ಕಿಯೋನಿಕ್ಸ್ ವೆಂಡರ್ಸ್ V/s ಪ್ರಿಯಾಂಕ್ ಖರ್ಗೆ: ರಾಜ್ಯದ ಜನತೆ ಯಾರ ಪರ ನಿಲ್ಲಬೇಕು?

Date:

Advertisements

ನಮಗೆ ‘ದಯಾಮರಣ’ ನೀಡಿ ಎಂದು ಕರ್ನಾಟಕದ ಸರ್ಕಾರೀ ಸಂಸ್ಥೆಯೊಂದಕ್ಕೆ ವಿವಿಧ ಸರಕು ಅಥವಾ ಸೇವೆಗಳನ್ನು ಒದಗಿಸುವ ಪೂರೈಕೆದಾರರು ಪತ್ರ ಬರೆದಿದ್ದಾರೆ. ಪತ್ರ ಬರೆದಿರುವುದು ಪ್ರಧಾನಿ, ರಾಜ್ಯಪಾಲರು, ರಾಷ್ಟ್ರಪತಿ ಇತ್ಯಾದಿ ಪ್ರಮುಖರಿಗೆ. ಅವರು ಆರೋಪಿಸಿರುವುದು ರಾಜ್ಯದ ಸಚಿವರು, ಸಂಸ್ಥೆಯ ಅಧ್ಯಕ್ಷರು ಮತ್ತಿತರರ ಕುರಿತು. ಹಾಗಾದರೆ, ವಾಸ್ತವ ಏನು? ತಪ್ಪು ಯಾರದ್ದು? ಇದರಲ್ಲಿ ರಾಜ್ಯದ ಜನತೆ ಏನು ನಿಲುವು ತೆಗೆದುಕೊಳ್ಳಬಹುದು ಎಂಬುದರ ಕುರಿತು ಬೆಳಕು ಚೆಲ್ಲುವುದಷ್ಟೇ ಈ ಲೇಖನದ ಉದ್ದೇಶ. ನಿಲುವು ತೆಗೆದುಕೊಳ್ಳಬೇಕಾದ್ದು ರಾಜ್ಯದ ಮಹಾಜನತೆ.

ರಾಜ್ಯದ ಹಲವು ಇಲಾಖೆಗಳಿಗೆ ಬೇಕಾದ ವಿದ್ಯುನ್ಮಾನ ಉಪಕರಣಗಳು ಸೇರಿದಂತೆ ಹಲವು ರೀತಿಯ ಸರಕು ಮತ್ತು ಮಾನವ ಸಂಪನ್ಮೂಲ ಸೇವೆಗಳನ್ನು ಸರ್ಕಾರದ ಕಿಯೋನಿಕ್ಸ್ ಸಂಸ್ಥೆಯ ಮೂಲಕ ಹಲವು ವೆಂಡರ್‍‌ಗಳು (ಪೂರೈಕೆದಾರ ವ್ಯಾಪಾರಸ್ಥರು) ಪೂರೈಸುತ್ತಿದ್ದಾರೆ. ಆದರೆ ಒಂದೂವರೆ ವರ್ಷದಿಂದ ಪೂರೈಕೆ ಮಾಡಿದ ಸೇವೆಗಳಿಗೆ ಸರ್ಕಾರ ಬಿಲ್ ಪಾವತಿ ಮಾಡದೇ ತಮಗೆ ಕಿರುಕುಳ ನೀಡಲಾಗುತ್ತಿದೆ ಎಂದು ಪೂರೈಕೆದಾರರು ಆರೋಪಿಸಿದ್ದಾರೆ. ಅದೇ ಸಂದರ್ಭದಲ್ಲಿ ಮಾರುಕಟ್ಟೆ ದರಕ್ಕಿಂತ ಹತ್ತಾರು ಪಟ್ಟು ಹೆಚ್ಚು ದರಕ್ಕೆ ಪೂರೈಸಲಾಗಿದೆ, ಕೆಲ ವಸ್ತುಗಳನ್ನು ಪೂರೈಕೆ ಮಾಡದೇ ನಕಲಿ ಬಿಲ್ ಸೃಷ್ಟಿಸಿ ಹಣ ಪಡೆಯಲಾಗಿದೆ, ಹಲವು ಮಾರಾಟ ಮತ್ತು ಪೂರೈಕೆ ಪ್ರಕ್ರಿಯೆಗಳು ಮೂರನೇ ವ್ಯಕ್ತಿಯ ತಪಾಸಣೆ ಇಲ್ಲದೆ ಮಾಡಲಾಗಿದೆ… ಹೀಗೆ ಕಾನೂನು ಮತ್ತು ನಿಯಮಗಳನ್ನು ಗಾಳಿಗೆ ತೂರಿ ಅಕ್ರಮ ಎಸಗಿರುವುದರಿಂದ ತನಿಖೆ ನಡೆಯುತ್ತಿರುವ ಕಾರಣಕ್ಕೆ ಬಿಲ್ ತಡೆ ಹಿಡಿಯಲಾಗಿದೆ ಎಂದು ಸರ್ಕಾರ ಸ್ಪಷ್ಟೀಕರಣ ನೀಡಲಾಗಿದೆ. ಇದರ ಆಳ-ಅಗಲವನ್ನು ಚರ್ಚಿಸೋಣ.

ಪೂರೈಕೆದಾರರ ಆರೋಪ

Advertisements

ಬಾಕಿ ಬಿಲ್ ಪಾವತಿ ಮಾಡದೇ ಕಳೆದ ಒಂದೂವರೆ ವರ್ಷದಿಂದ ಕಿರುಕುಳ ನೀಡಲಾಗುತ್ತಿದೆ ಎಂದು ಕರ್ನಾಟಕ ವಿದ್ಯುನ್ಮಾನ ಅಭಿವೃದ್ಧಿ ಮಂಡಳಿ ನಿಗಮ ನಿಯಮಿತ (KEONICS) ಅಡಿಯಲ್ಲಿ ನೋಂದಾಯಿತ ವೆಂಡರ್‍‌ದಾರರು ಆರೋಪಿಸಿದ್ದಾರೆ. ಇದರಿಂದ ತಾವು ಮತ್ತು ತಮ್ಮ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದ್ದು ನಮಗೆ ದಯಾಮರಣ ನೀಡಿ ಎಂದು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.
ಒಂದೂವರೆ ವರ್ಷದಿಂದ ಹಲವಾರು ಬಾರಿ ಮುಖ್ಯಮಂತ್ರಿಗಳು, ಸಚಿವರು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ರಾಜ್ಯಪಾಲರ ಗಮನಕ್ಕೆ ತಂದರೂ ಯಾವುದೇ ಪರಿಹಾರ ಸಿಕ್ಕಿಲ್ಲ. ಒಂದು ವಾರದಲ್ಲಿ ನಮ್ಮ ಬಿಲ್ ಪಾವತಿ ಮಾಡಿಸಿ ನಮ್ಮ ಬದುಕನ್ನು ಉಳಿಸಿ ನಮ್ಮ ಪ್ರಾಣ ಕಾಪಾಡಬೇಕು. ಇಲ್ಲದಿದ್ದರೆ ನಾವು ಆತ್ಮಹತ್ಯೆ ದಾರಿ ಹಿಡಿದು ಯಾರದಾದರೂ ಜೀವ ಕಳೆದುಕೊಂಡರೆ ಅದಕ್ಕೆ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಮುಖ್ಯ ಕಾರ್ಯಾನಿರ್ವಾಹಕ ಅಧಿಕಾರಿ, ನಿಗಮದ ಅಧ್ಯಕ್ಷ ಶರತ್ ಬಚ್ಚೇಗೌಡ ಹಾಗೂ ನಿರ್ದೇಶಕರು (ಹಣಕಾಸು) ನಿಶ್ಚಿತ್, ಇವರುಗಳೆ ಕಾರಣ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನು ಓದಿದ್ದೀರಾ?: ಗದ್ದುಗೆ ಗುದ್ದಾಟ | ಬಿ ವೈ ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಉಳಿಯುತ್ತಾ?

