ಕೊಪ್ಪಳದ ಗವಿಮಠ ಅಂದ ತಕ್ಷಣ, ತೇರಿನ ಸುತ್ತ ಲಕ್ಷಾಂತರ ಜನರು ಸುತ್ತುವರಿದಿರುವ ವಿಹಂಗಮ ಚಿತ್ರ ಕಣ್ಣ ಮುಂದೆ ಹಾದುಹೋಗುತ್ತದೆ. ನಾಡಿನಲ್ಲಿ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವ ಎಷ್ಟು ಜನಪ್ರಿಯವೋ, ಇಲ್ಲಿನ ದಾಸೋಹ ಕೂಡಾ ಅಷ್ಟೇ ಪ್ರಸಿದ್ಧವಾಗಿದೆ.
12ನೇ ಶತಮಾನದಲ್ಲಿ ಬಸವಾದಿ ಶರಣರು ಕಾಯಕ ಮತ್ತು ದಾಸೋಹ ತತ್ವ ಹೇಳಿಕೊಟ್ಟರು. ಕಾಯಕತತ್ವವು ಜಾತಿಯ ಅಹಂಭಾವ ಮತ್ತು ವೃತ್ತಿಯ ಕೀಳರಿಮೆಗಳನ್ನು ಏಕಕಾಲಕ್ಕೆ ನಿವಾರಣೆ ಮಾಡಿದರೆ, ದಾಸೋಹ ತತ್ವವು ಸಹಪಂಕ್ತಿ-ಸಹಭೋಜನದಿಂದ ಸಮಾನತೆಯನ್ನು ತಂದುಕೊಟ್ಟಿತು. ಈ ದಾಸೋಹ ಪರಂಪರೆಯನ್ನು ಅಜ್ಜನ ಜಾತ್ರೆಯಲ್ಲಿ ಇಂದಿಗೂ ನೋಡಬಹುದು.
ಮಠದ ಅಧಿಕೃತ ಉತ್ಸವ ಕೇವಲ ಮೂರು ದಿನಗಳಾದರೂ, ತಿಂಗಳವರೆಗೂ ಇಲ್ಲಿನ ಜನರು ಜಾತ್ರೆ ಮುಂದುವರಿಸುತ್ತಾರೆ. ಅಷ್ಟು ಅವಧಿಯಲ್ಲಿ ಮಠಕ್ಕೆ ಬಂದ ಎಲ್ಲರಿಗೂ ಅನ್ನದಾಸೋಹ ಮಾಡಲಾಗುತ್ತದೆ.
ಕೊಪ್ಪಳ ಗವಿಸಿದ್ಧೇಶ್ವರ ಜಾತ್ರೆ pic.twitter.com/Ycn7Gim3ub
— hanamanth koppada (@hanamanthk23667) January 16, 2025
ಜಾತ್ರೆ ಶುರವಾಗಲು ಒಂದು ತಿಂಗಳು ಇರುವಾಗಲೇ ಜಿಲ್ಲೆಯ ನೂರಾರು ಹಳ್ಳಿಗಳಲ್ಲಿ ಜೋಳದ ರೊಟ್ಟಿ ತಟ್ಟುವ ಸದ್ದು ಜೋರಾಗಿ ಕೇಳಿ ಬರತೊಡಗುತ್ತದೆ. ರಾಯಚೂರು, ಬಾಗಲಕೋಟೆ, ಬಳ್ಳಾರಿ, ವಿಜಯಪುರ, ವಿಜಯನಗರ, ಯಾದಗಿರಿ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಸ್ವಯಂಪ್ರೇರಿತರಾಗಿ ಮಠಕ್ಕೆ ರೊಟ್ಟಿ, ದವಸ-ಧಾನ್ಯ, ಹೊಳಿಗೆ, ಖರ್ಚಿಖಾಯಿ, ಕಡಬು, ಲಾಡು, ತರಕಾರಿ, ಚಟ್ನಿ, ಜಿಲೇಬಿ, ಮಾದಲಿ, ಹೋಳಿಗೆ, ಕರದಂಟು, ಮೈಸೂರು ಪಾಕ್, ರವೆ ಉಂಡೆ, ಜಾಮೂನು ಸೇರಿದಂತೆ ಹಲವು ವಸ್ತುಗಳನ್ನು ತಂದು ಕೊಡುತ್ತಾರೆ.
