ಕೊಡಗು | ʼನಮ್ಮ ಬದುಕೇ ಹೋರಾಟ; ನಾವು ಮತಕ್ಕಾಗಿ ಬೇಕೇ ಹೊರತು ಸಾಮಾಜಿಕ ಬದುಕಿಗಲ್ಲʼ; ಆದಿವಾಸಿಗಳ ಅಳಲು

Date:

Advertisements

ಕೊಡಗು ಜಿಲ್ಲೆಯ ಪ್ರಕೃತಿ ಸೌಂದರ್ಯಕ್ಕೆ ಮನಸೋಲದವರೇ ಇಲ್ಲ ಎಂದರೂ ತಪ್ಪಾಗಲಾರದು. ರೆಸಾರ್ಟ್, ಕಾಫಿ ತೋಟಗಳ ನಡುವೆ ಐಶಾರಾಮಿ ಜೀವನ, ಅಲ್ಲಿಯ ಮೈ ರೋಮಾಂಚನಗೊಳ್ಳುವ ದೃಶ್ಯಗಳು ಇವಷ್ಟೇ ನಮಗೆ ಕಾಣುತ್ತವೆ. ಆದರೆ ಅದರ ರುದ್ರ ರಮಣೀಯ ಸೌಂದರ್ಯದ ಹಿಂದೆ ಕರಾಳ ಮುಖವೊಂದಿದೆ. ಕೊಡಗು ಎಷ್ಟು ಸುಂದರವಾಗಿದೆಯೋ ಅಲ್ಲಿನ ಬಡವರ ಬದುಕು ಅಷ್ಟೇ ಕುರೂಪಿಯಾಗಿದೆ. ಇಲ್ಲಿ ಉಳ್ಳವರು, ಬಲಾಢ್ಯರು, ಭೂ ಮಾಲೀಕರು ಚಿಂತೆಯಿಲ್ಲದೆ ಬದುಕು ಸವೆಸುತ್ತಿದ್ದಾರೆ. ನಿರ್ಗತಿಕರು, ಜೀತದಾಳುಗಳು, ಆದಿವಾಸಿಗಳು, ಶೋಷಿತರು ವರ್ಣಿಸಲಾರದ ಹೀನ ಬದುಕಿನ ದಿನ ದೂಡುತ್ತಿದ್ದಾರೆ.

ಇಲ್ಲಿನ ಬಡ ಕುಟುಂಬಗಳಿಗೆ ಜಮೀನು ಇರಲಿ ಬದುಕಲು ಸಣ್ಣದೊಂದು ಸೂರೂ ಕೂಡಾ ಇಲ್ಲ, ಸತ್ತರೆ ಹೂಳಲು ಜಾಗವಿಲ್ಲ. ಒಟ್ಟಾರೆ ಇವರೆಲ್ಲ ಮನುಷ್ಯರೇ ಅಲ್ಲ ಎನ್ನುವಂತಹ ಹೀನ ಸ್ಥಿತಿ ನಿರ್ಮಾಣವಾಗಿದೆ.