ಈ ಹಿಂದೆ ಮುಖ್ಯ ಕಾರ್ಯಾನಿರ್ವಾಹಕ ಅಧಿಕಾರಿಯಾಗಿ ಕೆಲಸ ಮಾಡುತಿದ್ದ ಸಂಗಪ್ಪರವರು ಕಮಿಷನ್ ರೂಪದಲ್ಲಿ ಶೇ 12 ರಷ್ಟು ಲಂಚ ಕೇಳಿ ಕಿರುಕುಳ ಕೊಟ್ಟು, ನಾವು ಲಂಚ ಕೊಡಲು ಒಪ್ಪದೇ ಇದ್ದಾಗ ನಮ್ಮ ಬಿಲ್ ಪಾವತಿ ಮಾಡದೆ ತಡೆಹಿಡಿದಿದ್ದರು. ಈಗ ನಿಗಮದಲ್ಲಿ ಯಾರೋ ನಾಲ್ಕು ಜನ ವೆಂಡರ್‍‌ಗಳು ಮಾಡಿದ ತಪ್ಪನ್ನೇ ಮುಂದೆ ಇಟ್ಟುಕೊಂಡು, ಒಂದೂವರೆ ವರ್ಷ ಕಳೆದರೂ ತನಿಖೆಯ ಹೆಸರಲ್ಲಿ ನಮ್ಮ ಹಣ ಬಾಕಿ ಉಳಿಸಿಕೊಂಡು ಸಚಿವರು ನಮ್ಮ ಬದುಕನ್ನೇ ಸರ್ವನಾಶ ಮಾಡಿದ್ದಾರೆ ಎಂದು ಸಂಘದ ಅಧ್ಯಕ್ಷ ವಸಂತ ಕ ಬಂಗೇರ ಆರೋಪಿಸಿದ್ದಾರೆ.

ದೊಡ್ಡ ದೊಡ್ಡ ಕಂಪನಿಗಳು ಮಾತ್ರ ಅರ್ಹರಾಗುವ ರೀತಿಯಲ್ಲಿ ಕಿಯೋನಿಕ್ಸ್‌ನಲ್ಲಿ ನಿಯಮಗಳನ್ನು ಬದಲಿಸಲಾಗಿದೆ. ಇದರಿಂದ 450 ರಿಂದ 500 ಜನ ವೆಂಡರ್‍‌ದಾರರನ್ನು ಬೀದಿಗೆ ತಂದಿದ್ದಾರೆ. ಅಲ್ಲದೇ, ನಮ್ಮನ್ನೇ ನಂಬಿಕೊಂಡು ನಮಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 6 ಸಾವಿರಕ್ಕೂ ಹೆಚ್ಚು ಕುಟುಂಬಗಳನ್ನು ಬೀದಿಗೆ ತಂದಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ಸರ್ಕಾರದ ಪ್ರತಿಕ್ರಿಯೆ

ಈ ಕುರಿತು ಪ್ರತಿಕ್ರಿಯಿಸಿರುವ ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ”ಕಿಯೋನಿಕ್ಸ್ ಮೂಲಕ ನಡೆದ ಖರೀದಿಯಲ್ಲಿ 300 ಕೋಟಿ ರೂ ಹಗರಣ ನಡೆದಿದೆ ಎಂದು ಮಹಾ ಲೇಖಪಾಲರು (ಅಕೌಂಟೆಂಟ್ ಜನರಲ್) ವರದಿ ನೀಡಿದ್ದಾರೆ. ಅದರ ಆಧಾರದಲ್ಲಿ ನಾವು ಮಹೇಶ್ವರ್ ರಾವ್ ಸಮಿತಿಯ ಮೂಲಕ ತನಿಖೆ ನಡೆಸುತ್ತಿದ್ದೇವೆ. ಅವರ ಪ್ರಾಥಮಿಕ ತನಿಖೆಯಲ್ಲಿ ನಾಲ್ಕು ವರ್ಷಗಳಲ್ಲಿ ಸುಮಾರು 500 ಕೋಟಿ ರೂಗಳಷ್ಟು ಅಕ್ರಮ ವ್ಯವಹಾರ ನಡೆದಿದೆ. ಯಾವುದೇ ಮಾನದಂಡಗಳಿಲ್ಲದೆ, ನಿಯಮಗಳನ್ನು ಗಾಳಿಗೆ ತೂರಿ, ನಕಲಿ ಬಿಲ್ ಸೃಷ್ಟಿಸಿ ಅಕ್ರಮವಾಗಿ ಖರೀದಿ ನಡೆದಿದೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಹಾಗಾಗಿ ಬಿಲ್ ತಡೆದಿದ್ದೇವೆ” ಎಂದಿದ್ದಾರೆ.
ಈ ಅವ್ಯವಹಾರದ ಹಿನ್ನೆಲೆಯಲ್ಲಿ ಮಹಾ ಲೇಖಪಾಲರು ಆಕ್ಷೇಪ ವ್ಯಕ್ತಪಡಿಸಿದ ಕಾರಣಕ್ಕಾಗಿ ಬಿಲ್ ತಡೆ ಹಿಡಿದಿದ್ದೇವೆ. ನಾವು ಅವರ ಆದೇಶವನ್ನು ಪಾಲಿಸಬೇಕು. ಹಾಗಾಗಿ ವರದಿ ಬಂದ ಬಳಿಕ ನಿಯಮ ಬದ್ಧವಾಗಿ ಕೆಲಸ ಮಾಡಿದವರ ಬಿಲ್ ಅನ್ನು ಕೂಡಲೇ ಬಿಡುಗಡೆ ಮಾಡುತ್ತೇವೆ, ಕಾಲಾವಕಾಶ ನೀಡಿ ಸಹಕರಿಸಿ ಎಂದು ವೆಂಡರ್‍‌ಗಳ ಬಳಿ ಪದೇ ಪದೇ ಮನವಿ ಮಾಡಿಕೊಂಡಿದ್ದೇವೆ. ಆದರೆ ಅವರು ಒಂದು ವಾರದಲ್ಲಿ ಬಿಡುಗಡೆ ಮಾಡಿ, ನಿಯಮಗಳನ್ನು ಪಾಲಿಸಬೇಡಿ ಎಂದು ನಮ್ಮ ಮೇಲೆ ಒತ್ತಡ ತರುವುದು ಸರಿಯೇ? ಕಾನೂನು ಮೀರಿ ಬಿಲ್ ಪಾವತಿ ಮಾಡಲು ಸಾಧ್ಯವೇ? ಈ ರೀತಿಯಲ್ಲಿ ಬ್ಲಾಕ್ ಮೇಲ್ ಮಾಡುವುದು ಸರಿಯೇ ಎಂದು ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ನಮ್ಮ ಮೇಲೆ ಬ್ಲಾಕ್ ಮೇಲ್ ಮಾಡುವುದು ಸರಿಯಲ್ಲ. ನಾವು ತನಿಖೆ ಮಾಡುವುದು ತಪ್ಪೆ? ಈ ಹಗರಣ ನಡೆದಿರುವುದು ನಮ್ಮ ಸರ್ಕಾರದ ಅವಧಿಯಲ್ಲಿ ಅಲ್ಲ. ಬದಲಿಗೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ. ಆಗಿನ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರ ಬಳಿ ಕೇಳಬೇಕು ಅಲ್ಲವೇ? ಈ ಬಗ್ಗೆ ನಾವು ಪಾರದರ್ಶಕ ತನಿಖೆ ನಡೆಸಿ ಜನರ ಮುಂದಿಡುವುದು ತಪ್ಪೇ? ನಾವು ಈಗ ತನಿಖೆ ಪೂರೈಸದೇ ಬಿಲ್ ಪಾವತಿ ಮಾಡಿದರೆ ಆನಂತರ ಯಾರಾದರೂ ಕೋರ್ಟ್‌ಗೆ ಹೋದರೆ ಉತ್ತರ ಕೊಡುವವರು ಯಾರು? ನಾವು ಕೆಲವು ವೆಂಡರ್‍‌ಗಳ ಕಷ್ಟ ಕೇಳಿ ಅವರ ಪರವಾಗಿ ಮಾನವೀಯತೆ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆ. ಅದೇ ಸಂದರ್ಭದಲ್ಲಿ ಪಾರದರ್ಶಕತೆ ಮುಖ್ಯ. ಕೆಲವರು ಜಿಎಸ್ಟಿ ಬಿಲ್ ಪಾವತಿಸಿಲ್ಲ. ಈ ಕುರಿತು ನಾವು ಇಲಾಖೆಗೆ ಪತ್ರ ಬರೆದಿದ್ದೇವೆ. ಶರತ್ ಬಚ್ಚೇಗೌಡರು ಅಧ್ಯಕ್ಷರಾದ ಮೇಲೆ ಈ ಹಗರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದಾರೆ. ಸದ್ಯಕ್ಕೆ 40 ವೆಂಡರ್‍‌ಗಳ ಕೆಲಸ ಪ್ರಾಮಾಣಿಕವಾಗಿದೆ ಎಂದು ಕಂಡುಬಂದಿದ್ದು, ಕಮಿಟಿಯವರು ಒಪ್ಪಿದರೆ ಅವರಿಗೆ ಬಿಲ್ ಪಾವತಿಸಬಹುದು ಎಂದು ಹೇಳಿದ್ದಾರೆ. ಹಾಗಾಗಿ ಒತ್ತಡ ತರವುದು ಒಳ್ಳೆಯದಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಕಿಯೋನಿಕ್ಸ್ ಅಧ್ಯಕ್ಷರಾದ ಶರತ್ ಬಚ್ಚೇಗೌಡರು ಮಾತನಾಡಿ, ”ಈ ಹಗರಣದಿಂದ ಸರ್ಕಾರದ ಖಜಾನೆಗೆ ನೂರಾರು ಕೋಟಿ ನಷ್ಟ ಆಗಿದೆ ಎಂದು ಅಕೌಂಟೆಂಟ್ ಜನರಲ್ ವರದಿಯಲ್ಲಿ ಸ್ಪಷ್ಟವಾಗಿದೆ. ಬೆಲೆ ನಿಗದಿ ವಿಚಾರದಲ್ಲಿಯೂ ಮಾರ್ಕೆಟ್ ಬೆಲೆಗಿಂತ ಹೆಚ್ಚಿನ ಬೆಲೆಗೆ ಸರಕು ಸಪ್ಲೈ ಮಾಡಿರುವ ಆರೋಪ ಇದೆ. ನಾವು ಸಾರ್ವಜನಿಕರ ಹಣ ಬಳಸಿ ಕಿಯೋನಿಕ್ಸ್‌ಗೆ ಅನುದಾನ ನೀಡ್ತಿದ್ದೇವೆ. ಹಾಗಾಗಿ ತನಿಖೆ ನಡೆಸುತ್ತಿರುವ ಮಹೇಶ್ವರ್ ರಾವ್ ಕಮಿಟಿಯ ವರದಿ ಪಡೆದು ಬಿಲ್ ಪಾವತಿಸುತ್ತೇವೆ. ಶೀಘ್ರವಾಗಿ ಹಣ ಬಿಡುಗಡೆಗೆ ಕ್ರಮವಹಿಸಲಾಗುವುದು. ಅದೇ ಸಂದರ್ಭದಲ್ಲಿ ಕಿಯೋನಿಕ್ಸ್ ಹಗರಣದಲ್ಲಿ ಭಾಗಿಯಾದವರ ವಿರುದ್ದ ಶಿಸ್ತು ಕ್ರಮ ಜರುಗಿಸಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.

