ಶಿವಮೊಗ್ಗದ ಆರ್‌ಟಿಒ ರಸ್ತೆಯಲ್ಲಿರುವ ಪತ್ರಿಕಾ ಭವನದ ಉಸ್ತುವಾರಿ ವಹಿಸಿರುವವರು ಹಣ ವಸೂಲಿ ಮಾಡುತ್ತಿರುವ ಬಗ್ಗೆ ತನಿಖೆ ಮಾಡಬೇಕು. ಜತೆಗೆ ಸರ್ಕಾರದ ಪತ್ರಿಕಾ ಭವನಕ್ಕೆ ಕೂಡಲೇ ಆಡಳಿತಾಧಿಕಾರಿಯನ್ನು ನೇಮಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಡಿ ಜಿ ನಾಗರಾಜ್ ಮಾತನಾಡಿ, “ಒಂದು ವಾರದ ಹಿಂದೆಯೂ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ಸರ್ಕಾರದ ಅನುದಾನ ಮತ್ತು ವಿವಿಧ ಸರ್ಕಾರದ ಇಲಾಖೆಗಳು, ಸಂಸದರು ಹಾಗೂ ಶಾಸಕರ ಅನುದಾನದಿಂದ ಕೋಟಿಗಟ್ಟಲೆ ಹಣ ಖರ್ಚು ಮಾಡಿ ಶಿವಮೊಗ್ಗದಲ್ಲಿನ ಪತ್ರಕರ್ತರಿಗೋಸ್ಕರ ನಿರ್ಮಾಣವಾದ ಶಿವಮೊಗ್ಗದಲ್ಲಿನ ಪತ್ರಿಕಾಭವನ, ಇದೀಗ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷರ ಖಾಸಾಗಿ ಸ್ವಂತ ಆಸ್ತಿಯಾಗಿದೆ” ಎಂದರು.
“ಪತ್ರಿಕಾ ಭವನದ ನಿರ್ವಹಣೆ ಶಿವಮೊಗ್ಗ ಪ್ರೆಸ್ ಟ್ರಸ್ಟ್‌ಗೆ ಕೆಲವು ಒಪ್ಪಂದವನ್ನು ಮಾಡಿಕೊಂಡು ನಿರ್ವಹಣೆಗೆ ಬಿಟ್ಟು ಕೊಡಲಾಗಿತ್ತು. ಆದರೆ ಇದೀಗ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಪ್ರತಿಯೊಂದು ಪ್ರೆಸ್‌ಮೀಟ್ ಮಾಡುವ ಆಯೋಜಕರಿಂದ ₹2 ಸಾವಿರ ವಸೂಲಿ ಮಾಡುತ್ತಿದ್ದಾರೆ. ಅದೇ ರೀತಿ ಪ್ರೆಸ್ ನೋಟ್ ಪಡೆಯುವಾಗ ₹150 ವಸೂಲಿ ಮಾಡಲಾಗುತ್ತಿದೆ. ಈ ಹಣದ ಲೆಕ್ಕಾಚಾರವನ್ನು ಈವರೆಗೆ ಜಿಲ್ಲಾಡಳಿತಕ್ಕಾಗಲೀ ಪತ್ರಕರ್ತರಿಗೆ ಆಗಲಿ ತೋರಿಸಿಲ್ಲ. ಇದರಿಂದ ತಿಂಗಳಿಗೆ ಸುಮಾರು ₹50,000 ಸಂಗ್ರಹವಾಗುತ್ತದೆ. ಅದರ ಜತೆಗೆ ಇತರೆ ಕಾರ್ಯಕ್ರಮಗಳಿಗೆ ಸಾವಿರಾರು ರೂಪಾಯಿ ಹಣ ಪಡೆಯಲಾಗುತ್ತಿದೆ. ಪತ್ರಿಕಾಗೋಷ್ಠಿಯಲ್ಲಿ ವರ್ಷವಾರು ಈವರೆಗೂ ಸಂಗ್ರಹಿಸಿದ ಲಕ್ಷ ಲಕ್ಷ ಹಣ ಒಟ್ಟಾರೆ ಪತ್ರಿಕಾಭವನದಿಂದ ಸಂಗ್ರಹವಾಗುವ ಹಣದ ಲೆಕ್ಕಾಚಾರ ಏನು? ಎಂಬುದು ಈವರೆಗೆ ಯಾರಿಗೂ ತಿಳಿದಿಲ್ಲ. ಸರ್ಕಾರದ ಅನುದಾನದಿಂದ ನಿರ್ಮಾಣವಾದ ಪತ್ರಿಕಾಭವನ ಪ್ರೆಸ್ ಟ್ರಸ್ಟ್‌ನ ಸ್ವತ್ತಾಗಿದೆ. ಈ ಬಗ್ಗೆ ತನಿಖೆಯಾಗಬೇಕು” ಎಂದರು.
