ಸೆಲೆಬ್ರಿಟಿಗಳ ಬಲಿಸಂಚಿಗೆ ಮುಂಬೈ ಕುಖ್ಯಾತಿ; ಸಲ್ಮಾನ್, ಸಿದ್ದೀಕಿ ಈಗ ಸೈಫ್, ಶಾರುಖ್!

Date:

Advertisements
ಖ್ಯಾತನಾಮರ ಸ್ಥಿತಿಯೇ ಹೀಗಾದರೆ ಸಾಮಾನ್ಯರು ಏನು ಮಾಡಬೇಕು ಎಂದು ಪ್ರತಿಪಕ್ಷಗಳು ಕೇಳಲಾರಂಭಿಸಿವೆ. ಕಾನೂನು ಸುವ್ಯವಸ್ಥೆಯಲ್ಲಿ ಮಹಾರಾಷ್ಟ್ರ ಸರ್ಕಾರ ತಾಳಿರುವ ನಿರ್ಲಕ್ಷ್ಯವು ಢಾಳಾಗಿ ಕಾಣಲಾರಂಭಿಸಿದೆ.

ಮುಂಬೈ ಮಹಾನಗರವು ಖ್ಯಾತನಾಮರ ಬಲಿಸಂಚಿನ ಕುಖ್ಯಾತಿ ಗಳಿಸಲಾರಂಭಿಸಿದೆ. ಬಾಲಿವುಡ್ ನಟ  ಸಲ್ಮಾನ್ ಖಾನ್ ಅವರ ಹತ್ಯೆಗೆ ಮೊದಲು ಸಂಚು ರೂಪಿಸಲಾಯಿತು. ನಂತರ ಎನ್‌ಸಿಪಿ ನಾಯಕ ಬಾಬಾ ಸಿದ್ದೀಕಿ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಈಗ ನಟ ಸೈಫ್ ಅಲಿಖಾನ್ ಅವರ ಮೇಲೆ ಆರು ಬಾರಿ ಚಾಕು ಇರಿದಿರುವ ಭೀಕರ ಘಟನೆ ನಡೆದಿದೆ.

ಮುಂಬೈನ ಬಾಂದ್ರಾ, ಸೆಲೆಬ್ರಿಟಿಗಳು ವಾಸಿಸುವ ಪ್ರದೇಶವಾಗಿ ಜನಜನಿತ. ಆದರೀಗ ಬಾಂದ್ರಾ ಪ್ರದೇಶವು ಸುರಕ್ಷತೆಗೆ ಸೂಕ್ತವಾಗಿದೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಮಹಾರಾಷ್ಟ್ರ ಸರ್ಕಾರದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರೂ ಆಗಿರುವ ದೇವೇಂದ್ರ ಫಡ್ನವಿಸ್ ಹೇಳುವಂತೆ ಮುಂಬೈನಲ್ಲಿ ನಿಜಕ್ಕೂ ಕಾನೂನು ಸುವ್ಯವಸ್ಥೆಗೆ ಸರಿ ಇದೆಯೇ?

ಈಗ ಟಾರ್ಗೆಟ್ ಆಗಿರುವ ಎಲ್ಲ ಖ್ಯಾತನಾಮರು ಕಾಕತಾಳೀಯವೆಂಬಂತೆ ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾರೆ! ಇವರ ಮೇಲೆ ನಡೆದಿರುವ ಹಲ್ಲೆಗಳನ್ನು ವಿಜೃಂಭಿಸುವ ಮತ್ತು ಅದನ್ನು ಸಮರ್ಥಿಸುವ ಸೋಷಿಯಲ್ ಮೀಡಿಯಾ ಅಕೌಂಟ್‌ಗಳು ಆಕ್ಟಿವ್ ಆಗಿವೆ!

Advertisements

ಶಾರುಖ್ ಖಾನ್ ಸಿಗದಿದ್ದಾಗ ಸೈಫ್‌ನತ್ತ ಬಂದ ಪಾತಕಿ!?

