1980ರಲ್ಲಿ ಅಮೆರಿಕದ 52 ಮಂದಿಯನ್ನು ಇರಾನ್ ಸೆರೆಹಿಡಿದಿದ್ದು, ಒತ್ತೆಯಾಳುಗಳಾಗಿ ಸುಮಾರು ಒಂದು ವರ್ಷ ಇರಿಸಿಕೊಂಡಿತ್ತು. ಅವರನ್ನು ಬಿಡಿಸಲು ಅಮೆರಿಕ ಅಧ್ಯಕ್ಷ ಜಿಮ್ಮಿ ಕಾರ್ಟರ್ ಹಲವಾರು ಮಾತುಕತೆಗಳನ್ನು ನಡೆಸಿದ್ದರು. ನಾನಾ ರೀತಿಯಲ್ಲಿ ಪ್ರಯತ್ನಿಸಿದ್ದರು. ಆದಾಗ್ಯೂ, ಅವರ ಬಿಡುಗಡೆ ಸಾಧ್ಯವಾಗಿರಲಿಲ್ಲ. ಆದರೆ, 1981ರ ಜನವರಿ 20ರಂದು ರೊನಾಲ್ಡ್ ರೇಗನ್ ಅವರು ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ದಿನವೇ ಆ 52 ಒತ್ತೆಯಾಳುಗಳನ್ನು ಇರಾನ್ ಬಿಡುಗಡೆ ಮಾಡಿತು. ಅದು ರೇಗನ್ ಅವರನ್ನು ಪ್ರಬಲ ನಾಯಕ ಎಂದು ಬಿಂಬಿಸಿತು. ಆ ಮೂಲಕ, ಅಮೆರಿಕದ ಮಿತ್ರರಾಷ್ಟ್ರಗಳು ಮತ್ತು ಶತ್ರು ರಾಷ್ಟ್ರಗಳಿಗೆ ಪ್ರಬಲ ಸಂಕೇತವನ್ನು ರೇಗನ್ ಕಳಿಸಿದ್ದರು.
ಈಗ, 44 ವರ್ಷಗಳ ಬಳಿಕ, ಡೊನಾಲ್ಡ್ ಟ್ರಂಪ್, ತಾವು ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುವುದಕ್ಕೂ ಮುನ್ನವೇ ಗಾಜಾ-ಇಸ್ರೇಲ್ ನಡುವಿನ ಕದನ ವಿರಾಮದ ಕೀರ್ತಿ ಪಡೆಯಲು ಮುಂದಾಗಿದ್ದಾರೆ. ಗಾಜಾ ವಿರುದ್ಧದ ಸಂಘರ್ಷವನ್ನು ಕೊನೆಗೊಳಿಸುವುದಾಗಿ ಇಸ್ರೇಲ್ ಘೋಷಿಸಿದೆ. ಇದು ಸಾಧ್ಯವಾಗಿದ್ದು ತಮ್ಮಿಂದಲೇ ಎಂದು ಟ್ರಂಪ್ ಹೇಳಿಕೊಳ್ಳಲು, ತಮ್ಮಿಂದಲೇ ಗಾಜಾದಲ್ಲಿ ಶಾಂತಿ ನೆಲೆಸಿದೆ ಎಂದು ತಾವು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಜನವರಿ 20ರಂದು ಹೇಳಿಕೊಳ್ಳಲು ಸಜ್ಜಾಗಿದ್ದಾರೆ.
ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಟ್ರಂಪ್, “ಈ ಕದನ ವಿರಾಮ ಒಪ್ಪಂದವು ನವೆಂಬರ್‌ನಲ್ಲಿ ನಮ್ಮ ಐತಿಹಾಸಿಕ ವಿಜಯದ ಪರಿಣಾಮವಾಗಿ ಸಂಭವಿಸಿದೆ. ಏಕೆಂದರೆ, ನನ್ನ ಆಡಳಿತವು ಶಾಂತಿಯನ್ನು ಬಯಸುತ್ತದೆ. ಈ ಒಪ್ಪಂದವು ಎಲ್ಲ ಅಮೆರಿಕನ್ನರು ಮತ್ತು ನಮ್ಮ ಮಿತ್ರರಾಷ್ಟ್ರಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಮೆರಿಕವು ಒಪ್ಪಂದ, ಮಾತುಕತೆಗಳನ್ನು ನಡೆಸುತ್ತದೆ ಎಂಬುದನ್ನು ಇಡೀ ಜಗತ್ತಿಗೆ ಸೂಚಿಸಿದೆ” ಎಂದಿದ್ದಾರೆ.
ಜನವರಿ 20ರಂದು ತಾವು ಅಧಿಕಾರ ವಹಿಸಿಕೊಳ್ಳುವ ವೇಳೆಗೆ ಗಾಜಾದಲ್ಲಿ ಕದನ ವಿರಾಮ ಒಪ್ಪಂದ ನಡೆಯಬೇಕೆಂದು ಟ್ರಂಪ್ ಬೆದರಿಕೆ ಹಾಕಿದ್ದರು. ಇದಾದ, ಕೆಲವೇ ದಿನಗಳಲ್ಲಿ, ಇಸ್ರೇಲ್‌ಗೆ ಟ್ರಂಪ್ ಅವರ ವಿಶೇಷ ರಾಯಭಾರಿ ಸ್ಟೀವನ್ ವಿಟ್ಕಾಫ್ ಭೇಟಿ ನೀಡಿದರು. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿಯಾದರು. ಆ ಸಭೆಯಲ್ಲಿ, ಅಮೆರಿಕದ ನಿಯೋಜಿತ ಅಧ್ಯಕ್ಷರು ಗಾಜಾ ವಿರುದ್ಧದ ಸಂಘರ್ಷವನ್ನು ಇಸ್ರೇಲ್ ಕೊನೆಗೊಳಿಸಬೇಕೆಂದು ಬಯಸಿದ್ದಾರೆ. ತಕ್ಷಣವೇ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಬೇಕೆಂದು ನೆತನ್ಯಾಹು ಅವನ್ನು ಒತ್ತಾಯಿಸಿದರು.
ಈ ಬೆನ್ನಲ್ಲೇ, ಗುರುವಾರ ಇಸ್ರೇಲ್ ಕದನ ವಿರಾಮಕ್ಕೆ ಮೂರು ಹಂತದ ಒಪ್ಪಂದವನ್ನು ಘೋಷಿಸಿದೆ. ಇದೇ ಒಪ್ಪಂದವನ್ನು ಕಳೆದ ವರ್ಷ ಮೇ ತಿಂಗಳಿನಲ್ಲಿ ಹೊರಹೊಗುತ್ತಿರುವ ಅಮೆರಿಕ ಅಧ್ಯಕ್ಷ ಬೈಡೆನ್ ಕೂಡ ಪ್ರಸ್ತಾಪಿಸಿದ್ದರು. ಅದನ್ನು ಅಮೆರಿಕ ಭದ್ರತಾ ಮಂಡಳಿಯೂ ಅನುಮೋದಿಸಿತ್ತು. ಆದರೆ, ಹಮಾಸ್ ಮೇಲಿನ ತನ್ನ ಕ್ರೌರ್ಯವನ್ನು ನಿಲ್ಲಿಸಲು ಇಸ್ರೇಲ್ ನಿರಾಕರಿಸಿತು. ಕ್ರೂರ ಮಿಲಿಟರಿ ಕಾರ್ಯಾಚರಣೆಯನ್ನು ಮುಂದುವರೆಸಿತು.