ನಾವೆಲ್ಲಿದ್ದೇವೆ? ಯಾವ ಯುಗದಲ್ಲಿದ್ದೇವೆ? ಎನ್ನುವ ಪ್ರಶ್ನೆಗಳಿಗೆ ನಿಜವಾಗಿ ಉತ್ತರ ಬೇಕೆನ್ನುವವರು ಈ ಕರಾಳತೆ ನೋಡಬೇಕು, ಓದಬೇಕು, ತಿಳಿಯಲೇಬೇಕು. ದೇಶದಲ್ಲಿ ಇಂತಹ ಕೆಟ್ಟ ಧೋರಣೆ ಬಹುಶಃ ಅತಿಯಾಗಿ ಬೇರೆಡೆ ಎಲ್ಲೂ ಇರಲು ಸಾಧ್ಯವಿಲ್ಲ. ಎಲ್ಲರೂ ಬದುಕಿಗಾಗಿ ಹೋರಾಟ ಮಾಡಿದರೆ ಇಲ್ಲಿ ಬದುಕೇ ಹೋರಾಟವಾಗಿದೆ. ಭೂ ಮಾಲೀಕರ ಅಟ್ಟಹಾಸ, ಸರ್ಕಾರಗಳ ಕೆಟ್ಟ ಆದೇಶಗಳು ನಿಜಕ್ಕೂ ಬಡ ಜನರ ಮಗ್ಗುಲು ಮುರಿದಿವೆ. ಯಾರೂ ಕೂಡಾ ಈ ಬಡಪಾಯಿಗಳ ಬದುಕನ್ನು ಕೇಳುವರಿಲ್ಲ, ನೋಡುವವರೂ ಇಲ್ಲ. ಕೇವಲ ಸೊಬಗನ್ನು ಆರಾಧಿಸುತ್ತಾರೆ. ಆದರೆ ಅದರೊಳಗೆ ಬೇಯುತ್ತಿರುವ ಜೀವನ ಯಾರ ಕಣ್ಣಿಗೂ ಕಾಣುತ್ತಿಲ್ಲ.

Advertisements

ಮಡಿಕೇರಿ ತಾಲೂಕಿನ ಕುಂಬಳದಾಳು ಗ್ರಾಮದಲ್ಲಿನ ಪೈಸಾರಿ(ಸರ್ಕಾರಿ) ಜಾಗದಲ್ಲಿ ಅಂದರೆ ಸರ್ವೇ ನಂಬರ್ 153/4ರಲ್ಲಿ ಒಂದು ಎಕರೆ 25 ಸೆಂಟ್ ಜಾಗವಿದ್ದು, ಅದರಲ್ಲಿ ಸದ್ಯದ ಮಟ್ಟಿಗೆ 35 ಸೆಂಟ್ ಜಾಗ ಮಾತ್ರ ಇದೆ. ಇನ್ನುಳಿದ ಜಾಗವೆಲ್ಲ ಭೂ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಜಾಗದಲ್ಲಿ ನಾಲ್ಕು ಕುಟುಂಬಗಳು ವಾಸವಾಗಿವೆ. ಇಲ್ಲಿ ಸರಿ ಸುಮಾರು 20 ಜನ ವಾಸವಿದ್ದು ಅದರಲ್ಲಿ ಆರು ಪುಟ್ಟ ಮಕ್ಕಳಿವೆ, ವಯಸ್ಸಾದ ಅಂಗವಿಕಲೆಯೂ ಇದ್ದಾರೆ. ಇರುವ ಜಾಗ ಕಡಿದಾಗಿದ್ದು, ಗಿಡಗಂಟಿಗಳ ನಡುವೆ ಪ್ಲಾಸ್ಟಿಕ್ ಹೊದಿಕೆ ಬಳಸಿ ಗುಡಿಸಲು ಮಾಡಿದ್ದಾರೆ. ವಾಸಿಸುವ ಗುಡಿಸಲು ಹೇಗಿದೆಯೆಂದರೆ ಈ ಕಡೆ ಕಾಗೆ ನುಗ್ಗಿದರೆ ಅತ್ತ ಕಡೆಯಿಂದ ಹಾದು ಹೋಗುತ್ತೆ. ಟಾರ್ಪಲ್ ಹರಿದಿದೆ. ಒಳಗಡೆ ಹಾವು, ಚೇಳು ಸರಾಗವಾಗಿ ಹಾದು ಹೋಗಬಹುದು. ಜತೆಗೆ ಕಾಡು ಪ್ರಾಣಿಗಳ ಹಾವಳಿಯೂ ಇದೆ. ಮನೆಗೆ ವಿದ್ಯುತ್ ಇಲ್ಲ, ಕುಡಿಯುವ ನೀರಿಲ್ಲ, ಮೂಲಭೂತ ಸೌಲಭ್ಯವನ್ನು ಕೇಳುವಂತೆಯೇ ಇಲ್ಲ. ಅಲ್ಲದೆ ಮನೆ ಪಕ್ಕದಲ್ಲಿ ಸ್ಮಶಾನ.

