ವಿಕೃತ ಮನಸ್ಥಿತಿಯುಳ್ಳ ಪೋಷಕರು ತಮ್ಮ ಮಗಳನ್ನು ವೇಶ್ಯಾವಾಟಿಕೆಗೆ ದೂಡಿದ್ದು, ಆಕೆಯ ಅಶ್ಲೀಲ ಫೋಟೋಗಳು ಮತ್ತು ವಿಡಿಯೋಗಳನ್ನು ಚಿತ್ರೀಕರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸಂತ್ರಸ್ತ ಅಪ್ರಾಪ್ತ ಬಾಲಕಿಯನ್ನು ರಕ್ಷಿಸಲಾಗಿದ್ದು, ಆಕೆಯ ತಂದೆ-ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಚೆನ್ನೈನಲ್ಲಿ ಘಟನೆ ನಡೆದಿದೆ. ಹಣ ಸಂಪಾದಿಸುವುದಕ್ಕಾಗಿ ತಮ್ಮ ಮಗಳ ಅಶ್ಲೀಲ ಫೋಟೋಗಳು ಮತ್ತು ವಿಡಿಯೋಗಳನ್ನು ಚಿತ್ರೀಕರಿಸಿ, ಇಂಟರ್‌ನೆಟ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ದಂಪತಿಗಳು ಅಪ್ರಾಪ್ತ ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಇಂಟರ್‌ನೆಟ್‌ನಲ್ಲಿ ಅಪ್‌ಲೋಡ್ ಮಾಡುತ್ತಿರುವ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಪೊಲೀಸರಿಗೆ ದೂರು ನೀಡಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ದಂಪತಿಯನ್ನು ಬಂಧಿಸಿದ್ದಾರೆ. ಅವರ ಪೋನ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಫೋನ್‌ಗಳಲ್ಲಿ ಅಪ್ರಾಪ್ತ ಮಕ್ಕಳ ಅಶ್ಲೀಲ ವಿಡಿಯೋಗಳು ಕಂಡುಬಂದಿವೆ.
“ಅಪ್ರಾಪ್ತ ಹೆಣ್ಣು ಮಕ್ಕಳ ಒಪ್ಪಿಗೆ ಇಲ್ಲದೆ, ವಿಡಿಯೋಗಳನ್ನು ಚಿತ್ರೀಕರಿಸಿದ್ದಾರೆ. ಹೆಚ್ಚಿನ ತನಿಖೆಯಲ್ಲಿ, ದಂಪತಿಗಳು ತಮ್ಮ ಸ್ವಂತ ಮಗಳನ್ನೂ ವೇಶ್ಯಾವಾಟಿಕೆಗೆ ದೂಡಿರುವುದು ಬೆಳಕಿಗೆ ಬಂದಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
ದಂಪತಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತ ಬಾಲಕಿಯನ್ನು ಸರ್ಕಾರಿ ಆರೈಕೆ ಕೇಂದ್ರದಲ್ಲಿ ಇರಿಸಲಾಗಿದೆ. ಕೌನ್ಸೆಲಿಂಗ್ ಜೊತೆಗೆ ಇತರ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.