ಆಗ, ಕದನ ವಿರಾಮಕ್ಕೆ ಒಪ್ಪಿಕೊಂಡರೆ, ನೆತನ್ಯಾಹು ನೇತೃತ್ವದ ಸರ್ಕಾರವನ್ನು ಉರುಳಿಸುವುದಾಗಿ ಇಸ್ರೇಲ್ ಸರ್ಕಾರದ ಭಾಗವಾಗಿದ್ದ ಬಲಪಂಥೀಯ ಪಕ್ಷಗಳು ಬೆದರಿಕೆ ಹಾಕಿದ್ದವು. ವಾಸ್ತವವಾಗಿ, ಒಬ್ಬ ಬಲಪಂಥೀಯ ನಾಯಕ ಬೆನ್ ಗ್ವಿರ್ ಅವರು ಗಾಜಾ-ಇಸ್ರೇಲ್ ನಡುವಿನ ಒಪ್ಪಂದದ ಪ್ರಯತ್ನಗಳನ್ನು ತಡೆಯುವುದಾಗಿ ಬಹಿರಂಗವಾಗಿಯೇ ಹೇಳಿಕೊಂಡಿದ್ದರು.
ಆದರೆ, ಈಗ ಕದನ ವಿರಾಮಕ್ಕೆ ಇಸ್ರೇಲ್ ಒಪ್ಪಿಕೊಂಡಿದೆ. ಈ ಕದನ ವಿರಾಮವು ಟ್ರಂಪ್ ಅವರ ಒತ್ತಡದಿಂದಲೇ ನಡೆದಿದೆ. ಇದು, ನವೆಂಬರ್‌ನಲ್ಲಿ ಟ್ರಂಪ್ ಗೆದ್ದಾಗ ಅವರ ವಿಜಯವನ್ನು ಶ್ಲಾಘಿಸಿದ್ದ ಬಲಪಂಥೀಯ ಇಸ್ರೇಲಿಗಳಿಗೆ ಆಘಾತವನ್ನುಂಟು ಮಾಡಿದೆ.
ಟ್ರಂಪ್ ಅವರು ತಮ್ಮ ಮೊದಲ ಅವಧಿಯಲ್ಲಿ, ಅಮೆರಿಕ ರಾಯಭಾರ ಕಚೇರಿಯನ್ನು ಟೆಲ್ ಅವೀವ್‌ನಿಂದ ಜೆರುಸಲೆಮ್‌ಗೆ ಸ್ಥಳಾಂತರಿಸಿದ್ದರು. ಅಲ್ಲದೆ, 1967ರ ಅರಬ್ ಮೇಲಿನ ಯುದ್ಧದಲ್ಲಿ ಇಸ್ರೇಲ್ ಆಕ್ರಮಿಸಿಕೊಂಡಿದ್ದ ಸಿರಿಯನ್ ಪ್ರದೇಶ ಗೋಲನ್ ಹೈಟ್ಸ್‌ನ ಮೇಲೆ ಇಸ್ರೇಲ್‌ನ ಸಾರ್ವಭೌಮತ್ವವನ್ನು ಗುರುತಿಸಿದ್ದರು. ಆದರೆ, ಈಗ ಹಮಾಸ್ ವಿರುದ್ದದ ದಾಳಿಯನ್ನು ನಿಲ್ಲಿಸುವಂತೆ ಇಸ್ರೇಲ್‌ಗೆ ಸೂಚನೆ ನೀಡಿದ್ದು, ಇಸ್ರೇಲ್‌ನ ಬಲಪಂಥೀಯರಲ್ಲಿ ಕುತೂಹಲ ಮೂಡಿಸಿದೆ.
ಟ್ರಂಪ್ ಕದನ ವಿರಾಮಕ್ಕೆ ಏಕೆ ಒತ್ತಾಯಿಸಿದ್ದಾರೆ?
ಇತ್ತೀಚಿನ ಇತಿಹಾಸದಲ್ಲಿ ಅತ್ಯಂತ ಕ್ರೂರ ಯುದ್ಧಗಳಲ್ಲಿ ಒಂದಾದ ಹಮಾಸ್-ಇಸ್ರೇಲ್ ಯುದ್ಧವನ್ನು ಕೊನೆಗೊಳಿಸಿದ ಕೀರ್ತಿಯನ್ನು ತೆಗೆದುಕೊಳ್ಳಲು ಟ್ರಂಪ್ ಬಯಸಿದ್ದಾರೆ. ಜೊತೆಗೆ, ಚೀನಾದೊಂದಿಗಿನ ಸಂಬಂಧಗಳು ಮತ್ತು ರಷ್ಯಾ-ಉಕ್ರೇನ್ ಸಂಘರ್ಷವನ್ನು ಕೊನೆಗೊಳಿಸಬೇಕು ಎಂದೂ ಎದುರು ನೋಡುತ್ತಿದ್ದಾರೆ. ಮಧ್ಯಪ್ರಾಚ್ಯದಲ್ಲಿ, ಇಸ್ರೇಲ್‌ಅನ್ನು ಸೌದಿ ಅರೇಬಿಯಾ ಗುರುತಿಸಬೇಕೆಂದು ಟ್ರಂಪ್ ಬಯಸಿದ್ದಾರೆ. ಇದೆಲ್ಲವೂ ಮುಂದಿನ ಕೆಲ ದಿನಗಳಲ್ಲಿ ಸಾಧ್ಯವಾದರೆ, ಇದು ಅವರ ಆಡಳಿತದ ದೊಡ್ಡ ಸಾಧನೆಯಾಗಲಿದೆ.
ಈ ನಡುವೆ, ಹಮಾಸ್ ಮತ್ತು ಇಸ್ರೇಲ್ ಎರಡೂ ಕದನ ವಿರಾಮ ಒಪ್ಪಂದವನ್ನು ಒಪ್ಪಿಕೊಳ್ಳಲು ಟ್ರಂಪ್ ಒತ್ತಡ ಅನಿರೀಕ್ಷಿತವಾಗಿದೆ. ಕದನ ವಿರಾಮ ಮಾತುಕತೆಗಳನ್ನು ಒಪ್ಪಿಕೊಳ್ಳುವಂತೆ ಟ್ರಂಪ್ ಪ್ರಮಾಣವಚನದ ಆತಿಥೇಯ ರಾಷ್ಟ್ರಗಳಾದ ಟರ್ಕಿ, ಈಜಿಪ್ಟ್ ಹಾಗೂ ಕತಾರ್ ಕೂಡ ಒತ್ತಡ ಹೇರಿವೆ. ಜೊತೆಗೆ, ನೆತನ್ಯಾಹು ಇಷ್ಟು ದಿನ ಬೈಡೆನ್ ಅವರನ್ನು ಧಿಕ್ಕರಿಸಿದಂತೆ, ಟ್ರಂಪ್ ವಿಚಾರದಲ್ಲಿ ನಡೆದುಕೊಳ್ಳಲು ಸಾಧ್ಯವಾಗಿಲ್ಲ. ಕಾರಣ, ಟ್ರಂಪ್ ಅವರನ್ನು ತಮ್ಮ ಪರವಾಗಿ ಇಟ್ಟುಕೊಳ್ಳುವುದು ಮುಖ್ಯವೆಂದು ಇಸ್ರೇಲ್ ಭಾವಿಸಿದೆ.
ಈ ವರದಿ ಓದಿದ್ದೀರಾ?: ಅಮೆರಿಕನ್ನರಲ್ಲಿ ಭಯ ಹುಟ್ಟಿಸಿದ ಟ್ರಂಪ್ ಕಾರ್ಯಕಾರಿ ಆದೇಶಗಳು: ಸರ್ವಾಧಿಕಾರಿ ಆಡಳಿತಕ್ಕೆ ನಾಂದಿಯೇ?