ಬಚ್ಚೆ

ಮಹಾಲೇಖಪಾಲರ ಮತ್ತು ಮಹೇಶ್ವರ್ರಾವ್ ಸಮಿತಿ ವರದಿಯಲ್ಲೇನಿದೆ?

2018-19 ರಿಂದ 2022-23ರವರೆಗೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಿಯೋನಿಕ್ಸ್‌ನಲ್ಲಿ ಸರಕುಗಳ ಖರೀದಿಯಲ್ಲಿ ಬೃಹತ್ ಪ್ರಮಾಣದ ಅವ್ಯವಹಾರ ನಡೆದಿದೆ ಎಂದು ಮಹಾಲೇಖಪಾಲರು (ಸಿಎಜಿ) ವರದಿ ನೀಡಿದ್ದರು. ಈ ವೇಳೆ ಡಾ.ಸಿ.ಎನ್ ಅಶ್ವತ್ಥನಾರಾಯಣರವರು ಐಟಿ, ಬಿಟಿ ಸಚಿವರಾಗಿದ್ದರೆ, ರವಿ ಚೆನ್ನಣ್ಣನವರ್ರವರು ಸೇರಿ ಮೂರು ಜನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಆಗ ಖರೀದಿ ಪ್ರಕ್ರಿಯೆ ಸಂದರ್ಭದಲ್ಲಿ ನಿಯಮ ಉಲ್ಲಂಘನೆ, ಕಳಪೆ ಗುಣಮಟ್ಟದ ಸಾಮಗ್ರಿಗಳ ಸರಬರಾಜು, ದಾಖಲೆಗಳನ್ನು ಪರಿಶೀಲಿಸದೆ ಬಿಲ್‌ಗಳನ್ನು ಪಾವತಿಸಿರುವುದು ಪತ್ತೆಯಾಗಿದೆ ಎಂದು ವರದಿ ಹೇಳಿತ್ತು.

ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರದಲ್ಲಿ ಸಾಮಗ್ರಿ ಖರೀದಿ – ₹47.76 ಕೋಟಿ ಹೆಚ್ಚುವರಿ ಹೊರೆ

ಬುಡಕಟ್ಟು ಕಲ್ಯಾಣ ಇಲಾಖೆಗೆ ಕಂಪ್ಯೂಟರ್ ಲ್ಯಾಬ್ ಸೆಟಪ್ (ಟೈಪ್ 1)ರ ವೆಚ್ಚವಾಗಿ ಒಂದು ಘಟಕದ ಮಾರುಕಟ್ಟೆ ದರ 5,09,087 ರೂ ಇದ್ದರೆ ಕಿಯೋನಿಕ್ಸ್ ದರ 24,15,410 ರೂಗಳಾಗಿದೆ. ಅಂದರೆ ಹೆಚ್ಚು ಕಡಿಮೆ 5 ಪಟ್ಟು ಹೆಚ್ಚು! ಇಲ್ಲಿ ಮಾರುಕಟ್ಟೆ ದರಕ್ಕೂ ಕಿಯೋನಿಕ್ಸ್ ನಿಗದಿ ಮಾಡಿರುವ ದರಕ್ಕೂ 19 ಲಕ್ಷ ರೂಗಳ ಅಂತರವಿದೆ. ಈ ರೀತಿಯ 40 ಘಟಕದ ಕಂಪ್ಯೂಟರ್ ಲ್ಯಾಬ್ ಸೆಟಪ್‌ಗಾಗಿ ಸರ್ಕಾರದ ಮೇಲೆ 7,62,52,920 ರೂ ಹೆಚ್ಚುವರಿ ಹೊರೆ ಬಿದ್ದಿದೆ.

ಇನ್ನು ಕಂಪ್ಯೂಟರ್ ಮತ್ತು ಇತರ ಉಪಕರಣಗಳ ಮಾರುಕಟ್ಟೆಯ ದರ 5,42,307 ರೂ ಇದ್ದರೆ ಕಿಯೋನಿಕ್ಸ್ ದರ 32,38,883 ರೂ ಇದೆ. ಅಲ್ಲಿಗೆ 6 ಪಟ್ಟು ಹೆಚ್ಚು. ಅಂತರ 26,96,576 ರೂ ಇದ್ದು, ಇದರಿಂದ ಸರ್ಕಾರಕ್ಕೆ 10 ಕೋಟಿ ರೂಗಳಿಗೂ ಹೆಚ್ಚಿನ ಹೊರೆ ಬಿದ್ದಿದೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸ್ಮಾರ್ಟ್ ಕ್ಲಾಸ್ ರೂಂ ಸೆಟಪ್ (ಟೈಪ್ 1)ರ ವೆಚ್ಚವಾಗಿ ಮಾರುಕಟ್ಟೆ ದರ 1,51,248 ರೂ ಇದ್ದರೆ ಕಿಯೋನಿಕ್ಸ್ ದರ 5,10,001 ರೂ ನಿಗದಿ ಮಾಡಿದೆ. 192 ಘಟಕ ವೆಚ್ಚಗಳಿಗೆ ಹೆಚ್ಚಿನ ದರ ನೀಡಿದ್ದಕ್ಕಾಗಿ 6,88,80,522 ರೂ ಹೆಚ್ಚು ಹೊರೆ ಬಿದ್ದಿದೆ. ಆರು ಕ್ಯಾಮರಗಳ ಸಿಸಿಟಿವಿ ಅಳವಡಿಕೆಗೆ ಮಾರುಕಟ್ಟೆ ದರ 53,454 ರೂ ಇದ್ದರೆ ಕಿಯೋನಿಕ್ಸ್ 6,72,600 ರೂ ನಿಗದಿ ಮಾಡಿದೆ. ಈ ರೀತಿಯಾಗಿ ಒಟ್ಟು ಸರ್ಕಾರಕ್ಕೆ 47.76 ಕೋಟಿ ಹೆಚ್ಚುವರಿ ಹೊರೆ ಬಿದ್ದಿರುವುದನ್ನು ವರದಿ ಉಲ್ಲೇಖಿಸಿದೆ.