ಸೈಫ್ ಅಲಿಖಾನ್ ಅವರ ಮೇಲೆ ದಾಳಿ ನಡೆಸುವ ಮುನ್ನ ನಟ ಶಾರುಖ್ ಖಾನ್ ಅವರನ್ನು ಕೊಲ್ಲಲು ಸಂಚು ರೂಪಿಸಲಾಗಿತ್ತೇ ಎಂಬ ಅನುಮಾನ ತನಿಖೆಯಿಂದ ವ್ಯಕ್ತವಾಗುತ್ತಿದೆ. ಜನವರಿ 14ರಂದು ಶಾರುಖ್ ಅವರ ಮನ್ನತ್ ಬಂಗಲೆಯನ್ನು ಪ್ರವೇಶಿಸಲು 6ರಿಂದ 8 ಅಡಿ ಅಳತೆಯ ಏಣಿಯನ್ನು ಇರಿಸಿರುವ ಸಂಗತಿ ಹೊರಬಿದ್ದಿದೆ. ಆದರೆ ಭಾರೀ ಭದ್ರತೆಯ ಕಾರಣ ಮನೆಯೊಳಗೆ ನುಗ್ಗಲು ಪಾತಕಿಯು ವಿಫಲನಾಗಿದ್ದಾನೆ.

ಸೈಫ್ ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಬಂಧಿಸಿ ಬಾಂದ್ರಾ ಪೊಲೀಸ್ ಠಾಣೆಗೆ ಕರೆತಂದು ವಿಚಾರಿಸಿದಾಗ ಈ ಸಂಗತಿ ಗೊತ್ತಾಗಿದೆ ಎನ್ನುತ್ತಿವೆ ವರದಿ. ಮನ್ನತ್ ಬಂಗಲೆಗೆ ನುಗ್ಗಲು ಸಾಧ್ಯವಾಗದಿದ್ದಾಗ, ಪಾತಕಿಯು ತನ್ನ ಗುರಿಯನ್ನು ಸೈಫ್ ಅಲಿಖಾನ್ ವಾಸಿಸುತ್ತಿದ್ದ ಸದ್ಗುರು ಶರಣ್ ಬಿಲ್ಡಿಂಗ್‌ನತ್ತ ತಿರುಗಿಸಿದ ಎಂದು ಮೂಲಗಳು ಹೇಳುತ್ತಿವೆ. ಅಪಾರ್ಟ್‌ಮೆಂಟ್‌ಗೆ ನುಗ್ಗಿದ ನಂತರ ಚಾಕುವಿನಲ್ಲಿ ಆರು ಬಾರಿ ಇರಿಯುತ್ತಾನೆ. ಇದು ಮುಂಬೈ ನಗರವನ್ನು ಬೆಚ್ಚಿ ಬೀಳಿಸುತ್ತದೆ.

mubai 1
ಹತ್ಯೆಯಾದ ಬಾಬಾ ಸಿದ್ದೀಕಿ ಅವರೊಂದಿಗೆ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ (ಎಡಚಿತ್ರ). ಇತ್ತೀಚೆಗೆ ದಾಳಿಗೊಳಗಾದ ನಟ ಸೈಫ್ ಅಲಿಖಾನ್ (ಬಲ ಚಿತ್ರ)

ಸಲ್ಮಾನ್ ಖಾನ್‌ ಹತ್ಯೆಗೆ ನಿಲ್ಲದ ಸಂಚು

ಹಲವು ಬಾರಿ ಕೊಲೆ ಬೆದರಿಕೆಯನ್ನು ಎದುರಿಸಿರುವ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ ಮೇಲೆ 2024ರ ಏಪ್ರಿಲ್‌ನಲ್ಲಿ, ಬಾಂದ್ರಾದಲ್ಲಿರುವ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ಸ್‌ನ ಹೊರಗೆ ಗುಂಡು ಹಾರಿಸಿ, ಕೊಲ್ಲಲು ಯತ್ನಿಸಲಾಗಿತ್ತು. ಇಬ್ಬರು ಮುಸುಕುಧಾರಿಗಳು ಬೈಕ್ ಮೂಲಕ ಸ್ಥಳದಿಂದ ಪರಾರಿಯಾಗಿದ್ದರು. ಈ ಘಟನೆಯನ್ನು ಮುಂಬೈ ಅಪರಾಧ ವಿಭಾಗವು “ನಿಖರವಾದ ಯೋಜಿತ ದಾಳಿ” ಎಂದು ಬಣ್ಣಿಸಿದೆ.

ಇದನ್ನೂ ಓದಿರಿ: ಬೆಚ್ಚಿ ಬೀಳಿಸಿದ ಬೀದರ್ ಎಟಿಎಂ ದರೋಡೆ ಪ್ರಕರಣ: ಪಾತಕಿಗಳಲ್ಲಿ ‘ಉತ್ತರ ಭಾರತ ಮಾದರಿ’ ವಾಸನೆ!