ಜನವರಿ 19ರ ಭಾನುವಾರದಿಂದ ಕದನ ವಿರಾಮ ಪ್ರಾರಂಭವಾಗಲಿದ್ದು, ಟ್ರಂಪ್ ಪದಗ್ರಹಣಕ್ಕೆ 42 ಗಂಟೆಗಳ ಸಮಯ ಇರುತ್ತದೆ. ಆ ಸಮಯದಲ್ಲಿ ಹಮಾಸ್ ಮತ್ತು ಇಸ್ರೇಲಿ ಜೈಲುಗಳಲ್ಲಿರುವ ಒತ್ತೆಯಾಳುಗಳ ವಿನಿಮಯ (ಬಿಡುಗಡೆ), ಗಾಜಾದಲ್ಲಿ ಸ್ಥಳಾಂತರಗೊಂಡ ಜನರು ತಮ್ಮ ಸ್ಥಳಗಳಿಗೆ ಮರಳುವುದು ಹಾಗೂ ಗಾಜಾಪಟ್ಟಿಗೆ ನೂರಾರು ಟ್ರಕ್‌ಗಳ ಮೂಲಕ ಆಹಾರ ಮತ್ತು ಇತರ ಸಾಮಗ್ರಿಗಳನ್ನು ಪ್ರತಿದಿನ ತಲುಪಿಸಲು ಅನುವು ಮಾಡಿಕೊಡುವುದನ್ನು ಅಮೆರಿಕ ಎದುರು ನೋಡುತ್ತಿದೆ.
ಶಾಂತಿ ನೆಲೆಸುವುದು ದೊಡ್ಡ ಸವಾಲು
ಹಮಾಸ್-ಇಸ್ರೇಲ್ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದರೂ, ಇನ್ನೂ ಸಮಸ್ಯೆಗಳು ಮುಂದುವರೆಯಬಹುದು. ಮುಂದಿನ ದಿನಗಳಲ್ಲಿ, ಎರಡೂ ಕಡೆಯಿಂದ ದಾಳಿಗಳು ನಡೆಯಬಹುದು. ಕದನ ವಿರಾಮವನ್ನು ಮುರಿಯಬಹುದು. ಆದರೆ, ಭಾನುವಾರದಿಂದ ಗಾಜಾದಲ್ಲಿ ಬಂದೂಕುಗಳು ಮೌನವಾದರೂ, ಕದನ ವಿರಾಮವು ಅದರ ಉದ್ದೇಶಿತ ಅವಧಿಯವರೆಗೆ ಮುಂದುವರೆದರೂ, ಯುದ್ಧವನ್ನು ಕೊನೆಗೊಳಿಸುವ ಮತ್ತು ಉಳಿದ ಎಲ್ಲ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಮಾತುಕತೆಗಳು ಪ್ರಾರಂಭವಾಗಲಿರುವ ಒಪ್ಪಂದದ ಎರಡನೇ ಹಂತದಲ್ಲಿ ನಿಜವಾದ ಸವಾಲುಗಳು ಎದುರಾಗಬಹುದು.
ಯಾಕೆಂದರೆ, ಯುದ್ಧದ ಶಾಶ್ವತ ಅಂತ್ಯಕ್ಕೆ ಇಸ್ರೇಲ್ ಸಿದ್ಧವಾಗಿದೆಯೇ? ಪ್ಯಾಲೆಸ್ತೀನಿಯರ ಮೇಲೆ ಇಸ್ರೇಲ್ ಎಸಗಿರುವ ಕ್ರೌರ್ಯವನ್ನು ಹಮಾಸ್ ಸಹಿಸಿಕೊಳ್ಳುತ್ತದೆಯೇ? ಇಸ್ರೇಲ್ ಎಸಗಿದ ಕ್ರೌರ್ಯದಲ್ಲಿ ತಮ್ಮ ಸಂಬಂಧಿಯನ್ನು ಕಳೆದುಕೊಳ್ಳದ ಒಂದೇ-ಒಂದು ಕುಟುಂಬ ಪ್ಯಾಲೆಸ್ತೀನ್‌ನಲ್ಲಿಲ್ಲ. ಹೀಗಿರುವಾಗ, ಮುಂದೆ ಏನಾಗಲಿದೆ ಎಂಬುದು ಗಮನಾರ್ಹ.
