ಬೀದರ್‌ನಲ್ಲಿ ನಿನ್ನೆ ಬೆಳಿಗ್ಗೆ ನಡೆದ ಎಸ್‌ಬಿಐ ಎಟಿಎಂ ದರೋಡೆ ಘಟನೆಯ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಘಟನೆ ಕುರಿತು ಮಾಹಿತಿ ಪಡೆದು, ಘಟನೆಗೆ ಸಂಬಂಧಿಸಿದಂತೆ ತನಿಖೆಯನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸರ್ಕಾರ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದ್ದು, ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸುವ ಭರವಸೆ ನೀಡಿದರು.
ಮೃತ ಕುಟುಂಬಕ್ಕೆ ಪರಿಹಾರ, ಸರ್ಕಾರ ಹುದ್ದೆ:
ಗುಂಡಿನ ದಾಳಿಯಿಂದಾಗಿ ಮೃತಪಟ್ಟ ಸಿಬ್ಬಂದಿ ಗಿರಿ ವೆಂಕಟೇಶ್ ಕುಟುಂಬಕ್ಕೆ ಸರ್ಕಾರ ವಿಶೇಷ ಪರಿಹಾರ ಹಾಗೂ ಒಂದು ಸರ್ಕಾರಿ ಹುದ್ದೆ ನೀಡಬೇಕೆಂದು ಈಗಾಗಲೇ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ. ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ತಕ್ಷಣವೇ ಪರಿಹಾರ ನೀಡಬೇಕೆಂದು ತಿಳಿಸಲಾಗಿದೆ ಎಂದರು.
ಘಟನೆಯಲ್ಲಿ ಗಂಭೀರ ಗಾಯಗೊಂಡು ಹೈದರಾಬಾದ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ನಿನ್ನೆ ರಾತ್ರಿ ಭೇಟಿ ನೀಡಿ ಸಿಬ್ಬಂದಿ ಶಿವಕುಮಾರ್ ಅವರ ಆರೋಗ್ಯ ವಿಚಾರಿಸಿದ್ದೇನೆ. ಈಗಾಗಲೇ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಅವರ ಚಿಕಿತ್ಸೆಯ ಸಂಪೂರ್ಣ ವೆಚ್ಚ ಸರ್ಕಾರ ಭರಿಸುತ್ತದೆ ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಎಸ್‌ಬಿಐ ಭದ್ರತಾ ಸಂಸ್ಥೆ ಸಿಬ್ಬಂದಿ ಮೇಲೆ ಗುಂಡಿನ ದಾಳಿ; ಓರ್ವ ಸಾವು, 93 ಲಕ್ಷ ದರೋಡೆ
ಬ್ಯಾಂಕ್ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಮತ್ತು ಸಂಬಂಧಿತ ಪ್ರಾಧಿಕಾರಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಪೌರಾಡಳಿತ ಸಚಿವ ರಹೀಂ ಖಾನ್, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಾದ ಎಡಿಜಿಪಿ ಹರಿ ಶೇಖರನ್ (ಕಾನೂನು ಮತ್ತು ಸುವ್ಯವಸ್ಥೆ), ಎಜಿಪಿ, ಎಸ್ಪಿ ಪ್ರದೀಪ್ ಗುಂಟಿ ಮತ್ತು ಇತರ ಹಿರಿಯ ಅಧಿಕಾರಿಗಳು ಅವರ ಜೊತೆ ಹಾಜರಿದ್ದರು.