“ಸರ್ಕಾರಿ ಪತ್ರಿಕಾಭವನದ ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗದ ಎಲ್ಲ ಪತ್ರಕರ್ತರೂ ಭಾಗವಹಿಸಲು ಬಿಡುತ್ತಿಲ್ಲ. ಪ್ರೆಸ್ ಟ್ರಸ್ಟ್‌ನಿಂದ ಕೆಲವು ಗುಂಪು ಮಾಡಿ ಅವರಿಗೆ ಮಾತ್ರ ಪ್ರವೇಶವನ್ನು ನೀಡಲಾಗುತ್ತಿದೆ. ಸುದ್ದಿಯನ್ನು ಕಳುಹಿಸಲಾಗುತ್ತಿದೆ. ಇದು ಶೋಚನೀಯ ಸಂಗತಿಯಾಗಿದೆ” ಎಂದು ವಿಷಾದಕರ ಸಂಗತಿ ಎಂದರು.
ದಾವಣಗೆರೆ | ಮಣ್ಣು ದಂಧೆಯಿಂದ ವಿದ್ಯುತ್ ಪ್ರಸರಣದ ಬೃಹತ್ ಟವರ್ ನೆಲಕ್ಕುರುಳುವ ಸಾಧ್ಯತೆ: ದಸಂಸ ಆತಂಕ
“ಜಿಲ್ಲಾಧಿಕಾರಿಗಳು ನಮ್ಮ ಮನವಿಯನ್ನು ಪುರಸ್ಕರಿಸಿ ಪತ್ರಿಕಾಭವನವನ್ನು ಕೂಡಲೇ ತಮ್ಮ ವಶಕ್ಕೆ ಪಡೆದು ಅಲ್ಲಿಗೆ ಆಡಳಿತಾಧಿಕಾರಿಯನ್ನು ನೇಮಿಸಬೇಕು. ಶಿವಮೊಗ್ಗದ ಪತ್ರಿಕಾಭವನ ಶಿವಮೊಗ್ಗದಲ್ಲಿನ ಎಲ್ಲ ಪತ್ರಕರ್ತರಿಗೂ ಉಪಯೋಗವಾಗುವಂತಾಗಬೇಕು. ಎಲ್ಲರೂ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸುವಂತಾಗಬೇಕು ಎಂಬುದು ನಮ್ಮ ಸಂಘದ ಒತ್ತಾಯವಾಗಿದೆ” ಎಂದು ತಿಳಿಸಿದರು.
“ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ವೇಳೆ ವಸೂಲಿ ಮಾಡುವ ಹಣ ಮತ್ತು ಇತರೆ ಕಾರ್ಯಕ್ರಮದ ಬಗ್ಗೆ ವಸೂಲಿಯಾಗುವ ಹಣಕಾಸಿನ ಮಾಹಿತಿಯನ್ನು ಪಡೆದು ಆ ಹಣವನ್ನು ಪ್ರೆಸ್ ಟ್ರಸ್ಟ್ ಅಧ್ಯಕ್ಷರಿಂದ ವಸೂಲಿ ಮಾಡಬೇಕು” ಎಂದು ಜಿಲ್ಲಾಧಿಕಾರಿ ಬಳಿ ಮನವಿ ಮಾಡಿದರು.
“ಜಿಲ್ಲಾಡಳಿತಕ್ಕೆ ಅಥವಾ ಸರ್ಕಾರದ ಖಜಾನೆಗೆ ಪತ್ರಿಕಾಭವನದಿಂದ ಸಂಗ್ರಹವಾದ ಹಣವನ್ನು ಕೂಡಲೇ ಕಟ್ಟುವಂತೆ ಆದೇಶ ಮಾಡಬೇಕು. ಮೇಲ್ಕಂಡ ಎಲ್ಲ ದೂರಿನ ಬಗ್ಗೆ ಕೂಡಲೇ ವಿಚಾರಣೆ ತನಿಖೆ ಮಾಡಿ ಸೂಕ್ತವಾದ ಕ್ರಮ ಕೈಗೊಳ್ಳಬೇಕು ಎಂಬುದು ಸಮಾನ ಮನಸ್ಕ ಪತ್ರಕರ್ತರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಸದಸ್ಯರ ಒತ್ತಾಸೆಯಾಗಿದೆ. ಕೂಡಲೇ ಪತ್ರಿಕಾಭವನವನ್ನು ತಮ್ಮ ಸುಪರ್ದಿಗೆ ಪಡೆಯಬೇಕು” ಎಂದು ವಿನಂತಿಸಿದ್ದಾರೆ.
“ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಎಲ್ಲ ಸದಸ್ಯರಿಗೂ ಕೂಡಾ ಶಿವಮೊಗ್ಗದ ಪತ್ರಿಕಾಭವನದಲ್ಲಿ ನಡೆಯುವ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲು ಅನುವು ಮಾಡಿಕೊಡಬೇಕು. ಈ ಬಗ್ಗೆ ತನಿಖೆ, ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಪದಾಧಿಕಾರಿಗಳು ಡಿ ಪಿ ಅರವಿಂದ್, ಸತೀಶ್ ಗೌಡ, ಕೆ ಎಂ, ಅಣ್ಣಪ್ಪ, ಷಡಾಕ್ಷರಪ್ಪ ಜಿ ಅರ್, ವಿಷ್ಣುಪ್ರಸಾದ್, ಮನೋಜ್ ಕುಮಾರ್, ನಂದನ್ ಕುಮಾರ್ ಸಿಂಗ್, ಬಾಲಕೃಷ್ಣ ನಾಯಕ್ ಇದ್ದರು.