ಸಿಟಿ ರವಿಯವರು ಬಳಸಿರುವ ಮಹಿಳಾ ದೌರ್ಜನ್ಯ ಉದ್ದೇಶದ ಅವಾಚ್ಯ ಪದ ಕ್ರಿಮಿನಲ್ ಕೃತ್ಯವಾಗಿರುವುದರಿಂದ, ಪೊಲೀಸರು ಸಿಟಿ ರವಿಯವರ ಮೇಲೆ ಪ್ರಕರಣ ದಾಖಲಿಸುವಾಗ ಸಭಾಪತಿಗಳ ಪೂರ್ವಾನುಮತಿ ಪಡೆಯಬೇಕಿಲ್ಲ. ಇದನ್ನು ಕೂಡಾ ಈ ಹಿಂದೆ ಸುಪ್ರೀಂ ತೀರ್ಪು ಸ್ಪಷ್ಟಪಡಿಸಿದೆ.
ಸಿಟಿ ರವಿಯವರು ಅವಾಚ್ಯ ಶಬ್ದ ಬಳಸಿದ್ದಕ್ಕೆ ಸಾಕ್ಷ್ಯ ಇಲ್ಲ ಎನ್ನುತ್ತಿದ್ದ (ಡಿಸೆಂಬರ್ 20, 2024) ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರು, ರಾಜ್ಯ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಯವರು ಸಿಟಿ ರವಿ ನಿಂದಿಸಿರುವ ಅಸಲಿ ವಿಡಿಯೋ ಸಿಐಡಿಗೆ ಒದಗಿಸುತ್ತಿದ್ದಂತೆ ‘ನಿಯಮ’ಗಳ ಬಗ್ಗೆ ಮಾತನಾಡಲಾರಂಭಿಸಿದ್ದಾರೆ.
“ಸಿಟಿ ರವಿಯವರು ವಿಧಾನಪರಿಷತ್‌ನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ದ ಬಳಸಿದ್ದ ‘ಅವಾಚ್ಯ’ ಪದ ಬಳಕೆ ತನಿಖೆಯನ್ನು ಸಿಐಡಿ ನಡೆಸುವಂತಿಲ್ಲ. ವಿಧಾನಪರಿಷತ್ ನಲ್ಲಿ ನಡೆದಿದ್ದು ವಿಧಾನಪರಿಷತ್‌ನಲ್ಲಿಯೇ ಮುಗಿಯಬೇಕು” ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ವಿಧಾನಪರಿಷತ್/ ವಿಧಾನಸಭೆ ನಿಯಮಾವಳಿಗಳ ಪ್ರಕಾರ ಕಲಾಪದಲ್ಲಿ ನಡೆದ ವಿಚಾರಗಳನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸುವಂತಿಲ್ಲ. ವಿಧಾನಸಭೆ/ ಪರಿಷತ್ತು/ ಸಂಸತ್ತಿನೊಳಗೆ ನಡೆದ ಘಟನೆ/ ಚರ್ಚೆಗಳನ್ನು ಯಾರೂ ಕೂಡಾ ನ್ಯಾಯಾಲಯ/ ಆಯೋಗಗಳಲ್ಲಿ ಪ್ರಶ್ನಿಸುವಂತಿಲ್ಲ. ಇದು ನಿಜವಾದರೂ ಸಿಟಿ ರವಿಯವರ ಪ್ರಕರಣ ಈ ವ್ಯಾಪ್ತಿಯಲ್ಲಿ ಬರುವುದಿಲ್ಲ.