ಇನ್ನು, 3ನೇ ಸುತ್ತಿನ ಒಪ್ಪಂದದ ಮಾತುಕತೆಗಳು ಗಾಜಾದಲ್ಲಿ ಇಸ್ರೇಲ್ ದಾಳಿಯಿಂದ ನಾಶವಾಗಿರುವ ಮೂಲಸೌಕರ್ಯಗಳ ಪುನರ್‌ನಿರ್ಮಾಣವನ್ನು ಒಳಗೊಂಡಿರುತ್ತದೆ. ಈ ಹಿಂದೆ, ಗಾಜಾದ ಪುನರ್‌ನಿರ್ಮಾಣಕ್ಕೆ ಹಣಕಾಸು ಒದಗಿಸಿದ್ದ ಅರಬ್ ರಾಷ್ಟ್ರಗಳು ಈ ಬಾರಿ, ಮತ್ತೆ ಇಸ್ರೇಲ್ ದಾಳಿ ನಡೆಸುವುದಿಲ್ಲ ಎಂಬ ಖಾತ್ರಿಯಿಲ್ಲದೆ ಮತ್ತೊಮ್ಮೆ ಹಣಕಾಸು ಸಹಾಯ ಮಾಡಲು ಹಿಂಜರಿಯಬಹುದು. ಜೊತೆಗೆ, ಮುಂದೆ ಗಾಜಾವನ್ನು ಯಾರು ಆಳುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ. ಪ್ಯಾಲೆಸ್ತೀನ್‌ಅನ್ನು ಹಮಾಸ್ ಮುನ್ನಡೆಸಬಹುದು ಎಂದಾದರೆ, ಅದನ್ನು ಇಸ್ರೇಲ್ ಮತ್ತು ಅಮೆರಿಕ ಎರಡೂ ಒಪ್ಪುವುದಿಲ್ಲ.
ಗಮನಾರ್ಹವಾಗಿ, ಟ್ರಂಪ್ ಅವರ ಸ್ವಭಾವವನ್ನು ಗಮನಿಸಿದರೆ ಎರಡನೇ ಮತ್ತು ಮೂರನೇ ಹಂತಗಳಲ್ಲಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ, ಅವರು ವಿಭಿನ್ನವಾಗಿ ವರ್ತಿಸಬಹುದು.
ಈ ವರದಿ ಓದಿದ್ದೀರಾ?: ಮೋದಿಗೆ ದೆಹಲಿ ಗೆಲ್ಲುವುದು ಪ್ರತಿಷ್ಠೆಯ ವಿಷಯ; ಕೇಜ್ರಿವಾಲ್ ಕೋಟೆ ಭೇದಿಸುವರೇ ಪ್ರಧಾನಿ?
ಕಳೆದ 15 ತಿಂಗಳುಗಳಲ್ಲಿ ತೀವ್ರವಾಗಿದ್ದ ಸಂಘರ್ಷವು ಈಗ ನಾಟಕೀಯವಾಗಿ ಬದಲಾಗಿದೆ ಎಂಬುದು ಹಮಾಸ್ ಮತ್ತು ಇಸ್ರೇಲ್ – ಎರಡಕ್ಕೂ ತಿಳಿದಿದೆ. ಪ್ಯಾಲೆಸ್ತೀನ್ ಮೇಲೆ ಇಸ್ರೇಲ್‌ನ ಕ್ರೌರ್ಯವು ತ್ವರಿತ ಮತ್ತು ಬೃಹತ್ ಪ್ರಮಾಣದ್ದಾಗಿತ್ತು. ಹಮಾಸ್‌ನ ಮಿತ್ರ ರಾಷ್ಟ್ರ ಹೆಜ್ಬುಲ್ಲಾದ ಎಲ್ಲ ಉನ್ನತ ನಾಯಕರನ್ನು ಕೂಡ ಇಸ್ರೇಲ್ ನಾಶ ಮಾಡಿತು. ಹಮಾಸ್ ಮತ್ತು ಹೆಜ್ಬುಲ್ಲಾದ ಮಿಲಿಟರಿ ಮೂಲಸೌಕರ್ಯವನ್ನು ನಾಶಮಾಡಿತು. ಮತ್ತೊಂದು ಮಿತ್ರ ರಾಷ್ಟ್ರ ಸಿರಿಯಾದಲ್ಲಿ ಆಡಳಿತ ಬದಲಾವಣೆಗೂ ಕಾರಣವಾಯಿತು. ಸಿರಿಯಾ ಅಧ್ಯಕ್ಷ ಬಶರ್ ಅಸ್ಸಾದ್ ದೇಶವನ್ನು ಬಿಟ್ಟು ಪಲಾಯನ ಮಾಡಿ, ರಷ್ಯಾದಲ್ಲಿ ಆಶ್ರಯ ಪಡೆಯಬೇಕಾಯಿತು. ಅಸ್ಸಾದ್ ಪತನದ ನಂತರ ಹೆಜ್ಬುಲ್ಲಾದ ನಿಕಟವರ್ತಿ ಇರಾನ್ ಕೂಡ ದುರ್ಬಲಗೊಂಡಿತು.