ಈ ವರದಿ ಓದಿದ್ದೀರಾ?: ಆರಿಸಿದ ಮತದಾರರಿಗೆ ಅವಮಾನಿಸುತ್ತಿರುವ ಕಾಂಗ್ರೆಸ್; ಫ್ಯಾಸಿಸ್ಟ್ ನರೇಟಿವ್ ಕಟ್ಟುತ್ತಿರುವ ಮಾಧ್ಯಮಗಳು

ಮೂರನೇ ವ್ಯಕ್ತಿಯ ಪರಿಶೀಲನೆ ನಡೆಸದೇ ₹76.50 ಕೋಟಿ ಪಾವತಿ ಸರ್ಕಾರಿ ಆದೇಶ ಸಂಖ್ಯೆ FD 55 Pro ಸೆಲ್ 2004, ಬೆಂಗಳೂರು, ದಿನಾಂಕ: 17.02.2005 ಮತ್ತು 26.04.2021, ಪ್ರಕಾರ ರೂ. 50 ಲಕ್ಷಕ್ಕಿಂತ ಹೆಚ್ಚು ವೆಚ್ಚವಾಗುವ ಎಲ್ಲಾ ಸರಕು ಮತ್ತು ಸಲಕರಣೆಗಳ ಒಪ್ಪಂದಗಳಿಗೆ ಸಂಬಂಧಿಸಿದಂತೆ ಮೂರನೇ ವ್ಯಕ್ತಿಯ ತಪಾಸಣೆ ಕಡ್ಡಾಯವಾಗಿರಬೇಕು. 304 ಪರೀಕ್ಷಾರ್ಥ ಟೆಂಡರ್‍‌ಗಳ ಪೈಕಿ 162 ಟೆಂಡರ್‍‌ಗಳಲ್ಲಿ ಮೂರನೇ ವ್ಯಕ್ತಿಯ ತಪಾಸಣೆ ನಡೆಸದೇ ರೂ.76.55 ಕೋಟಿ ಪಾವತಿ ಮಾಡಿರುವುದು ದಾಖಲೆಗಳ ಪರಿಶೀಲನೆಯಲ್ಲಿ ಕಂಡುಬಂದಿದೆ. 50% ಕ್ಕಿಂತ ಹೆಚ್ಚು ಟೆಂಡರ್‍‌ಗಳನ್ನು ಮೂರನೇ ವ್ಯಕ್ತಿಯ ತಪಾಸಣೆ ನಡೆಸದೆ ಮತ್ತು ಸರಕುಗಳ ಪೂರೈಕೆಯನ್ನು ಖಚಿತಪಡಿಸದೆ ಪಾವತಿಸಲಾಗಿದೆ. ಹಾಗಾಗಿ ಸರಕುಗಳ ನಿಜವಾದ ಪೂರೈಕೆ ಮತ್ತು ಸರಕುಗಳ ಗುಣಮಟ್ಟವನ್ನು ಲೆಕ್ಕಪರಿಶೋಧನೆಯಿಂದ ಖಾತ್ರಿಪಡಿಸಲಾಗುವುದಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

2020ರಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಹಾಸ್ಟೆಲ್‌ಗಳಿಗೆ 600 ಲೀಟರ್ ಸಾಮರ್ಥ್ಯದ 70 ರೆಫ್ರಿಜಿರೇಟರ್‍‌ಗಳನ್ನು ನ್ಯೂಜಿನ್ ಸೆಕ್ಯುರಿಟಿ ಸಲ್ಯೂಷನ್ ಎಲ್ಎಲ್ಪಿ ಎಂಬ ಕಂಪನಿ ಪೂರೈಸಬೇಕಿತ್ತು. ಆದರೆ 70ರ ಪೈಕಿ 58 ರೆಫ್ರಿಜಿರೇಟರ್‍‌ಗಳನ್ನು ಮಾತ್ರ ಪೂರೈಸಲಾಗಿದೆ. ಈ ಮೂಲಕ 12 ರೆಫ್ರಿಜಿರೇಟರ್‍‌ಗಳನ್ನು ಪೂರೈಸದೆ ವಂಚಿಸಲಾಗಿದೆ. ಇದಕ್ಕಾಗಿ ಡೆಲಿವರಿ ಚಲನ್‌ಗಳು ಹಾಗೂ ಗೂಗಲ್ ಫೋಟೋಗಳನ್ನು ಸೇರಿಸಿ ಕಿಯೋನಿಕ್ಸ್‌ಗೆ ಎಲ್ಲ ರೆಫ್ರಿಜಿರೇಟರ್‍‌ಗಳನ್ನು ಪೂರೈಸಿರುವ ವರದಿ ಸಲ್ಲಿಸಲಾಗಿದೆ. ಜತೆಗೆ ಮೂರನೇ ವ್ಯಕ್ತಿಯ ತಪಾಸಣಾ ವರದಿಯನ್ನೂ ಸಲ್ಲಿಸದೆ ಸಂಪೂರ್ಣ ಹಣ ಸ್ವೀಕರಿಸಲಾಗಿದೆ. ಇದರಲ್ಲಿ ಮಾರುಕಟ್ಟೆ ದರಕ್ಕಿಂತ ಮೂರು ಪಟ್ಟು ಹೆಚ್ಚು ಹಣ ಪಡೆದುದ್ದಲ್ಲದೆ 12 ರೆಫ್ರಿಜಿರೇಟರ್‍‌ಗಳನ್ನು ಪೂರೈಸಿಯೇ ಇಲ್ಲ. ಹಗರಣ ಹೊರಬಂದು ತನಿಖೆ ಮಾತು ಕೇಳಿ ಬಂದಾಗ 6 ತಿಂಗಳ ನಂತರ ಆ ರೆಫ್ರಿಜಿರೇಟರ್‍‌ಗಳನ್ನು ಪೂರೈಕೆ ಮಾಡಿ ಮುಚ್ಚಿ ಹಾಕುವ ಹುನ್ನಾರ ನಡೆಸಿದೆ.

ಫೋಟೊ ಸಾಕ್ಷ್ಯ ಮತ್ತು ತಪಾಸಣಾ ವರದಿ ಇಲ್ಲದೆ ₹71.50 ಕೋಟಿ ಪಾವತಿ

ಟೆಂಡರ್ ಅಧಿಸೂಚನೆಯ ಪ್ರಕಾರ, ವೆಂಡರ್‍‌ಗಳು ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಮತ್ತು ಇಲಾಖೆಯಿಂದ ಪ್ರಮಾಣೀಕೃತ ವಿತರಣಾ ಚಲನ್‌ಗಳು, ತೃಪ್ತಿದಾಯಕ ಪ್ರಮಾಣಪತ್ರಗಳು ಮತ್ತು ಇತರ ಸಂಬಂಧಿತ ದಾಖಲೆಗಳನ್ನು ಸ್ವೀಕರಿಸಿದ ನಂತರವೇ ಅವರಿಗೆ ಬಿಲ್ ಮಾಡಲಾಗುತ್ತದೆ. ಅಂದರೆ ಪೂರೈಸಿದ ಸರಕುಗಳ ಫೋಟೋಗಳು, ವಿತರಣಾ ಚಲನ್‌ಗಳು ಇತ್ಯಾದಿಗಳನ್ನು ಸಲ್ಲಿಸಬೇಕು ಎಂದು ಷರತ್ತು ವಿಧಿಸಲಾಗಿದೆ.

