ತಾಹಿರ್ ಹುಸೈನ್ ದೆಹಲಿಯಲ್ಲಿ ನಡೆದ ಪ್ರತಿಭಟನೆಗಳಲ್ಲಿ ಭಾಗಿಯಾಗುತ್ತಿದ್ದ ಹೊರತು ಯಾವುದೇ ಪಾತ್ರವನ್ನು ನಿಭಾಯಿಸಿರಲಿಲ್ಲ. ಆದರೆ ಗೋದಿ ಮೀಡಿಯಾಗಳು ಇವರನ್ನೇ ಇಡೀ ಗಲಭೆಯ ‘ಮಾಸ್ಟರ್ ಮೈಂಡ್’ ಎಂದು ಜಗತ್ತಿಗೆ ಸಾರಲು ಶುರು ಮಾಡಿಬಿಟ್ಟವು.
ದೇಶದಾದ್ಯಂತ ಕರಾಳ ಕಾಯ್ದೆಗಳಾದ ಎನ್.ಆರ್.ಸಿ. ಮತ್ತು ಸಿ.ಎ.ಎ. ವಿರುದ್ಧ ಸಾಮಾಜಿಕ ಹೋರಾಟಗಾರರು, ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಬೀದಿಗಿಳಿದ ಹಾಗೆಯೇ ಜಾತ್ಯತೀತ ಚಿಂತನೆಯ ಬಹುತೇಕ ರಾಜಕಾರಣಿಗಳು ಕೂಡ ಬೀದಿಗಿಳಿದು ಹೋರಾಡುತ್ತಿದ್ದರು. ಅದರಲ್ಲೂ ವಿಶೇಷವಾಗಿ ಮುಸ್ಲಿಂ ಸಮುದಾಯದ ಬಹುತೇಕ ರಾಜಕಾರಣಿಗಳಿಗೆ ಬಿಜೆಪಿ ಹಾಗೂ ಸಂಘಪರಿವಾರಗಳು ವ್ಯವಸ್ಥಿತವಾಗಿ ಕಾನೂನಿನ ಮೂಲಕ ಸ್ಥಾಪಿಸುತ್ತಿರುವ ಇಸ್ಲಾಮೋಫೋಬಿಯದ ಕುರಿತು ಸ್ಪಷ್ಟತೆ ಸಿಕ್ಕಿದ್ದೆ ಪೌರತ್ವ ಕಾಯ್ದೆಗಳ ವಿರುದ್ಧದ ಹೋರಾಟಗಳು ಕೊಟ್ಟ ಅರಿವಿನ ಮೂಲಕ. ಅಂತೆಯೇ ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟ ಜನವಿರೋಧಿ ಪೌರತ್ವ ಕಾಯ್ದೆಗಳ ವಿರುದ್ಧ ಬೀದಿಗಿಳಿದ ಮತ್ತು ಪ್ರತಿಭಟನೆಗಳನ್ನು ಸಂಘಟಿಸಿದ ಒಬ್ಬ ರಾಜಕಾರಣಿ, ಕೈಗಾರಿಕೋದ್ಯಮಿ ತಾಹಿರ್ ಹುಸೈನ್.
1990ರ ದಶಕದಲ್ಲಿ ಮರಗೆಲಸ ಮಾಡುವ ತಂದೆಯೊಂದಿಗೆ ಉತ್ತರ ಪ್ರದೇಶದ ಅಮ್ರೋಹಾದಿಂದ ದೆಹಲಿಗೆ ಬಂದ ತಾಹಿರ್ ಹುಸೈನ್ ತಮ್ಮ ಪ್ರೌಢಶಾಲಾ ಶಿಕ್ಷಣದ ನಂತರ ತಮ್ಮ ತಂದೆಯಿಂದ ಮರಗೆಲಸದ ಕಲೆಯನ್ನು ಕಲಿತವರು, ದಿನಗೂಲಿ ಕೆಲಸ ಮಾಡುತ್ತ ಬದುಕು ಕಟ್ಟಿಕೊಳ್ಳುವ ಸಂದರ್ಭ ಮರ ಕಡಿಯುವಾಗ ತಮ್ಮ ಒಂದು ಬೆರಳನ್ನು ಕಳೆದುಕೊಂಡರೂ ಧೃತಿಗೆಡದೆ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಶ್ರಮಿಸಿ ಸ್ಥಳೀಯರ ಸಹಾಯದಿಂದ ವಾರ್ಷಿಕ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸುವ ವ್ಯವಹಾರವನ್ನು ನಿರ್ಮಾಣ ಮಾಡಿಕೊಂಡಿದ್ದರು.
