ಪುರುಷ ಪ್ರಧಾನ ಸಮಾಜದ ಹಲವು ಬಿಕ್ಕಟ್ಟುಗಳನ್ನು ಎದುರಿಸಿ ಶೈಕ್ಷಣಿಕ ಕ್ರಾಂತಿಗೈದ ಮಾತೆ ಸಾವಿತ್ರಿಬಾಯಿ ಫುಲೆ ದಂಪತಿ ಅವರ ಕೊಡುಗೆ ಅನನ್ಯವಾಗಿದೆ ಎಂದು ಕಲಬುರಗಿ ವಿಶ್ವವಿದ್ಯಾಲಯದ ಕುಲಸಚಿವ ಡಾ.ರಮೇಶ್ ಲಂಡನಕರ್ ಹೇಳಿದರು.
ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಪ್ರಬುದ್ಧ ಡೆವಲ್‌ಪಮೆಂಟ್ ಫೌಂಡೇಶನ್ ವತಿಯಿಂದ ಶನಿವಾರ ಆಯೋಜಿಸಿದ ಮಾತೆ ಸಾವಿತ್ರಿಬಾಯಿ ಫುಲೆ ಹಾಗೂ ಫಾತಿಮಾ ಶೇಖ್ ಅವರ ಜಯಂತಿ ಹಾಗೂ ಫುಲೆ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
“ಸತ್ಯ ಶೋಧಕ ಸಮಾಜದ ಮೂಲಕ ಮಹಾತ್ಮ ಜ್ಯೋತಿಬಾ ಫುಲೆ ಅವರು ಪತ್ನಿ ಸಾವಿತ್ರಿಬಾಯಿ ಫುಲೆ ಅವರನ್ನು ಉನ್ನತ ಶಿಕ್ಷಣ ಕೊಡಿಸುವ ಮೂಲಕ ಪುರುಷ ಸಮಾಜಕ್ಕೆ ಮಾದರಿಯಾಗಿದ್ದರು. ಪ್ರಸ್ತುತ ಸಮಾಜಕ್ಕೆ ಜ್ಯೋತಿಭಾ ಫುಲೆ ದಂಪತಿ ಜೀವನ ಆದರ್ಶ ಮಾದರಿಯಾಗಿದೆ” ಎಂದು ನುಡಿದರು.
ಗೋದುತಾಯಿ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಪುಟ್ಟಮಣಿ ದೇವಿದಾಸ್ ಮಾತನಾಡಿ, “ಇಂದು ಮಾತೆಯೇ ಮೊದಲ ಗುರು ಎನ್ನುವ ಗಾದೆಯಿದೆ. ಆದರೆ, ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಗೈದ ಸಾವಿತ್ರಿಬಾಯಿ ಫುಲೆ ಮತ್ತು ಶೇಖ್ ಫಾತಿಮಾ ಅವರ ಕಾಲಘಟ್ಟದಲ್ಲಿ ಪತಿಯೇ ಮೊದಲ ಗುರು ಎಂಬ ವಾತಾವರಣ ಸೃಷ್ಟಿಸಿದ್ದರು. ಆಗಿನ ಕಾಲಘಟ್ಟದಲ್ಲಿ 18 ಶಾಲೆಗಳನ್ನು ಆರಂಭಿಸಿದ್ದು ಬಹುದೊಡ್ಡ ಕ್ರಾಂತಿ ಎನ್ನಬಹುದು” ಎಂದರು.
ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಮಾತನಾಡಿ, “ರಾಮ ಮಂದಿರ ನಿರ್ಮಾಣದ ನಂತರವಷ್ಟೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ ಅವರ ಹೇಳಿಕೆ ಜನಸಾಮಾನ್ಯರಿಗೆ ಗಂಭೀರವಾಗಿ ಕಾಣದೇ ಇರುವುದು ಸಮಾಜದ ಬಹುದೊಡ್ಡ ದುರಂತ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ರಮೇಶ ಮಾಡಿಯಾಳಕರ, ಡಾ.ಅನೀಲ ಮಂಡೋಲಕರ, ನಾಮದೇವ ಕಡಕೋಳ, ಡಾ.ರಾಜಕುಮಾರ ದುಮ್ಮನಸೂರ, ರಾಜಶೇಖರ ಕಡಗನ, ಪುರ್ಷದ್ ಅಲಿ, ಜೀತೇಂದ್ರ ತಳವಾರ, ಶರಣಬಸಪ್ಪ ನಾಟೀಕರ, ಷಣ್ಮುಖ ವಾಗಮೋರೆ, ಶಿವಲಿಂಗಪ್ಪ ಮಾಸ್ಟರ್, ಉದಯಕುಮಾರ ಇಂಗಳೆ, ರಿಜ್ವಾನಾ ಪರ್ವೀನ್, ಕೌಸರ್ ಶಾಯಿನ್, ಮಧುಮತಿ ಹೆಚ್, ಪ್ರಕಾಶ ಕೋಟ್ರೆ, ಸೈಯದ್ ಇನಾಮದಾರ, ನಾಗೇಮದ್ರಪ್ಪ ಶರ್ಮಾ, ಶಿವಪುತ್ರಪ್ಪ ಹಾಗರಗಿ, ಪವಿತ್ರ ಸಂಗರಾಜ, ಮಹಾದೇವ ಕೋತ್ಲಿ ಅವರನ್ನು ಪುಲೆ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಬೀದರ್ | ಸಮ ಸಮಾಜ ನಿರ್ಮಾಣಕ್ಕೆ ಪರ್ಯಾಯ ರಾಜಕಾರಣ ಅಗತ್ಯ : ನಟ ಚೇತನ್
ಕಾರ್ಯಕ್ರಮದಲ್ಲಿ ಪ್ರಬುದ್ಧ ಫೌಂಡೇಶನ್ ಅಧ್ಯಕ್ಷ ಧರ್ಮಣ್ಣ ಕೋಣೆಕರ ಅಧ್ಯಕ್ಷತೆ ವಹಿಸಿದ್ದರು. ಪುಂಡಲೀಕ ಗಾಯಕವಾಡ, ಹಣಮಂತ ಇಟಗಿ, ಅನಿಲ ತೆಂಗಳಿ, ಧರ್ಮಣ್ಣ ಜೈನಾಪುರ, ಹವಳಪ್ಪ ಜಾನೆ, ರೂಪಾ ಕಲಕೇರಿ, ಜೈಶೀಲಾ ಬೌದ್ಧೆ, ನಾಗಪ್ಪ ಹೊಸಮನಿ, ನಾಗೇಂದ್ರ ಜವಳಿ, ರಾಜಶೇಖರ ನಿಪ್ಪಾಣಿ ಸೇರಿದಂತೆ ಮತ್ತಿತರಿದ್ದರು. ಪಂಡಿತ ಮಧುಗುಣಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಚಿದಾನಂದ ಕುಡ್ಡನ್ ಸ್ವಾಗತಿಸಿದರು. ಕಪಿಲದೇವ ಚಕ್ರವರ್ತಿ ನಿರೂಪಿಸಿದರು. ವಿಠಲ ಚಿಕಿಣಿ ವಂದಿಸಿದರು.