ಕೊಪ್ಪಳ ಗವಿಸಿದ್ಧೇಶ್ವರ ಜಾತ್ರೆ pic.twitter.com/rFBuCdPSSV
— hanamanth koppada (@hanamanthk23667) January 16, 2025
ಭಕ್ತರು, ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸ್ವಸಹಾಯ ಮಹಿಳಾ ಸಂಘದವರು ತಂಡ ರಚಿಸಿಕೊಂಡು ಬಂದು ದಾಸೋಹದಲ್ಲಿ ಪಾಲ್ಗೊಳ್ಳುತ್ತಾರೆ. ಜಾತ್ರೆಯ ಅವಧಿಯಲ್ಲಿ ಕಟ್ಟಿಗೆಯ ಒಲೆ ನಿರಂತರವಾಗಿ ‘ಮಹಾದಾಸೋಹ ಜ್ಯೋತಿ’ಯಾಗಿ ಉರಿಯುತ್ತಲೇ ಇರುತ್ತದೆ. ಮಠದ ದಾಸೋಹ ವ್ಯವಸ್ಥೆ ಸಮಗ್ರ ಉಸ್ತುವಾರಿಯನ್ನು ಖುದ್ದು ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿಯೇ ನೋಡಿಕೊಳ್ಳುತ್ತಾರೆ. ಹೀಗಾಗಿ ಮಠಕ್ಕೆ ಬರುವ ಕೊನೆಯ ಭಕ್ತನ ಊಟವಾಗುವ ತನಕ ಕಾಯುವ ಪ್ರಸಾದದ ಕೌಂಟರ್ ಸದಾ ಅನ್ನಪೂರ್ಣೆಯಂತೆ ಕಾಣಿಸುತ್ತದೆ.
ಕೊಪ್ಪಳ ಗವಿಸಿದ್ಧೇಶ್ವರ ಜಾತ್ರೆ pic.twitter.com/oRAN6z9gtB
— hanamanth koppada (@hanamanthk23667) January 16, 2025
ಬುಧವಾರ ನಡೆದ ರಥೋತ್ಸವದಲ್ಲಿ ಎಲ್ಲ ಜಾತಿ, ಧರ್ಮದವರು ಕಲೆತು ಅಜ್ಜನ ತೇರು ಎಳೆದರು. ರಥೋತ್ಸವದ ಹಿಂದಿನ ದಿನ ಈದಿನ.ಕಾಮ್ ಮಠಕ್ಕೆ ಭೇಟಿ ಕೊಟ್ಟಾಗ, ದಾಸೋಹ ಚಟುವಟಿಕೆಗಳು ಭರದಿಂದ ಸಾಗಿದ್ದವು. ಭಕ್ತರು ಅಷ್ಟೇ ಉತ್ಸಾಹದಿಂದ ಈ ಕಾರ್ಯದಲ್ಲಿ ಪಾಲ್ಗೊಂಡಿದ್ದು ಕಂಡುಬಂತು.
ಕೊಪ್ಪಳ ಗವಿಸಿದ್ಧೇಶ್ವರ ಜಾತ್ರೆ pic.twitter.com/Ar5NQmtk36
— hanamanth koppada (@hanamanthk23667) January 16, 2025
ರಾಜ್ಯದ ವಿವಿಧೆಡೆಯಿಂದ ಜಾತ್ರೆಗೆ 20 ಲಕ್ಷ ರೊಟ್ಟಿಗಳು ಬಂದಿವೆ. ಪ್ರತಿದಿನ ಸುಮಾರು 2 ಲಕ್ಷ ಜನರು ದಾಸೋಹ ಸ್ವೀಕರಿಸುತ್ತಾರೆ. ಸುಮಾರು 500 ಜನರು ಸ್ವಯಂಪ್ರೇರಿತರಾಗಿ ಅಡುಗೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಗವಿಸಿದ್ಧೇಶ್ವರ ಮಹಾವಿದ್ಯಾಲಯದ ಪ್ರೊ. ಶರಣಬಸಪ್ಪ ಈದಿನ.ಕಾಂಗೆ ತಿಳಿಸಿದರು.