ಒಳ್ಳೆಯ ದುಡಿಮೆ ಕಂಡ ಕೂಡಲೇ ʼತಾನಾಯ್ತು ತನ್ನ ಕುಟುಂಬವಾಯ್ತುʼ ಎನ್ನುವವರ ನಡುವೆ ಹೆಚ್ಚು ಹಣ ದುಡಿದಂತೆಲ್ಲ ಸಮಾಜಕ್ಕಾಗಿ ಹೆಚ್ಚೆಚ್ಚು ವ್ಯಯಿಸಲು ಶುರು ಮಾಡಿದರು. ಅದೇ ಸಮಾಜಸೇವೆ ಅವರನ್ನು ಆಮ್ ಆದ್ಮಿ ಪಕ್ಷವನ್ನು ಸೇರುವಂತೆ ಮಾಡಿತು. ಮುಂದೆ 2017ರಲ್ಲಿ ನಡೆದ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಈಶಾನ್ಯ ದೆಹಲಿಯ ನೆಹರು ವಿಹಾರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವಿನ ನಗೆ ಬೀರಿದರು. ಕೌನ್ಸಲರ್ ಆಗಿ ಎಲ್ಲರ ಮನೆ ಮಾತಾಗಿದ್ದ ತಾಹಿರ್ ಹುಸೈನ್ ಮೇಲೆ ದೆಹಲಿ ಪೊಲೀಸರು ಹೇರಿರುವ ಆರೋಪಗಳ ಕುರಿತು ನೆಹರೂ ವಿಹಾರದ ಮುಸ್ಲಿಮೇತರರು ಕೂಡ ಇದು ನಂಬಲರ್ಹವಾದುದ್ದಲ್ಲ ಎಂದು ತೀವ್ರವಾಗಿ ಪ್ರತಿಪಾದಿಸುತ್ತಾರೆ.
ಸಾಮಾನ್ಯವಾಗಿ ಯಾವುದೇ ಕೈಗಾರಿಕೋದ್ಯಮಿ ದೊಡ್ಡ ಹಗರಣಗಳಲ್ಲಿ ಸಿಲುಕಿಹಾಕಿಕೊಂಡಾಗ ಪೊಲೀಸರು ಮತ್ತು ನ್ಯಾಯಾಲಯಗಳು ಅವರ ವ್ಯಾಪಾರ ವಹಿವಾಟುಗಳಿಗೆ ತಡೆ ಒಡ್ಡುವುದಿಲ್ಲ. ಆದರೆ ತಾಹಿರ್ ಹುಸೈನ್ ಮಾರ್ಚ್ 2020ರಲ್ಲಿ ಬಂಧನಕ್ಕೊಳಗಾದಾಗ ಅವರ ವೈಯಕ್ತಿಕ ಮತ್ತು ಉದ್ಯಮಗಳಿಗೆ ಸಂಬಂಧಪಟ್ಟ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಯಿತು. ದೇಶದ ಅನೇಕ ನಗರಗಳಲ್ಲಿ ಸಾವಿರಕ್ಕೂ ಅಧಿಕ ಕಾರ್ಮಿಕರು ಇವರ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿದ್ದರು. ಸಾವಿರಾರು ಕುಟುಂಬಗಳಿಗೆ ಆಧಾರ ಸ್ತಂಭವಾಗಿದ್ದ ತಾಹಿರ್ ಹುಸೈನ್ ಅವರ ಬಂಧನ ಅಷ್ಟು ಕುಟುಂಬಗಳನ್ನು ಬೀದಿಗೆ ತಳ್ಳಿತು. ಖುದ್ದು ತಾಹಿರ್ ಹುಸೈನ್ ಅವರ ಕುಟುಂಬಕ್ಕೂ ಅವರೊಬ್ಬರೇ ದುಡಿಮೆಗೆ ಆಧಾರ. ಕಳೆದ ಐದು ವರ್ಷಗಳಿಂದ ಮನೆ, ಕಾರ್ಖಾನೆಯ ಪತ್ರಗಳು, ಮನೆಯಲ್ಲಿದ್ದ ಒಡವೆಗಳನ್ನು ಅಡವಿಟ್ಟು ಕುಟುಂಬಸ್ಥರು ಮನೆಯ ಖರ್ಚು ನೀಗಿಸುತ್ತಿದ್ದಾರೆ.