ಇದನ್ನು ಓದಿದ್ದೀರಾ? ವಿಜಯೇಂದ್ರ, ಸಿಟಿ ರವಿ, ಪಿ.ರಾಜೀವ್‌ನಿಂದ ಬಿಜೆಪಿ ಹಾಳಾಗುತ್ತಿದೆ: ಮಾಲೀಕಯ್ಯ ಗುತ್ತೇದಾರ ಕಿಡಿ
ಸದನದೊಳಗೆ ಶಾಸಕರು ನಡೆಸುವ ಕ್ರಿಮಿನಲ್ ಕೃತ್ಯಕ್ಕೆ ಸಂವಿಧಾನ/ ಸಂಸತ್ತಿನ ನಿಯಮಾವಳಿಗಳ ಇಮ್ಯೂನಿಟಿ ನೀಡಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ 2021ರ ಜುಲೈ 29ರಂದು ತೀರ್ಪು ನೀಡಿದೆ.
ಸಂವಿಧಾನ ಮತ್ತು ಸದನ ನಿಯಮಾವಳಿಗಳು ಸದನದೊಳಗೆ ಶಾಸಕರಿಗೆ ವಿಶೇಷ ರಕ್ಷಣೆ ನೀಡುತ್ತದೆ. (ಸಂವಿಧಾನ ಆರ್ಟಿಕಲ್ 194) ಸದನದಲ್ಲಿ ಶಾಸಕರು ಮಾತನಾಡುವುದನ್ನು ಸ್ಪೀಕರ್ ಹೊರತುಪಡಿಸಿ ಇನ್ಯಾರೂ ತಡೆಯುವಂತಿಲ್ಲ, ಸದನದೊಳಗೆ ಮಾತನಾಡುವ ವಿಚಾರಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ. ಸದನದೊಳಗೆ ಯಾವುದೇ ಅಧಿಕಾರಿಗಳು ಸ್ಪೀಕರ್ ಅನುಮತಿ ಇಲ್ಲದೇ ತನಿಖೆ ನಡೆಸುವಂತಿಲ್ಲ ಎಂಬ ರೀತಿಯ ಹಲವು ನಿಯಮಾವಳಿಗಳು ಶಾಸಕರಿಗೆ ರಕ್ಷಣೆ ಒದಗಿಸುತ್ತದೆ. ಈ ರಕ್ಷಣೆಯು ಶಾಸನ ರಚಿಸುವ ಶಾಸಕ ಪರಮಾಧಿಕಾರವನ್ನು ರಕ್ಷಿಸುವ ಸಲುವಾಗಿ ಸೃಜಿಸಲಾಗಿದೆ. ಶಾಸಕರ ಶಾಸನಬದ್ದ ಕಾರ್ಯಚಟುವಟಿಕೆಯನ್ನು ರಕ್ಷಿಸಲು ಇಂತಹ ನಿಯಮ ರೂಪಿಸಲಾಗಿದೆ.
ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಅವಾಚ್ಯವಾಗಿ ನಿಂದಿಸಲು ಸಿಟಿ ರವಿ ಬಳಸಿರುವ ಪದ ಭಾರತೀಯ ನ್ಯಾಯ ಸಂಹಿತೆ/ಭಾರತೀಯ ದಂಡ ಸಂಹಿತೆ ಪ್ರಕಾರ ‘ಮಹಿಳೆಯರ ಮೇಲೆ ದೌರ್ಜನ್ಯ’ ವ್ಯಾಪ್ತಿಯಲ್ಲಿ ಬರುತ್ತದೆ. ಸದನದೊಳಗೆ ನಡೆಯುವ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂವಿಧಾನ/ ಕಲಾಪ ನಿಯಮಾವಳಿಗಳು ಇಮ್ಯೂನಿಟಿ ನೀಡುವುದಿಲ್ಲ. ಇಂತಹ ಸಂದರ್ಭದಲ್ಲಿ ಸಭಾಪತಿ/ಸ್ಪೀಕರ್‌ರವರುಗಳು ಆರೋಪಿ ಶಾಸಕರ ಪರವಾಗಿ ‘ಸಂಸದೀಯ ವಿಶೇಷಾಧಿಕಾರ’ವನ್ನು ಬಳಸುವಂತಿಲ್ಲ. ಸಿಟಿ ರವಿಯವರ ಕೃತ್ಯ ಸದನದ ಅಗತ್ಯ ಕಾರ್ಯನಿರ್ವಹಣೆ ಅಲ್ಲದೇ ಇರುವುದರಿಂದ ಸಂವಿಧಾನದ ಆರ್ಟಿಕಲ್ 194 ಅನ್ನು ಬಳಸುವಂತಿಲ್ಲ.
