ಬಾಲಿವುಡ್ ನಟ ಸೈಫ್ ಅಲಿಖಾನ್ ಮೇಲೆ ದಾಳಿ ಮಾಡಿದ ಪ್ರಕರಣದಲ್ಲಿ ಓರ್ವ ಶಂಕಿತನನ್ನು ಬಂಧಿಸಿದ್ದಾರೆ ಎನ್ನುವ ವಿಚಾರಕ್ಕೆ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಶುಕ್ರವಾರ (ಜ.17ರಂದು) ಮುಂಬೈ ನಗರ ಪೊಲೀಸರು ಶಂಕಿತನೊಬ್ಬನನ್ನು ಬಂಧಿಸಿದ್ದರು. ಬಂಧಿಸಿದ ವ್ಯಕ್ತಿಯನ್ನು ಬಾಂದ್ರಾ ಠಾಣೆಗೆ ಕರೆತಂದಿದ್ದರು. ಆರಂಭದಲ್ಲಿ ಈತ ಸೈಫ್ ಅಲಿಖಾನ್ ಮೇಲೆ ದಾಳಿ ಮಾಡಿದ ವ್ಯಕ್ತಿ ಎಂದು ಹೇಳಲಾಗಿತ್ತು. ಆದರೆ ಪೊಲೀಸರು ತೀವ್ರ ವಿಚಾರಣೆ ನಡೆಸಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ವಿಚಾರಣೆಗಾಗಿ ಬಾಂದ್ರಾ ಪೊಲೀಸ್ ಠಾಣೆಗೆ ಕರೆದೊಯ್ದ ವ್ಯಕ್ತಿಗೂ ಸೈಫ್ ಅಲಿ ಖಾನ್ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ
ಎಂದು ಮುಂಬೈನ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.
ಗುರುವಾರ (ಜ.16ರಂದು) ಮುಂಜಾನೆ 2.30ರ ಸುಮಾರಿಗೆ ದುಷ್ಕರ್ಮಿಯೊಬ್ಬ ಸೈಫ್ ಅಲಿಖಾನ್ ಅವರ ಮುಂಬೈನ ಬಾಂದ್ರಾ ನಿವಾಸಕ್ಕೆ ನುಗ್ಗಿ ಹಿಗ್ಗಾಮುಗ್ಗ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿ ಆಗಿದ್ದ. ಮುಂಬೈಯ ಲೀಲಾವತಿ ಆಸ್ಪತ್ರೆಯಲ್ಲಿ ಗುರುವಾರ ತಜ್ಞ ವೈದ್ಯರಿಂದ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಬಾಲಿವುಡ್ ನಟ ಅಪಾಯದಿಂದ ಪಾರಾಗಿದ್ದಾರೆ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರೂಪಾಯಿ ಮೌಲ್ಯ ಕುಸಿತವೂ, ವಿಶ್ವಗುರುವಿನತ್ತ ಮೋದಿ ಭಾರತವೂ
ಸೈಫ್ ಮನೆಯಲ್ಲಿ ಕೆಲಸ ಮಾಡುವ ಎಲಿಯಾಮಾ ಫಿಲಿಪ್ಸ್ ಎಂಬುವರು ಆರೋಪಿಯನ್ನು ಮೊದಲು ನೋಡಿದ್ದಾರೆ. ಆರೋಪಿಯನ್ನು ನೋಡಿದ ಮಹಿಳೆ ಕಿರುಚಿ ನಟನನ್ನು ಎಚ್ಚರಿಸಿದ್ದಾರೆ. ಈ ವೇಳೆ ಸೈಫ್ ಅಲಿ ಖಾನ್ ಅಪರಿಚಿತನ ಬಳಿ ಬಂದಾಗ ಆರೋಪಿ ಚಾಕುವಿನಿಂದ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಒಳನುಗ್ಗಿದವನಿಗೆ ಏನು ಬೇಕು ಎಂದು ನಟ ಕೇಳಿದಾಗ ಆತ 1 ಕೋಟಿ ರೂ. ಬೇಕೆಂದು ಬೇಡಿಕೆ ಇಟ್ಟಿದ್ದಾನೆ.
ಇದು ದರೋಡೆಗಾಗಿ ನಡೆದಿರುವ ಕೃತ್ಯವೆಂದು ಪೊಲೀಸರು ಶಂಕಿಸಿ, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಈ ಸಂಬಂಧ 20 ತಂಡವನ್ನು ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ಸೈಫ್ ಮನೆಗೆ ನುಗ್ಗಿದ ಆರೋಪಿಯ ಚಹರೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯದೊಂದಿಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
