ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇತ್ತೀಚೆಗೆ ನೀಡಿದ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ. “ಬಿಜೆಪಿ ಮತ್ತು ಆರ್‌ಎಸ್‌ಎಸ್ ಪ್ರತಿಯೊಂದು ಸಂಸ್ಥೆಯನ್ನು ವಶಪಡಿಸಿಕೊಂಡಿದೆ. ನಾವೀಗ ಭಾರತೀಯ ರಾಜ್ಯದ ವಿರುದ್ಧವೇ ಹೋರಾಡುತ್ತಿದ್ದೇವೆ” ಎಂಬ ಹೇಳಿಕೆ ನೀಡಿದ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಾಗಿದೆ.
ಗುವಾಹಟಿಯ ಪಾನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಜನವರಿ 15ರಂದು ದೆಹಲಿಯ ಕೋಟ್ಲಾ ರಸ್ತೆಯಲ್ಲಿ ಕಾಂಗ್ರೆಸ್ ಪಕ್ಷದ ಹೊಸ ಪ್ರಧಾನ ಕಚೇರಿಯ ಉದ್ಘಾಟನೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಬಿಹಾರ ಜಾತಿ ಸಮೀಕ್ಷೆ ನಕಲಿ, ದೇಶಾದ್ಯಂತ ಗಣತಿ ನಡೆಯಬೇಕಿದೆ: ರಾಹುಲ್ ಗಾಂಧಿ
ಈ ಹೇಳಿಕೆ ವಿರುದ್ಧ “ಭಾರತದ ಸಾರ್ವಭೌಮತ್ವ ಏಕತೆ ಮತ್ತು ಸಮಗ್ರತೆಗೆ ಅಪಾಯ ಉಂಟು ಮಾಡುವ ಕೃತ್ಯಗಳು” ಎಂಬ ಬಿಎನ್‌ಎಸ್‌ನ ಸೆಕ್ಷನ್ 152 ಮತ್ತು 197(1)ಡಿ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಇದು ಜಾಮೀನು ರಹಿತ ಪ್ರಕರಣವಾಗಿದೆ.
“ರಾಹುಲ್ ಗಾಂಧಿ ಹೇಳಿಕೆಯು ವಾಕ್ ಸ್ವಾತಂತ್ರ್ಯದ ಮಿತಿಯನ್ನು ಮೀರಿದೆ. ಸಾರ್ವಜನಿಕ ಸುವ್ಯವಸ್ಥೆ ಮತ್ತು ರಾಷ್ಟ್ರೀಯ ಭದ್ರತೆಗೆ ಗಂಭೀರ ಬೆದರಿಕೆಯನ್ನು ಒಡ್ಡಿದೆ” ಎಂದು ದೂರುದಾರರಾದ ಮಂಜಿತ್ ಚೆಟಿಯಾ ಆರೋಪಿಸಿದ್ದಾರೆ.
“ರಾಹುಲ್ ಹೇಳಿಕೆ ರಾಜ್ಯದ ಅಧಿಕಾರವನ್ನು ಕಿತ್ತುಕೊಳ್ಳುವ ಪ್ರಯತ್ನವಾಗಿದೆ. ಅಶಾಂತಿ ಮತ್ತು ಪ್ರತ್ಯೇಕತಾವಾದಿ ಭಾವನೆಗಳನ್ನು ಕೆರಳಿಸುವ ಅಪಾಯಕಾರಿ ಸನ್ನಿವೇಶವನ್ನು ಸೃಷ್ಟಿಸುತ್ತದೆ. ತಮ್ಮ ಹೋರಾಟವು ‘ಭಾರತೀಯ ರಾಜ್ಯ’ದ ವಿರುದ್ಧ ಎಂದು ಘೋಷಿಸುವ ಮೂಲಕ ಅವರು ಪ್ರಜ್ಞಾಪೂರ್ವಕವಾಗಿ ಜನರಲ್ಲಿ ವಿಧ್ವಂಸಕ ಚಟುವಟಿಕೆಗಳು ಮತ್ತು ದಂಗೆಯನ್ನು ಪ್ರಚೋದಿಸಿದ್ದಾರೆ” ಎಂದು ದೂರುದಾರರು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ಸ್ಥಾಪನೆ, ರಾಹುಲ್ ಗಾಂಧಿ ಕೊಟ್ಟಿದ್ದ ಭರವಸೆ ಸಾಕಾರ: ಸಚಿವ ಎಂ ಬಿ ಪಾಟೀಲ್
ಪದೇ ಪದೇ ಚುನಾವಣೆಯಲ್ಲಿ ಸೋತು ರಾಹುಲ್ ಗಾಂಧಿ ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕರಾಗಿ ಪ್ರಜಾಪ್ರಭುತ್ವ ಸಂಸ್ಥೆಗಳಲ್ಲಿ ಸಾರ್ವಜನಿಕ ವಿಶ್ವಾಸವನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ಗಾಂಧಿ ಹೊಂದಿದ್ದಾರೆ. ಆದರೆ ಸುಳ್ಳು ಹರಡುತ್ತಿದ್ದಾರೆ ಎಂದಿದ್ದಾರೆ.
ಪ್ರಸ್ತುತ ದೇಶದಲ್ಲಿ ಯಾವುದೇ ಸಂಸ್ಥೆಯಲ್ಲಿ ಬಿಜೆಪಿ, ಆರ್‌ಎಸ್‌ಎಸ್ ಹಿಡಿತವನ್ನು ಉದ್ದೇಶಿಸಿ ರಾಹುಲ್ ಗಾಂಧಿ ಹೇಳಿಕೆಯನ್ನು ನೀಡಿದ್ದರು.