ಇಸ್ರೇಲ್‌ನ ಮಿಲಿಟರಿ ದಾಳಿಯಿಂದಾದ ನಷ್ಟಕ್ಕೆ ಹೊಣೆ ಯಾರು?
ಹಮಾಸ್ ಮತ್ತು ಹೆಜ್ಬುಲ್ಲಾ ನಾಯಕತ್ವವನ್ನು ಅಂತ್ಯಗೊಳಿಸುವಲ್ಲಿ, ಅವರ ಯುದ್ಧ ಯಂತ್ರಗಳನ್ನು ನಾಶಪಡಿಸುವಲ್ಲಿ ಮಾತ್ರವೇ ಇಸ್ರೇಲ್ ಯಶಸ್ವಿಯಾಗಿದೆ. ಆದರೆ, ಗಾಜಾದಲ್ಲಿ ಅದರ ಮಿಲಿಟರಿ ದಾಳಿಯು ಪ್ಯಾಲೆಸ್ತೀನ್‌ನ ಮಾನವ ಸಮೂಹವನ್ನೇ ನಾಶ ಮಾಡಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಸ್ರೇಲ್‌ನ ಇಮೇಜ್ ಕುಸಿದುಬಿದ್ದು, ಜಾಗತಿಕ ಆಕ್ರೋಶವನ್ನು ಎದುರಿಸಿದೆ.
ಇಸ್ರೇಲ್‌ನ ಕ್ರೂರ ಮಿಲಿಟರಿ ಕಾರ್ಯಾಚರಣೆಯು ಗಾಜಾದಲ್ಲಿ 47,000ಕ್ಕೂ ಹೆಚ್ಚು ಜನರನ್ನು ಕೊಂದಿದೆ. 23 ಲಕ್ಷ ಜನರು ಸ್ಥಳಾಂತರವಾಗುವಂತೆ ಮಾಡಿದೆ. ಗಾಜಾದ ಸುಮಾರು 80%ಕ್ಕೂ ಹೆಚ್ಚು ವಸತಿ ಕಟ್ಟಡಗಳನ್ನು ನಾಶಮಾಡಿದೆ. ಇಸ್ರೇಲ್ ಕ್ರೌರ್ಯಕ್ಕೆ ಬಲಿಯಾದ ಮುಗ್ಧ ನಾಗರಿಕರು ಈಗ ನಿರಾಶ್ರಿತರಾಗಿದ್ದಾರೆ. ಆರೋಗ್ಯ, ಆಹಾರ, ಶುದ್ಧ ನೀರು ಅಥವಾ ಸರಿಯಾದ ಆಶ್ರಯ ಪಡೆಯಲು ಕಷ್ಟಪಡುತ್ತಿದ್ದಾರೆ.
