ಪೊಲೀಸರು ದೂರು ಸ್ವೀಕರಿಸಲಿಲ್ಲವೆಂದು ಮನನೊಂದ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದು, ಕುಟುಂಬಸ್ಥರು ಆಸ್ಪತ್ರೆ ದಾಖಲಿಸಿರುವ ಘಟನೆ ಮೈಸೂರು ಜಿಲ್ಲೆಯ ಸರಗೂರಿನಲ್ಲಿ ನಡೆದಿದೆ.
ಗಂಡನ ಕಿರುಕುಳ ತಾಳಲಾರದೆ ಗೃಹಿಣಿಯೊಬ್ಬರು ಸರಗೂರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಮುಂದಾಗಿದ್ದು, ದೂರು ದಾಖಲಿಸಿಕೊಳ್ಳದ ಪೊಲೀಸರು ಚುಚ್ಚು ಮಾತುಗಳಿಂದ ನಿಂದಿಸಿದರೆಂದು ಮನನೊಂದ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಜವಾಬ್ದಾರಿ ಇರದ ಗಂಡ ನಿತ್ಯವೂ ಕಿರುಕುಳ ನೀಡುತ್ತಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ನ್ಯಾಯ ಕೇಳಲು ತೆರಳಿದಾಗ ಗೃಹಿಣಿಯನ್ನು ಚುಚ್ಚು ಮಾತಿನಿಂದ ಪೊಲೀಸರು ನಿಂದಿಸಿದ್ದಾರೆಂಬ ಆರೋಪ ಕೇಳಿ ಬಂದಿದ್ದು, ದೂರು ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಮನನೊಂದ ಮಹಾಲಕ್ಷ್ಮಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದ ಮಹದೇವ ಎಂಬುವವರ ಪುತ್ರಿ ಮಹಾಲಕ್ಷ್ಮಿಯನ್ನು ಕಳೆದ 9 ವರ್ಷಗಳ ಹಿಂದೆ ಸರಗೂರು ತಾಲೂಕಿನ ಮುಳ್ಳೂರು ಗ್ರಾಮದ ಮಂಜು ಎಂಬಾತನಿಗೆ 160 ಗ್ರಾಂ ಚಿನ್ನ, ಒಂದು ಬೈಕ್, ನಾಲ್ಕು ಲಕ್ಷ ನಗದು ನೀಡಿ ಅದ್ದೂರಿಯಾಗಿ ವಿವಾಹ ಮಾಡಿಕೊಡಲಾಗಿತ್ತು. ಈ ದಂಪತಿ ಕೆಲವು ವರ್ಷಗಳು ಅನ್ಯೋನ್ಯವಾಗಿದ್ದರು. ಪತಿ ಮಂಜು ಹಾಗೂ ಮನೆಯವರ ಕಿರುಕುಳದಿಂದ ನರಕದ ವಾತಾವರಣ ಸೃಷ್ಟಿಯಾಗಿದೆ. ನಿತ್ಯವೂ ನಿಂದಿಸುವುದು, ವರದಕ್ಷಿಣೆ ತರುವಂತೆ ಚಿತ್ರಹಿಂಸೆ ನೀಡುವುದು, ಹಾಗೂ ದೈಹಿಕವಾಗಿ ದೌರ್ಜನ್ಯ ನೀಡಿರುವ ಆರೋಪಗಳು ಕೇಳಿಬಂದಿದೆ.
ಈ ಸುದ್ದಿ ಓದಿದ್ದೀರಾ? ಕೊಡಗು | ʼನಮ್ಮ ಬದುಕೇ ಹೋರಾಟ; ನಾವು ಮತಕ್ಕಾಗಿ ಬೇಕೇ ಹೊರತು ಸಾಮಾಜಿಕ ಬದುಕಿಗಲ್ಲʼ; ಆದಿವಾಸಿಗಳ ಅಳಲು
ಮಹಾಲಕ್ಷ್ಮಿ ಸಹೋದರ ಮಧುಕುಮಾರ್ ಜೊತೆ ಸರಗೂರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಮುಂದಾದಾಗ ಪಿಎಸ್ಐ ನಂದೀಶ್ ಮತ್ತು ದಫೇದಾರ್ ಚಂದ್ರು, ʼಗಂಡನನ್ನು ಬಿಟ್ಟು ಎಷ್ಟು ವರ್ಷಗಳಾಗಿದೆ, ಗಂಡ ಹೊರತುಪಡಿಸಿದರೆ ಬೇರೆ ಯಾರೂ ಕೂಡ ಮನೆಯ ಹತ್ತಿರ ಬರುವುದಿಲ್ಲವೇ?ʼ ಎಂದು ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆಂಬ ಗಂಭೀರ ಆರೋಪ ಕೇಳಿಬಂದಿದೆ.
ಪೊಲೀಸರ ನಡೆಯಿಂದ ಬೇಸತ್ತ ಮಹಿಳೆ ಮಹಾಲಕ್ಷ್ಮಿ ಎಂಬುವವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಇದೀಗ ನಂಜನಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ನಡೆದ ಘಟನೆಯ ಮಾಹಿತಿ ಸಂಗ್ರಹ ಮಾಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
“ಪೊಲೀಸರು ದೂರು ದಾಖಲು ಮಾಡಿಕೊಂಡು ಇನ್ನಾದರೂ ಸಂತ್ರಸ್ತಗೆ ನ್ಯಾಯ ಕೊಡಿಸಬೇಕು, ದೂರು ದಾಖಲಿಸಿಕೊಳ್ಳದೆ, ನಿಂದಿಸಿ ಆತ್ಮಹತ್ಯೆಗೆ ಪ್ರಚೋದಿಸಿದ ಅಧಿಕಾರಿಗಳ ವಿರುದ್ಧ ಪೊಲೀಸ್ ವರಿಷ್ಠಾಧಿಕಾರಿಗಳು ಕ್ರಮ ಕೈಗೊಳ್ಳಬೇಕು” ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.
