ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಕುರಿತಂತೆ ರಾಜ್ಯ ಸರ್ಕಾರ ರಚಿಸಿರುವ ನ್ಯಾಯಮೂರ್ತಿ ನಾಗಮೋಹನದಾಸ್ ನೇತೃತ್ವದ ಆಯೋಗಕ್ಕೆ ಮಾಲಾ ಮಹಾಸಭಾದಿಂದ ಮನವಿ ಸಲ್ಲಿಸಲಾಗಿದ್ದು, ಜೆ ಸಿ ಮಾಧುಸ್ವಾಮಿ ನೇತೃತ್ವದ ಸಮಿತಿ ನೀಡಿರುವ ವರದಿಯಲ್ಲಿ ಮಾಲಾ ಹಾಗೂ ಬ್ಯಾಗಾರ ಉಪ ಜಾತಿಗಳನ್ನು ನಾಲ್ಕನೇ ಗುಂಪಿನಲ್ಲಿ ಸೇರ್ಪಡೆ ಮಾಡಿ ಶೇ.1ರಷ್ಟು ಮೀಸಲು ನಿಗದಿಪಡಿಸಿರುವುದನ್ನು ಪರಿಷ್ಕರಿಸಬೇಕೆಂದು ಮನವಿ ಮಾಡಲಾಗಿದೆ ಎಂದು ಮಹಾಸಭಾ ಸಂಚಾಲ ಭಾಸ್ಕರರಾಜ್ ಹೇಳಿದರು.
ರಾಯಚೂರು ನಗರದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿ, “ಬಿಜೆಪಿ ಸರ್ಕಾರದ ಅವಧಿಯಲ್ಲಿ ನ್ಯಾಯಮೂತಿ ಎ ಜೆ ಸದಾಶಿವ ಆಯೋಗ ವರದಿಯನ್ನು ಬಿಟ್ಟು ಜೆ ಸಿ ಮಾಧುಸ್ವಾಮಿ ಸಮಿತಿ ನೀಡಿರುವ ಮೀಸಲು ವರ್ಗೀಕರಣದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಲಾಗಿತ್ತು. ಆದರೆ ವರದಿಯಲ್ಲಿ ಮಾಲಾ ಮತ್ತು ಬ್ಯಾಗಾರ ಉಪ ಜಾತಿಗಳಿಗೆ ಅನ್ಯಾಯವಾಗಿದೆ. ಮಾಲಾದಲ್ಲಿ 37 ಉಪಜಾತಿಗಳಿದ್ದು, ಛಲವಾದಿ ಪ್ರತ್ಯೇಕ ಉಪಜಾತಿಗಳಿವೆ. ಕೆಲವರು ಛಲವಾದಿಯೆಂದು ನಮೂದಿಸಿದ್ದರಿಂದ ಗೊಂದಲವಾಗಿದೆ. 2011 ಜಾತಿಗಣತಿಯಲ್ಲಿ ಮಾಲಾ ಸಮೂದಾಯ 20 ಸಾವಿರ ಜನಸಂಖ್ಯೆ ಇರುವುದಾಗಿ ಉಲ್ಲೇಖವಾಗಿದೆ” ಎಂದರು.