ಮೊದಲ ಬಾರಿಗೆ, ಇಸ್ರೇಲ್ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ನರಮೇಧದ ಆರೋಪಗಳನ್ನು ಎದುರಿಸುತ್ತಿದೆ. ಅಂತಾರಾಷ್ಟ್ರೀಯ ನ್ಯಾಯಾಲಯವು ನೆತನ್ಯಾಹು ಮತ್ತು ಅವರ ಮಾಜಿ ರಕ್ಷಣಾ ಸಚಿವರ ವಿರುದ್ಧ ಯುದ್ಧ ಅಪರಾಧಗಳು ಮತ್ತು ಅಮಾನವೀಯ ಕ್ರೌರ್ಯಗಳ ಆರೋಪದ ಮೇಲೆ ಬಂಧನ ವಾರಂಟ್‌ಗಳನ್ನು ಸಹ ಹೊರಡಿಸಿದೆ.
ಯಶಸ್ವಿ ಕದನ ವಿರಾಮವು ಗಾಜಾದ ಜನರ ನೋವುಗಳಿಗೆ ತಕ್ಷಣದ ಅಂತ್ಯವನ್ನು ತರಬಹುದು. ಯುದ್ಧದ ಅಂತ್ಯವು ಸ್ವಲ್ಪ ನೆಮ್ಮದಿ ನೆಲೆಸುವಂತೆ ಮಾಡಬಹುದು. ಆದರೆ, ಇದು ಪ್ಯಾಲೆಸ್ತೀನಿಯನ್ನರು ಮತ್ತು ಇಸ್ರೇಲ್ ನಡುವಿನ ವ್ಯಾಪಕ ಸಂಘರ್ಷದ ಅಂತ್ಯವಾಗಿದೆ ಎಂದು ಅರ್ಥವಲ್ಲ. ಗಾಜಾದ ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ತನ್ನ ವಸಾಹತುಗಳನ್ನು ವಿಸ್ತರಿಸಿಕೊಂಡಿದೆ. ಇತ್ತೀಚಿನ ತಿಂಗಳುಗಳಲ್ಲಿ ಪ್ರದೇಶದಲ್ಲಿ ಭಾರೀ ಹಿಂಸಾಚಾರವನ್ನೂ ನಡೆಸಿದೆ.
ಈ ಎಲ್ಲ ಕಾರಣಗಳಿಂದಾಗಿ, ಮಧ್ಯಪ್ರಾಚ್ಯದಲ್ಲಿ ಶಾಂತಿ ಇನ್ನೂ ಅಸ್ಪಷ್ಟವಾಗಿದೆ. ಭಾರತ ಸೇರಿದಂತೆ ಹೆಚ್ಚಿನ ದೇಶಗಳು ಪ್ರಸ್ತಾಪಿಸಿದಂತೆ ಎರಡು ರಾಷ್ಟ್ರಗಳ ನಡುವೆ ಪರಿಹಾರ ಒಪ್ಪಂದವಾಗದೆ, ಸಂಘರ್ಷ ಕೊನೆಗೊಳ್ಳಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ. ಆದಾಗ್ಯೂ, ಪರಿಹಾರ ನೀಡುವ ಪ್ರಸ್ತಾಪವನ್ನು ಇಸ್ರೇಲ್ ಸರ್ಕಾರ ತಿರಸ್ಕರಿಸಿದೆ. ಟ್ರಂಪ್ ಕದನ ವಿರಾಮ ಒಪ್ಪಂದವನ್ನು ಜಾರಿಗೆ ತರಲು ಮುಂದಾಗಬಹುದು. ಆದರೆ, ಎರಡೂ ರಾಷ್ಟ್ರಗಳಿಗೆ ಪರಿಹಾರವನ್ನು ಬೆಂಬಲಿಸುವಲ್ಲಿ ಈವರೆಗೆ ಅವರು ಯಾವುದೇ ಆಸಕ್ತಿ ತೋರಿಸಿಲ್ಲ. ಮುಂದೆಯೂ ಇದು ಸಾಧ್ಯವಾಗದೇ ಇರಬಹುದು!