ವಿಜಯಪುರದ ಗಾಂಧಿನಗರ ಪ್ರದೇಶದಲ್ಲಿರು ಇಟ್ಟಿಗೆ ಭಟ್ಟಿಯೊಂದರಲ್ಲಿ ಕೆಲಸ ಮಾಡಲು ನಿರಾಕರಿಸಿದ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ಮೂವರು ತಪ್ಪಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, “ಪ್ರಕರಣಕ್ಕೆ ಸಂಬಂಧಿಸಿದಂತೆ ಇಟ್ಟಿಗೆ ಭಟ್ಟಿ ಮಾಲೀಕ ಖೇಮು ರಾಠೋಡ ಎಂಬಾತನನ್ನು ಬಂಧಿಸಲಾಗಿದ್ದು, ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಬಿಎನ್‌ಎಸ್ 109 ಅಡಿಯಲ್ಲಿ ಹತ್ಯೆ ಯತ್ನ ಪ್ರಕರಣ ದಾಖಲಿಸಲಾಗಿದೆ” ಎಂದು ತಿಳಿಸಿದ್ದಾರೆ.
“ಇಟ್ಟಿಗೆ ಭಟ್ಟಿ ಮಾಲೀಕ ಮತ್ತು ಆತನ ಮಗ ಸೇರಿಕೊಂಡು ಕಾರ್ಮಿಕರನ್ನು ಕೊಠಡಿಯಲ್ಲಿ ಕೂಡಿಹಾಕಿ, ಕೈ–ಕಾಲು ಕಟ್ಟಿ, ಕಾಲ ಮೇಲೆ ನಿಂತು ಪೈಪ್‌ನಿಂದ ಹಲ್ಲೆ ಮಾಡಿರುವ ಅಮಾನವೀಯ ಪ್ರಕರಣದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಅಂಗಾಲು, ಬೆನ್ನು, ಸೊಂಟಕ್ಕೆ ತೀವ್ರ ಹಲ್ಲೆಗೊಳಗಾಗಿರುವ ಕಾರ್ಮಿಕರಾದ ಸದಾಶಿವ ಮಾದರ, ಸದಾಶಿವ ಬಬಲಾದಿ, ಉಮೇಶ ಮಾದರ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ” ಎಂದು ತಿಳಿಸಿದರು.
ಇದನ್ನೂ ಓದಿದ್ದೀರಾ? ವಿಜಯಪುರ | ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ; ಅಮಾನವೀಯತೆ ಮೆರೆದ ಮಾಲೀಕ
“ಇಟ್ಟಿಗೆ ಭಟ್ಟಿಯಲ್ಲಿ ಪ್ರತಿದಿನ ₹600 ಕೂಲಿ ಪಡೆಯುತ್ತಿದ್ದ ಕಾರ್ಮಿಕರು ಕಳೆದ ಸಂಕ್ರಮಣದಂದು ಮನೆಗೆ ತೆರಳಿದ್ದರು. ಜನವರಿ 16ರಂದು ಮರಳಿ ಇಟ್ಟಿಗೆ ಭಟ್ಟಿಗೆ ಬಂದಿದ್ದ ಕಾರ್ಮಿಕರು ಕೆಲಸ ಮಾಡಲು ಒಪ್ಪದೆ ತಮ್ಮೆಲ್ಲ ಸಾಮಾನುಗಳನ್ನು ಮನೆಗೆ ಕೊಂಡೊಯ್ಯಲು ಮುಂದಾಗಿದ್ದರು. ಆಗ ಖೇಮು ರಾಠೋಡ ತಮ್ಮ ಜನರನ್ನು ಕರೆಯಿಸಿ, ಕಾರ್ಮಿಕರನ್ನು ಮೂರು ದಿನ ಕೊಠಡಿಯಲ್ಲಿ ಕೂಡಿ ಹಾಕಿ ನಿತ್ಯವೂ ಹಲ್ಲೆ ಮಾಡಿಸಿದ್ದಾನೆ. ಅಲ್ಲದೆ, ಕಾರ್ಮಿಕರನ್ನು ಹೆದರಿಸಿ, ಬೆದರಿಸಿ ಕೆಲಸ ಮಾಡಿಸಿದ್ದಾನೆ” ಎಂದು ನಿಂಬರಗಿ ತಿಳಿಸಿದ್ದಾರೆ.