ಈ ದಿನ ಸಂಪಾದಕೀಯ | ದಲ್ಲೇವಾಲ್ ಉಪವಾಸಕ್ಕೂ ಸ್ಪಂದಿಸದ ಮೋದಿ ಮತ್ತೆ ಮಂಡಿಯೂರುವುದು ಸನ್ನಿಹಿತ!

Date:

Advertisements
ದಲ್ಲೇವಾಲ್ ಅವರ ಆರೋಗ್ಯ ಕ್ಷೀಣಿಸುತ್ತಿರುವುದು ರೈತ ಹೋರಾಟದ ಹುರುಪನ್ನು ಬದಲಾಯಿಸುತ್ತಿದೆ. ದಲ್ಲೇವಾಲ್ ಅವರ ಬಗ್ಗೆ ಪಂಜಾಬ್-ಹರಿಯಾಣ ಸೇರಿದಂತೆ ದೇಶಾದ್ಯಂತ ಸಹಾನುಭೂತಿ ಹೆಚ್ಚುತ್ತಿದೆ. ರೈತ ಸಂಘಟನೆಗಳು ಮತ್ತೆ ಪುಟಿದೇಳುತ್ತಿವೆ. ಜನವರಿ 21ರಿಂದ ದೆಹಲಿ ಚಲೋ ಆರಂಭವಾಗಲಿದೆ.

ಸಂಯುಕ್ತ ಕಿಸಾನ್ ಮೋರ್ಚಾದ (ಎಸ್‌ಕೆಎಂ) ಸಂಚಾಲಕ ಜಗಜಿತ್ ಸಿಂಗ್ ದಲ್ಲೇವಾಲ್ ಅವರ ಉಪವಾಸ ಸತ್ಯಾಗ್ರಹ ಶನಿವಾರ 54ನೇ ದಿನ ತಲುಪಿದೆ. 2021ರಲ್ಲಿ ಕೇಂದ್ರ ಸರ್ಕಾರವೇ ಭರವಸೆ ನೀಡಿದ್ದಂತೆ ಕೃಷಿ ಉತ್ಪನ್ನಗಳಿಗೆ ಕಾನೂನು ಖಾತರಿಯೊಂದಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಆಮರಣಾಂತ ಉಪವಾಸದಿಂದಾಗಿ ಅವರ ಆರೋಗ್ಯ ಸ್ಥಿತಿ ಹದಗೆಡುತ್ತಿದೆ. ಅವರು ಉಪವಾಸ ಮುಂದುವರೆಸಿದರೆ, ಹೃದಯಾಘಾತದಂತಹ ತೀವ್ರ ಆರೋಗ್ಯ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ವೈದ್ಯರು ಹೇಳುತ್ತಿದ್ದಾರೆ.

ಈಗಾಗಲೇ ಕ್ಯಾನ್ಸರ್‌ನಿಂದ ಬದುಕುಳಿದಿರುವ ದಲ್ಲೇವಾಲ್ ವೈದ್ಯಕೀಯ ಸಹಾಯವನ್ನು ನಿರಾಕರಿಸಿದ್ದಾರೆ. ‘ನಾನು ಗೆಲ್ಲುತ್ತೇನೆ ಅಥವಾ ಸಾಯುತ್ತೇನೆ. ನನ್ನನ್ನು ಎಬ್ಬಿಸಲು ಸರ್ಕಾರಕ್ಕೆ ಬಿಡಬೇಡಿ’ ಎಂದು ರೈತರಿಗೆ ದಲ್ಲೇವಾಲ್ ತಾಕೀತು ಮಾಡಿದ್ದಾರೆ. ಈಗ, ಅವರೊಂದಿಗೆ ಇನ್ನೂ 111 ಮಂದಿ ರೈತರು ಉಪವಾಸ ಆರಂಭಿಸಿದ್ದಾರೆ.