ಆದರೆ 304 ಪ್ರಕರಣಗಳ ಪೈಕಿ 95 ಪ್ರಕರಣಗಳ 71.50 ಕೋಟಿ ರೂ. ಮೌಲ್ಯದ ಸರಕು ಪೂರೈಕೆ ಸರಬರಾಜಿನ ಫೋಟೊ ಸಂಗ್ರಹಿಸದೆ ಪಾವತಿ ಮಾಡಿರುವುದು ಮತ್ತು ಡೆಲಿವರಿ ಚಲನ್‌ಗಳಲ್ಲಿ ಮಾತ್ರ ಪಾವತಿ ಮಾಡಿರುವುದು ಗಮನಕ್ಕೆ ಬಂದಿದೆ. ಅಲ್ಲದೆ 95 ಪ್ರಕರಣಗಳ ಪೈಕಿ 87 ರಲ್ಲಿ ಮೂರನೇ ವ್ಯಕ್ತಿಯ ತಪಾಸಣೆ ನಡೆಸಿಲ್ಲ.

ಮೂರನೇ ವ್ಯಕ್ತಿಯಿಂದ ಪರಿಶೀಲನೆ ನಡೆಸಲಾಗಿದೆ ಎಂದು ನಕಲಿ ವರದಿಯ ಮೇಲೆ ಸರಕುಗಳಿಗೆ ₹9.98 ಕೋಟಿ ಪಾವತಿ
ಎಸ್ಎಲ್ವಿ ಟ್ರೇಡಿಂಗ್ ಕಾರ್ಪೋರೇಷನ್ ಮತ್ತು ನ್ಯೂಜಿನ್ ಸೆಕ್ಯುರಿಟಿ ಸಲ್ಯೂಷನ್ ಎಲ್ಎಲ್ಪಿ ಎಂಬ ಪೂರೈಕೆದಾರರು ಮೂರನೇ ವ್ಯಕ್ತಿಯ ತಪಾಸಣೆ ನಡೆಸದೇ ನಕಲಿ ವರದಿ ತಯಾರಿಸಿ, ಫೋರ್ಜರಿ ಮಾಡಿ ಕಳಪೆ ಗುಣಮಟ್ಟದ ಸರಕುಗಳನ್ನು ಪೂರೈಸುವ ಮೂಲಕ 9.98 ಕೋಟಿ ರೂ ಹಣ ಪಡೆದಿದ್ದಾರೆ. ಇದು ನಿಯಮಗಳ ವಿರುದ್ಧ ಎಂದು ವರದಿ ಹೇಳಿದೆ.

ನಕಲಿ ಬಿಲ್‌ಗಳು ಮೇಲೆ ₹10.56 ಕೋಟಿ ಪಾವತಿ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮನವಿಯಂತೆ, KEONICS 192 “ಡಿಜಿಟಲ್ ಲರ್ನಿಂಗ್ ಕ್ಲಾಸ್ ರೂಂ” ಘಟಕಗಳನ್ನು ಅನ್ನು ರೂ. ಪ್ರತಿ ಘಟಕಕ್ಕೆ 4,25,500 ರೂ.ನಂತೆ ಪೂರೈಸಲು ಒಪ್ಪಿಕೊಂಡಿತ್ತು.

ದಾಖಲೆಗಳ ಪರೀಕ್ಷಾ ಪರಿಶೀಲನೆಯಲ್ಲಿ 7 ಆರ್ಡರ್‍‌ಗಳನ್ನು SKR ಇನ್ಫ್ರಾಸ್ಟ್ರಕ್ಚರ್ಸ್ ಮತ್ತು 7 ಆರ್ಡರ್‍‌ಗಳನ್ನು ನ್ಯೂಜಿನ್ ಸೆಕ್ಯುರಿಟಿ ಸಲ್ಯೂಷನ್ ಪೂರೈಕೆದಾರರಿಗೆ ನೀಡಿರುವುದು ಗಮನಕ್ಕೆ ಬಂದಿದೆ. ಆದರೆ ಆ ಸಂಸ್ಥೆಗಳು ಸರಕು ಪೂರೈಸುವ ಮೊದಲೇ ಮೂರನೇ ವ್ಯಕ್ತಿಯ ತಪಾಸಣೆ ನಡೆಸಿವೆ. ದಿನಾಂಕವನ್ನು ನಮೂದಿಸದೆ ಡೆಲಿವರಿ ಚಲನ್‌ಗಳು/ಸ್ವೀಕೃತಿಗಳನ್ನು ಸಲ್ಲಿಸಲಾಗಿದೆ ಮತ್ತು GPS ಫೋಟೋಗಳ ಬದಲಿಗೆ ಶಾಲೆಯ ಹೆಸರನ್ನು ನಮೂದಿಸದೆ ಸಾಮಾನ್ಯ ಫೋಟೋಗಳನ್ನು ಲಗತ್ತಿಸಿ ಬಿಲ್ ಪಡೆದಿವೆ.
ಆನಂತರ ಮತ್ತೊಂದು ಸೆಟ್ ನಕಲಿ ರಶೀದಿಗಳು ಮತ್ತು ಫೋಟೊಗಳನ್ನು ಸಲ್ಲಿಸಿ ಅದಕ್ಕೂ ಬಿಲ್ ಪಡೆದಿವೆ. ಆ ಮೂಲಕ ಸಮರ್ಪಕ ಸರಕು ಪೂರೈಕೆ ಮಾಡದೇ ನಕಲಿ ಬಿಲ್‌ಗಳ ಮೂಲಕ ಸರ್ಕಾರಕ್ಕೆ ಹತ್ತು ಕೋಟಿ ರೂಗಳಿಗೂ ಹೆಚ್ಚಿನ ನಷ್ಟ ಉಂಟು ಮಾಡಿವೆ.

ಕೆಲಸ ಮಾಡದೇ ಬಿಲ್ ಪಾವತಿ

26 ಡಿಜಿಟಲ್ ಲರ್ನಿಂಗ್ ಕ್ಲಾಸ್ ರೂಂ ಅನ್ನು ಪೂರೈಸಿದ್ದೇವೆ ಎಂದು ಫೋಟೊಗಳನ್ನು ಸಲ್ಲಿಸಿ ಬಿಲ್ ಪಡೆಯಲಾಗಿದೆ. ಆದರೆ ಯಾವುದೇ ಕೆಲಸ ಮಾಡಿಲ್ಲ. ಆದರೂ 1,25,97,000 ಹಣವನ್ನು ಕಿಯೋನಿಕ್ಸ್ ಪಾವತಿ ಮಾಡಿದೆ!

ಪ್ರೇರಣ ಎಂಟರ್ಪ್ರೈಸೆಸ್ ಮತ್ತು ಪ್ರಾಜೆಕ್ಟ್ ಕಮ್ಯುನಿಕೇಷನ್ ಎಂಬ ಸಂಸ್ಥೆಯು 2021-22 ರಲ್ಲಿ ಸಿಸಿಟಿವಿ ಹಾಕುತ್ತೇವೆ ಎಂದು ಹೇಳಿ ನಕಲಿ ಬಿಲ್ ತೋರಿಸಿ ಯಾವುದೇ ಸಿಸಿಟಿವಿ ಹಾಕದೇ 4.43 ಕೋಟಿ ರೂ ಹಣದ ಬಿಲ್ ಪಡೆದು ಮೋಸವೆಸಗಿದೆ. ಕ್ವಾಲ್ಜೆನ್ ಸಿಸ್ಟಮ್ಸ್, ಪ್ರೆಸ್ಟೀಜ್ ಎಂಟರ್ಪ್ರೈಸ್, ಹುನ್ನಾರ್ವಿ ಟೆಕ್ನಾಲಜೀಸ್ ಪ್ರೈ. ಲಿಮಿಟೆಡ್, ಶ್ರೀ ಮಾತೃಶಕ್ತಿ ಸಲ್ಯೂಷನ್ಸ್ ಪ್ರೈವೆಟ್ ಲಿಮಿಟೆಡ್, RITES ಸೇರಿದಂತೆ ಹಲವು ಪೂರೈಕೆದಾರ ವೆಂಡರ್‍‌ಗಳು ಈ ರೀತಿಯ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಒಂದೇ ವಸ್ತವಿಗೆ ಎರಡು ಮೂರು ರೀತಿಯ ದರ ವಿಧಿಸಿರುವುದು, ಒಂದೇ ವಸ್ತುವನ್ನು ಒಂದೇ ದಿನ ಬೇರೆ ಬೇರೆ ವೆಂಡರ್‍‌ಗಳಿಂದ ಒಂದೇ ದರಕ್ಕೆ ಖರೀದಿಸಿರುವುದು ಸೇರಿದಂತೆ ಹತ್ತಾರು ಅವ್ಯವಹಾರ, ಅಕ್ರಮಗಳು ನಡೆದಿವೆ, ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಮಹಾಲೇಖಪಾಲರ ವರದಿ ಹೇಳಿದೆ.

