ರಾಜ್ಯ ರೈತ ಸಂಘಗಳ ಒಕ್ಕೂಟ ಹಾಗೂ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮರ ನೆನಪಿನ ದಿನಾಚರಣೆಯನ್ನು ಜ. 30 ರಂದು ಬೆಳಗ್ಗೆ 11 ಗಂಟೆಗೆ ನಗರದ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ದಾವಣಗೆರೆ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ʼಮಹಾತ್ಮ ಗಾಂಧೀಜಿ ಹುತಾತ್ಮರಾದ ಜನವರಿ 30 ರಂದೇ ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದ ಸೈನಿಕರಿಗೆ ಹಾಗೂ ರೈತರಿಗೆ ಗೌರವ ನಮನ ಸಲ್ಲಿಸಲಾಗುವುದು. ಹೆಬ್ಬಾಳು ವಿರಕ್ತ ಮಠದ ಶ್ರೀ ಮಹಾಂತ ರುದ್ರಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.
ವಿಕರವೇ ರಾಜ್ಯಾಧ್ಯಕ್ಷ ಕೆ ಜಿ ಯಲ್ಲಪ್ಪ ಮಾತನಾಡಿ, ʼದೇಶದ ಸ್ವಾತಂತ್ರ್ಯಕ್ಕಾಗಿ ಜೀವ ಪಣಕ್ಕಿಟ್ಟು ಹೋರಾಡಿದ್ದ ಸ್ವಾತಂತ್ರ್ಯ ಯೋಧರನ್ನು ಇಂದು ಕಡೆಗಣಿಸಲಾಗುತ್ತಿದೆ. ಅವರಿಗೆ ಸರಿಯಾದ ಸ್ಥಾನಮಾನಗಳು ಸಿಗುತ್ತಿಲ್ಲ. ಅಂತಹ ಹುತಾತ್ಮರನ್ನು ನೆನೆದು ಅವರ ತ್ಯಾಗಕ್ಕೆ ಗೌರವ ಸಲ್ಲಿಸುವುದು ಕಾರ್ಯಕ್ರಮದ ಉದ್ದೇಶ ಎಂದರು.
ಈ ಸುದ್ದಿ ಓದಿದ್ದೀರಾ?: ದಾವಣಗೆರೆ | ವಸತಿ, ನಿವೇಶನ ರಹಿತರು ʼವಸತಿ, ನಿವೇಶನ ಪಡೆಯಲು ಜಾಗೃತಿ ಸಭೆʼ
ಕಬ್ಬು ಬೆಳೆಗಾರರ ಸಂಘದ ನಿರ್ದೇಶಕ ಹಾಗೂ ಜಿಲ್ಲಾಧ್ಯಕ್ಷ ತೇಜಸ್ವಿ ಪಟೇಲ್ ಮಾತನಾಡಿ, ʼಕೋಮುಗಲಭೆ ಸಂತ್ರಸ್ತರಿಗೆ 25 ಲಕ್ಷ ಪರಿಹಾರ ನೀಡುತ್ತಾರೆ. ಆದರೆ ರೈತ ಹುತಾತ್ಮರ ಕುಟುಂಬಕ್ಕೆ ಪರಿಹಾರ ನೀಡುವಲ್ಲಿ ಸಮಿತಿ ರಚಿಸಿ, ಕಡಿಮೆ ಮೊತ್ತದ ಪರಿಹಾರ ನೀಡುತ್ತಾರೆ. ಪರಿಹಾರ ನೀಡುವಲ್ಲಿ ಕೂಡ ರೈತರಿಗೆ ಅನ್ಯಾಯವಾಗುತ್ತಿದೆ. ರೈತರಿಗೆ ಸರಿಯಾದ ಪರಿಹಾರ ಸಿಗಬೇಕುʼ ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಅಂಜಿನಪ್ಪ ಪೂಜಾರ್, ತಿರುಮಲೇಶ್, ಸಿ.ಎಸ್. ಚಂದ್ರಶೇಖರ್, ಹೆಚ್ ವಿಜಯಕುಮಾರ್, ಚಂದ್ರಶೇಖರ್ ಹೊಲಗೇರಿ, ಪ್ರಕಾಶ್ ನಲ್ಲೂರು, ಶಿವಯೋಗಯ್ಯ ಲೋಕನಗೌಡ್ರು ಹಾಗೂ ಮತ್ತಿತರರು ಇದ್ದರು.
