ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಧೂಳಿನ ಸಮಸ್ಯೆ ಅತಿಯಾಗಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಆರೋಪಿಸಿ ಜಯ ಕರ್ನಾಟಕ ರಕ್ಷಣಾ ಸೇನೆಯಿಂದ ಪುರಸಭೆಯ ಮುಖ್ಯಾಧಿಕಾರಿ ಪರಶುರಾಮ ಅವರಿಗೆ ಮನವಿ ಸಲ್ಲಿಸಿದರು.
“ಮಾನ್ವಿ ಪಟ್ಟಣದ ಪ್ರವಾಸಿ ಮಂದಿರದಿಂದ ಕೋನಾಪುರಪೇಟೆ ಮುಖ್ಯರಸ್ತೆಯ ಚರಂಡಿ ಕಾಮಗಾರಿ ನಡೆದಿದೆ. ಕಾಮಗಾರಿ ನಡೆಯುತ್ತಿರುವ ರಸ್ತೆಯಲ್ಲಿ ವಿಪರೀತ ಮಣ್ಣು ತುಂಬಿಕೊಂಡಿದ್ದು, ಎಲ್ಲೆಡೆ ಹರಡಿಕೊಂಡಿದೆ” ಎಂದು ದೂರಿದರು.
“ಮರಳು ಸಾಗಿಸುವ ಭಾರೀ ವಾಹನಗಳು, ಲಘು ವಾಹನಗಳು, ಟ್ರ್ಯಾಕ್ಟರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಿರುವುದರಿಂದ ಧೂಳಿನ ಕಣಗಳು ವಾಹನ ಸವಾರರ ಕಣ್ಣಲ್ಲಿ ಹೋಗಿ ಅಪಘಾತಕ್ಕೆ ಕಾರಣವಾಗುತ್ತಿದೆ. ಧೂಳಿನ ಸಮಸ್ಯೆಯಿಂದ ಜನರಿಗೆ ಉಸಿರಾಟ, ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ” ಎಂದು ಆಳಲು ತೋಡಿಕೊಂಡರು.
“ಪ್ರವಾಸಿ ಮಂದಿರದಿಂದ ಕೋನಾಪುರಪೇಟೆ ಹಾಗೂ ಸಾರ್ವಜನಿಕರ ಸರ್ಕಾರಿ ಆಸ್ಪತ್ರೆವರೆಗೆ ವಿದ್ಯುತ್ ಕಂಬಗಳಿಗೆ ದೀಪಗಳನ್ನು ಅಳವಡಿಸಬೇಕು. ಮುಖ್ಯರಸ್ತೆಗಳಲ್ಲಿನ ಧೂಳಿನ ಸಮಸ್ಯೆಯನ್ನು ನಿವಾರಿಸಬೇಕು” ಎಂದು ಸಂಘಟನೆಯ ಪದಾಧಿಕಾರಿಗಳು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಶಾಸಕ ಚೆನ್ನಿ, ನೀವೆಷ್ಟು ಗೋಶಾಲೆಗಳಿಗೆ ಅನುದಾನ ನೀಡಿದ್ದೀರೆಂದು ಗಂಡಸ್ತನದಿಂದ ಹೇಳಿ: ಎಚ್ ಸಿ ಯೋಗೇಶ್
ಸಂಘಟನೆಯ ಅಧ್ಯಕ್ಷ ರಾಜಾ ವಿಜಯಕುಮಾರ ನಾಯಕ, ಪದಾಧಿಕಾರಿಗಳಾದ ಶರಣಯ್ಯಸ್ವಾಮಿ, ನಾಗರಾಜ ಶೆಟ್ಟಿ, ಶೇಖ್ ಮುಸ್ತಫಾ, ಗುರುರಾಜ ಕುಲಕರ್ಣಿ, ಈರೇಶ ಮಳ್ಳಿ, ಮಲ್ಲನಗೌಡ ಬೈಲಮಾರ್ಚೆಡ್, ಬಸವರಾಜ ಮೈಲಾರಿ, ಬಸವರಾಜ ಮೇಟಿ, ಜಲಾಲ್ ಶಾಸ್ತ್ರಿ ಕ್ಯಾಂಪ್ ಇದ್ದರು.