ಹೋರಾಟಕ್ಕೆ ಸರ್ಕಾರಗಳು ಸ್ಪಂದಿಸದೇ ಇದ್ದಾಗ, ಹೋರಾಟಗಾರರ ಅಳಲು, ಆಕ್ರಂದನಗಳನ್ನು ಕೇಳದೇ ಇದ್ದಾಗ ಪ್ರತಿಭಟನೆಯ ಅಂತಿಮ ಆಯ್ಕೆ ಉಪವಾಸ ಸತ್ಯಾಗ್ರಹ. ಸ್ವಾತಂತ್ರ್ಯ ಚಳವಳಿಯಲ್ಲಿ ಗಾಂಧಿ ಅವರು ನಾಂದಿ ಹಾಡಿದ್ದ ಉಪವಾಸಕ್ಕೆ ಸಾಮ್ರಾಜ್ಯಶಾಹಿ ಬ್ರಿಟಿಷರೇ ತಲೆಬಾಗುತ್ತಿದ್ದರು. ಭಾರತವು ಸ್ವಾತಂತ್ರ್ಯಗೊಂಡು ಪ್ರಜಾಪ್ರಭುತ್ವ ಜಾರಿಯಾದ ನಂತರವು ಹಲವಾರು ಸಂದರ್ಭಗಳಲ್ಲಿ ಉಪವಾಸ ಹೋರಾಟಗಳು ನಡೆದಿವೆ. ಅದಕ್ಕೆ ಸರ್ಕಾರಗಳು ಸ್ಪಂದಿಸಿವೆ. ಭರವಸೆ ನೀಡಿವೆ. ಉಪವಾಸ ಕೈಬಿಡುವಂತೆ ಮನವಿ ಮಾಡಿವೆ. ಆದರೆ, ಹಾಲಿ ಮೋದಿ ಸರ್ಕಾರ ಉಪವಾಸದ ಹೋರಾಟಕ್ಕೂ ಸ್ಪಂದಿಸುತ್ತಿಲ್ಲ. ಉಪವಾಸವಿದ್ದು, ಸಾವು-ಬದುಕಿನ ನಡುವೆ ಹೋರಾಟ ಮಾಡುವವರನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅವರ ಆರೋಗ್ಯದ ಬಗ್ಗೆ ಕಾಳಜಿ ತೋರುತ್ತಿಲ್ಲ.

Advertisements

ದಲ್ಲೇವಾಲ್ ಅವರಿಗೆ ಅಗತ್ಯ ವೈದ್ಯಕೀಯ ಸೌಲಭ್ಯ ಒದಗಿಸುವಂತೆ ಪಂಜಾಬ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ತಾಕೀತು ಮಾಡಿದೆ. ಪಂಜಾಬ್ ಸರ್ಕಾರವು ಅವರಿಗೆ ಆರೋಗ್ಯ ನೆರವು ನೀಡಲು ಯತ್ನಿಸುತ್ತಿದೆ. ಆದರೆ, ಮೋದಿ ಸರ್ಕಾರ ಮಾತ್ರ ದಲ್ಲೇವಾಲ್ ಹೋರಾಟದ ಬಗ್ಗೆ ಈವರೆಗೂ ಕಾಳಜಿ ತೋರಿಲ್ಲ. ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ.

ಇತ್ತೀಚೆಗೆ, ಪಂಜಾಬ್ ಬಿಜೆಪಿ ಘಟಕವು ದಲ್ಲೇವಾಲ್ ಅವರಿಗೆ ಉಪವಾಸ ಸತ್ಯಾಗ್ರಹವನ್ನು ಕೈಬಿಡುವಂತೆ ಒತ್ತಾಯಿಸಲು ಅಕಲ್ ತಖ್ತ್ ಅವರನ್ನು ಸಂರ್ಪಕಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ದಲ್ಲೇವಾಲ್, ಅವರು ಪ್ರಧಾನಿ ಮೋದಿಯನ್ನು ಸಂಪರ್ಕಿಸಬೇಕೇ ಹೊರತು, ಅಕಲ್ ತಖ್ತ್ ಅವರನ್ನಲ್ಲ ಎಂದು ಹೇಳಿದರು. ಆದರೆ, ಮೋದಿ ಅವರಾಗಲೀ, ಅವರ ಸರ್ಕಾರವಾಗಲೀ ಯಾವುದೇ ರೀತಿಯಲ್ಲೂ ಸ್ಪಂದಿಸುತ್ತಿಲ್ಲ.

ರೈತ ಹೋರಾಟದಿಂದ ತಮಗೆ ಯಾವುದೇ ಹಾನಿಯೂ ಆಗುವುದಿಲ್ಲ ಎಂಬ ಹುಂಬುತನ ಬಿಜೆಪಿಯಲ್ಲಿ ಬೆಳೆದುಕೊಂಡಿದೆ. ಹರಿಯಾಣದಲ್ಲಿ ರೈತರ ಹೋರಾಟದ ಜೊತೆಗೆ, ಜಾಟ್ ಮೀಸಲಾತಿ ಆಂದೋಲನ, ಕುಸ್ತಿಪಟುಗಳ ಪ್ರತಿಭಟನೆಗಳು ಕೇಂದ್ರಬಿಂದುವಾಗಿದ್ದವು. ಆದಾಗ್ಯೂ, 2024ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಿತು. ಅಂತೆಯೇ, ರೈತ ಹೋರಾಟದ ಮತ್ತೊಂದು ಪ್ರಮುಖ ಕೇಂದ್ರವಾಗಿದ್ದ ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿಯೂ ಬಿಜೆಪಿ ಉತ್ತಮ ಪ್ರದರ್ಶನ ನೀಡಿತ್ತು.

