ಪ್ರಕೃತಿಯ ಸಂರಕ್ಷಣೆ ಎಲ್ಲರ ಹೊಣೆಗಾರಿಕೆಯಾಗಿದೆ. ನೆಲ, ನೀರು, ಕಾಡು ಸಂರಕ್ಷಿಸದಿದ್ದರೆ ಜೀವ ಸಂಕುಲ ವಿನಾಶವಾಗುತ್ತದೆ ಎಂದು ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ವಿನಯ ಮಾಳಗೆ ಹೇಳಿದರು.
ಬಸವಕಲ್ಯಾಣದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಐಕ್ಯೂಎಸಿ ವತಿಯಿಂದ ಹಮ್ಮಿಕೊಂಡಿದ್ದ ‘ಮಣ್ಣು-ನೀರು : ಸಾಂಸ್ಕೃತಿಕ ಸಂಕಥನ’ ಕುರಿತ ಉಪನ್ಯಾಸ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ʼನಮ್ಮೆಲ್ಲರ ನಿರ್ಲಕ್ಷ್ಯದಿಂದ ನಿಸರ್ಗಕ್ಕೆ ಹಾನಿಯಾಗುತ್ತಿದೆ. ಕಾಡು ಸಂರಕ್ಷಿಸುವ ಕಡೆಗೆ ಕೇಂದ್ರಿಕರಿಸದಿದ್ದರೆ ಜೀವವೈವಿಧ್ಯ ನಾಶವಾಗುತ್ತದೆ. ಅಂತರ್ಜಲದ ಮಟ್ಟ ಹೆಚ್ಚಿಸುವ, ಮಣ್ಣಿನ ಫಲವತ್ತತೆ ಕಾಪಾಡುವ, ಜೀವವೈವಿಧ್ಯ ಉಳಿಸಲು ಕಾಡು ಬೆಳೆಸುವ ಹೊಣೆ ನಮ್ಮೆಲ್ಲರ ಮೇಲಿದೆ. ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಮಹತ್ವ ಪಡೆದ ಬಸವಕಲ್ಯಾಣ ಬೀದರಗಿಂತ ಹಳೆಯ ಪಟ್ಟಣ. ಇಲ್ಲಿ ಹಳೆಯ ಕಾಲದ 440ಕ್ಕೂ ಅಧಿಕ ಬಾವಿಗಳಿವೆ. ನೀರನ್ನು ಹಿಡಿದಿಡುವ ವಿಶಿಷ್ಟ ಗುಣ ಕಲ್ಯಾಣದ ಮಣ್ಣಿಗಿದೆ. ಕಲ್ಯಾಣಿ ಎಂದರೆ ನೀರಿನ ಸೆಲೆಯಿರುವ ಸ್ಥಳ ಎಂದರ್ಥʼ ಎಂದು ವಿಶ್ಲೇಷಿಸಿದರು.
ʼಮನೆಯಲ್ಲಿ ಒಂದು ಮರವಿದ್ದರೂ ಹಲವು ಹಕ್ಕಿಗಳು ಬಂದು ಹೋಗುತ್ತವೆ. ನಿಸರ್ಗದ ಎಲ್ಲ ಚಲನೆಯನ್ನು ದಾಖಲಿಸಬೇಕು. ಜಾಗತಿಕ ತಾಪಮಾನದ ಬಗೆಗೆ ಮಾತನಾಡುವ ನಾವು, ನಮ್ಮ ಊರನ್ನು ತಂಪಾಗಿಡಲು ಏನು ಮಾಡಬೇಕೆಂಬುದು ಯೋಚಿಸಬೇಕುʼ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಆಡಳಿತಾಧಿಕಾರಿ ಡಾ. ಮಲ್ಲಿಕಾರ್ಜುನ ಲಕಶೆಟ್ಟಿ ಮಾತನಾಡಿ, ʼಪರಿಸರ ಸಂರಕ್ಷಣೆಗೆ ಸರ್ಕಾರಗಳು ಹಲವು ಯೋಜನೆಗಳು ಹಾಕಿಕೊಂಡಿವೆ. ನಿಸರ್ಗದ ರಕ್ಷಣೆ ಪ್ರತಿಯೊಬ್ಬರ ಮೊದಲ ಕರ್ತವ್ಯವಾಗಿದೆ. ನಿಸರ್ಗ ಉಳಿದರೆ ಎಲ್ಲಾ ಜೀವಿಗಳ ಉಳಿವಿದೆ. ಇಲ್ಲದಿದ್ದರೆ ಎಲ್ಲಾ ಜೀವಿಗಳ ಅಳಿವು ನಿಶ್ಚಿತʼ ಎಂದರು.