ಸಿಟಿ ರವಿಯವರು ಬಳಸಿರುವ ಮಹಿಳಾ ದೌರ್ಜನ್ಯ ಉದ್ದೇಶದ ಅವಾಚ್ಯ ಪದ ಕ್ರಿಮಿನಲ್ ಕೃತ್ಯವಾಗಿರುವುದರಿಂದ, ಪೊಲೀಸರು ಸಿಟಿ ರವಿಯವರ ಮೇಲೆ ಪ್ರಕರಣ ದಾಖಲಿಸುವಾಗ ಸಭಾಪತಿಗಳ ಪೂರ್ವಾನುಮತಿ ಪಡೆಯಬೇಕಿಲ್ಲ. ಇದನ್ನು ಕೂಡಾ ಈ ಹಿಂದೆ ಸುಪ್ರೀಂ ತೀರ್ಪು ಸ್ಪಷ್ಟಪಡಿಸಿದೆ.
ಇದನ್ನು ಓದಿದ್ದೀರಾ? ಬಾಗಲಕೋಟೆ | ರಾಷ್ಟ್ರಧ್ವಜಕ್ಕೆ ಅವಮಾನ; ಸಿಟಿ ರವಿ ವಿರುದ್ದ ಸೂಕ್ತ ಕ್ರಮಕ್ಕೆ ಒತ್ತಾಯ
ಕೇರಳ ಸರ್ಕಾರ 2021ರಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಬಗ್ಗೆ ಸ್ಪಷ್ಟ ತೀರ್ಪು ನೀಡಿದೆ. “ಶಾಸಕರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುವ ಉದ್ದೇಶದಿಂದ ಸದನದೊಳಗೆ ಶಾಸಕರಿಗೆ ನೀಡಲಾಗಿರುವ ವಾಕ್ ಸ್ವಾತಂತ್ರ್ಯದ ವಿಶೇಷಾಧಿಕಾರವನ್ನು ಕ್ರಿಮಿನಲ್ ಚಟುವಟಿಕೆಗಳಿಗೆ ಬಳಸುವಂತಿಲ್ಲ. ಸಂಸದೀಯ ವಿಶೇಷಾಧಿಕಾರಕ್ಕೂ ಕ್ರಿಮಿನಲ್ ಮೊಕದ್ದಮೆಗೂ ಸಂಬಂಧವಿಲ್ಲ. ಸದನದೊಳಗೆ ಸದಸ್ಯರು ಕಾನೂನು ಕೈಗೆತ್ತಿಕೊಳ್ಳುವ ಕ್ರಿಮಿನಲ್ ಕೃತ್ಯಗಳನ್ನು ನಡೆಸುವಂತಿಲ್ಲ. ಇಂತಹ ಕೃತ್ಯಗಳಿಗೆ ಸಂವಿಧಾನ ಮತ್ತು ಸಂಸದೀಯ ಕಲಾಪ ನಿಯಮಗಳ ಆಶ್ರಯ ಪಡೆಯುವಂತಿಲ್ಲ” ಎಂದು ತೀರ್ಪು ನೀಡಿದೆ.
