಲಿ 80 ಕೋಟಿ ಬಡವರಿದ್ದಾರೆ, ಅವರಿಗೆ ಕೊಳ್ಳುವ ಶಕ್ತಿ ಇಲ್ಲ, ಪಡಿತರ ಒದಗಿಸುತ್ತಿದ್ದೇವೆ ಎಂದಿದ್ದಾರೆ. ಇದರ ಜೊತೆಗೆ ರೂಪಾಯಿ ಮೌಲ್ಯ ಹಿಂದೆಂದೂ ಕಾಣದಂತಹ ಕುಸಿತ ಕಂಡಿದೆ, ದೇಶದ ಆರ್ಥಿಕಸ್ಥಿತಿ ಹಳ್ಳ ಹಿಡಿದು ಕೂತಿದೆ. ಇದಕ್ಕೆ ಕಾರಣ ಯಾರು?
ದುರಹಂಕಾರದ ಪ್ರತಿನಿಧಿಯಂತಿರುವ ‘ಪಂಡಿತೆ’ ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವೆಯಲ್ಲವೇ? ರೂಪಾಯಿ ಮೌಲ್ಯ ಕುಸಿತಕ್ಕೆ ಕ್ರಮಕೈಗೊಳ್ಳಬೇಕಾದ ಆರ್‍ಬಿಐ ಗೌವರ್ನರ್ ಸ್ಥಾನದಲ್ಲಿ ಶಕ್ತಿಕಾಂತದಾಸ್, ಸಂಜಯ್ ಮಲ್ಹೋತ್ರಾರಂತಹ ನಿವೃತ್ತ ಐಎಎಸ್ ಅಧಿಕಾರಿಗಳನ್ನು ತಂದು ಕೂರಿಸಿದ್ದರಿಂದಾದ ಅನಾಹುತವಲ್ಲವೇ?
2014ರಲ್ಲಿ ಪ್ರಧಾನಿ ಹುದ್ದೆಗೇರಿದ ನರೇಂದ್ರ ಮೋದಿಯವರು, ಸತತವಾಗಿ ಮೂರನೇ ಬಾರಿಗೆ ಪ್ರಧಾನಿಯಾಗಿ, ಕಳೆದ ಹನ್ನೊಂದು ವರ್ಷಗಳಿಂದ ಅಚ್ಛೇ ದಿನ್, ವಿಶ್ವಗುರು, ಅಮೃತಕಾಲದ ಬಗ್ಗೆ ಬರಿ ಭಜನೆ ಮಾಡುತ್ತಿರುವುದಲ್ಲವೇ?