ಕೊಡಗಿನಲ್ಲಿ ಈಗಂತೂ ಮೈ ಕೊರೆಯುವ ಚಳಿ. ಪುಟ್ಟಪುಟ್ಟ ಮಕ್ಕಳು ಈ ಚಳಿಯಲ್ಲಿ ಮಲಗಬೇಕು. ರಾತ್ರಿಯಾದರೆ ಭಯ. ಯಾವ ಕಡೆಯಿಂದ ಯಾವ ಪ್ರಾಣಿ ಬರುತ್ತದೆಂದು ಹೇಳಲಾರದು. ಗುಡಿಸಲು ಸುಸ್ಥಿತವಾಗಿಲ್ಲ. ಎಲ್ಲ ಹರಿಡಿದೆ. ತಂದೆ ತಾಯಿಗಳಿಗೆ ಯಾವ ಕಡೆ ಏನು ಬರುತ್ತದೆನ್ನುವ ಚಿಂತೆ. ಸರಿಯಾಗಿ ನಿದ್ರೆ ಬಾರದೆ ಮಕ್ಕಳನ್ನು ಕಾಯಬೇಕು. ಇನ್ನ ಬೇರೆ ವ್ಯವಸ್ಥೆ ಮಾಡಿಕೊಳ್ಳಲು ಶಕ್ತಿಯಿಲ್ಲ. ಲೈನ್ ಮನೆಗಳಲ್ಲಿ ಇಷ್ಟುದಿನ ಜೀತ ಮಾಡಿಕೊಂಡು ಜೀವನ ಸಾಗಿಸಿ, ಭೂ ಮಾಲೀಕರ ಕಿರುಕುಳ ತಾಳಲಾರದೆ ಹೊರಬಂದು ಪೈಸಾರಿ ಜಾಗದಲ್ಲಿ ಗುಡಿಸಲು ಹಾಕಿಕೊಂಡು ಜೀವನ ಮಾಡುತ್ತಿದ್ದಾರೆ.

d79b77b8 0bf7 49d9 aaf9 71e3e325cf5d

ಕಡಿಮೆ ಕೂಲಿಗೆ ದುಡಿಯುವ ಈ ಕುಟುಂಬಗಳು ಆರ್ಥಿಕವಾಗಿ ಹಿಂದುಳಿದಿವೆ. ಅಲ್ಲಿ ಇಲ್ಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿವೆ. ಇವರಿಗೆ ಯಾವುದೇ ವ್ಯವಸ್ಥೆ ಇಲ್ಲ. ಅಲ್ಲಿನ ಅಧಿಕಾರಿಗಳಿಗೆ, ತಾಲೂಕು ಆಡಳಿತ, ಜಿಲ್ಲಾಡಳಿತಕ್ಕೆ ಇವರು ಈವರೆಗೆ ಮನುಷ್ಯರಾಗಿ ಕಂಡಿಲ್ಲ. ಜನಪ್ರತಿನಿಧಿಗಳು ಮತಕ್ಕೆ ಬೇಕಾದ ಸರಕು ಎನ್ನುವಂತೆ ಮಾಡಿಕೊಂಡರೇ ವಿನಃ ಇವರಿಗೆ ಸಿಗಬೇಕಿದ್ದ ಸವಲತ್ತು ಕೊಡಿಸುವಲ್ಲಿ ವಿಫಲರಾಗಿದ್ದಾರೆ.

f9f629c5 c762 4b61 8fed c84f065cd8a6

ಮೊದಲೇ ಶೋಷಣೆಗೆ ಒಳಗಾಗಿ ತುತ್ತು ಅನ್ನಕ್ಕಾಗಿ, ಬದುಕಿಗಾಗಿ ನರಕ ಅನುಭವಿಸುತ್ತಿರುವ ಜನರಿಗೆ ಸರ್ಕಾರ ಮತ್ತೊಂದು ಬರೆ ಎಳೆಯಲು ಹೊರಟಿದೆ. ಒಂದರ ಮೇಲೊಂದರಂತೆ ಎಲ್ಲವನ್ನೂ ಕಿತ್ತುಕೊಂಡು ಉಳ್ಳವರಿಗೆ ನೀಡ ಹೊರಟಿದೆ.