ಅಷ್ಟಕ್ಕೂ ಒಬ್ಬ ಕೈಗಾರಿಕೋದ್ಯಮಿ, ಒಬ್ಬ ಆಡಳಿತ ಪಕ್ಷದ ಕೌನ್ಸಲರ್ ಮೇಲೆ ಯು.ಎ.ಪಿ.ಎ ಸೇರಿದಂತೆ ಒಟ್ಟು 12 ಮೊಕದ್ದಮೆಗಳನ್ನು ಯಾಕೆ ಹೂಡಿತು ಎನ್ನುವ ಪ್ರಶ್ನೆಗೆ ಉತ್ತರವನ್ನು ಕುಟುಂಬಸ್ಥರು ಇನ್ನೂ ಹುಡುಕುತ್ತಲೇ ಇದ್ದಾರೆ. ತಾಹಿರ್ ಹುಸೈನ್ ದೆಹಲಿಯಲ್ಲಿ ನಡೆದ ಸರ್ಕಾರಿ ಪ್ರಾಯೋಜಿತ ಧಂಗೆಯಲ್ಲಿ ಪ್ರತಿಭಟನೆಗಳಲ್ಲಿ ಭಾಗಿಯಾಗುತ್ತಿದ್ದ ಹೊರತು ಯಾವುದೇ ಪಾತ್ರವನ್ನು ನಿಭಾಯಿಸಿರಲಿಲ್ಲ. ಆದರೆ ಗೋದಿ ಮೀಡಿಯಾಗಳು ಇವರನ್ನೇ ಇಡೀ ಗಲಭೆಯ ‘ಮಾಸ್ಟರ್ ಮೈಂಡ್’ ಎಂದು ಜಗತ್ತಿಗೆ ಸಾರಲು ಶುರು ಮಾಡಿಬಿಟ್ಟವು. ಎಷ್ಟರ ಮಟ್ಟಿಗೆಂದರೆ ಇವರ ಮನೆಯಲ್ಲಿಯೇ ಗಲಭೆಯ ಕುರಿತು ಎಲ್ಲಾ ತಯಾರಿಗಳು ನಡೆಯುತ್ತಿದ್ದವು. ಕಲ್ಲುಗಳನ್ನು, ಬಾಂಬುಗಳನ್ನು, ಚೂಪಾದ ಸಲಕರಣೆಗಳನ್ನು ಸಂಗ್ರಹಿಸಲಾಗಿತ್ತು. ಗಲಭೆಗೆ ಹಣ ಹೂಡಿದವನು ಇವನೇ ಎನ್ನುವ ಕಥೆ ಹೆಣೆದರು.
ಇನ್ನು ಮುಂದೆ ಹೋಗಿ ಗಲಭೆ ಸಂದರ್ಭ ಕಾಣೆಯಾಗಿದ್ದ ಐ.ಬಿ. ಅಧಿಕಾರಿ ಅಂಕಿತ್ ಶರ್ಮ ಕೊಲೆಯನ್ನು ಈತನೇ ಮಾಡಿದ್ದಾನೆಂದು ಮತ್ತು ಈತ ಈ ಹಿಂದೆಯೂ ಹಲವಾರು ಗಲಭೆಗಳಿಗೆ ಕಾರಣಕರ್ತ ಎಂದು ಈತನ ಮೇಲೆ ಹಲವಾರು ಕೊಲೆ ಪ್ರಕರಣಗಳಿದ್ದಾವೆಂದು ಇಸ್ಲಾಮೋಫೋಬಿಯ ಹರಡುವ ಸಂಚಿನ ಭಾಗವಾಗಿ ಮಾಧ್ಯಮಗಳು ಮತ್ತು ಆಡಳಿತ ತಾಹಿರ್ ಹುಸೈನ್ ಮೇಲೆ ಆರೋಪ ಹೊರಿಸಿದವು.
ತಾಹಿರ್ ವಿರುದ್ಧ ಮೊದಲ ಆರೋಪದ ದೂರು ದಾಖಲಾದಾಗಲೆ ಆಮ್ ಆದ್ಮಿ ಪಕ್ಷ ಇವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿತು. ಮುಸ್ಲಿಂ ಕೌನ್ಸಿಲರ್ ಪ್ರಕರಣದಲ್ಲಿ ಆರೋಪಗಳನ್ನು ಮೊದಲು ಸುಳ್ಳು ಎಂದು ಸಾಬೀತುಪಡಿಸಬೇಕು ಎಂದು ಪ್ರತಿಪಾದಿಸಿದ ಆಮ್ ಆದ್ಮಿ ಪಕ್ಷ ನಂತರದ ದಿನಗಳಲ್ಲಿ ತಿಹಾರ್ ಜೈಲಿನಿಂದ ಮುಖ್ಯಮಂತ್ರಿ ಕಚೇರಿಯನ್ನು ನಡೆಸಿತು! ಅದೇ ಪಕ್ಷವು ಮನೀಶ್ ಸಿಸೋಡಿಯಾ, ಅರವಿಂದ್ ಕೇಜ್ರಿವಾಲ್ ಮತ್ತು ಇತರರನ್ನು ಸಮರ್ಥಿಸಿಕೊಂಡಿದ್ದನ್ನು ಮಾತ್ರವಲ್ಲದೆ ಬಂಧನಗಳ ನಂತರವೂ ರಾಜೀನಾಮೆ ನೀಡದೆ ಅಧಿಕಾರ ನಡೆಸಿದ್ದನ್ನು ದೇಶವೇ ನೋಡಿದೆ. ಇದು ಮುಸಲ್ಮಾನರನ್ನು ತಮ್ಮನ್ನು ತಾವು ಜಾತ್ಯತೀತ ಎಂದು ಕರೆಯಿಸಿಕೊಳ್ಳುವ ಪಕ್ಷಗಳು ಹೇಗೆ ನಡೆಸಿಕೊಳ್ಳುತ್ತವೆ ಎನ್ನುವುದಕ್ಕೆ ಸಾಕ್ಷಿ.
ವಾಸ್ತವವೆಂದರೆ, 2017ರಲ್ಲಿ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಇವರ ಮೇಲೆ ಯಾವುದೇ ಕ್ರಿಮಿನಲ್ ಮೊಕದ್ದಮೆಗಳಿರಲಿಲ್ಲ. 2017ರಿಂದ 2020ರ ನಡುವೆಯು ಇವರ ಮೇಲೆ ಯಾವುದೇ ಕ್ರಿಮಿನಲ್ ಮೊಕದ್ದಮೆಗಳು ಇರಲಿಲ್ಲ ಎಂದು ಖುದ್ದು ಕೋರ್ಟ್ ಹೇಳಿದೆ. ಯು.ಎ.ಪಿ.ಎ. ಹೊರತುಪಡಿಸಿ 11ರಲ್ಲಿ 5 ಕೇಸುಗಳಲ್ಲಿ ಇವರಿಗೆ 2023ರಲ್ಲಿ ಜಾಮೀನು ನೀಡಲಾಗಿದೆ.
ಒಬ್ಬ ಸಾಮಾನ್ಯ ಹಿನ್ನೆಲೆಯ ಮುಸಲ್ಮಾನರಲ್ಲೂ ಹಿಂದುಳಿದ ಪಾಸ್ಮಾಂದ ಸಮುದಾಯದ ವ್ಯಕ್ತಿಯೊಬ್ಬ ಉದ್ಯಮಿಯಾಗಿ, ರಾಜಕಾರಣಿಯಾಗಿ, ತನ್ನ ಸಮುದಾಯಕ್ಕಾಗಿ ಧ್ವನಿ ಎತ್ತಿ ಸತತ ಐದು ವರ್ಷಗಳಿಂದ ಜೈಲುವಾಸ ಅನುಭವಿಸುತ್ತಿರುವ ತಾಹಿರ್ ಹುಸೈನ್ ಬಹುತೇಕರಿಗೆ ಅಪರಿಚಿತರಾಗಿರಲು ಕಾರಣ ಬಂಧಿತರಾಗಿರುವ ಬಹುತೇಕರಂತೆ ಇವರು ಯಾವುದೇ ಸಂಘಟನೆಗಳ ಹಿನ್ನೆಲೆ ಉಳ್ಳವರಲ್ಲ. ಉತ್ತಮ ವಾಗ್ಮಿಯೂ ಅಲ್ಲ ಅಥವಾ ಈ ಹಿಂದೆ ಯಾವುದೇ ಅಭಿಯಾನ, ಚಳವಳಿಯ ಭಾಗವಾಗಿದ್ದವರಲ್ಲ ಎಂಬುದು.
ಸಮಾಜದಲ್ಲಿ ತಾಹಿರ್ ಹುಸೈನ್ ಪರವಾಗಿ ಸಮರ್ಥನೆ ಮಾಡಿಕೊಳ್ಳುವುದಿರಲಿ ಮುಸಲ್ಮಾನರ ಕುರಿತು ಪೂರ್ವಾಗ್ರಹಪೀಡಿತ ಮನಸ್ಥಿತಿಯ ರಾಜಕಾರಣಿಗಳು ಖುದ್ದು ತಮ್ಮದೇ ಪಕ್ಷದ ಕೌನ್ಸಿಲರ್ ಒಬ್ಬರ ಕುಟುಂಬದ ನೋವು, ಆತಂಕಗಳನ್ನು ನಿಭಾಯಿಸಲು ಕನಿಷ್ಠಪಕ್ಷ ಪ್ರಯತ್ನಿಸಲಿಲ್ಲ.
ಇದೇ ಜನವರಿ 15ರಂದು ದೆಹಲಿ ಹೈಕೋರ್ಟ್ 2025ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಜನವರಿ 14ರಿಂದ ಫೆಬ್ರವರಿ 9ರವರೆಗೆ ಮಧ್ಯಂತರ ಜಾಮೀನು ಕೋರಿ ತಾಹಿರ್ ಹುಸೈನ್ ಪರ ಸಲ್ಲಿಸಿದ್ದ ಅರ್ಜಿಯನ್ನು ನಿರಾಕರಿಸಿ ಪೂರ್ವಭಾವಿ ಅಂಶಗಳು, ಆರೋಪಗಳ ಸ್ವರೂಪ ಮತ್ತು ಸಂದರ್ಭಗಳನ್ನು ಪರಿಗಣಿಸಿ ನಾಮಪತ್ರ ಸಲ್ಲಿಸುವ ಔಪಚಾರಿಕ ಕೆಲಸಗಳನ್ನು ಪೂರ್ಣಗೊಳಿಸಲು ಕಸ್ಟಡಿ ಪೆರೋಲ್ ಗೆ ಅನುಮತಿ ನೀಡಿದೆ. ಹುಸೇನ್ ಅವರು ನಾಮನಿರ್ದೇಶನ ಪ್ರಕ್ರಿಯೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ವ್ಯಕ್ತಿಯೊಂದಿಗೆ ಸಂವಹನ ನಡೆಸುವಂತಿಲ್ಲ, ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವಂತಿಲ್ಲ, ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಆರೋಪಿಯ ಕುಟುಂಬಸ್ಥರು ಹಾಜರಿರಬಹುದು. ಆದರೆ ಫೋಟೋ ಕ್ಲಿಕ್ಕಿಸುವಂತಿಲ್ಲ ಎಂಬ ಷರತ್ತು ವಿಧಿಸಿದೆ.
ಇದನ್ನೂ ಓದಿ ವಲಸೆ ಕಾರ್ಮಿಕರ ಮಕ್ಕಳ ರಕ್ಷಣೆ ಯಾರ ಹೊಣೆ?; ಅವರೂ ನಮ್ಮ ಮಕ್ಕಳಂತೆ ಅಲ್ಲವೇ?
ಸದ್ಯ ಮುಸ್ತಫಾಬಾದ್ ವಿಧಾನಸಭಾ ಕ್ಷೇತ್ರದ ಎ.ಐ.ಎಂ.ಐ.ಎಂ. ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ತಾಹಿರ್ ಹುಸೈನ್ ಜನವರಿ 16ರಂದು ಕರವಾಲ್ ನಗರದ ಎಸ್.ಡಿ.ಎಂ. ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆಯನ್ನು ಮಾಡಿದ್ದಾರೆ. ಪ್ರಚಾರ ಕಾರ್ಯದಲ್ಲಿ ಭಾಗವಹಿಸಲು ಮಧ್ಯಂತರ ಜಾಮೀನು ಕೋರಿ ಮತ್ತೆ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದಿದ್ದಾರೆ ಎ.ಐ.ಎಂ.ಐ.ಎಂ. ಮುಖಂಡರು.

ನಜ್ಮಾ ನಜೀರ್, ಚಿಕ್ಕನೇರಳೆ
ಯುವ ರಾಜಕಾರಣಿ. ಸಾಮಾಜಿಕ ಹೋರಾಟಗಳಲ್ಲಿ ತೊಡಗಿಕೊಂಡಿದ್ದಾರೆ