ಕೊಲೆ ಸಂಚಿನಿಂದ ರೋಸಿ ಹೋಗಿರುವ ಸಲ್ಮಾನ್ ಖಾನ್, ಕಳೆದ ವಾರವಷ್ಟೇ ತಮ್ಮ ಬಾಂದ್ರಾ ಬಂಗಲೆಯಲ್ಲಿ ಭದ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಗುಂಡು ನಿರೋಧಕ ಬಾಲ್ಕನಿ ಮಾಡಿಸಿದ್ದಾರೆ, ಹತ್ತಿರದ ಯಾವುದೇ ಅನುಮಾನಾಸ್ಪದ ಚಟುವಟಿಕೆಯನ್ನು ಪತ್ತೆಹಚ್ಚಲು ಹೆಚ್ಚಿನ ರೆಸಲ್ಯೂಶನ್ ಇರುವ ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಿಸಿದ್ದಾರೆ!

ಸಿದ್ದೀಕಿ ಹತ್ಯೆ ಹಿಂದಿದೆಯೇ ಸಲ್ಮಾನ್ ಮೇಲಿನ ದ್ವೇಷ?

ಹಲವು ಪಾತಕಗಳಲ್ಲಿ ಭಾಗಿಯಾದ ಹಿನ್ನಲೆ ಹೊಂದಿರುವ ಕುಖ್ಯಾತಿ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನದ್ದು. ಲಾರೆನ್ಸ್ ಗ್ಯಾಂಗಿನ ಇತಿಹಾಸ ನೋಡಿದರೆ, ಅವರು ಕಣ್ಣಿಟ್ಟ ಮುಖ್ಯ ವ್ಯಕ್ತಿಯ ಅಕ್ಕಪಕ್ಕದವರನ್ನೂ ಮುಗಿಸುತ್ತಾ ಬಂದಿದ್ದಾರೆ. ಸಲ್ಮಾನ್ ಖಾನ್ ಹತ್ಯೆ ಮಾಡುವುದೇ ಅವರ ಮುಖ್ಯ ಗುರಿ ಎಂದು ಘೋಷಿಸಿಯಾಗಿದೆ. ಬಿಷ್ಣೋಯಿ ಸಮುದಾಯದ ಪೂಜನೀಯ ಪ್ರಾಣಿಯಾದ ಕೃಷ್ಣಮೃಗವನ್ನು ಸಲ್ಮಾನ್ ಕೊಂದಿದ್ದಕ್ಕೆ ಅವರ ಕೊಲೆಗೆ ಪದೇ ಪದೇ ಯತ್ನಿಸಿದೆ ಈ ಗುಂಪು. ಬಾಬಾ ಸಿದ್ದೀಕಿ ಹಲವು ಬಾಲಿವುಡ್ ತಾರೆಯರ, ಸಲ್ಮಾನ್ ಮತ್ತು ಶಾರುಖ್ ಅವರ ಆಪ್ತರಾಗಿದ್ದರು.‌ ಹತ್ಯೆಗೆ ಇದೇ ಕಾರಣವಿರಬಹುದು ಎಂದು ಚರ್ಚೆಯಾಗಿದೆ.

ಪಂಜಾಬಿ ಗಾಯಕ ಸಿಧು ಮೂಸೆವಾಲಾನನ್ನು ಲ್ಯಾರೆನ್ಸ್‌ ಗ್ಯಾಂಗ್ ಮರ್ಡರ್ ಮಾಡಿತ್ತು. ಅಕಾಲಿ ದಳದ ಲೀಡರ್ ವಿಕ್ಕಿ ವಿದ್ದುಖೇರ ಹತ್ಯೆಯಲ್ಲಿ ಮೂಸೆವಾಲಾ ಇದ್ದಾರೆಂಬುದು ಇದಕ್ಕೆ ಕಾರಣವಾಗಿತ್ತು. ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ದೊಡ್ಡದಿದೆ.‌ 31 ವರ್ಷದ ಈ ಗ್ಯಾಂಗ್ ಸ್ಟರ್ ಜೈಲಿನಲ್ಲಿದ್ದರೂ ತನ್ನ ಬಹುದೊಡ್ಡ ಪಡೆಯನ್ನು ನಿರ್ವಹಿಸುತ್ತಿರುವುದು ಹೇಗೆ? ಎಂಬ ಪ್ರಶ್ನೆ ಹಳೆಯದ್ದು.