ಕೊಪ್ಪಳ ಗವಿಸಿದ್ಧೇಶ್ವರ ಜಾತ್ರೆ pic.twitter.com/lGQHbidFy3
— hanamanth koppada (@hanamanthk23667) January 16, 2025
ಬೂದಿಹಾಳ ಗ್ರಾಮದಿಂದ 1 ಕ್ವಿಂಟಾಲ್ ಬೂಂದಿ, ಸಿಂಧನೂರಿನಿಂದ 11 ಕ್ವಿಂಟಾಲ್ ಖರ್ಚಿಕಾಯಿ, 15 ಕ್ವಿಂಟಾಲ್ ಮಾದ್ಲಿ, ಬಾಗಲಕೋಟೆ ಭಕ್ತಾದಿಗಳಿಂದ 9 ಸಾವಿರ ಹೋಳಿಗೆ ಸೇರಿದಂತೆ ಸುಮಾರು 50 ಕ್ವಿಂಟಾಲ್ ಸಿಹಿ ತಿನಿಸು ಬಂದಿದೆ ಎಂದು ಹೇಳಿ ಅಚ್ಚರಿ ಮೂಡಿಸಿದರು ಮಠದ ಸಿಬ್ಬಂದಿ ಪ್ರಭುಸ್ವಾಮಿ ಸಾಲಿಮಠ.
ಕೊಪ್ಪಳ ಗವಿಸಿದ್ಧೇಶ್ವರ ಜಾತ್ರೆ pic.twitter.com/7m4ypLym7V
— hanamanth koppada (@hanamanthk23667) January 16, 2025
‘ನಮ್ಮ ಹಿರಿಯರ ಕಾಲದಿಂದಲೂ ಮಠಕ್ಕೆ ರೊಟ್ಟಿ ನೀಡುತ್ತಾ ಬರಲಾಗುತ್ತಿದೆ. ನಮ್ಮೂರಿನಿಂದ 15 ಸಾವಿರ ರೊಟ್ಟಿ ತಂದಿದ್ದೇವೆ’ ಎಂದು ಕುಕನೂರು ತಾಲ್ಲೂಕಿನ ಮಂಗಳೂರು ಗ್ರಾಮದ ಜನರು ಹೆಮ್ಮೆಯಿಂದ ಹೇಳಿಕೊಂಡರು.
ಒಂದು ವಾರದಿಂದ ದಾಸೋಹದಲ್ಲಿ ತೊಡಗಿಸಿಕೊಂಡಿದ್ದೇವೆ. ಸುಮಾರು ಹಳ್ಳಿಗಳಿಂದ ಭಕ್ತಾದಿಗಳು ಜೋಳದ ರೊಟ್ಟಿ, ಸಜ್ಜೆ ರೊಟ್ಟಿ ತಂದು ಕೊಡುತ್ತಿದ್ದಾರೆ. ಕೊಡಬೇಕು ಎಂದು ಅವರಿಗೆ ಯಾರೂ ಹೇಳುವುದಿಲ್ಲ. ಅವರೇ ಸ್ವಯಂಪ್ರೇರಿತರಾಗಿ ಟ್ರ್ಯಾಕ್ಟರ್, ಚಕ್ಕಡಿ ಮೂಲಕ ತಂದುಕೊಡುತ್ತಾರೆ ಎಂದು ವಿದ್ಯಾರ್ಥಿ ವೀರೇಶ್ ಹಿರೇಮಠ ಹೇಳಿದರು.
ನಮ್ಮದೂ ಒಂದಷ್ಟು ಸೇವೆ ಇರಲಿ ಎನ್ನುವ ಭಕ್ತಿಯೇ ಯುವಕರ, ಮಹಿಳೆಯರ, ಹಿರಿಯರನ್ನು ‘ಮಹಾದಾಸೋಹ’ದ ಮನೆಯಲ್ಲಿ ಒಂದುಗೂಡಿಸುವುದು ಅಜ್ಜನ ಜಾತ್ರೆಯ ವಿಶೇಷತೆಯೂ ಆಗಿದೆ.
ಪೂರಕ ಮಾಹಿತಿ: ಕೇಶವ್ ಕಟ್ಟಿಮನಿ, ಗೀತಾ ಹೊಸಮನಿ