ಜೊತೆಗೆ, ರೈತ ಹೋರಾಟದ ನಂತರವೇ 2022ರಲ್ಲಿ ಪಂಜಾಬ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲದಿದ್ದರೂ, ಸಂಪೂರ್ಣ ವಿರೋಧವಿಲ್ಲ ಎಂಬುದನ್ನು ಬಿಜೆಪಿ ಕಂಡುಕೊಂಡಿತ್ತು. ಲೋಕಸಭಾ ಚುನಾವಣೆಯಲ್ಲಿ ಪಂಜಾಬ್‌ನಲ್ಲಿ ಶೂನ್ಯ ಸಾಧನೆ ಮಾಡಿದರೂ, ಅದರ ಮತಪಾಲು ಹೆಚ್ಚಾಯಿತು. ಪಂಜಾಬ್‌ನಲ್ಲಿ ರೈತ ಹೋರಾಟಕ್ಕೆ 2020-21ರ ಸಂದರ್ಭದಲ್ಲಿದ್ದ ಸಹಾನುಭೂತಿ ಈಗ ಕಡಿಮೆಯಾಗಿದೆ ಎಂದು ಬಿಜೆಪಿ ಭಾವಿಸಿದೆ. ಇದೆಲ್ಲವೂ, ಬಿಜೆಪಿ ಭಂಡತನವನ್ನು ಗಟ್ಟಿಗೊಳಿಸಿದೆ. ಪ್ರತಿಭಟನೆ-ಹೋರಾಟಗಳು ತಮ್ಮನ್ನು ಅಧಿಕಾರದಿಂದ ದೂರ ಇಡುವುದಿಲ್ಲ ಎಂಬ ದರಹಂಕಾರಲನ್ನು ಹೆಚ್ಚಿಸಿದೆ.

ಮತ್ತೊಂದೆಡೆ, ಎಂಎಸ್‌ಪಿಗೆ ಕಾನೂನುಬದ್ಧ ಖಾತರಿ ನೀಡುವುದು ಆರ್ಥಿಕವಾಗಿ ಕಾರ್ಯಸಾಧುವಲ್ಲ ಮತ್ತು ಸರ್ಕಾರವು ಅದನ್ನು ಕಾರ್ಯಗತಗೊಳಿಸಲು ಸಾಧ್ಯವಿಲ್ಲವೆಂದು ಮೋದಿ ಸರ್ಕಾರ ದೃಢ ನಿರ್ಧಾರ ಮಾಡಿದೆ. ಬದಲಾಗಿ, ಎಂಎಸ್‌ಪಿ ಬೇಡಿಕೆಯು ಪಂಜಾಬ್ ಮತ್ತು ಹರಿಯಾಣದ ರೈತರಿಗೆ ಮಾತ್ರವೇ ಸೀಮಿತವಾಗಿದೆ ಎಂಬ ಅಭಿಪ್ರಾಯವನ್ನು ರೂಪಿಸಲು ಹವಣಿಸುತ್ತಿದೆ.

ಆದರೆ, ಗಮನಾರ್ಹ ಸಂಗತಿ ಎಂದರೆ ಎಂಎಸ್‌ಪಿಯನ್ನು ಹರಿಯಾಣ-ಪಂಜಾಬ್ ರೈತರು ಮಾತ್ರವೇ ಕೇಳುತ್ತಿಲ್ಲ. ದೇಶಾದ್ಯಂತ ಎಂಎಸ್‌ಪಿಯ ಬೇಡಿಕೆ ಇದೆ. ಆದಾಗ್ಯೂ, ರೈತ ಹೋರಾಟದ ಗಂಭೀರತೆಯನ್ನು, ರೈತರ ಸಂಕಷ್ಟವನ್ನು ಮೋದಿ ಸರ್ಕಾರ ಅರ್ಥ ಮಾಡಿಕೊಂಡಿಲ್ಲ. ಅರ್ಥವಾಗಿದ್ದರೂ, ಅದು ಅವರಿಗೆ ಬೇಕಾಗಿಲ್ಲ.

