ಶಿಗ್ಗಾಂವಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಎಲ್ಲಾ ವಿಭಾಗದ ವಿದ್ಯಾರ್ಥಿಗಳ ಪ್ರಥಮ, ದ್ವೀತಿಯ, ತೃತೀಯ ಸೆಮಿಸ್ಟರ್ ಫಲಿತಾಂಶ ಬಿಡುಗಡೆ ಹಾಗೂ ಮುದ್ರಿತ ಅಂಕಪಟ್ಟಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ನೇತೃತ್ವದಲ್ಲಿ ವಿವಿ ವಿದ್ಯಾರ್ಥಿಗಳು ಕುಲಸಚಿವ ಪ್ರೊ. ಸಿ.ಟಿ.ಗುರುಪ್ರಸಾದ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ದೇಶದ ಪ್ರತಿಷ್ಠಿತ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಕೊಡಲಿ ಪೆಟ್ಟು ಬೀಳುತ್ತಿದೆ. ಪ್ರಥಮ, ದ್ವೀತಿಯ, ತೃತೀಯ ಸೆಮಿಸ್ಟರ್ ಫಲಿತಾಂಶ ಹಾಗೂ ಅಂಕಪಟ್ಟಿಯನ್ನು ಬಿಡದಿರುವ ಕಾರಣ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಅವಧಿಯು ಮುಗಿದಿದೆ. ಹಾಗಾಗಿ ಅಂಕಪಟ್ಟಿಯನ್ನು ಕೂಡಲೇ ಬಿಡುಗಡೆಮಾಡಿ ಸ್ಕಾಲರ್ಶಿಪ್ ಅವಧಿಯನ್ನು ಪುನರಾರಂಭಿಸಬೇಕು. ಉನ್ನತ ಶಿಕ್ಷಣಕ್ಕೆ ಪೂರಕವಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಕುಲಪತಿಗಳು ವಿದ್ಯಾರ್ಥಿಗಳ ನ್ಯಾಯಯುತ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಎಸ್ಎಫ್ಐ ಒತ್ತಾಯಿಸಿತು.
ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, ಕೂಡಲೇ ಕಜಾವಿವಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಫಲಿತಾಂಶ ಹಾಗೂ ಅಂಕಪಟ್ಟಿ ಸಮಸ್ಯೆಗಳನ್ನು ತ್ವರಿತವಾಗಿ ಪರಿಹಾರಕ್ಕೆ ಜಾವಿವಿ ಆಡಳಿತ ಮಂಡಳಿ ಸೂಕ್ತ ಕ್ರಮಕೈಗೊಳಲು ಮುಂದಾಗಬೇಕು. ಯಾವುದೇ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ ವಾಗದ ರೀತಿಯಲ್ಲಿ ನೋಡಿಕೊಳ್ಳಬೇಕು. ಯುಸಿಸಿಎಮ್ಎಸ್ ತಾಂತ್ರಿಕ ಸಮಸ್ಯೆ ರಾಜ್ಯಾದ್ಯಂತ ಎಲ್ಲಾ ವಿದ್ಯಾರ್ಥಿಗಳಿಗೆ ಮುಳುವಾಗಿದೆ ಸರ್ಕಾರಗಳು ಎಚ್ಚೆತ್ತುಕೊಂಡು ಕೂಡಲೇ ವಿದ್ಯಾರ್ಥಿ ವಿರೋಧಿ ಈ ತಾಂತ್ರಿಕ ಪೋರ್ಟಲ್ ಅನ್ನು ರದ್ದು ಪಡಿಸಬೇಕು ಎಂದು ಆಗ್ರಹಿಸಿದರು.
ವಿದ್ಯಾರ್ಥಿಗಳು ನಿರಂತರವಾಗಿ ಮನವಿ ಪತ್ರ ನೀಡಿದರು ಯಾವುದೇ ರೀತಿಯ ಸ್ಪಂದನೆ ಸಿಗುತ್ತಿಲ್ಲ. ಈಗಾಗಲೇ ಆಗಿರುವ ಸೆಮಿಸ್ಟರ್ಗಳ ಫಲಿತಾಂಶ ಬಿಟ್ಟರೆ ಮಾತ್ರ ಮುಂದಿನ ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗುತ್ತೇವೆ. ಇಲ್ಲವಾದರೆ ಪರೀಕ್ಷೆಯನ್ನು ಬಹಿಷ್ಕರಿಸುತ್ತೇವೆ. ಈ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕೊಡುವುದಾಗಿ ಕುಲಪತಿಗಳು ನೀಡಿರುವ ಭರವಸೆ ಹುಸಿಯಾದರೆ ವಿವಿ ಎದರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಜಾವಿವಿ ಎಸ್ಎಫ್ಐ ಘಟಕ ಅಧ್ಯಕ್ಷ ಅರುಣ್ ಪಾಂಡೆ, ಕಾರ್ಯದರ್ಶಿ ಸೌಭಾಗ್ಯ ಕೋಳಿವಾಡ ಆಕ್ರೋಶ ವ್ಯಕ್ತಪಡಿಸಿದರು.
ಮನವಿ ಪತ್ರ ಸ್ವೀಕರಿಸಿ ಜಾವಿವಿ ಕುಲಸಚಿವರಾದ ಪ್ರೊ. ಸಿ.ಟಿ. ಗುರುಪ್ರಶಾದ್ ಮಾತನಾಡಿ, ತಾಂತ್ರಿಕ ಸಮಸ್ಯೆ ಉಂಟಾಗಿ ಫಲಿತಾಂಶ ಬಿಡುಗಡೆಗೆ ತೊಡಕಾಗಿದೆ. ಆಡಳಿತ ಮಂಡಳಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದೆ. ಕೂಡಲೇ ಸಮಸ್ಯೆಗಳನ್ನು ಸರಿಪಡಿಸಿ ಶೀಘ್ರವಾಗಿ ಫಲಿತಾಂಶ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ?: ಶಿಗ್ಗಾಂವಿ | ಯಾಸಿರ್ ಪಠಾಣ್ ಗೆಲುವಿನೊಂದಿಗೆ ಬಿಜೆಪಿ ಮುಕ್ತ ಜಿಲ್ಲೆಯಾದ ‘ಹಾವೇರಿ’
ಈ ಸಂದರ್ಭದಲ್ಲಿ ಎಸ್ಎಫ್ಐ ಘಟಕ ಉಪಾಧ್ಯಕ್ಷೆ ಕಾವ್ಯ ಎಮ್ ಕೆ, ಪ್ರತಿಭಾ ಪಿ ಬಿ, ಬಸವರಾಜ ಬಡಿಗೇರ್, ಚನ್ನಪ್ಪ, ಸಹ ಕಾರ್ಯದರ್ಶಿ ಗೀತಾ ಕೆ, ಶಿಲ್ಪಾ ಎಸ್, ವಿನೋದಕುಮಾರ್ ಡಿ, ಉಮೇಶ್ ಟಿ, ಪ್ರಶಾಂತ, ಸಂಜಯ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
