ತೋರಣಗಲ್ಲು ಗ್ರಾಮದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿದ ವ್ಯಕ್ತಿಯನ್ನು ಶೀಘ್ರವಾಗಿ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಭಾರತೀಯ ವಿದ್ಯಾರ್ಥಿ ಫೆಡರೇಶನ್, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್‌ನಿಂದ ಉಪತಹಶೀಲ್ದಾರ್, ಪಿಡಿಒ ಮುಖಾಂತರ ಬಳ್ಳಾರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಎಸ್‌ಎಫ್‌ಐ ಯುವ ಸಂಚಾಲಕ ಶಿವರೆಡ್ಡಿ ಮಾತನಾಡಿ, “ವಡ್ಡು ಗ್ರಾಮದ ಬಾಲಕಿ ಮೇಲೆ ನಡೆದ ಅತ್ಯಾಚಾರ ಘಟನೆ ಮಾಸುವ ಮುನ್ನವೇ ತೋರಣಗಲ್ಲು ಗ್ರಾಮದಲ್ಲಿ ಜನರನ್ನು ಬೆಚ್ಚಿ ಬೀಳಿಸುವಂಥ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದೆ. ಏನೂ ಅರಿಯದ 4 ವರ್ಷದ ಮುಗ್ಧ ಮಗುವಿನ ಮೇಲೆ ದುಷ್ಕರ್ಮಿಯೊಬ್ಬ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ. ಈ ಘಟನೆ ಮತ್ತೊಮ್ಮೆ ತೋರಣಗಲ್ಲು ಗ್ರಾಮದ ಕೈಗಾರಿಕಾ ಪ್ರದೇಶದಲ್ಲಿ ಸುರಕ್ಷತೆ ಬಗ್ಗೆ ಅನುಮಾನ ಮೂಡಿಸುವಂತೆ ಮಾಡಿದ್ದು, ಜನರಲ್ಲಿ ಭಾರೀ ಆತಂಕ ವ್ಯಕ್ತವಾಗುತ್ತಿದೆ” ಎಂದರು.

“ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದ ಜಾರ್ಖಂಡ ಕುಟುಂಬ ಮೂಲದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಪೋಲೀಸ್ ಇಲಾಖೆ ಅತಿ ಶಿಘ್ರದಲ್ಲಿ ಆರೋಪಿಯನ್ನು ಬಂಧಿಸಿ ಕಠಿಣವಾದ ಶಿಕ್ಷೆ ವಿಧಿಸಬೇಕು” ಎಂದು ಒತ್ತಾಯಿಸಿದರು.
ಕಾಲೇಜು ವಿದ್ಯಾರ್ಥಿನಿ ಮಾತನಾಡಿ, “ದೇಶದಲ್ಲಿ ಮುಗ್ದ ಬಾಲಕಿಯರ ಮೇಲೆ ಅತ್ಯಾಚಾರಗಳು ಹೆಚ್ಚಾಗುತ್ತಿವೆ. ಇತ್ತಿಚೆಗೆ ಮಹಿಳೆರಿಗೂ ರಕ್ಷಣೆ ಇಲ್ಲದಂಥ ವಾತಾವರಣ ಕಂಡುಬರುತ್ತಿದೆ. ಅತ್ಯಾಚಾರದಂಥ ಆರೋಪಿಗಳಿಗೆ ಕಠಿಣ ಶಿಕ್ಷೆಯಂಥ ಕಾನೂನು ಬರಬೇಕು. ಇಂಥವರಿಗೆ ಶಿಕ್ಷೆ ಕೊಡುವುದನ್ನು ನೋಡಿ ಅತ್ಯಾಚಾರಿಗಳಿಗೆ ಭಯ ಹುಟ್ಟಬೇಕು. ಅಂಥ ಕಾನೂನು ಬಂದರೆ ಮಾತ್ರ ಇಂತಹ ಕೃತ್ಯಗಳನ್ನು ತಡೆಗಟ್ಟಬಹುದು” ಎಂದು ಆಕ್ರೋಶ ವ್ಯಕ್ತಪಡಿಸಿದಳು.

ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸ್ವಾಮಿ ಮಾತನಾಡಿ, “ಸಂಡೂರು ತಾಲೂಕು ತೋರಣಗಲ್ಲು ರೈಲ್ವೆ ನಿಲ್ದಾಣ ರಸ್ತೆಯ ಬಳಿ ವಠಾರದಲ್ಲಿ ಮಕ್ಕಳೊಂದಿಗೆ ಆಟವಾಡುತ್ತಿದ್ದ ಮಗುವನ್ನು ಚಾಕಲೇಟ್, ಜ್ಯೂಸ್ ಕೊಡಿಸುವ ಆಸೆ ತೋರಿಸಿ ಕರೆದುಕೊಂಡು ಹೋಗಿ ವಿಜಯಲಕ್ಷ್ಮಿ ಚಿತ್ರ ಮಂದಿರದ ಕಾಂಪೌಂಡ್ ಪಕ್ಕ ಪಾಳು ಬಿದ್ದಿರುವ ಕೊಠಡಿಗಳ ಸಾಲಿನ 3ನೇ ಕಟ್ಟಡದಲ್ಲಿ ಅತ್ಯಾಚಾರವೆಸಗಿ ಹೊರಗಡೆ ಬಿಟ್ಟು ಹೋಗಿದ್ದಾನೆ. ಮಗುವಿನ ಅಳುವನ್ನು ಕೇಳಿ ಅಕ್ಕಪಕದ ಜನ ಮಗುವನ್ನು ರಕ್ಷಿಸಿದ್ದಾರೆ” ಎಂದರು.
“ಪದೇಪದೆ ಸಣ್ಣ ಮಕ್ಕಳ ಮೇಲೆ ಅತ್ಯಾಚಾರವಾಗುವದನ್ನು ನೋಡಿದರೆ, ಅತ್ಯಾಚಾರಿಗಳಿಗೆ ಕಾನೂನಿನ ಭಯ ಇಲ್ಲದಂತಾಗಿದೆ. ಪೋಕ್ಸೊ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿರುವುದನ್ನು ತಿಳಿದು ಅತ್ಯಚಾರ ಎಸಗಿದ ದುಷ್ಕರ್ಮಿ ತಲೆಮರೆಸಿಕೊಂಡಿದ್ದಾನೆ. ಇಂಥವರು ಸಮಾಜಕ್ಕೆ ಮಾರಕ. ಹಾಗಾಗಿ ಇಂಥವರನ್ನು ಕೂಡಲೇ ಹಿಡಿದು ಬಂಧಿಸಬೇಕು” ಎಂದು ಆಗ್ರಹಿಸಿದರು.

ಡಿವೈಎಫ್‌ಐ ಸಂಚಾಲಕ ಲೋಕೇಶ ಮಾತನಾಡಿ, “ತೋರಣಗಲ್ಲು ಕೈಗಾರಿಕಾ ವ್ಯಾಪ್ತಿಯಲ್ಲಿ ಅತ್ಯಾಚಾರ, ದೌರ್ಜನ್ಯ, ಕೈಗಾರಿಕೆ ಅಪಘಾತಗಳು, ರಸ್ತೆ ಅಪಘಾತಗಳು, ಸಂಭವಿಸುತ್ತವೆ. ದುಷ್ಕೃತ್ಯ ಎಸಗಿದ ಅಪರಾಧಿಗಳ ಪರ ನಿಂತು, ಕಾನೂನುಗಳನ್ನು ದಾರಿ ತಪ್ಪಿಸುವ ಸಂಚು ನಡೆಸಿಕೊಂಡು ಬರುವ ಸ್ಥಳೀಯ ದುಷ್ಕರ್ಮಿಗಳು ಇಂತಹ ಘಟನೆಗಳ ದುರ್ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಅನೇಕ ಘಟನೆಗಳಿಗೆ ನ್ಯಾಯ ದೊರಕಿರುವುದಿಲ್ಲ. ಕಾನೂನಾತ್ಮಕ ತನಿಖೆ ನಡೆಯದೆ ಶಿಕ್ಷೆಗಳಿಂದ ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಮಹಿಳಾ ಸುರಕ್ಷತೆಯ ಅರಿವು ಕಾರ್ಯಕ್ರಮ
“ಅಪರಾಧಿಗೆ ಕಠಿಣ ಶಿಕ್ಷೆಯಾಗುವಂತೆ ದೂರು ದಾಖಲಿಸಿಕೊಂಡು ಯಾವುದೇ ರಾಜಕಾರಣಿಗಳ, ಪುಡಾರಿಗಳ ಒತ್ತಡಕ್ಕೆ ಮಣಿಯದೆ ತೀವ್ರ ಕ್ರಮ ಕೈಗೊಳ್ಳಬೇಕು. ಇಂತಹ ಅಮಾನವೀಯ ಕೃತ್ಯ ಎಸಗುವಂಥ ವ್ಯಕ್ತಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಜಿಲ್ಲಾ ಪೊಲೀಸ್ ಉಪವರಿಷ್ಠಾಧಿಕಾರಿ ಪ್ರಸಾದ್ ಗೋಖಲೆ ಮಾತನಾಡಿ, “ಈಗಾಗಲೇ ಆರೋಪಿಯ ಬಂಧನಕ್ಕೆ ಎರಡು ತಂಡಗಳನ್ನಾಗಿ ರಚಿಸಿ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಾವಳಿಗಳ ಮೂಲಕ ಕಾರ್ಯಾಚರಣೆ ನಡೆದಿದೆ. ಮೇಲ್ನೋಟಕ್ಕೆ ಆರೋಪಿಯ ಹೆಸರು ಮಂಜು ಎಂದು, ಆತ ವಿವಾಹಿತನಾಗಿದ್ದು ಕಮಾಲಾಪುರ ಮೂಲದ ನಿವಾಸಿಯಾಗಿದ್ದಾನೆಂದು ತಿಳಿದುಬಂದಿದೆ. ಅತಿ ಶೀಘ್ರದಲ್ಲಿ ಬಂಧಿಸುತ್ತೆವೆ” ಎಂದು ಭರವಸೆ ನೀಡಿದರು. ಈ ವೇಳೆ ಉಪತಹಶೀಲ್ದಾರ್ ಸುಬ್ಬರಾಯ್ ದೇಸಾಯಿ ಇದ್ದರು.