ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದಲ್ಲಿನ ಶಾಲೆ, ಕಾಲೇಜುಗಳಲ್ಲಿ ಅತಿಥಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರು, ಉಪನ್ಯಾಸಕರ ವೇತನವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ಶಾಲೆ, ಪಿಯು ಕಾಲೇಜುಗಳ ಅತಿಥಿ ಶಿಕ್ಷಕರು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಬೀದರ್ ನಗರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಕಚೇರಿ ಎದುರು ಗುರುವಾರ ಅಲ್ಪಸಂಖ್ಯಾತರ ಶಾಲೆ ಅತಿಥಿ ಶಿಕ್ಷಕರು ಕೆಲ ಕಾಲ ಪ್ರತಿಭಟನೆ ನಡೆಸಿ, ಬಳಿಕ ಜಿಲ್ಲಾ ಅಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ʼಅನೇಕ ವರ್ಷಗಳಿಂದ ಅತ್ಯಂತ ಕಡಿಮೆ ವೇತನಕ್ಕೆ (₹10,500, ₹12,500) ಕಾರ್ಯನಿರ್ವಹಿಸುತ್ತಿದ್ದು, ಜೀವನ ನಿರ್ವಹಣೆಗೆ ಕಷ್ಟವೆನಿಸುತ್ತಿದೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿ ಇರುವ ವಸತಿ ಶಾಲೆಗಳಲ್ಲಿ 2023ರ ಜನವರಿಯಿಂದಲೇ ಅತಿಥಿ ಶಿಕ್ಷಕರಿಗೆ ₹16,650 ಹಾಗೂ ಅತಿಥಿ ಉಪನ್ಯಾಸಕರಿಗೆ ₹18,150 ನೀಡುತ್ತಿದ್ದು, ಅದೇ ರೀತಿಯ ಕಾರ್ಯಭಾರ ನಮಗೂ ಇದೆ. ಆದರೆ ವೇತನದಲ್ಲಿ ಮಾತ್ರ ತಾರತಮ್ಯ ಮಾಡಲಾಗುತ್ತಿದೆʼ ಎಂದು ಬೇಸರ ವ್ಯಕ್ತಪಡಿಸಿದರು.
ʼವೇತನ ಹೆಚ್ಚಳದ ಕುರಿತು ಹಲವು ಬಾರಿ ಇಲಾಖೆಯ ನಿರ್ದೇಶಕರು, ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಕುಟುಂಬ ನಿರ್ವಹಣೆಗೆ ಇಲಾಖೆ ನೀಡುತ್ತಿರುವ ಹಣ ಸಾಕಾಗುತ್ತಿಲ್ಲ. ಇಷ್ಟೆಲ್ಲ ಕಷ್ಟಗಳ ಮಧ್ಯೆಯೂ ಮಕ್ಕಳ ಭವಿಷ್ಯಕ್ಕಾಗಿ ನಿತ್ಯ ಪಾಠ ಪ್ರವಚನದ ಜೊತೆಗೆ ಹೆಚ್ಚುವರಿ ತರಗತಿಗಳನ್ನು ಮಾಡುತ್ತಿದ್ದೇವೆ. ಕನಿಷ್ಠ ಕೂಲಿ ಕಾಯ್ದೆ ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ ಕಾಯ್ದೆಯಡಿ ವೇತನವನ್ನು ಪರಿಷ್ಕರಿಸಬೇಕುʼ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
‘ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧೀನದ ಮೌಲಾನಾ ಆಜಾದ್, ಮೊರಾರ್ಜಿ ದೇಸಾಯಿ, ಎಪಿಜೆ ಅಬ್ದುಲ್ ಕಲಾಂ ಶಾಲೆ ಹಾಗೂ ಪಿಯು ಕಾಲೇಜುಗಳಲ್ಲಿ 200ಕ್ಕೂ ಅಧಿಕ ಅತಿಥಿ ಶಿಕ್ಷಕರು, ಉಪನ್ಯಾಸರು ಕಾರ್ಯನಿರ್ವಹಿಸುತ್ತಿದ್ದು, ತಕ್ಷಣವೇ ವೇತನ ಪರಿಷ್ಕರಣೆ ಆದೇಶ ಹೊರಡಿಸಬೇಕು. ಅತಿಥಿ ಶಿಕ್ಷಕ, ಉಪನ್ಯಾಸಕರಿಗೆ ಮಾಸಿಕ ₹30 ಸಾವಿರ ಕನಿಷ್ಠ ವೇತನ, ಸೇವಾ ಭದ್ರತೆ, ವರ್ಷದ 12 ತಿಂಗಳೂ ವೇತನ, ನೇಮಕಾತಿಯಲ್ಲಿ ವರ್ಷಕ್ಕೆ 5ರಂತೆ ಕೃಪಾಂಕ, ವಿಮಾ ಸೌಲಭ್ಯ ಹಾಗೂ ವೇತನ ಸಹಿತ ಮಾತೃತ್ವ ರಜೆ ನೀಡಬೇಕುʼ ಎಂದು ಅತಿಥಿ ಉಪನ್ಯಾಸಕ ಮಾಣಿಕ ರೆಡ್ಡಿ ಬಸವಕಲ್ಯಾಣ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಪಶು ಮೇಳ: ಬೆರಗುಗೊಳಿಸಿದ 90 ಕೆಜಿ ತೂಕದ ಮೇಕೆ, ₹9 ಲಕ್ಷದ ಗಿರ್ ತಳಿ ಎತ್ತು
ಪ್ರತಿಭಟನೆಯಲ್ಲಿ ಅತಿಥಿ ಶಿಕ್ಷಕರು, ಉಪನ್ಯಾಸಕರಾದ ರಮೇಶ, ಅನ್ವರ್ ಖಾನ್,ಆಶ್ಮಾ ಅಂಜುಮ್, ವಿಶ್ವಾ, ದಿವ್ಯಾ, ರೇಷ್ಮಾ, ಚಂದ್ರಶೇಖರ, ಅಂಬಿಕಾ, ಪೂಜಾ, ಸಂತೋಷ ಕುಮಾರ್, ಮಹೇಶ, ಸವಿತಾ, ಸಂಗೀತಾ, ದೇವಿದಾಸ, ಅರ್ಜುನ ಸೇರಿದಂತೆ ಮತ್ತಿತರಿದ್ದರು.