“ಬ್ಯಾಗಾರ ಸಮುದಾಯವನ್ನು ಕೇವಲ 2019 ಎಂದು ನಮೂದಿಸಲಾಗಿದೆ. ಒಳಮೀಸಲು ವರ್ಗೀಕರಣದಲ್ಲಿ ಜನಗಣತಿ ಪರಿಗಣಿಸಿ ಮೀಸಲು ಹಂಚಿಕೆ ಮಾಡಿದಲ್ಲಿ ಅನ್ಯಾಯವಾಗುತ್ತದೆ. ನಿವೃತ್ತ ಐಎಎಸ್ ಅಧಿಕಾರಿ ಕೆ ಶಿವರಾಂ ನೇತೃತ್ವದಲ್ಲಿ ಛಲವಾದಿ ಮಹಾಸಭಾ ಸ್ಥಾಪಿಸಿದ್ದರು. ಮಾಲಾ ಮತ್ತು ಬ್ಯಾಗಾರ ಎಂದು ಪ್ರತ್ಯೇಕವಾಗಿ ಬರೆಸದೇ ಛಲವಾದಿಯೆಂದು ಸಮುದಾಯದ ಜನರು ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ಕೂಡಲೇ ಅಂತಹ ಜಾತಿ ಪ್ರಮಾಣಪತ್ರ ರದ್ದುಗೊಳಿಸಿ ಮಾಲಾ ಮತ್ತು ಬ್ಯಾಗಾರ ಪ್ರತ್ಯೇಕ ಜಾತಿ ಪ್ರಮಾಣ ಪತ್ರ ನೀಡಿ ಶೇ.5.5ರಷ್ಟು ಮೀಸಲು ನಿಗದಿಗೊಳಿಸಬೇಕು. ಇಲ್ಲದೇ ಹೊದಲ್ಲಿ ಸಮುದಾಯದ ವಿದ್ಯಾರ್ಥಿಗಳಿಗೆ, ಸರ್ಕಾರಿ ಉದ್ಯೋಗ ಸೇರಿದಂತೆ ಎಲ್ಲದರಲ್ಲೂ ಅನ್ಯಾಯವಾಗುವ ಕುರಿತು ಮಾಹಿತಿ ನೀಡಲಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ʼಹೈದರಾಬಾದ್ ಕರ್ನಾಟಕದ ಸಣ್ಣಕಥೆಗಳಲ್ಲಿ ದಲಿತ ಲೋಕದ ಸ್ವರೂಪʼ ಪ್ರಬಂಧಕ್ಕೆ ಡಾಕ್ಟರೇಟ್ ನೀಡಿದ ಹಂಪಿ ವಿವಿ
ಡಾ. ಅಂಬೇಡ್ಕರ್ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಮಹೇಂದ್ರ ಮಿತ್ರ ಮಾತನಾಡಿ, “ರಾಜ್ಯದಲ್ಲಿ 1 ಲಕ್ಷ ಮಂದಿ ಸರ್ಕಾರಿ ನೌಕರರಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದಿದ್ದಾರೆ. ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗಕ್ಕೆ ದೂರು ನೀಡಿದರೆ ಸುಳ್ಳು ಜಾತಿ ಪ್ರಮಾಣಪತ್ರ ರದ್ದುಗೊಳಿಸುವ ಅಧಿಕಾರ ನೀಡಿಲ್ಲವೆಂದು ಹೇಳುತ್ತಿದ್ದಾರೆ. ಆಯೋಗ ನೀಡುವ ವರದಿಯಲ್ಲಿ ತಪ್ಪು ಮಾಹಿತಿ ನೀಡಿ ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ” ಎಂದರು.
“ದ್ರಾವಿಡ ಕರ್ನಾಟಕ, ಆದಿ ಕರ್ನಾಟಕ ಎಂಬುದನ್ನು ಮಾತ್ರ ಆಯೋಗ ಪರಿಶೀಲಿಸಿ ವರದಿ ನೀಡುವುದಾಗಿ ಹೇಳಲಾಗುತ್ತಿದೆ. ಉಳಿದಂತೆ ಎಸ್‌ಸಿ ಜಾತಿಗಳ ವ್ಯಾಪ್ತಿಯಲ್ಲಿರುವ ಪರಿಶಿಷ್ಟ ಉಪಜಾತಿಗಳಿಗೆ ಅನ್ಯಾಯವಾಗುತ್ತದೆ. 2011ರ ಜನಗಣತಿಯಂತೆ ಪರಿಶಿಷ್ಟ ಜಾತಿಗಳ ಜನಸಂಖ್ಯೆ ಅನ್ವಯಿಸಿದರೆ ʼಕೋಲಪುಲು ವಂದಲುʼ ಎಂಬ ಉಪ ಜಾತಿಯ ಜನಸಂಖ್ಯೆ ಕೇವಲ ಒಂದು ಎಂದು ನಮೂದಿಸಲಾಗಿದೆ. ಒಬ್ಬರೇ ಉಪಜಾತಿಯಲ್ಲಿ ಇರುಲು ಸಾಧ್ಯವೇ” ಎಂದು ಪ್ರಶ್ನಿಸಿದ್ದು, ಪ್ರತ್ಯೇಕವಾಗಿ ಜಾತಿ ಕಲಂನಲ್ಲಿ ನಮೂದಿಸುವ ವ್ಯವಸ್ಥೆ ರೂಪಿಸಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಮಲ ಆಂಜಿನೇಯ್ಯ ಇದ್ದರು.
