ಜಮೀನನ್ನು ಸರ್ವೆ ಮಾಡಲು ಬಂದ ಸರ್ವೇಯರ್‌ಗಳ ಮೇಲೆ ಭೂ ಮಾಲಿಕರು ಹಲ್ಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಪೆದ್ದೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಜಮೀನೊಂದರಲ್ಲಿ ಸರ್ವೆ ಮಾಡಲು ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ಗಳು ಹಾಗೂ ರಿಸರ್ವ್ ಪೊಲೀಸರ ಭದ್ರತೆಯಲ್ಲಿ ಕಳೆದ ಡಿಸೆಂಬರ್‌ನಲ್ಲಿ ಸರ್ವೆ ಕಾರ್ಯ ಪುನರಾರಂಭಿಸಲಾಗಿತ್ತು. ಪೆದ್ದೂರಿನ ಸರ್ವೆ ನಂ.171/2 ರ ಹದ್ದುಬಸ್ತು ಅಳತೆಗೆ ಪರವಾನಗಿ ಭೂಮಾಪಕ ಕೆ.ಎಸ್.ವೆಂಕಟರಮಣಪ್ಪ ಅವರು ಡಿ.24 ರಂದು ಪೊಲೀಸ್ ಬಂದೋಬಸ್ತ್‌ನಲ್ಲಿ ಜಮೀನಿನ ಅಳತೆ ಕೆಲಸ ನಿರ್ವಹಿಸುತ್ತಿರುವಾಗ ಪೊಲೀಸರ ಮುಂದೆಯೇ ಪಕ್ಕದ ಜಮೀನಿನ ಭೂ ಮಾಲಿಕರು ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಇದು ಭೂಮಾಪಕರ ಆತಂಕ್ಕೆ ಕಾರಣವಾಗಿದೆ. ಅಂದಿನಿಂದ ಸರ್ವೇಯರ್‌ಗಳು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಭೂ ದಾಖಲೆಗಳ ಇಲಾಖೆಯ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಕ್ರಮವೂ ಆಗಿಲ್ಲ, ಬಂಧನವೂ ಆಗಿಲ್ಲ ಎಂದು ಸರ್ವೆ ಅಧಿಕಾರಿಗಳು ಅಳಲು ತೋಡಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ?:ಚಿಕ್ಕಬಳ್ಳಾಪುರ | ವಿಟಿಯು ಕಾಲೇಜು ವಿದ್ಯಾರ್ಥಿ ನೇಣಿಗೆ ಶರಣು
ರಾಜ್ಯ ಸರ್ಕಾರಿ ಪರವಾನಗಿ ಭೂಮಾಪಕರ ಸಂಘ ಹಲ್ಲೆಗೊಳಗಾದ ಸರ್ವೆಯರ್ ಬೆಂಬಲಕ್ಕೆ ನಿಂತು ತಮ್ಮ ಕೆಲಸಗಳನ್ನು ಸ್ಥಗಿತಗೊಳಿಸಿದ್ದರು. ಹದ್ದುಬಸ್ತ್ , ಗಡಿ ಗುರುತಿಸುವಿಕೆ, ತತ್ಕಾಲ್ ಪೋಡಿ, ಅಲಿನೇಷನ್, 11 ಇ (ಕ್ರಯ, ವಿಭಾಗ) ಹೀಗೆ ಜಮೀನು ವಿವಾದಗಳಿಗೆ ಸಂಬಂಧಿಸಿದ ಎಲ್ಲ ಕೆಲಸಗಳು ಸ್ಥಗಿತಗೊಂಡು ಜನರು ಪರದಾಡುವಂತಾಗಿದೆ. ಈ ಮಧ್ಯೆ ಹಲ್ಲೆ ನಡೆಸಿದವರು ನಿರೀಕ್ಷಣಾ ಜಾಮೀನು ಪಡೆದ ಹಿನ್ನೆಲೆ ಸದ್ಯ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರೂ ಬಂಧನವಾಗಿಲ್ಲ.
ಇದೀಗ ಸರ್ವೆಯರ್ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಮೇಲಧಿಕಾರಿಗಳು ಭರವಸೆ ನೀಡಿದ್ದು, ಈಗ ಸರ್ವೆ ಕೆಲಸ ಮತ್ತೆ ಆರಂಭಿಸುವುದಾಗಿ ಸರ್ವೆಯರ್‌ಗಳು ಹೇಳಿದ್ದಾರೆ.
