ಶಿವಮೊಗ್ಗ ಗ್ರಾಮಾಂತರದ ಹೊಳೆಹೊನ್ನೂರು ಗ್ರಾಮದಲ್ಲಿ ಟೊಮೆಟೊ ಗಿಡ ಕಟ್ಟಲು ಬಳಸುವ ಬಿದಿರಿನ ಕಡ್ಡಿಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ತಡೆದು ಮಾವಿನಕಟ್ಟೆ ಅರಣ್ಯ ಇಲಾಖೆ ಕಚೇರಿಗೆ ವಾಹನವನ್ನು ತಿರುಗಿಸು ಎಂದ ಅರಣ್ಯ ಇಲಾಖೆ ವಾಹನ ಚಾಲಕನ ವಿರುದ್ಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಜನವರಿ 13ರಂದು ಮುಂಜಾನೆ 3-30ರ ಸುಮಾರಿಗೆ ಅರಬಿಳಚಿ ಕ್ಯಾಂಪ್ ನಿವಾಸಿ ಪಳನಿ ಎಂಬುವವರು ಕೆಎ-14 ಬಿ-4256ರ 407 ವಾಹನದಲ್ಲಿ ಬಿದಿರು ಸೀಬನ್ನು ತುಂಬಿಕೊಂಡು ಕೂಡ್ಲಿಗೆರೆಯಿಂದ ದಾವಣಗೆರೆಯ ರೈತರಿಗೆ ಕೊಡಲು ಕೈಮರ ಮಾರ್ಗವಾಗಿ ಕೈಮರ ಸರ್ಕಲ್ ಹತ್ತಿರ ಹೋಗುತ್ತಿರುವಾಗ ʼಅರಣ್ಯ ಇಲಾಖೆʼ ಎಂದು ಫಲಕವಿರುವ ಬೊಲೆರೊ ಜೀಪೊಂದರಲ್ಲಿ ಬಂದವರು ಬಿದಿರು ಕಡ್ಡಿಗಳನ್ನು ಒಯ್ಯುತ್ತಿದ್ದ ವಾಹನವನ್ನು ಅಡ್ಡ ಹಾಕಿದ್ದರು.
ಪಳನಿಯವರ ಟ್ರ್ಯಾಕ್ಟರ್ ಅಡ್ಡ ಹಾಕಿ, ವಾಹನದಲ್ಲಿ ಏನಿದೆಯೆಂದು ತಪಾಸಣೆ ಮಾಡಿದ ವ್ಯಕ್ತಿ, ʼಈ ಬಿದಿರನ್ನು ಮಾವಿನಕಟ್ಟೆ ಅರಣ್ಯ ಇಲಾಖೆ ಕಚೇರಿಗೆ ಹೊಡೆಯೋʼ ಎಂದು ಗದರಿಸಿದ್ದಾನೆಂಬ ಆರೊಪ ಮಾಡಲಾಗಿದೆ.
ಪಳನಿಯವರು, ʼಇದು ಟೊಮೆಟೊ ಗಿಡಕ್ಕೆ ನೆಡುವ ಬಿದಿರಿನ ಕಡ್ಡಿ. ಇವುಗಳನ್ನು ದಾವಣಗೆರೆಗೆ ಹೊಯುತ್ತಿದ್ದೇನೆ ಎಂದಿದ್ದಾರೆ. ಅದಕ್ಕೆ, ʼನನಗೆ ಹಿಂದಿರುಗಿ ಮಾತನಾಡುತ್ತೀಯಾʼ ಎಂದು ಪಳನಿಯವರ ಕೊರಳಪಟ್ಟಿ ಹಿಡಿದು ಕಪಾಳಕ್ಕೆ ಹೊಡೆದು, ಅವರ ವಾಹನದಲ್ಲಿದ್ದ ಲಾಟಿಯನ್ನು ತೆಗೆದುಕೊಂಡು ಬಂದು ಮೈಕೈಗೆ ಹೊಡೆದಿದ್ದಾರೆಂದು ಆರೋಪಿಸಿದ್ದಾರೆ.
ಪಳನಿಯ ಜತೆಯಲ್ಲಿದ್ದ ಕೃಷ್ಣ ಮೂರ್ತಿಯವರು ಗಲಾಟೆ ಬಿಡಿಸಲು ಮುಂದಾದಾಗ ಅವರಿಗೂ ಹೊಡೆದು ಪಳನಿಯ ಮೊಬೈಲ್ ಕಸಿದುಕೊಂಡು ಜೀವ ಬೆದರಿಕೆ ಹಾಕಿ ಹೊರಟು ಹೋಗಿದ್ದಾನೆಂದು ದೂರಿನಲ್ಲಿ ದಾಖಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಮಹಿಳಾ ಸುರಕ್ಷತೆಯ ಅರಿವು ಕಾರ್ಯಕ್ರಮ
ಪಳನಿಯವರು ಪರಿಚಯಸ್ತರಾದ ಅರತೊಳಲು ವಾಸಿ ಸಂದೀಪ ಹಾಗೂ ಅರಬಿಳಚಿ ಕ್ಯಾಂಪ್ ವಾಸಿ ಕೆ ರಾಮಲಿಂಗ ಅವರನ್ನು ಕರೆದುಕೊಂಡು ಅರಣ್ಯ ಇಲಾಖೆಯ ಕಚೇರಿಗೆ ಹೋಗಿ ವಿಚಾರಿಸಿದಾಗ ಹಲ್ಲೆ ಮಾಡಿದವನು ಅರಣ್ಯ ಇಲಾಖೆಯ ವಾಹನ ಚಾಲಕ ಅನಿಲ್ ಎಂದು ತಿಳಿದುಬಂದಿದೆ.
ಹೀಗೆ ಕರ್ತವ್ಯ ಮರೆತು ಅದಕ್ಕಿಂತ ಹೆಚ್ಚಿನ ಕೆಲಸ ಮಾಡಲು ಹೊರಟ ಚಾಲಕ ಅನಿಲ್ ವಿರುದ್ಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.