ಬೀದರ್‌ನ ಎಟಿಎಂಗೆ ಹಣ ತುಂಬಿಸುವವರ ಮೇಲೆ ಶೂಟೌಟ್ ಪ್ರಕರಣ, ಮಂಗಳೂರಿನ ಉಳ್ಳಾಲ ಕೋಟೆಕಾರು ಬ್ಯಾಂಕ್ನಲ್ಲಿ ನಡೆದ ದರೋಡೆ ಪ್ರಕರಣಗಳ ಬೆನ್ನಲ್ಲೇ ಮೈಸೂರಿನಲ್ಲಿಯೂ ಇಂಥ ದುಷ್ಕೃತ್ಯ ನಡೆದಿದ್ದು, ಹಾಡಹಗಲೇ ಕಾರು ಅಡ್ಡಗಟ್ಟಿ ದರೋಡೆ ಮಾಡಿದ ದುಷ್ಕರ್ಮಿಗಳು ಕಾರು ಸಹಿತ ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ.
ಮೈಸೂರು ತಾಲೂಕಿನ ಹಾರೋಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದ್ದು, ಕೇರಳ ಮೂಲದ ಉದ್ಯಮಿ ಸೂಫಿ ಎಂಬವರಿಗೆ ಸೇರಿದ ಇನ್ನೋವಾ ಕಾರು, ಹಣ ಕಿತ್ತುಕೊಂಡು ಖದೀಮರು ಪರಾರಿಯಾಗಿದ್ದಾರೆ. ಎರಡು ಕಾರುಗಳಲ್ಲಿ ಬಂದಿದ್ದ ನಾಲ್ವರು ಮುಸುಕುಧಾರಿಗಳು ಉದ್ಯಮಿ ಸೂಫಿಯವರ ಕಾರು ಕಿತ್ತುಕೊಂಡ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಮೈಸೂರು ನಗರದ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಡಿವೈಎಸ್‌ಪಿ ರಘು ಭೇಟಿ ನೀಡಿ ಪರಿಶೀಲನೆ ನಡೆದಿದ್ದಾರೆ. ಉದ್ಯಮಿ ಸೂಫಿಯಿಂದ ಜಯಪುರ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ; ಅಮಾನವೀಯತೆ ಮೆರೆದ ಮಾಲೀಕ
“ಕೇರಳದ ಅಡಕೆ ವ್ಯಾಪಾರಿ ಶಫಿ ಮೈಸೂರು-ಮಾನಂದವಾಡಿ ರಾಜ್ಯ ಹೆದ್ದಾರಿಯಲ್ಲಿ ತೆರಳುತ್ತಿದ್ದರು. ಈ ವೇಳೆ ಎರಡು ಕಾರಿನಲ್ಲಿ ಬಂದ ಮುಸುಕುಧಾರಿಗಳು ಅವರನ್ನು ಅಡ್ಡಗಟ್ಟಿದ್ದು, ಕಾರಿನ ಚಾಲಕ ಹಾಗೂ ಶಫಿ ಅವರನ್ನು ಕೆಳಗೆಳೆದು ಹಾಕಿ, ಅದೇ ಕಾರಿನಲ್ಲಿ ಪರಾರಿಯಾಗಿದ್ದಾರೆ” ಎಂದು ಜಯಪುರ ಪೊಲೀಸರು ತಿಳಿಸಿದ್ದಾರೆ.