ಕಳೆದ ಹದಿನೈದು ದಿನಗಳಿಂದ ಅಕ್ರಮ ಮದ್ಯ ಮಾರಾಟಕ್ಕೆ ಸಂಪೂರ್ಣ ತಡೆ ಹಾಕಲು ಕ್ರಮಕೈಗೊಳ್ಳಬೇಕು ಎಂದು ಚನ್ನಗಿರಿಯಲ್ಲಿ ನಡೆಸುತ್ತಿದ್ದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲು ದಲಿತಪರ, ರೈತಪರ, ಪ್ರಗತಿಪರ, ಕನ್ನಡಪರ, ಸಂಘಟನೆಗಳ ಹೋರಾಟಗಾರರ ವೇದಿಕೆ ನಿರ್ಧರಿಸಿತು.
ಅಕ್ರಮ ಮದ್ಯ ಮಾರಾಟಕ್ಕೆ ತಡೆ ಹಾಕಬೇಕು ಎಂಬ ಸಂಘಟನೆಗಳ ಬೇಡಿಕೆಗೆ ಅಪರ ಜಿಲ್ಲಾಧಿಕಾರಿಗಳು ಹಾಗೂ ಅಪರ ಪೊಲೀಸ್ ವರಿಷ್ಠಾಧಿಕಾರಿಗಳ ಭರವಸೆಯಿತ್ತ ಹಿನ್ನೆಲೆ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ ಎನ್ನಲಾಗಿದೆ.
ನಗರದ ಅಬಕಾರಿ ಕಚೇರಿ ಮುಂದೆ ನಡೆಸುತ್ತಿದ್ದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ದಾವಣಗೆರೆ ಅಪರ ಜಿಲ್ಲಾಧಿಕಾರಿ ಹಾಗೂ ಅಪರ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಿ ಹೋರಾಟಗಾರರ ಮನವೊಲಿಸಲು ಮುಂದಾದರು. ಅವರ ಮನವಿ ಮೇರೆಗೆ ಬೇಡಿಕೆ ಈಡೇರಿಸಲು 15 ದಿನಗಳ ಗಡುವು ನೀಡಿ ಹೋರಾಟಕ್ಕೆ ತಾತ್ಕಾಲಿಕ ತಡೆ ನೀಡಿದರು.

ಈ ವೇಳೆ ಮಾತನಾಡಿದ ವೇದಿಕೆ ಮುಖಂಡ ರಂಗನಾಥ್ ಬಸಾಪುರ ʼಕೂಡಲೇ ಕ್ರಮ ಕೈಗೊಂಡು ತಾಲೂಕಿನ ಅಕ್ರಮ ಮದ್ಯ ಮಾರಾಟ ನಿಲ್ಲಿಸಬೇಕು. 15 ದಿನಗಳ ಒಳಗಾಗಿ ಬೇಡಿಕೆ ಈಡೇರದಿದ್ದರೆ ತಾಲೂಕು ಕಚೇರಿ ಮುಂದೆ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡುವ ಮೂಲಕ ಹೋರಾಟ ಹಿಂಪಡೆದಿದ್ದೇವೆ. ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಯುವಜನತೆ, ಗಂಡಸರು ಸೇರಿದಂತೆ ಅನೇಕ ಕುಟುಂಬಗಳು ಬಲಿಯಾದ ಘಟನೆಗಳು ನೆಡೆಯುತ್ತಿವೆ. 14-16 ವಯಸ್ಸಿನ ಚಿಕ್ಕ ಚಿಕ್ಕ ಮಕ್ಕಳು ಈ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಬಡಕುಟುಂಬಗಳಲ್ಲಿ ದುಡಿವ ಹಣವನ್ನು ಹೆಂಡಸಾರಾಯಿಗೆ ಖರ್ಚು ಮಾಡಿ, ಆರೋಗ್ಯ ಸಮಸ್ಯೆಗೆ ಒಳಗಾಗಿ, ಅವಲಂಬಿತರು ಅನಾಥವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ತಪ್ಪಿಸಲು ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳು ಕೆಲಸಮಾಡಬೇಕು. ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ಹೋರಾಟಕ್ಕೆ ಮುಂದಾಗುತ್ತೇವೆʼ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ?: ದಾವಣಗೆರೆ | ಮಣ್ಣು ದಂಧೆಯಿಂದ ವಿದ್ಯುತ್ ಪ್ರಸರಣದ ಬೃಹತ್ ಟವರ್ ನೆಲಕ್ಕುರುಳುವ ಸಾಧ್ಯತೆ: ದಸಂಸ ಆತಂಕ
ಪ್ರತಿಭಟನಾ ವೇದಿಕೆಯಲ್ಲಿ ಮದ್ಯ ವಿರೋಧಿ ಹೋರಾಟಗಾರ ಕುಭೇಂದ್ರ ಸ್ವಾಮಿ, ದಸಂಸ ಸಂಚಾಲಕ ಕೃಷ್ಣಪ್ಪ, ಮಾದಿಗ ಸಮಾಜದ ಅಧ್ಯಕ್ಷ ಮಂಜುನಾಥ, ಗಾಂಧಿನಗರ ಚಿತ್ರಲಿಂಗಪ್ಪ, ಮಾಚನಾಯಕನಹಳ್ಳಿ ಮಂಜುನಾಥ್, ಕೋಗಲೂರು ಪ್ರಕಾಶ್, ನೀತಿಗೆರೆ ಮಂಜಪ್ಪ, ಹರೀಶ್, ಸಲ್ಮಾ ಆಸ್ಪಿಯಾ ರಿದಾ, ಉಮಾಪತಿ ಹಾಗೂ ಇನ್ನಿತರ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.