ಈ ವರದಿ ಓದಿದ್ದೀರಾ?: ಈ ದಿನ ಸಂಪಾದಕೀಯ | ಕುಸಿತ ಕಂಡ ‘ಬಾಲಿವುಡ್’, ಭಿನ್ನ ಜಾಡು ಹಿಡಿದ ದಕ್ಷಿಣ ಭಾರತದ ಚಿತ್ರೋದ್ಯಮ

2020-21ರಲ್ಲಿದ್ದ ರೈತ ಹೋರಾಟದ ಕಾವು ಈಗ ಇಲ್ಲ ಎಂಬುದೇ ಮೋದಿ ಸರ್ಕಾರದ ನಿರ್ಲಕ್ಷ್ಯಕ್ಕೆ ಪ್ರಮುಖ ಕಾರಣವಾಗಿದ್ದರೆ, ಅದು ದಡ್ಡತನವಲ್ಲದೆ ಬೇರೇನೂ ಅಲ್ಲ. ಪ್ರಸ್ತುತ, 2020ರ ರೀತಿಯ ಹೋರಾಟ ಇಲ್ಲದಿರಬಹುದು. ಆದರೆ, ಬೆಂಬಲವಿಲ್ಲ ಎನ್ನಲು ಸಾಧ್ಯವೇ ಇಲ್ಲ. ಈ ಹಿಂದೆ, 2020ರಲ್ಲೂ ಕೂಡ ರೈತ ಹೋರಾಟವನ್ನು ಮೋದಿ ಸರ್ಕಾರ ಕಡೆಗಣಿಸಿತ್ತು. ಒಂದು ವರ್ಷ ದೆಹಲಿ ಗಡಿಯಲ್ಲಿ ಕುಳಿತ ರೈತರು ಮೋದಿ ಅವರ ನಡು ಬಗ್ಗಿಸಿದರು. ರೈತರ ಎದುರು ಮಂಡಿಯೂರಿದ ಮೋದಿ, ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆದುಕೊಂಡರು.

ಇದೀಗ, ದಲ್ಲೇವಾಲ್ ಅವರ ಆರೋಗ್ಯ ಕ್ಷೀಣಿಸುತ್ತಿರುವುದು ರೈತ ಹೋರಾಟದ ಹುರುಪನ್ನು ಬದಲಾಯಿಸುತ್ತಿದೆ. ದಲ್ಲೇವಾಲ್ ಅವರ ಬಗ್ಗೆ ಪಂಜಾಬ್-ಹರಿಯಾಣ ಸೇರಿದಂತೆ ದೇಶಾದ್ಯಂತ ಸಹಾನುಭೂತಿ ಹೆಚ್ಚುತ್ತಿದೆ. ರೈತ ಸಂಘಟನೆಗಳು ಮತ್ತೆ ಪುಟಿದೇಳುತ್ತಿವೆ. ‘ದೆಹಲಿ ಚಲೋ’ವನ್ನು ಪುನರಾರಂಭಿಸಲು ಮುಂದಾಗಿವೆ. ಜನವರಿ 21ರಿಂದ ದೆಹಲಿ ಚಲೋ ಆರಂಭವಾಗಲಿದೆ.

ರೈತ ಸಂಘಟನೆಗಳು ಮತ್ತೆ ಕೇಂದ್ರ ಸರ್ಕಾರದ ಜೊತೆ ಸೆಣಸಾಡಲು ಮುಂದಾಗಿವೆ. ‘ಮಾಡು ಇಲ್ಲವೇ ಮಡಿ’ ಘೋಷದೊಂದಿಗೆ ರೈತರು ದೆಹಲಿಯತ್ತ ಹೊರಡಲಿದ್ದಾರೆ. ಮತ್ತೆ, ದೆಹಲಿ ಗಡಿಯಲ್ಲಿ ಮೊಕ್ಕಾಂ ಹೂಡಲು ಮುಂದಾಗಿದ್ದಾರೆ. ಕೇಂದ್ರ ಸರ್ಕಾರ ಮತ್ತೆ ಮಣಿಯುವ, ರೈತರ ಎದುರು ಮೋದಿ ಎರಡನೇ ಬಾರಿಗೆ ಮಂಡಿಯೂರುವ ದಿನಗಳು ಸಮೀಪಿಸಲಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X