ಬಹುಜನ ಕಾರ್ಮಿಕ ಸಂಘಟನೆಯ ಕಿರಣ್ ಜಗದೀಶ್ ಈ ದಿನ ಡಾಟ್‌ ಕಾಮ್ ಜತೆಗೆ ಮಾತನಾಡಿ, “ಒಂದಲ್ಲ, ಎರಡಲ್ಲ ನಿತ್ಯದ ಜೀವನವೇ ಗೋಳಾಗಿದೆ. ನೆರವನ್ನು ಕೋರಿ ಮಡಿಕೇರಿ ತಾಲೂಕು ಕಚೇರಿ, ಗ್ರಾಮ ಪಂಚಾಯಿತಿ, ಸಂಬಂಧಪಟ್ಟ ಇಲಾಖೆಗಳಿಗೆ ಎಷ್ಟೇ ಅರ್ಜಿ ಸಲ್ಲಿಸಿದರೂ ಯಾರೊಬ್ಬರೂ ಇತ್ತ ಸುಳಿದಿಲ್ಲ” ಎಂದರು.

425dbdb8 b170 4119 898f c3e003efdfde

“ಅಧಿಕಾರಿಗಳು ಬಡಜನರ ಕಷ್ಟ ಕೇಳುವುದನ್ನು ಮರೆತು ಹೋಗಿದ್ದಾರೆ ಅನಿಸುತ್ತದೆ. ಸರ್ಕಾರಗಳು ಇಷ್ಟೆಲ್ಲಾ ಯೋಜನೆ ತರುತ್ತಾರೆ. ಅದನ್ನೆಲ್ಲ ಅಧಿಕಾರಿಗಳು ಯಾರಿಗೆ ಮಾಡುತ್ತಿದ್ದಾರೆ ಎನ್ನುವುದೇ ತಿಳಿಯುತ್ತಿಲ್ಲ. ಇರಲು ಜಾಗ ಕೊಡಿ, ಒಂದು ಮನೆ ಕೊಡಿ ಅಂತ ಕೇಳುತ್ತಿದ್ದಾರೆ. ಅದನ್ನೂ ಕೊಡಲು ಆಗುವುದಿಲ್ಲವೆಂದ ಮೇಲೆ ಇಂತಹ ಸರ್ಕಾರಗಳು ಇದ್ದು ಏನು ಪ್ರಯೋಜನ? ಇಂಥವರಿಗೆ ನಾವು ಯಾಕೆ ಮತ ಹಾಕಬೇಕು? ಇವರು ಗೆದ್ದು ಏನು ಮಾಡುತ್ತಿದ್ದಾರೆ? ಅಧಿಕಾರಿಗಳು ಸಂಬಳ ಪಡೆಯುವುದು ನಾವು ಕಟ್ಟುವ ತೆರಿಗೆಯಿಂದ. ಬಡವರ ಕಷ್ಟ ಕೇಳಲು, ಬಡವರ ಪರ ಕೆಲಸ ಮಾಡಲು ನಾಚಿಕೆ ಆಗುತ್ತಾ? ಇಲ್ಲ ಅವಮಾನ ಅನಿಸುತ್ತದೆಯೇ?. ಇಲ್ಲ ನಾವು ಲೆಕ್ಕಕ್ಕೇ ಇಲ್ಲವೇ? ಎಂದು ಆಕ್ರೋಶ ಹೊರಹಾಕಿದರು.

