ಕರ್ನಾಟಕ ಎದುರು ನೋಡುತ್ತಿರುವ ಜಾತಿಗಣತಿ ವರದಿ ಬಗ್ಗೆ ಕಾಂಗ್ರೆಸ್ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಹುನಿರೀಕ್ಷಿತ ಜಾತಿಗಣತಿ ವರದಿ ತೆರೆಯಲು ತೀರ್ಮಾನ ಕೈಗೊಳ್ಳಲಾಗಿದೆ.
ಜಾತಿಗಣತಿ ವರದಿಯನ್ನು ಮೊಹರು ಮಾಡಿದ ಲಕೋಟೆಯಲ್ಲಿರುವುದನ್ನು ತೆರೆಯಲು ತೀರ್ಮಾನಿಸಲಾಗಿದ್ದು, ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯ ಮುಂದಿಡಲು ನಿರ್ಧರಿಸಲಾಗಿದೆ.
ಸಚಿವ ಸಂಪುಟ ಸಭೆಯ ಪ್ರಮುಖ ಅಂಶಗಳು
ನರೇಗಾ ಯೋಜನೆಯಡಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ 8 ಕೋಟಿ ರೂ. ವೆಚ್ಚದಲ್ಲಿ ವೈದ್ಯಕೀಯ ವಿಮೆ ಒದಗಿಸಲು ನಿರ್ಧಾರ.
ರೇಷನ್ ಕಾರ್ಡ್ ಇರುವವರಿಗೆ ಜಿಲ್ಲಾ ಆಸ್ಪತ್ರೆಗಳಲ್ಲಿ ಉಚಿತ ಎಂಆರ್ಐ ಸ್ಕ್ಯಾನ್, ಸಿಟಿ ಸ್ಕ್ಯಾನ್.
ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಬಿಬಿಎಂಪಿ ವ್ಯಾಪ್ತಿಯ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲು ಅಸ್ತು. ಇದಕ್ಕೆ 413 ಕೋಟಿ ರೂ. ಅನುಮೋದನೆ.
ಮಹಾನಗರ ಪಾಲಿಕೆಯ ಒಟ್ಟು 13 ಹೆರಿಗೆ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲು ನಿರ್ಧಾರ.
10 ಮಹಾನಗರ ಪಾಲಿಕೆ ಮತ್ತು 24 ನಗರಪಾಲಿಕೆಗಳಲ್ಲಿ ಒಂದು ಚಿತಾಗಾರಕ್ಕೆ 4 ಕೋಟಿ ರೂ. ವೆಚ್ಚದಂತೆ 126 ಕೋಟಿ ರೂ ವೆಚ್ಚದಲ್ಲಿ ಚಿತಾಗಾರಗಳ ನಿರ್ಮಾಣ.
10 ವಸತಿ ಶಾಲೆಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ.
ಡಿಜಿ ಕಂದಾಯ ಯೋಜನೆಯ ಅನುದಾನದಿಂದ ಡಿಜಿ ಸೇವೆಯನ್ನು ನೀಡಲು ಕ್ರೋಮ್ ಬುಕ್ ಅಥವಾ ಲ್ಯಾಪ ಟಾಪ್ ಖರೀದಿಗೆ 20 ಕೋಟಿ ರೂ ಅನುಮೋದನೆ.
ಆರ್ಥಿಕ ಇಲಾಖೆ ಅಧಿಕಾರಿಗಳು, ನೌಕರರ ವರ್ಗಾವಣೆಯನ್ನು ಕೌನ್ಸೆಲಿಂಗ್ ಮೂಲಕ ಮಾಡಲು ಅನುಮೋದನೆ.
13.30 ಕೋಟಿ ರೂ. ವೆಚ್ಚದಲ್ಲಿ ಆಶಾಕಿರಣ ಯೋಜನೆ ಜಾರಿಗೆ ಅಸ್ತು. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ಗೆ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕಕ್ಕೆ ನಿರ್ಧಾರ.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ 450 ಬೆಡ್ ಉಳ್ಳ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ.
ಅಸ್ತಿತ್ವದಲ್ಲಿರುವ ಅಂಗ ಕಸಿ ಜೀವ ಸಾರ್ಥಕತೆ ಯೋಜನೆಗೆ ಶ್ವಾಸಕೋಶ ಹೃದಯ ಮತ್ತು ಮೂಳೆ ಮಜ್ಜೆ ಕಸಿಯನ್ನು ಸೇರಿಸಿ ಯೋಜನೆ ವಿಸ್ತರಣೆಗೆ ಅನುಮೋದನೆ.
ಎಚ್ಎಂಟಿ ಅಧೀನದಲ್ಲಿ ಇರುವ ಅರಣ್ಯ ಭೂಮಿ ಹಿಂಪಡೆಯುವ ಬಗ್ಗೆ ಚರ್ಚೆ. ಸುಪ್ರಿಂ ಕೋರ್ಟ್‌ನಲ್ಲಿರುವ ಮಧ್ಯಂತರ ಅರ್ಜಿ ಹಿಂಪಡೆಯಬೇಕು ಎಂದು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಮಾಡಲಾಗಿದೆ.