ಜಿಲ್ಲಾಧಿಕಾರಿಗಳ ಆದೇಶದ ಬಳಿಕ ಎಚ್ಚೆತ್ತಿರುವ ದಾವಣಗೆರೆ ಮಹಾನಗರ ಪಾಲಿಕೆಯ ಆಡಳಿತ ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ತುಂಬಿಹೋಗಿದ್ದ ಾನಧಿಕೃತ ಫ್ಲೆಕ್ಸ್‌ಗಳ ತೆರವು ಕಾರ್ಯಾಚರಣೆಯನ್ನು ಕೈಗೊಂಡಿದೆ.
ಇತ್ತೀಚೆಗೆ ದಾವಣಗೆರೆಯಲ್ಲಿ ಅನಧಿಕೃತ ಫ್ಲೆಕ್ಸ್ ಗಳ ಹಾವಳಿ ಮಿತಿಮೀರಿದ್ದು ನಗರದ ಸಿಗ್‌ನಲ್, ವೃತ್ತಗಳಲ್ಲಿ ನಿಂತರೆ, ಸರಿಯಾಗಿ ರಸ್ತೆಗಳೇ ಕಾಣದಿರುವಷ್ಟು ಅನಧಿಕೃತ ಫ್ಲೆಕ್ಸ್ಗಳ ಹಾವಳಿ ಜೋರಾಗಿತ್ತು. ಈ ಬಗ್ಗೆ ಹಲವಾರು ಬಾರಿ ಸಾರ್ವಜನಿಕರು ಮನವಿ ಮಾಡಿದರೂ ನಗರದಲ್ಲಿ ಪಾಲಿಕೆ ಆಡಳಿತ ಈ ಬಗ್ಗೆ ಜಾಣ ಮೌನ ಅನುಸರಿಸಿತ್ತು.
ಫ್ಲೆಕ್ಸ್‌ಗಳ ಹಾವಳಿಯಿಂದಾಗಿ ರಸ್ತೆಗಳು ಸರಿಯಾಗಿ ಕಾಣದೆ ರಸ್ತೆಗಳಲ್ಲಿ ಬರುವ ವಾಹನಗಳು ಕೂಡ ಸರಿಯಾಗಿ ಕಾಣದೆ ಅಕ್ಕ ಪಕ್ಕದ ಆಕರ್ಷಣೆಗಳಿಗೆ ವಾಹನ ಸವಾರರು, ಪಾದಚಾರಿಗಳು ಒಳಗಾಗಿ ಅಲ್ಲಲ್ಲಿ ಸಣ್ಣಪುಟ್ಟ ಅಪಘಾತಗಳಂತ ಘಟನೆಗಳು ಕೂಡ ನಡೆದಿದ್ದವು.

ಈ ಎಲ್ಲ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ವಿಶ್ವ ಕನ್ನಡ ರಕ್ಷಣಾ ವೇದಿಕೆ ಸೇರಿ ಹಲವಾರು ಸಂಘಟನೆಗಳು ಪ್ರತಿಭಟನೆ ಕೂಡ ನಡೆಸಿದ್ದವು. ಆದರೂ ಮಹಾನಗರ ಪಾಲಿಕೆ ಆಡಳಿತ ಈ ಬಗ್ಗೆ ಕ್ರಮ ಕೈಗೊಂಡಿಲ್ಲದಿರುವುದು ಅನುಮಾನ ಮೂಡಿಸಿತ್ತು. ನಂತರ ಜಿಲ್ಲಾಧಿಕಾರಿಗಳಿಗೆ ಸಂಘಟನೆಗಳು ಪತ್ರ ಬರೆದು ಪ್ರತಿಭಟನೆಯ ಎಚ್ಚರಿಕೆ ನೀಡಿದ್ದವು.
ಅಂತಿಮವಾಗಿ ಎಚ್ಚೆತ್ತಿರುವ ಜಿಲ್ಲಾಡಳಿತ ಅನಧಿಕೃತ ಫ್ಲೆಕ್ಸ್ ಗಳ ತೆರವಿಗೆ ಕ್ರಮವಹಿಸಿದೆ. ‘ನಗರದ ಸೌಂದರ್ಯ ಹಾಳು ಮಾಡುತ್ತಿರುವ ಮತ್ತು ಅವಘಡಗಳಿಗೆ ಕಾರಣವಾಗುತ್ತಿರುವ ಫ್ಲೆಕ್ಸ್ ಗಳು ನಗರದ ಜನಜೀವನಕ್ಕೆ ಮಾರಕವಾಗಿವೆ. ಈ ಹಿನ್ನೆಲೆ ಸುಪ್ರೀಂ ಕೋರ್ಟ್ ಆದೇಶದಂತೆ ತೆರವು ಕಾರ್ಯಾಚರಣೆಯನ್ನು ಮಾಡಿ ಸೂಕ್ತ ಕರ್ತವ್ಯ ನಿರ್ವಹಣೆ ಕೈಗೊಳ್ಳಬೇಕು’ ಎಂದು ಜಿಲ್ಲಾಡಳಿತ ಆದೇಶಿಸಿದೆ.
ಈ ಸುದ್ದಿ ಓದಿದ್ದೀರಾ?: ದಾವಣಗೆರೆ | ಅಕ್ರಮ ಮದ್ಯ ಮಾರಾಟ ಖಂಡಿಸಿ ನಡೆಯುತ್ತಿದ್ದ ಪ್ರತಿಭಟನೆ ತಾತ್ಕಾಲಿಕ ವಾಪಸ್
ಇನ್ನುಮುಂದೆಯಾದರೂ ಅನಧಿಕೃತ ಫ್ಲೆಕ್ಸ್ ಹಾಕುವವರ ವಿರುದ್ಧ ಕ್ರಮ ಕೈಗೊಂಡು ಜಿಲ್ಲಾಡಳಿತ ಸಾರ್ವಜನಿಕ ಹಿತಾಸಕ್ತಿ ಕಾಪಾಡಲಿ ಎಂಬುದು ಸಂಘಟನೆಗಳ ಮನವಿ.
