ಬೌದ್ಧ ಐತಿಹಾಸಿಕ ಕ್ಷೇತ್ರ ಸನ್ನತಿ ಅಭಿವೃದ್ಧಿ ಮಂಡಳಿ ಪೂರ್ಣ ಪ್ರಮಾಣದಲ್ಲಿ ರಚಿಸಿ ತೆಲಂಗಾಣದ ಬುದ್ಧವನ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಆಗ್ರಹಿಸಿ ಮತ್ತು ಬೌದ್ಧ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನ.15 ರಿಂದ ನಡೆದ ಸನ್ನತಿ ಪಂಚಶೀಲ ಪಾದಯಾತ್ರೆ ಸಮಾರೋಪ ಸಮಾರಂಭ ಜ.24ರಂದು ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ನಡೆಯಲಿದೆ ಎಂದು ಬೌದ್ಧ ಸಾಹಿತಿ ದೇವೇಂದ್ರ ಹೆಗ್ಗಡೆ ಹೇಳಿದರು
ಯಾದಗಿರಿ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ವಿಶ್ವಶಾಂತಿ, ಸನ್ನತಿ ಪ್ರದೇಶ ಅಭಿವೃದ್ಧಿಗೆ ಅನುದಾನ ಮತ್ತು ಬೌದ್ಧ ಧಮ್ಮ ಅಭಿವೃದ್ಧಿ ನಿಗಮ ಸ್ಥಾಪನೆ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸುಮಾರು 800 ಕಿ.ಮೀ. ಪಾದಯಾತ್ರೆಯನ್ನು ಆಯೋಜಿಸಲಾಗಿದ್ದು, ಬೌದ್ಧ ಐತಿಹಾಸಿಕ ಕ್ಷೇತ್ರ ಸನ್ನತಿ ಅಭಿವೃದ್ಧಿ ಮಂಡಳಿ ಪೂರ್ಣ ಪ್ರಮಾಣದಲ್ಲಿ ರಚಿಸಿ, ಸನ್ನತಿ ಅಭಿವೃದ್ಧಿ ಪ್ರಾಧಿಕಾರದ ಯೋಜನೆಯನ್ನು ಆಂಧ್ರದ ಬುದ್ಧವನ ಮಾದರಿಯಲ್ಲಿ ಕನಿಷ್ಟ 200 ಎಕರೆ ಪ್ರದೇಶದಲ್ಲಿ ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿಪಡಿಸಬೇಕು’ ಎಂದು ಹೇಳಿದರು.
ದಲಿತ ಮುಖಂಡ ಮಲ್ಲಿಕಾರ್ಜುನ ಪೂಜಾರಿ, ‘ಸನ್ನತ್ತಿಯನ್ನು 7 ಸ್ಟಾರ್ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಮಾಡಬೇಕು. ಪರಿಶಿಷ್ಟ ಜಾತಿಯ ಬೌದ್ದರ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗಾಗಿ ಕರ್ನಾಟಕ ಬೌದ್ಧ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು. ಬೌದ್ಧರ ಸರ್ವಾಂಗೀಣ ಅಭಿವೃದ್ಧಿ ಹಾಗೂ ಬೌದ್ಧ ಕ್ಷೇತ್ರಗಳ ಅಭಿವೃದ್ಧಿಗಾಗಿ ಕನಿಷ್ಠ 1000 ಕೋಟಿ ಅನುದಾನ ಈ ಬಜೆಟ್‌ನಲ್ಲಿ ಒದಗಿಸುವುದು ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗುತ್ತಿದೆ’ ಎಂದು ತಿಳಿಸಿದರು.
ನೀಲಕಂಠ ಬಡಿಗೇರ ಮಾತನಾಡಿ, ‘ಈ ಪಾದಯಾತ್ರೆ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ರಾಜ್ಯದ ಸಮಸ್ತ ಬಿಕ್ಕು ಸಂಘ, ಬೌದ್ಧ ಸಂಘ ಸಂಸ್ಥೆಗಳು. ಎಲ್ಲಾ ದಲಿತ ಸಂಘರ್ಷ ಸಮಿತಿಗಳ ರಾಜ್ಯ ಸಂಚಾಲಕರು, ಮುಖಂಡರು. ನೌಕರರು, ವಿದ್ಯಾರ್ಥಿ ಯುವಜನರು, ಕಾರ್ಮಿಕರು, ಮಹಿಳೆಯರು ಮತ್ತು ಪ್ರಗತಿಪರ ಚಿಂತಕರು ಸೇರಿದಂತೆ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ. ವಿವಿಧ ಬೇಡಿಕೆಗಳ ಹಕ್ಕೊತ್ತಾಯ ಪತ್ರವನ್ನು ಸಿಎಂ ಸಿದ್ದರಾಮಯ್ಯ ಅವರು ಸ್ವೀಕರಿಸಲಿದ್ದಾರೆ’ ಎಂದು ತಿಳಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬೌದ್ಧ ಉಪಾಸಕರು, ಉಪಾಸಿಕರು ಮತ್ತು ಡಾ.ಬಿ.ಆರ್ ಅಂಬೇಡ್ಕರ್ ಅವರ ಅನುಯಾಯಿಗಳು, ದಲಿತ ಸಂಘಟನೆಗಳ ಮುಖಂಡರು, ಪ್ರಗತಿಪರ ಚಿಂತಕರು ಸನ್ನತಿ ಪಂಚಶೀಲ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಯಶ್ವಸ್ವಿಗೊಳಿಸಬೇಕು ಎಂದು ವಿನಂತಿಸಿದರು.
ಹಿರಿಯ ದಲಿತ ಮುಖಂಡರಾದ ಮರೆಪ್ಪ ಚಟ್ರೇಕರ, ಮರೆಪ್ಪ ಬುಕ್ಕಲ್, ಡಾ.ಭಗವಂತ ಅನ್ವರ್, ಬಾಬುರಾವ್ ಭೂತಾಳೆ, ವೆಂಕಟೇಶ ಹೊಸಮನಿ, ಶ್ರೀನಿವಾಸ ನಾಯಕ್, ರಾಮಣ್ಣ ಕಲ್ಲದೇವನಹಳ್ಳಿ, ಶರಣು ನಾಟೇಕರ್, ಸೈದಪ್ಪ ಕೂಲ್ಲೂರು, ಮಾಳಪ್ಪ ಕಿರದಳ್ಳಿ, ಗೋಪಾಲ ತೆಲಗೇರ, ನಿಂಗಪ್ಪ, ಕೊಲ್ಲೂರ, ಸುರೇಶ್ವರ, ಶಿವರಾಮ ಹೊಸ್ನಿ, ಆದಪ್ಪ ನಿಂಗಣ್ಣ ಬೀರನಾಳ, ಹೊಸಮನಿ, ಚಂದ್ರಕಾಂತ ಚಲವಾದಿ, ಹೊನ್ನಪ್ಪ ನಾಟೇಕರ್, ಗಿರೀಶ್ ಚಟ್ಟೇರಕರ ಸೇರಿದಂತೆ ದಲಿತ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.