ಮಹೇಶ್ವರ್ ರಾವ್ ತನಿಖಾ ಸಮಿತಿ

ಮಹಾಲೇಖಪಾಲರ ವರದಿಯು 300 ಕೋಟಿ ಅವ್ಯವಹಾರ ನಡೆದಿದೆ ಎಂದು ವರದಿ ನೀಡಿದ ನಂತರ ಸರ್ಕಾರ ನಿವೃತ್ತ ಐಎಎಸ್ ಅಧಿಕಾರಿ ಶಂಭು ದಯಾಳ್ ಮೀನಾ ಅಧ್ಯಕ್ಷತೆಯಲ್ಲಿ 2024ರ ಫೆಬ್ರವರಿಯಲ್ಲಿಯೇ ತನಿಖಾ ಸಮಿತಿ ರಚಿಸಿ ಆದೇಶ ಹೊರಡಿಸಲಾಗಿತ್ತು. ಆದರೆ, ಅವರು ತಮ್ಮ ತಂದೆಯ ಅನಾರೋಗ್ಯದ ಕಾರಣ ಹೇಳಿ ಜವಾಬ್ದಾರಿ ತೆಗೆದುಕೊಳ್ಳಲಿಲ್ಲ. ನಂತರ ನಿವೃತ್ತ ಐಎಎಸ್ ಅಧಿಕಾರಿ ನರಸಿಂಹರಾಜು ಅವರನ್ನು ನೇಮಿಸಲಾಯಿತು. ಅವರೂ ಸಹ ವೈಯಕ್ತಿಕ ಕಾರಣ ಹೇಳಿ ಹಿಂದೆ ಸರಿದರು. ಕೊನೆಗೆ ಮಹೇಶ್ವರ ರಾವ್ ಅವರಿಗೆ ಈ ಅಕ್ರಮಗಳ ತನಿಖೆಯ ಹೊಣೆ ನೀಡಲಾಗಿದೆ.

ಈ ನಾಲ್ಕು ವರ್ಷಗಳಲ್ಲಿ ಕಿಯೋನಿಕ್ಸ್‌ನಲ್ಲಿ ನಡೆದಿರುವ ಖರೀದಿಯಲ್ಲಿ ನಿಯಮಗಳನ್ನು ಪಾಲಿಸಲಾಗಿದೆಯೇ? ಸಾಮಗ್ರಿಗಳು ಸಮರ್ಪಕವಾಗಿ ಪೂರೈಕೆ ಆಗಿದೆಯೇ? ಅವುಗಳ ಗುಣಮಟ್ಟ ತೃಪ್ತಿಕರವಾಗಿದೆಯೇ? ನಿಗದಿತ ಮಾನದಂಡಗಳಿಗೆ ಅನುಗುಣವಾಗಿಯೇ ಖರೀದಿ ಪ್ರಕ್ರಿಯೆಗಳು ನಡೆದಿವೆಯೇ? ಹಣ ಪಾವತಿ ಕಾನೂನುಬದ್ಧವಾಗಿದೆಯೆ ಎಂಬುದರ ಕುರಿತು ಮಹೇಶ್ವರ್ ರಾವ್ ಸಮಿತಿ ತನಿಖೆ ನಡೆಸುತ್ತಿದೆ.

ಈ ವರದಿ ಓದಿದ್ದೀರಾ?: ನಿವೃತ್ತರಾಗುವ ಮುನ್ನ ಮುಖ್ಯ ಚುನಾವಣಾ ಆಯುಕ್ತರು ಕೆಲವು ಉತ್ತರಗಳನ್ನು ನೀಡಬೇಕು

ಅದರ ಪ್ರಾಥಮಿಕ ವರದಿಯಲ್ಲಿಯೇ ಕಿಯೋನಿಕ್ಸ್‌ನಲ್ಲಿ ಕೆಲವರಿಗೆ ಸರ್ಕಾರದ ಆದೇಶ ಇಲ್ಲದೆಯೂ ಲಕ್ಷಾಂತರ ರೂಪಾಯಿಯ ಬಿಲ್ ಪಾವತಿಯಾಗಿದೆ. ಮಾರುಕಟ್ಟೆ ದರಕ್ಕಿಂತ ಹತ್ತಾರು ಪಟ್ಟು ಹೆಚ್ಚು ಬಿಲ್ ಪಡೆದಿದ್ದಾರೆ. ಕೆಲವು ಪ್ರಕರಣಗಳಲ್ಲಿ ಮೂರನೇ ಸಂಸ್ಥೆಯಿಂದ ಮೌಲ್ಯಮಾಪನ ನಡೆದಿಲ್ಲ. ಬಿಲ್‌ಗಳನ್ನು ಕೂಲಂಕಷವಾಗಿ ಪರಿಶೀಲಿಸದೆ ಮತ್ತು ತರಾತುರಿಯಲ್ಲಿ ಹಣ ಪಾವತಿಸಲಾಗಿದೆ. ವೆಂಡರ್‍‌ದಾರರು ಜಿಎಸ್ಟಿ ಕಟ್ಟಿದ ಪತ್ರಗಳೂ ನಕಲಿಗಳೆಂದು ಗೊತ್ತಾಗಿದೆ. ಈ ಅವ್ಯವಹಾರಗಳ ಕಾರಣಕ್ಕೆ, ಕಿಯೋನಿಕ್ಸ್‌ಗೆ ನೀಡಿದ್ದ 4ಜಿ ವಿನಾಯಿತಿಯನ್ನೇ ರದ್ದು ಪಡಿಸಲಾಗಿದೆ. ಅಲ್ಲದೇ ಗುಣಮಟ್ಟವನ್ನು ಖಾತ್ರಿಪಡಿಸಲು ಮತ್ತು ಮಧ್ಯವರ್ತಿ ವೆಂಡರ್‍‌ಗಳಿಂದ ಸರ್ಕಾರಕ್ಕೆ ಆಗುವ ನಷ್ಟ ತಪ್ಪಿಸಲು ಇಲಾಖೆಗಳೇ ನೇರವಾಗಿ ವಿಶ್ವಾಸಾರ್ಹ ಕಂಪನಿಗಳಿಂದ ಸರಕು ಮತ್ತು ಸೇವೆಗಳನ್ನು ಖರೀದಿಸಲು ನೆರವಾಗುವಂತಹ ಪಾಲಿಸಿ ತರಲಾಗುತ್ತಿದೆ ಎಂದು ಐಟಿ, ಬಿಟಿ ಇಲಾಖೆ ಹೇಳಿದೆ.

ಈ ಕುರಿತು ಐಟಿ-ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ್‌ ಖರ್ಗೆಯವರು ಈದಿನ.ಕಾಂ ಜೊತೆ ಮಾತನಾಡಿ, “ಇಂದು ಕಿಯೋನಿಕ್ಸ್ ವೆಂಡರ್‌ಗಳ ಬಿಲ್ ಬಾಕಿ ಉಳಿದಿರುವುದಕ್ಕೆ ಹಿಂದಿನ ಭ್ರಷ್ಟ ಬಿಜೆಪಿ ಸರ್ಕಾರವೇ ನೇರ ಕಾರಣ. ಕೇಂದ್ರ ಸರ್ಕಾರದ ಅಕೌಂಟೆಂಟ್ ಜನರಲ್ ಹಾಗೂ ರಾಜ್ಯ ಸರ್ಕಾರ ನೇಮಿಸಿರುವ ಹಿರಿಯ ಅಧಿಕಾರಿ ಮಹೇಶ್ವರ ರಾವ್‌ ನೇತೃತ್ವದ ಸಮಿತಿಯು ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕಿಯೋನಿಕ್ಸ್‌ನಲ್ಲಿ 500 ಕೋಟಿ ರೂ ಹಗರಣವಾಗಿದ್ದು, ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ತೀವ್ರ ನಷ್ಟವಾಗಿದೆ ಎಂದು ಪ್ರಾಥಮಿಕ ವರದಿ ಕೊಟ್ಟಿರುವುದರಿಂದ ನಾವು ಈ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲೇಬೇಕಿದೆ” ಎಂದರು.

