ತೀವ್ರ ಚಳಿಯನ್ನು ನಿಭಾಯಿಸಲು ‘ಅಗ್ಗಿಸ್ಟಿಕೆ’ಗೆ (ಮನೆಯಲ್ಲಿ ಬೆಂಕಿ ಉರಿಸುವ ಬಾಣಲೆ) ಬೆಂಕಿ ಹೊತ್ತಿಸಿ, ಅದರ ಬಳಿ ಮಲಗಿದ್ದ ದಂಪತಿಗಳು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಉತ್ತರಾಖಂಡದ ಭಿಲಂಗಣ ಪ್ರದೇಶದಲ್ಲಿ ನಡೆದಿದೆ.
ಭಿಲಂಗಣ ಪ್ರದೇಶದ ದ್ವಾರಿ-ಥಪ್ಲಾ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ದಂಪತಿಗಳಾದ ಮದನ್ ಮೋಹನ್ ಸೆಮ್ವಾಲ್ (52) ಮತ್ತು ಅವರ ಪತ್ನಿ ಯಶೋದಾ ದೇವಿ (48) ಮದುವೆ ಸಮಾರಂಭದಲ್ಲಿ ಭಾಗವಹಿಸಲು ಗ್ರಾಮಕ್ಕೆ ಬಂದಿದ್ದರು. ತೀವ್ರ ಚಳಿಯಿದ್ದ ಕಾರಣ ಅಗ್ಗಿಸ್ಟಿಕೆ ಹೊತ್ತಿಸಿ, ಅದನ್ನು ತಮ್ಮ ಕೋಣೆಯೊಳಗೆ ಇಟ್ಟುಕೊಂಡು, ಬಾಗಿಲು-ಕಿಟಕಿಗಳನ್ನು ಮುಚ್ಚಿ ಮಲಗಿದ್ದರು. ಬೆಂಕಿಯ ಹೊಗೆ ಹೊರಹೋಗದ ಮತ್ತು ಶುದ್ಧ ಗಾಳಿ ಬಾರದ ಕಾರಣ ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ದ್ವಾರಿ-ಥಪ್ಲಾ ಗ್ರಾಮ ಆಡಳಿತಾಧಿಕಾರಿ ರಿಂಕಿ ದೇವಿ ತಿಳಿಸಿದ್ದಾರೆ.
ಮಾರನೆ ದಿನ ಬಳಗ್ಗೆ ಅವರನ್ನು ಎಬ್ಬಿಸಲು ಅವರ ಮಗ ಹೋಗಿದ್ದಾರೆ. ಆದರೆ, ಅವರು ಬಾಗಿಲು ತೆರೆಯಲಿಲ್ಲ. ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಸ್ಥಳೀಯರು ಬಾಗಿಲು ಒಡೆದು ನೋಡಿದಾಗ, ದಂಪತಿಗಳು ಹಾಸಿಗೆಯಲ್ಲಿಯೇ ಮೃತಪಟ್ಟಿರುವುದು ಕಂಡುಬಂದಿದೆ. ಅಗ್ಗಿಸ್ಟಿಕೆ ಹೊಗೆಯಿಂದ ಉತ್ಪತ್ತಿಯಾಗುವ ಕಾರ್ಬನ್ ಮಾನಾಕ್ಸೈಡ್ ಅನಿಲದಿಂದಾಗಿ ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ರಿಂಕಿ ದೇವಿ ತಿಳಿಸಿದ್ದಾರೆ.