ಬಿಷ್ಣೋಯಿ ಎಂಬುದು ವೈಷ್ಣವ ಪಂಥದ ಒಂದು ಗುಂಪು. ಬಿಷ್ಣೋಯಿ ಪಂಥದ ಪೂಜನೀಯ ಪ್ರಾಣಿಯನ್ನು ಕೊಂದರೆಂದು ಸಲ್ಮಾನ್ ಖಾನ್‌ರನ್ನು ಕೊಲೆ ಮಾಡಲು ಯತ್ನಿಸುವ ಮಟ್ಟಕ್ಕೆ ಈ ಗ್ಯಾಂಗ್‌ನಲ್ಲಿ ಮತಾಂಧತೆ ತುಂಬಿದೆ. 15ನೇ ಶತಮಾನದಲ್ಲಿ ಬಿಷ್ಣೋಯಿ ಸಮುದಾಯ ಚಾಲ್ತಿಗೆ ಬಂತು. ಬ್ರಾಹ್ಮಣ, ಬನಿಯಾ, ರಜಪೂತ, ಜಾಟ್ ಜಾತಿಗಳಲ್ಲಿ ಈ ಬಿಷ್ಣೋಯಿ ಮತದ ಅನುಯಾಯಿಗಳು ಇದ್ದಾರೆ. ಗುರು ಜಂಬೇಶ್ವರ್ ಬೋಧನೆಯೇ ಈ ಗುಂಪಿನ ಮಾರ್ಗದರ್ಶನಗಳು. ಪ್ರಕೃತಿ ಆರಾಧನೆ ಮತ್ತು ಸೌಹಾರ್ಯತೆಯನ್ನು ಜಂಬೇಶ್ವರ್ ಬೋಧಿಸಿ ಹೋಗಿದ್ದಾರೆ. ಆದರೆ ಲಾರೆನ್ಸ್ ಗ್ಯಾಂಗ್ ಮತಾಂಧತೆಯ ಕೂಪವಾಗಿದೆ. ಕೊಲೆ, ದರೋಡೆ, ಕೊಲೆಯತ್ನವೇ ಈ ಗ್ಯಾಂಗಿನ ಇತಿಹಾಸ. ಇದು ಯಾವ ಧರ್ಮವೂ ಒಪ್ಪದ ಮಾರ್ಗ. ದಾದಾಗಿರಿ ಮಾಡುವುದಷ್ಟೇ ಇವರ ಉದ್ದೇಶ. ಜನರಲ್ಲಿ ಭಯವನ್ನು ಹುಟ್ಟುಹಾಕಿ ಗ್ಯಾಂಗ್ ಸ್ಟರ್ ಆಗಿ ಮರೆಯುವುದಷ್ಟೇ ಇವರ ಗುರಿ. 700ಕ್ಕೂ ಹೆಚ್ಚು ಗನ್‌ಗಳನ್ನು ಈ ಗ್ಯಾಂಗ್ ಹೊಂದಿದೆ ಎಂದು ವರದಿಗಳು ಹೇಳುತ್ತಿವೆ. ಇದು ನಮ್ಮ ವ್ಯವಸ್ಥೆಯ ಕಾನೂನು ಸುವ್ಯವಸ್ಥೆಗೆ ಹಿಡಿದ ಕೈಗನ್ನಡಿ.

ಲಾರೆನ್ಸ್ ಗುಂಪಿನವರು ಎನ್ನಲಾದ ಮೂವರು ಪಾತಕಿಗಳು 2024ರ ಅಕ್ಟೋಬರ್‌ನಲ್ಲಿ ಮುಂಬೈನ ಬಾಂದ್ರಾ ಪೂರ್ವ ಪ್ರದೇಶದಲ್ಲಿ ಜೀಶನ್ ಅವರ ಕಚೇರಿಯ ಹೊರಗೆ (ಜೀಶನ್ ಅವರು ಬಾಬಾ ಸಿದ್ಧಿಕಿ ಅವರ ಮಗ) ಸಿದ್ದೀಕಿ ಅವರನ್ನು ಗುಂಡಿಕ್ಕಿ ಕೊಂದಿದ್ದು ಕಣ್ಣ ಮುಂದೆಯೇ ಇದೆ.

ಇದನ್ನೂ ಓದಿರಿ: ಸಿ ಟಿ ರವಿ ಪ್ರಕರಣ | ಸಿಐಡಿಗೆ ಸಿಕ್ಕಿದೆ ಪುರಾವೆ; ಮಹಿಳೆಯರು ಏನಂತಾರೆ?

