ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಚೇರಿಗಳ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿರುವ ಲೋಕಾಯುಕ್ತರು, ಇದೀಗ ಮತ್ತೊಮ್ಮೆ ದಾಳಿ ನಡೆಸಿದ್ದಾರೆ. ಬಿಇಎಂಪಿ ಕಚೇರಿಗಳಲ್ಲಿನ ಅವ್ಯವಸ್ಥೆ ಮತ್ತು ಲೋಪಗಳ ವಿಚಾರವಾಗಿ ಅಧಿಕಾರಿಗಳನ್ನು ತರಾಟೆಗೆ ತೆದುಕೊಂಡಿದ್ದಾರೆ.
ಉಪ ಲೋಕಾಯುಕ್ತ ನ್ಯಾ.ಕೆ.ಎನ್ ಫಣೀಂದ್ರ ನೇತೃತ್ವದಲ್ಲಿ 12 ತಂಡಗಳು ವಿಜಯನಗರ, ವಸಂತನಗರ, ಗಾಂಧಿನಗರ, ಶಿವಾಜಿನಗರ, ಗೋವಿಂದರಾಜನಗರದಲ್ಲಿರುವ ಬಿಬಿಎಂಪಿ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಪರಿಶೀಲನೆ ನಡೆಸಿದ್ದಾರೆ. ಸಿಬ್ಬಂದಿಗಳ ಕಾರ್ಯವೈಖರಿ ಬಗ್ಗೆ ಫಣೀಂದ್ರ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಬಿಬಿಎಂಪಿ ಕಚೇರಿಗಳಲ್ಲಿ ಅಧಿಕಾರಿಗಳು ಹಾಜರಾತಿ, ರಿಜಿಸ್ಟರ್ ಹಾಗೂ ನಗದು ಘೋಷಣೆ ದಾಖಲೆಗಳನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ. ನಿರ್ವಹಣೆ ಮಾಡದೇ ಇರುವುದಕ್ಕೆ ಸರಿಯಾದ ಕಾರಣಗಳನ್ನೂ ಒದಗಿಸಿಲ್ಲ. ಇಬ್ಬರನ್ನು ಹೊರಗುತ್ತಿಗೆ ಅಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ದಾಖಲೆಗಳು ಹೇಳುತ್ತವೆ. ಆದರೆ, ಅವರು ಕಚೇರಿಯಲ್ಲಿ ಇರಲಿಲ್ಲ. ಅವರ ಹಾಜರಾತಿಯನ್ನು ನಿರ್ವಹಿಸಿಲ್ಲ. ನೇಮಕ ಆಗಿದೆಯೇ ಎಂಬುದರ ಬಗ್ಗೆಯೇ ಅನುಮಾನಗಳು ಮೂಡುತ್ತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಅನಧಿಕೃತ ಕಟ್ಟಡಗಳ ನಿರ್ಮಾಣವನ್ನು ತಡೆಯಲು ಬಿಬಿಎಂಪಿಯ ಕಂದಾಯ ಅಧಿಕಾರಿಗಳು ಪ್ರಯತ್ನಿಸುತ್ತಿಲ್ಲ. ಪಾಲಿಕೆ ಅಧಿಕಾರಿಗಳ ಕೆಲಸ ವಿಚಾರದಲ್ಲಿ ನಿಗಾ ಇಲ್ಲ. ಅಧಿಕಾರಿಗಳು ಹೊಣೆಗಾರಿಕೆ ಹೊತ್ತುಕೊಳ್ಳುತ್ತಿಲ್ಲ. ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕಾಗಿ ರಾಜ್ಯ ಸರ್ಕಾರಕ್ಕೆ ವರದಿ ಕಳಿಸಲಾಗುತ್ತದೆ” ಎಂದು ಹೇಳಿದ್ದಾರೆ.