ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಆರೋಪಿಯಾಗಿರುವ ಲೈಂಗಿಕ ಹಗರಣದ ವಿಚಾರಣೆ ನಡೆಸಿರುವ ಕರ್ನಾಟಕ ಹೈಕೋರ್ಟ್, ವಿಕೃತ ಕಾಮುಕ, ಆರೋಪಿ ಪ್ರಜ್ವಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ‘ಅಶ್ಲೀಲಕ್ಕೂ ಮಿತಿ ಇರಬೇಕು – ಈ ಪ್ರಕರಣವನ್ನು ಎಲ್ಲವನ್ನು ಮೀರಿದೆ’ ಎಂದು ಹೇಳಿದೆ.
ಎಲೆಕ್ಟ್ರಾನಿಕ್ ಎವಿಡೆನ್ಸ್ ಅಥವಾ ಮೊಬೈಲ್ ಫೋನ್‌ನಿಂದ ವಶಪಡಿಸಿಕೊಳ್ಳಲಾಗಿರುವ ಫೋಟೋ, ವಿಡಿಯೋಗಳು ಒದಗಿಸುವಂತೆ ಕೋರಿ ಆರೋಪಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ವಿಚಾರಣೆ ನಡೆಸಿದೆ. ಅರ್ಜಿಯನ್ನು ವಜಾಗೊಳಿಸಿದೆ.
ಪ್ರಜ್ವಲ್ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ ಎಸ್‌ಪಿಪಿ ಜಗದೀಶ್, “ಈಗಾಗಲೇ ಎಲ್ಲ ಫೋಟೋ, ವಿಡಿಯೋಗಳನ್ನು ನೀಡಲಾಗಿದೆ. ಪ್ರಕರಣದ ವಿಚಾರಣೆಯನ್ನು ವಿಳಂಬಗೊಳಿಸಲು ಇಂತಹ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅರ್ಜಿಯನ್ನು ವಜಾಗೊಳಿಸಬೇಕು” ಎಂದು ವಾದಿಸಿದ್ದರು.
ಅವರ ವಾದ ಆಲಿಸಿದ ಹೈಕೋರ್ಟ್, “ಪ್ರಜ್ವಲ್ ರೇವಣ್ಣ ಎಂದ ಮಾತ್ರಕ್ಕೆ ಕಾನೂನು ಬದಲಿಸಲಾಗುವುದಿಲ್ಲ. ಪ್ರಕರಣಕ್ಕೆ ಸಂಬಂಧಿಸಿದ ಫೋಟೋ, ವಿಡಿಯೋಗಳೆಲ್ಲವೂ ಅಶ್ಲೀಲವಾಗಿವೆ. ಅಶ್ಲೀಲಕ್ಕೂ ಒಂದು ಮಿತಿ ಇರಬೇಕು. ಇದು ಎಲ್ಲವನ್ನು ಮೀರಿದೆ. ಇಷ್ಟೊಂದು ವಿಕೃತವಾಗಿ ಫೋಟೋಗಳನ್ನು ಯಾರು ಸೆರೆ ಹಿಡಿಯಲು ಸಾಧ್ಯ” ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಲೋಕಸಭಾ ಚುನಾವಣೆಯ ಸಮಯದಲ್ಲಿ ಪ್ರಜ್ವಲ್ ರೇವಣ್ಣನ ಅಶ್ಲೀಲ ಹಗರಣ ಹೊರಬಂದಿತು. ಆತನ ವಿಕೃತಿಯ ವಿಡಿಯೋಗಳು, ಫೋಟೋಗಳುಳ್ಳ ಪೆನ್‌ಡ್ರೈವ್‌ಗಳು ಹಾಸನದ ಸಾರ್ವಜನಿಕ ಪ್ರದೇಶಗಳಲ್ಲಿ ಸಿಕ್ಕಿದ್ದವು. ಆ ವಿಡಿಯೋಗಳನ್ನು ಸ್ವತಃ ಪ್ರಜ್ವಲ್ ರೇವಣ್ಣನೇ ಮಾಡಿದ್ದಾರೆ. ಆ ವಿಡಿಯೋ ಮತ್ತು ಫೋಟೋಗಳಲ್ಲಿ ವಯಸ್ಕ ಯುವತಿಯರು, ವಯಸ್ಸಾದ ಮಹಿಳೆಯರು, ವಿವಾಹಿತರು ಮತ್ತು ಅವಿವಾಹಿತ ಮಹಿಳೆಯರು ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ಮಹಿಳೆಯರ ಮೇಲೆ ಪ್ರಜ್ವಲ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಪ್ರಜ್ವಲ್ ತನ್ನ ಕಾಮತೃಷೆ ತೀರಿಸಿಕೊಳ್ಳಲು ನೂರಾರು ಹೆಣ್ಣುಮಕ್ಕಳಿಗೆ ಬೆದರಿಕೆ, ಬ್ಲಾಕ್‌ಮೇಲ್, ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಆತನನ್ನು ಬಂಧಿಸಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.