ಹತ್ಯೆಯನ್ನು ಪೂರ್ವ ನಿಯೋಜಿತವಾಗಿ ನಡೆಸಲಾಗಿತ್ತು. ದುಷ್ಕರ್ಮಿಗಳು ಆರು ಸುತ್ತು ಗುಂಡು ಹಾರಿಸಿದ್ದರು, ಅದರಲ್ಲಿ ಮೂರು ಗುಂಡುಗಳು ಬಾಬಾ ಅವರನ್ನು ಬಲಿಪಡೆದವು ಎಂದಿದ್ದಾರೆ ಡಿಸಿಪಿ (ಅಪರಾಧ ಶಾಖೆ) ದತ್ತ ನಲವಾಡೆ.

ಗುಂಡು ಹಾರಿಸಿದವರು ಘಟನೆಗೆ 25-30 ದಿನಗಳ ಮೊದಲು ಮುಂಬೈನಲ್ಲಿದ್ದರು. ಗುಂಡು ಹಾರಿಸಲಿರುವ ಸ್ಥಳ ಮತ್ತು ಬಾಬಾ ಸಿದ್ದೀಕಿ ಅವರ ಮನೆ ಹಾಗೂ ಕಚೇರಿ ಸುತ್ತ ಪಹರೆ ನಡೆಸಿದ್ದರು. ಕೊಲೆಗೆ 15 ದಿನಗಳ ಮೊದಲು ಸಿದ್ದೀಕಿ ಅವರಿಗೆ ಕೊಲೆ ಬೆದರಿಕೆ ಬಂದಿತ್ತು ಎನ್ನುತ್ತಾರೆ ಪೊಲೀಸರು. ಆ ನಂತರ ಅವರ ಭದ್ರತೆಯನ್ನು ‘ವೈ’ ವರ್ಗಕ್ಕೆ ಏರಿಸಲಾಗಿತ್ತು. ಸಿದ್ದೀಕಿ ಹತ್ಯೆಯ ಸಮಯದಲ್ಲಿ ಪೊಲೀಸ್ ಕಾನ್‌ಸ್ಟೆಬಲ್‌ಗೂ ಗುಂಡು ತಗುಲಿತ್ತು.

ಸೈಫ್‌ ಮೇಲಿನ ದಾಳಿಯಲ್ಲಿ ಯಾರ ಕೈವಾಡ?

ಸಲ್ಮಾನ್, ಸಿದ್ದೀಕಿ ಅವರ ಮೇಲಿನ ದಾಳಿಗಳು ಮಾಸುವ ಮುನ್ನವೇ ಸೈಫ್ ಅಲಿಖಾನ್ ಅವರ ಮೇಲೆ ನಡೆದಿರುವ ದಾಳಿಯಲ್ಲಿ ಯಾರ ಕೈವಾಡವಿದೆ ಎಂಬುದರ ತನಿಖೆ ಮುಂದುವರಿದಿದೆ. ಸೆಲೆಬ್ರಿಟಿಗಳ ಹಿಂದೆ ಬಿದ್ದಿರುವ ಈ ಹಂತಕ ಪಡೆ ಯಾವುದೆಂದು ಪತ್ತೆ ಹಚ್ಚಬೇಕಿದೆ. ಮುಂಬೈ ಈಗ ನಿಜಕ್ಕೂ ಸುರಕ್ಷಿತ ನಗರವೇ? ಖ್ಯಾತನಾಮರ ಸ್ಥಿತಿಯೇ ಹೀಗಾದರೆ ಸಾಮಾನ್ಯರು ಏನು ಮಾಡಬೇಕು ಎಂದು ಪ್ರತಿಪಕ್ಷಗಳು ಕೇಳಲಾರಂಭಿಸಿವೆ. ಕಾನೂನು ಸುವ್ಯವಸ್ಥೆಯಲ್ಲಿ ಮಹಾರಾಷ್ಟ್ರ ಸರ್ಕಾರ ತಾಳಿರುವ ನಿರ್ಲಕ್ಷ್ಯವು ಢಾಳಾಗಿ ಕಾಣಲಾರಂಭಿಸಿದೆ.

yathiraj 2
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ರಸ್ತೆ ತುಂಬಾ ತಗ್ಗು ಗುಂಡಿಗಳದ್ದೇ ಕಾರುಬಾರು; ಸವಾರರ ಜೀವಕ್ಕೆ ‘ಗ್ಯಾರಂಟಿ’ಯೇ ಇಲ್ಲ!

ರಾಯಚೂರಿನ ಅನ್ವರಿ - ಹಟ್ಟಿ ಚಿನ್ನದ ಗಣಿ ಪಟ್ಟಣಕ್ಕೆ ಹೋಗುವ ಮುಖ್ಯ...

Download Eedina App Android / iOS

X