ಪ್ರಾಚಾರ್ಯ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, ʼಆಧುನಿಕತೆ, ಜಾಗತೀಕರಣ, ನಗರೀಕರಣಗಳು ಬೆಳೆದಂತೆ ಮನುಷ್ಯ ನಿಸರ್ಗ ಸಹಜ ಅನುಭವ, ಪ್ರಕೃತಿಯ ವಿಸ್ಮಯ, ಕೌತುಕಗಳಿಂದ ದೂರವಾಗುತ್ತಿದ್ದಾನೆ. ಅನ್ನಕ್ಕೆ, ಆರಾಧನೆಗೆ ಕೇಂದ್ರವಾಗಿದ್ದ ನೆಲ ಇಂದು ಸರಕಾಗಿ ಪರಿವರ್ತಿತವಾಗಿದೆ. ವ್ಯಾವಹಾರಿಕ ಮನೋಭಾವ ಬೆಳೆದಂತೆಲ್ಲ ನೆಲ,ನೀರು, ಕಾಡನ್ನು ವಾಣಿಜ್ಯ ಮತ್ತು ವ್ಯಾಪಾರದ ಚೌಕಟ್ಟಿಗೆ ತಂದು ನಿಲ್ಲಿಸಿದ್ದು ಈ ಕಾಲದ ಬಹುದೊಡ್ಡ ದುರಂತʼ ಎಂದರು.
ʼಕೆ.ಪಿ. ಪೂರ್ಣಚಂದ್ರ ತೇಜಸ್ವಿ, ಕೃಪಾಕರ ಸೇನಾನಿ, ಮಾಧವ ಗಾಡ್ಗೀಳ್, ನಾಗೇಶ್ ಹೆಗಡೆ ಮೊದಲಾದವರು ಪ್ರತಿಪಾದಿಸಿದ ಪರಿಸರವಾದಿ ಸಾಹಿತ್ಯದ ಅಧ್ಯಯನ ಅಗತ್ಯ. ಔಪಚಾರಿಕ ಶಿಕ್ಷಣದಿಂದ ಆಚೆಗೆ ಹೋಗಿ ಚಾರಣ, ಕಾಡಿನ ಕುರಿತು ಅಧ್ಯಯನ ಮಾಡುವುದು ಹಿಂದೆಂದಿಗಿಂತಲೂ ಇಂದು ಹೆಚ್ಚು ಅಗತ್ಯವಿದೆʼ ಎಂದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಬಸವತತ್ವ ಮಠಾಧೀಶರು ʼಏಕ ಸಂಸ್ಕೃತಿʼ ಉತ್ಸವ ಬಹಿಷ್ಕರಿಸಲಿ
ಕಾರ್ಯಕ್ರಮದಲ್ಲಿ ಬೀದರ ಟೀಮ್ ಯುವ ಸದಸ್ಯರಾದ ಹರ್ಷವರ್ಧನ ರಾಠೋಡ, ಆಧವನ್, ಗೋಕುಲ್, ಚಿನ್ಮಯ್, ಐಕ್ಯೂಎಸಿ ಸಂಯೋಜಕ ಪವನ ಪಾಟೀಲ, ಗುರುದೇವಿ ಕಿಚಡೆ, ನೀಲಮ್ಮ ಮೇತ್ರೆ, ಅಶೋಕರೆಡ್ಡಿ, ಎಂ.ಡಿ.ಜಬಿ ಬಸವರಾಜ ಗುಂಗೆ ಮತ್ತಿತರಿದ್ದರು. ಡಾ.ಶಾಂತಲಾ ಪಾಟೀಲ ಸ್ವಾಗತಿಸಿದರು. ಗಂಗಾಧರ ಸಾಲಿಮಠ ನಿರೂಪಿಸಿದರು. ನಾಗವೇಣಿ ಬಿರಾದಾರ ವಂದಿಸಿದರು.