ಎಂಬಿಎ ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ತಾಲೂಕಿನ ಮುದ್ದೇನಹಳ್ಳಿ ಹೊವಲಯದಲ್ಲಿರುವ ವಿಟಿಯು ಕೇಂದ್ರದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ಶ್ರೀನಿವಾಸಪುರ ತಾಲೂಕಿನ ಕೊಂಡಮರಿ ಗ್ರಾಮದ ಬಾಬುನಾಯಕ್ ಮೃತ ವಿದ್ಯಾರ್ಥಿ. ಕಳೆದ ಒಂದೂವರೆ ವರ್ಷದಿಂದ ವಿಟಿಯು ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ. ಶನಿವಾರ ಬೆಳಗ್ಗೆ ಉಪಾಹಾರ ಸೇವನೆ ಬಳಿಕ ತನ್ನ ಕೊಠಡಿಗೆ ತೆರಳಿ ನೇಣಿಗೆ ಶರಣಾಗಿದ್ದಾನೆ ಎಂದು ಮೂಲಗಳಿಂದ ತಿಳಿದುಬಂದಿದೆ.
ʼಶ್ರೀನಿವಾಸಪುರ ತಾಲೂಕಿನ ಕೊಂಡಮರಿ ಗ್ರಾಮದ ಬಾಬು ನಾಯಕ್ ವಾಸವಿದ್ದ ಕೊಠಡಿಯಲ್ಲಿ 3 ಜನ ವಿದ್ಯಾರ್ಥಿಗಳಿದ್ದು, ಇಬ್ಬರು ವಿದ್ಯಾರ್ಥಿಗಳು ಶುಕ್ರವಾರ ಸಂಜೆ ನಮಗೆ ಮಾಹಿತಿ ನೀಡದೆ ಸ್ವಗ್ರಾಮಕ್ಕೆ ತೆರಳಿದ್ದು, ಶನಿವಾರ ಬೆಳಗ್ಗೆ 10.15ಕ್ಕೆ ಬಾಬು ನಾಯಕ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿದರುʼ ಎಂದು ಕಾಲೇಜಿನ ಪ್ರಾಂಶುಪಾಲ ಜಿ.ಎಸ್.ವೆಂಕಟೇಶ್ ತಿಳಿಸಿದ್ದಾರೆ.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ದಲಿತರ ಭೂಮಿ, ವಸತಿ ಮತ್ತು ಮೂಲಭೂತ ಸೌಲಭ್ಯಗಳಿಗೆ ಒತ್ತಾಯಿಸಿ ಪ್ರತಿಭಟನೆ
ಆತ್ಮಹತ್ಯೆಯ ಕುರಿತು ಪಕ್ಕದ ಕೊಠಡಿಯ ವಿದ್ಯಾರ್ಥಿಗಳು ಮಾಹಿತಿ ನೀಡಿದ್ದು, ಬೆಳಗ್ಗೆ 9 ರಿಂದ 9.30 ಸಮಯದಲ್ಲಿ ತಿಂಡಿಯನ್ನು ಮುಗಿಸಿ ರೂಮಿಗೆ ಹೋದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.