2381552e 01b6 4f90 b152 2c405981ef4f

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಪಾಲೆಮಾಡು ಮಹೇಶ್ ಮಾತನಾಡಿ, “ನಾವು ನಿತ್ಯ ದುಡಿಮೆ ಮಾಡಬೇಕೇ, ಇಲ್ಲ ಹೋರಾಟ ಮಾಡಬೇಕೇ ಎಂಬುದೇ ತಿಳಿಯುತ್ತಿಲ್ಲ. ದುಡಿದರೆ ದಿನದ ಊಟ, ಇಲ್ಲಾಂದ್ರೆ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ. ಇಲ್ಲಿ ಕೂತರೆ ಊಟಕ್ಕೆ ಯಾರೂ ಕೊಡುವುದಿಲ್ಲ. ಹೀಗಿರುವಾಗ ಇಲ್ಲಿಯ ಜನ ಏನು ಮಾಡೋದು?. ಅಧಿಕಾರಿಗಳ ಹತ್ತಿರ ಹೋಗೋದು ಅರ್ಜಿ ಕೊಡೋದು. ಇದಿಷ್ಟೇ ಕೆಲಸ ಆಗುತ್ತಿದೆ. ಒಂದೇ ಒಂದು ಅರ್ಜಿಗೆ ಅಧಿಕಾರಿಗಳು ಸ್ಪಂದಿಸಿಲ್ಲ. ಇನ್ನು ಜನಪ್ರತಿನಿಧಿಗಳು ಎಲ್ಲಿದ್ದಾರೆಂದು ಹುಡುಕಬೇಕು. ನಮ್ಮ ಎಂಎಲ್ಎ ಚುನಾವಣೆ ಸಂದರ್ಭದಲ್ಲಿ ಬಂದು, ʼಮತ ಹಾಕಿ, ನಿಮ್ಮ ಕಷ್ಟಕ್ಕೆ ನಾವು ಸ್ಪಂದಿಸುತ್ತೇವೆ. ನಿಮಗೆ ಮೂಲಸೌಕರ್ಯ ನೀಡುತ್ತೇವೆʼ ಎಂದೆಲ್ಲಾ ಭರವಸೆಗಳನ್ನು ನೀಡುತ್ತಾರೆ. ಆದರೆ ಈವರೆಗೆ ಇತ್ತ ಯಾರೂ ಕೂಡಾ ತಿರುಗಿಯೂ ನೋಡಿಲ್ಲ. ಇಂಥವರಿಂದ ಬಡವರಿಗೆ ನ್ಯಾಯ ಸಿಗುತ್ತದೆಯೇ” ಎಂದು ವ್ಯವಸ್ಥೆಯನ್ನು ಪ್ರಶ್ನಿಸಿದರು.

ಈ ಸುದ್ದಿ ಓದಿದ್ದೀರಾ?: ಮಡಿಕೇರಿ | ʼಬಡವರಿಗೆ ಭೂಮಿ, ನಿವೇಶನʼಕ್ಕಾಗಿ ಆಗ್ರಹ; ಜ.17ರಂದು ಬೃಹತ್ ಪ್ರತಿಭಟನೆ

“ತಾಲೂಕು ಮತ್ತು ಜಿಲ್ಲಾಡಳಿತ, ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೆಲ್ಲ ಮೂಲ ಕಾರಣ. ಇವರೆಲ್ಲ ಈಗಲಾದರೂ ಬಡ ಜನರ ಕೂಗು ಕೇಳಿಸಿಕೊಂಡು ಬಡವರ ಜೀವನಕ್ಕೆ ಸೂರು ಕಲ್ಪಿಸಿ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಿಕೊಡಬೇಕು” ಎಂದು ಮನವಿ ಮಾಡಿದರು.

9638817e b91a 4f95 8eb8 5639d725e758
WhatsApp Image 2023 09 02 at 8.42.26 PM
ಮೋಹನ್ ಜಿ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X