ಕಳೆದ ಗುರುವಾರ ಬಿಜಾಪುರ ಜಿಲ್ಲೆಯಲ್ಲಿ ನಡೆದ ಭೀಕರ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು ಹನ್ನೆರಡು ನಕ್ಸಲರ ಮೃತದೇಹವನ್ನು ಪತ್ತೆಹಚ್ಚಿದ್ದಾರೆ. ಇದಾದ ಎರಡು ದಿನಗಳ ಬಳಿಕ ತೆಲಂಗಾಣ ರಾಜ್ಯ ಸಮಿತಿಯ ಹಿರಿಯ ನಾಯಕ ದಾಮೋದರ್ ಸೇರಿದಂತೆ 18 ಕಾರ್ಯಕರ್ತರನ್ನು ಕಳೆದುಕೊಂಡಿರುವುದಾಗಿ ನಕ್ಸಲ್ ಸಂಘಟನೆ ಹೇಳಿಕೆ ನೀಡಿದೆ.
ದಾಮೋದರ್ ಅಲಿಯಾಸ್ ಚೋಕಾ ರಾವ್ ಅವರ ತಲೆಗೆ 50 ಲಕ್ಷ ರೂಪಾಯಿಗಳ ಬಹುಮಾನವನ್ನು ಘೋಷಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ನಕ್ಸಲೀಯ ಬಿಕ್ಕಟ್ಟಿಗೆ ಪರಿಹಾರದ ಹೊಸ ಮಾದರಿಯನ್ನು ಕಟ್ಟಿಕೊಟ್ಟ ಕರ್ನಾಟಕ : ಶಾಂತಿಗಾಗಿ ನಾಗರಿಕರ ವೇದಿಕೆ ಮೆಚ್ಚುಗೆ
ಸಿಪಿಐ (ಮಾವೋವಾದಿ) ದಕ್ಷಿಣ ಬಸ್ತಾರ್ ವಿಭಾಗೀಯ ಸಮಿತಿಯ ಕಾರ್ಯದರ್ಶಿ ಗಂಗಾ ಈ ಬಗ್ಗೆ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ದಾಮೋದರ್ ಹತ್ಯೆಯು ನಮ್ಮ ಸಂಘಟನೆ ದೊಡ್ಡ ನಷ್ಟವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಇನ್ನು ಗುಂಡಿನ ಚಕಮಕಿಯಲ್ಲಿ ಐದು ಭದ್ರತಾ ಸಿಬ್ಬಂದಿಯೂ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
“ಬಸ್ತರ್ ಈಗ ದೇಶದ ಅತ್ಯಂತ ಮಿಲಿಟರಿ ವಲಯವಾಗಿ ಮಾರ್ಪಟ್ಟಿದೆ. ಮಾವೋವಾದಿ ವಿರೋಧಿ ಅಭಿಯಾನದ ನೆಪದಲ್ಲಿ ಬುಡಕಟ್ಟು ಸಮುದಾಯಗಳನ್ನು ಪದೇ ಪದೇ ಗುರಿಯಾಗಿಸಲಾಗುತ್ತಿದೆ” ಎಂದು ಕೂಡಾ ಹೇಳಿಕೆಯಲ್ಲಿ ಸೇರಿಸಲಾಗಿದೆ.
ಇನ್ನು ಬಸ್ತರ್ ರೇಂಜ್ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಸುಂದರರಾಜ್ ಪಿ, “ನಕ್ಸಲರು ತಮ್ಮ ಕಾರ್ಯಕರ್ತರ ಸಾವು ಮತ್ತು ಗ್ರಾಮಸ್ಥರ ಮೇಲೆ ದೌರ್ಜನ್ಯದ ಬಗ್ಗೆ ಆಧಾರರಹಿತವಾದ ಆರೋಪವನ್ನು ಮಾಡುತ್ತಿದ್ದಾರೆ. ನಿಷೇಧಿತ ಮಾವೋವಾದಿ ಸಂಘಟನೆಯನ್ನು ನಿರ್ಮೂಲನೆ ಮಾಡಲು ನಾವು ಈ ಕಾರ್ಯಾಚರಣೆ ಮುಂದುವರೆಸುತ್ತೇವೆ” ಎಂದು ಹೇಳಿದರು.