ಮುಂದುವರಿದು ”ಜನಸಾಮಾನ್ಯರ ಬೆವರಿನ ನೂರಾರು ಕೋಟಿ ತೆರಿಗೆ ಹಣದ ಪ್ರತಿ ರೂಪಾಯಿಗೂ ಸಮರ್ಪಕ ಲೆಕ್ಕ ಇಡುವುದು ನಮ್ಮ ಹೊಣೆ ಹಾಗೂ ಅತ್ಯಗತ್ಯ ಕರ್ತವ್ಯ, ಆ ಕರ್ತವ್ಯವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಆದಷ್ಟು ಬೇಗ ತನಿಖೆ ಮುಗಿಸುವುದು ನಮ್ಮ ಉದ್ದೇಶವಾಗಿದೆ. ಇಡೀ ಪ್ರಕರಣದಲ್ಲಿ ಯಾರಾದರೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೆ, ಅವರಿಗೆ ಬಿಲ್‌ ಪಾವತಿ ಮಾಡಿಯೇ ಮಾಡುತ್ತೇವೆ. ಆದರೆ ಸರ್ಕಾರಕ್ಕೆ ಮೋಸ ಎಸಗಿದವರ ವಿರುದ್ದ ಕ್ರಮ ಕೈಗೊಳ್ಳದೇ ಅವರಿಗೂ ಬಿಲ್ ಪಾವತಿ ಮಾಡಲು ಸಾಧ್ಯವೇ ಇಲ್ಲ. ಇಂದು ಅವರಲ್ಲಿ ಕೆಲವರು ಬ್ಲಾಕ್ ಮೇಲೆ ಮೊರೆ ಹೋಗಿದ್ದು, ಭ್ರಷ್ಟರ ಬ್ಲಾಕ್ ಮೇಲ್ ತಂತ್ರಗಳಿಗೆ ಸರ್ಕಾರ ಬಗ್ಗುವುದಿಲ್ಲ” ಎಂದರು.

ಭ್ರಷ್ಟಾಚಾರ ವಿರೋಧಿ ಹೋರಾಟಗಾರರ ಅಭಿಪ್ರಾಯಗಳು

ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷರಾದ ರವಿಕೃಷ್ಣಾರೆಡ್ಡಿಯವರು ಈದಿನ.ಕಾಂ ಜೊತೆ ಮಾತನಾಡಿ, ”ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ನವರು ಮಾಡಿದ್ದ 40% ಕಮಿಷನ್ ವಿಚಾರ ಅಸತ್ಯವೇನಲ್ಲ. ಅದೇ ರೀತಿ ಈಗಲೂ ಕಮಿಷನ್ ಇಲ್ಲದೇ ಬಿಲ್ ಪಾವತಿಯಾಗುತ್ತಿಲ್ಲ ಎನ್ನುವುದು ಸಹ ಸತ್ಯವೆ. 40% ಕಮಿಷನ್ ವಿಚಾರವಾಗಿ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರ ಸರ್ಕಾರ ಇದುವರೆಗೂ ಆ ತನಿಖೆ ಪೂರ್ಣಗೊಳಿಸಿ, ತಪ್ಪಿತಸ್ಥರನ್ನು ಕೋರ್ಟ್ ಕಟಕಟೆಗೆ ತಂದು ನಿಲ್ಲಿಸಿಲ್ಲ ಮತ್ತು ಜೈಲಿಗೆ ಕಳಿಸಿಲ್ಲ. ಈಗ ಎದ್ದು ಕಾಣಿಸುತ್ತಿರುವುದೇನೆಂದರೆ ಈ ಸರ್ಕಾರವೂ ಸಹ ಹಿಂದಿನ ಸರ್ಕಾರದವರಿಗೆ ಕೊಟ್ಟಂತೆ ನಮ್ಮ ಸರ್ಕಾರದವರಿಗೂ ಕೊಟ್ಟರೆ ಮಾತ್ರ ಬಿಲ್ ಪಾವತಿ ಮಾಡುತ್ತೇವೆ ಎಂದು ವ್ಯವಹಾರ ಕುದುರಿಸುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದಿದೆ. ಹಾಗಾಗಿ ಈ ಕೂಡಲೇ ಸಿದ್ದರಾಮಯ್ಯನವರ ಸರ್ಕಾರ ಹಿಂದೆ ಹೇಳಿದ್ದಂತೆ ಹಿಂದಿನ ಭ್ರಷ್ಟಾಚಾರಗಳ ತನಿಖೆಯನ್ನು ಪೂರ್ಣಗೊಳಿಸಬೇಕು. ಜನರ ತೆರಿಗೆ ಹಣಕ್ಕೆ ಮೋಸ ಮಾಡಿದವರಿಗೆ ಶಿಕ್ಷೆ ಆಗುವಂತೆ ಮಾಡಬೇಕು. ನಂತರ ಎಲ್ಲಾ ಭ್ರಷ್ಟಾಚಾರಗಳನ್ನು ನಿಲ್ಲಿಸಲು ಪಾರದರ್ಶಕವಾಗಿ ಟೆಂಡರ್ ಪ್ರಕ್ರಿಯೆ ಮತ್ತು ಗುಣಮಟ್ಟದ ಕಾಮಗಾರಿ, ಪೂರೈಕೆ ನಡೆಸುತ್ತಿದೆಯೇ ಎಂಬುದನ್ನು ಪ್ರತಿಯೊಂದು ಹಂತದಲ್ಲಿಯೂ ಪರಿಶೀಲಿಸಿ, ನಿಗದಿತ ಕಾಲಾವಧಿಯಲ್ಲಿ ಬಿಲ್ ಪಾವತಿಸುವ ಪ್ರಕ್ರಿಯೆಯನ್ನು ಜಾರಿ ಮಾಡಬೇಕೆಂದು ಒತ್ತಾಯಿಸುತ್ತೇನೆ” ಎಂದರು.

ಈ ವರದಿ ಓದಿದ್ದೀರಾ?: ಅಮೆರಿಕನ್ನರಲ್ಲಿ ಭಯ ಹುಟ್ಟಿಸಿದ ಟ್ರಂಪ್ ಕಾರ್ಯಕಾರಿ ಆದೇಶಗಳು: ಸರ್ವಾಧಿಕಾರಿ ಆಡಳಿತಕ್ಕೆ ನಾಂದಿಯೇ?