ವಿಧ್ವಂಸಕ ಕೃತ್ಯಗಳಿಗೆ ಸಂಸದೀಯ ವಿನಾಯಿತಿ ನೀಡಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ವಿಧಾನಪರಿಷತ್ತಿನಲ್ಲಿ ಸಿಟಿ ರವಿ ಪ್ರಕರಣಕ್ಕೆ ಸೂಕ್ತವಾಗಿ ಅನ್ವಯವಾಗುತ್ತದೆ. ಸಿಟಿ ರವಿಯವರು ಮಾಡಿದ ದಾಳಿಯು ರಾಜಕೀಯ ದಾಳಿಯಾಗಿರಲಿಲ್ಲ. ಬದಲಾಗಿ, ತನ್ನ ಮುಂದೆ ನಿಂತುಕೊಂಡಿದ್ದ ಮಹಿಳೆಯೊಬ್ಬರ ಮೇಲೆ ನಡೆಸಿದ ಘನತೆಯ ಮೇಲಿನ ವೈಯಕ್ತಿಕ ದಾಳಿಯಾಗಿತ್ತು. ಇದು ಕ್ರಿಮಿನಲ್ ಅಪರಾಧವಾಗಿದ್ದು, ಮಹಿಳಾ ದೌರ್ಜನ್ಯ ಎಂದು ಪರಿಗಣಿಸಲ್ಪಡುತ್ತದೆ.
“ನಾನು ನಿಂದಿಸಿಯೇ ಇಲ್ಲ. ಫಸ್ಟ್ರೇಟೆಡ್ ಎಂದು ಹೇಳಿರುವುದು ಲಕ್ಷ್ಮಿ ಹೆಬ್ಬಾಳ್ಕರ್ ಗೆ ‘ಹಾಗೆ’ ಕೇಳಿಸಿರಬಹುದು” ಎಂದು ಸಿಟಿ ರವಿ ಹೇಳಿದ್ದರು. “ಸಿಟಿ ರವಿ ಹಾಗೆ ನಿಂದನೆ ಮಾಡಿರುವುದಕ್ಕೆ ಸಾಕ್ಷ್ಯ ಇಲ್ಲ” ಎಂದು ಸಭಾಪತಿ ಬಸವರಾಜ ಹೊರಟ್ಟಿಯವರು 2024 ಡಿಸೆಂಬರ್ 20 ರಂದು ಹೇಳಿದ್ದರು. ಇದೀಗ ಸಿಐಡಿಯವರ ನೋಟಿಸ್‌ಗೆ ಪ್ರತಿಕ್ರಿಯಿಸಿರುವ ರಾಜ್ಯ ಆಡಳಿತ ಸುಧಾರಣಾ ಇಲಾಖೆಯವರು, ಸಿಟಿ ರವಿ ವಿಧಾನಪರಿಷತ್‌ನಲ್ಲಿ ನಿಂದಿಸಿರುವ ಅಸಲಿ ವಿಡಿಯೋ ನೀಡಿದ್ದಾರೆ. ಈ ವಿಡಿಯೋ ಲಭ್ಯವಾಗಿರುವ ವಿಷಯ ಸುದ್ದಿಯಾಗುತ್ತಿದ್ದಂತೆ, ಸದನದ ನಿಯಮಾವಳಿಗಳು, ಸಂಸದೀಯ ವಿಶೇಷಾಧಿಕಾರವನ್ನು ಬಳಸಿಕೊಂಡು ಸಿಟಿ ರವಿ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಸಿಟಿ ರವಿಯವರಿಗೆ ಸದನದ ನಿಯಮಾವಳಿ, ಸಂಸದೀಯ ವಿಶೇಷಾಧಿಕಾರಗಳು ‘ರಕ್ಷಣೆ’ ನೀಡಲಾಗದು ಎಂಬುದನ್ನು ಸುಪ್ರೀಂ ಕೋರ್ಟಿನ ಹಲವು ತೀರ್ಪುಗಳು ಸ್ಪಷ್ಟಪಡಿಸುತ್ತದೆ.

ನವೀನ್ ಸೂರಿಂಜೆ
ಪತ್ರಕರ್ತ, ಲೇಖಕ