ಜನಾಧಿಕಾರ ಸಂಘರ್ಷ ಪರಿಷತ್ ಸಹ ಅಧ್ಯಕ್ಷರಾದ ಆದರ್ಶ್ ಆರ್ ಅಯ್ಯರ್‍‌ರವರು ಮಾತನಾಡಿ, ”ಯಾವುದೇ ಪೂರೈಕೆದಾರರು ಕಾನೂನುಬದ್ಧವಾಗಿ ಕೆಟಿಟಿಪಿ ಕಾಯ್ದೆಯ ಅನುಸಾರ ಕೆಲಸ ಮಾಡಬೇಕು. ಆದರೆ ಕಳೆದ ಹಲವು ವರ್ಷಗಳಿಂದ ಕೆಟಿಟಿಪಿ ಕಾಯ್ದೆಯ ಉಲ್ಲಂಘನೆ ಎಗ್ಗಿಲ್ಲದೆ ನಡೆಯುತ್ತಿದೆ. ಹಾಗಾಗಿ ಈ ಭ್ರಷ್ಟಾಚಾರವನ್ನು ತಡೆಯಲೇಬೇಕು. ಆ ರೀತಿಯ ತಪ್ಪುಗಳು ನಡೆದಿವೆ ಎಂದಾದರೆ ತನಿಖೆ ನಡೆಯಲೇಬೇಕು. ಭ್ರಷ್ಟಾಚಾರ ಮುಕ್ತ ಮಾಡುವುದು ಬಹಳ ಮುಖ್ಯವಾದ ವಿಚಾರವಾಗಿದ್ದು, ಆ ನಿಟ್ಟಿನಲ್ಲಿ ಈ ಸರ್ಕಾರ ತೆಗೆದುಕೊಂಡಿರುವ ತನಿಖೆ ನಡೆಸಿ, ನಂತರ ಬಿಲ್ ಪಾವತಿ ಮಾಡಿ ಎಂಬ ನಿಲುವು ಸರಿಯಾಗಿದೆ. ಆದರೆ ಸರ್ಕಾರ ಯಾವುದೇ ಕಾರಣಕ್ಕೂ ತನಿಖೆಯನ್ನು ಬಹಳ ತಡ ಮಾಡಬಾರದು. ಏಕೆಂದರೆ ತಪ್ಪು ಮಾಡಿರುವವರ ಜೊತೆ ಪ್ರಾಮಾಣಿಕ ಕೆಲಸ ಮಾಡಿದವರಿಗೂ ತೊಂದರೆಯಾಗಬಾರದು. ಜಸ್ಟಿಸ್ ಡಿಲೈಲ್ಡ್, ಜಸ್ಟಿಸ್ ಡಿನೈಡ್ ಎಂಬ ರೀತಿ ಆಗಬಾರದು. ಸರ್ಕಾರ ತನಿಖೆಯ ವಿಚಾರದಲ್ಲಿ ಸರಿ ದಾರಿಯಲ್ಲಿದೆ. ಆದರೆ ತಡವಾದರೆ ಹೆಚ್ಚು ತಪ್ಪಾಗುವ ಸಂಭವವಿರುತ್ತದೆ. ಆ ತಪ್ಪು ಮಾಡದೇ ಸಕಾಲದಲ್ಲಿ ಭ್ರಷ್ಟಾಚಾರವನ್ನು ಮುಕ್ತ ಮಾಡಿದರೆ ಬಹಳ ಒಳ್ಳೆಯದಾಗುತ್ತದೆ” ಎಂದರು.

WhatsApp Image 2025 01 15 at 8.29.17 PM

ಪರಿಹಾರವೇನು?

ಮಹಾಲೇಖಪಾಲರ ವರದಿ ಮತ್ತು ಮಹೇಶ್ವರ್‌ ರಾವ್ ಸಮಿತಿಯ ಪ್ರಾಥಮಿಕ ಅಂಶಗಳನ್ನು ಗಮನಿಸಿದಾಗ ಮೇಲ್ನೋಟಕ್ಕೆ ಹಲವು ಅಕ್ರಮಗಳು ನಡೆದಿರುವುದು ಕಂಡುಬಂದಿದೆ. ಹತ್ತಾರು ಸಂಸ್ಥೆಗಳು ನಿಯಮಗಳನ್ನು ಗಾಳಿಗೆ ತೂರಿ, ಕಾನೂನು ಬಾಹಿರವಾಗಿ ವರ್ತಿಸಿವೆ. ಸರ್ಕಾರದ ಹಣವನ್ನು ಸುಳ್ಳು ದಾಖಲೆ, ನಕಲಿ ಬಿಲ್ ತೋರಿಸಿ ಲಪಟಾಯಿಸಿರುವುದು ಎದ್ದು ಕಾಣುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ತನಿಖೆ ನಡೆಸುತ್ತಿರುವುದು ಸಮರ್ಪಕವಾಗಿದ್ದು, ಅದನ್ನು ಆದಷ್ಟು ಚುರುಕುಗೊಳಿಸಬೇಕಿದೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಿದೆ. ಇದರಲ್ಲಿ ವೆಂಡರ್‍‌ದಾರರು ಮಾತ್ರವಲ್ಲದೇ ಕಿಯೋನಿಕ್ಸ್ ಸಿಬ್ಬಂದಿ, ಅಧಿಕಾರಿಗಳು ಸಹ ಭಾಗಿಯಾಗಿರುವುದು ಕಂಡುಬಂದಿದ್ದು ಅವರೆಲ್ಲರ ಮೇಲೂ ಕ್ರಮ ಜರುಗಬೇಕಿದೆ. ಈ ಕೆಲಸ ತುರ್ತಿನದಾಗಿದೆ.

ಇದೇ ಸಂದರ್ಭದಲ್ಲಿ ಯಾವುದೇ ಅಕ್ರಮ ಎಸಗದ ಸಣ್ಣ ಪುಟ್ಟ ವೆಂಡರ್‍‌ಗಳ ಬಿಲ್ ಸಹ ಬಾಕಿ ಇವೆ. ಹಾಗಾಗಿ ಆದಷ್ಟು ಬೇಗ ತನಿಖೆ ಮುಗಿದು ಅಂತಹ ಪೂರೈಕೆದಾರರ ಬಿಲ್‌ಗಳನ್ನು ಬೇಗನೇ ಬಗೆಹರಿಸಬೇಕಿದೆ. ಆದರೆ ತಪ್ಪು ಮಾಡಿದವರು ಒಬ್ಬರೂ ಸಹ ತಪ್ಪಿಸಿಕೊಳ್ಳಲು ಸರ್ಕಾರ ಬಿಡಬಾರದು. ಜನರ ತೆರಿಗೆಯ ಹಣವನ್ನು ಈ ರೀತಿ ನುಂಗುವುದು ಅಪರಾಧ ಎಂಬ ಸಂದೇಶ ನಾಡಿನಾದ್ಯಂತ ತಲುಪಬೇಕು. ಈ ನಿಟ್ಟಿನಲ್ಲಿ ವೆಂಡರ್ಸ್ ಅಸೋಷಿಯೇಶನ್ ಸಹ ತನಿಖೆಗೆ ಸಹಕರಿಸಬೇಕು. ದಯಾಮರಣದಂತಹ ಮಾತುಗಳನ್ನು ಆಡದೇ ತನಿಖೆ ಬೇಗ ಮುಗಿಸುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕು. ಅದಕ್ಕಾಗಿ ಪ್ರಾಮಾಣಿಕವಾಗಿ ಹೋರಾಟ ನಡೆಸಬೇಕೆ ಹೊರತು ಆತ್ಮಹತ್ಯೆಯಂತಹ ಒತ್ತಡಗಳು ಸರಿಯಾದ ನಡೆಯಲ್ಲ. ಯಾರಾದರೂ ಕಮಿಷನ್ ಕೇಳಿದ್ದರೆ, ಕಿರುಕುಳ ಕೊಟ್ಟಿದ್ದರೆ ಸಾಕ್ಷಿ ಸಮೇತ ದೂರು ಸಲ್ಲಿಸಬೇಕು. ಅದೇ ರೀತಿ ತನಿಖೆಗೆ ಸರ್ಕಾರ ಬಯಸುವ ತಮ್ಮಲ್ಲಿ ಇರುವ ದಾಖಲೆಗಳನ್ನು ಒದಗಿಸಬೇಕು. ಆ ಮೂಲಕ ಈ ಗೊಂದಲ ಬಗೆಹರಿದು ಪ್ರಾಮಾಣಿಕರಿಗೆ ಬಿಲ್ ಪಾವತಿಯಾಗಬೇಕು. ತಪ್ಪಿತಸ್ಥರು ಶಿಕ್ಷೆ ಅನುಭವಿಸಬೇಕು. ಇದರಿಂದ ಇತರ ಇಲಾಖೆಗಳ ಭ್ರಷ್ಟಾಚಾರಕ್ಕೂ ಕಡಿವಾಣ ಬೀಳಬೇಕಿದೆ. ಆಗ ಮಾತ್ರ ಜನರ ದುಡ್ಡು ಉಳಿದು, ಅಭಿವೃದ್ದಿ ಕಾರ್ಯಗಳಿಗೆ ಬಳಸಲು ಸಾಧ್ಯ.

ಇದಿಷ್ಟು ವಿಚಾರ. ಇನ್ನು ನಾಡಿನ ಜನತೆ ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅವರಿಗೆ ಬಿಟ್ಟಿದ್ದು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಮುತ್ತುರಾಜು
ಮುತ್ತುರಾಜು
ಪತ್ರಕರ್ತ, ಲೇಖಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X