ಹಾಸನದ ವಿಮಾನ ನಿಲ್ದಾಣ ಕಾಮಗಾರಿಗೆ ಸಂಬಂಧಿಸಿದಂತೆ ನ್ಯಾಯಾಲಯದ ತಡೆಯಾಜ್ಞೆಯಿರುವ ಜಾಗದಲ್ಲಿ ಕೆಐಎಡಿಬಿ ಅಧಿಕಾರಿಗಳು ಏಕಾಏಕಿ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿ ರೈತರು ಅಧಿಕಾರಿಗಳೊಂದಿಗೆ ಕೆಲ ಕಾಲ ಮಾತಿನ ಚಕಮಕಿ ನಡೆಸಿದ್ದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಬಿಗುವಿನ ಪರಿಸ್ಥಿತಿ ಆವರಿಸಿತ್ತು.
ವಿಮಾನ ನಿಲ್ದಾಣ ಕಾಮಗಾರಿ ವ್ಯಾಪ್ತಿಯಲ್ಲಿ ಬರುವ ಬೂವನಹಳ್ಳಿಯ ಸರ್ವೆ ನಂಬರ್ 44/48, 44/56ರಲ್ಲಿ ಭೂಮಾಲೀಕರು ಹಾಗೂ ಕೆಐಎಡಿಬಿ ಅಧಿಕಾರಿಗಳ ನಡುವೆ ಪರಿಹಾರದ ವಿಚಾರದಲ್ಲಿ ಗೊಂದಲವಿತ್ತು. ನಿಗಧಿತ ಸ್ಥಳದಲ್ಲಿ ಕಾಮಗಾರಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಆದರೂ ಕ್ಯಾರೆ ಎನ್ನದ ಅಧಿಕಾರಿಗಳು ಶನಿವಾರ ಬೆಳ್ಳಂ ಬೆಳಿಗ್ಗೆಯೇ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಮುಂದಾಗಿರುವುದರಿಂದ ರೈತರು ಕಿಡಿಕಾರಿದ್ದಾರೆ.
ಶಾಸಕ ಸ್ವರೂಪ್ ಪ್ರಕಾಶ್ ವಿಷಯ ತಿಳಿದು ಸ್ಥಳಕ್ಕಾಗಮಿಸಿದ್ದು, ರೈತರು ಹಾಗೂ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದರು. ಈ ವೇಳೆ ಕಾಮಗಾರಿ ನಿಲ್ಲಿಸಲು ಸಾಧ್ಯವಿಲ್ಲವೆಂದ ವಿಶೇಷ ಭೂ ಸ್ವಾಧೀನಾಧಿಕಾರಿ ವೆಂಕಟರಾಜು ಮಾತಿಗೆ ಕೆರಳಿದ ರೈತರು ಸ್ಥಳದಲ್ಲಿ ಕೆಲಸ ಮಾಡುತ್ತಿದ್ದವರ ವಿರುದ್ಧ ಗಲಾಟೆ ಆರಂಭಿಸಿದರು. ಈ ವೇಳೆ ಎಚ್ಚೆತ್ತ ಅಧಿಕಾರಿಗಳು ಜನವರಿ 22ರ ಬುಧವಾರ ರೈತರ ಸಭೆ ನಡೆಸಿ ರೈತರೊಂದಿಗೆ ಮಾತುಕತೆ ನಡೆಸಿ, ಇರುವ ಸಮಸ್ಯೆ ಇತ್ಯರ್ಥಪಡಿಸಿ ನಂತರ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದರು. ಇದರಿಂದಾಗಿ ಪರಿಸ್ಥಿತಿ ಸದ್ಯ ತಿಳಿಗೊಂಡಿದೆ. ಈ ವೇಳೆ ಶಾಸಕರು ಕೂಡ ಮಾಧ್ಯಮದೊಂದಿಗೆ ಮಾತನಾಡಿ ಕಾಮಗಾರಿ ಬಗ್ಗೆ ತಿಳಿಸಿದರು. ನಂತರ ರೈತರು ಕೂಡ ತಮ್ಮ ನಿರ್ಧಾರವನ್ನು ಮಾಧ್ಯಮದೊಂದಿಗೆ ಹಂಚಿಕಂಡರು.
ರೈತರು ಕೋರ್ಟ್ ತಡೆಯಾಜ್ಞೆ ಪ್ರತಿಯನ್ನು ನೀಡಿದರೂ ಕೂಡ ಸೌಜನ್ಯಕ್ಕಾದರೂ ತಮ್ಮ ವಾಹನದಿಂದ ಇಳಿಯದೆ ವಾಹನದಲ್ಲಿಯೇ ಕುಳಿತು ಕಾಮಗಾರಿ ನಿಲ್ಲಿಸಬೇಡಿ ಮುಂದುವರೆಸಿ ಏನು ಮಾಡುತ್ತಾರೋ ಮಾಡಿಕೊಳ್ಳಲಿ ಎಂದು ಕೆಐಎಡಿಬಿ ವಿಶೇಷ ಭೂ ಸ್ವಾಧೀನಾಧಿಕಾರಿ ವೆಂಕಟರಾಜು ಉಡಾಫೆಯಿಂದ ಮಾತನಾಡಿದರು. ಉಡಾಫೆ ವರ್ತನೆ ರೈತರ ತೀವ್ರ ಆಕ್ರೋಶಕ್ಕೆ ಕಾರಣವಾಯಿತು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ವಸತಿ, ನಿವೇಶನ ರಹಿತರು ʼವಸತಿ, ನಿವೇಶನ ಪಡೆಯಲು ಜಾಗೃತಿ ಸಭೆʼ
100ಕ್ಕೂ ಹೆಚ್ಚು ಪೊಲೀಸರ ನಿಯೋಜನೆ: “ಕಾಮಗಾರಿ ಆರಂಭಿಸುವ ಮೊದಲೇ 100ಕ್ಕೂ ಅಧಿಕ ಮಂದಿ ಪೊಲೀಸರನ್ನು ಭದ್ರತೆಗಾಗಿ ಕೆಐಎಡಿಬಿ ಅಧಿಕಾರಿಗಳು ಕರೆಸಿಕೊಂಡಿದ್ದರು. ವಿಮಾನ ನಿಲ್ದಾಣ ಕಾಮಗಾರಿಯ ಸದುದ್ದೇಶಕ್ಕಾಗಿ ಜಾಗ ನೀಡಿದ್ದೇವೆ. ನಮಗೂ ವಿಮಾನ ನಿಲ್ದಾಣ ಕಾಮಗಾರಿ ಬೇಗ ಪೂರ್ಣಗೊಳ್ಳಬೇಕೆಂಬ ಆಶಯವಿದೆ. ಆದರೆ ಅಧಿಕಾರಿಗಳು ಪೊಲೀಸರನ್ನು ಮುಂದಿಟ್ಟುಕೊಂಡು ರೈತರಿಗೆ ಪರಿಹಾರ ನೀಡದೆ ಬೆದರಿಸುವ ತಂತ್ರ ಅನುಸರಿಸುತ್ತಿದ್ದಾರೆ. ಇದು ರೈತ ಸಮೂಹದ ಮೇಲೆ ಸರ್ಕಾರಗಳು, ಜನಪ್ರತಿನಿಧಿಗಳು ಇಟ್ಟಿರುವ ಗೌರವಕ್ಕೆ ಹಿಡಿದ ಕೈಗನ್ನಡಿಯಾಗಿದೆ” ಎಂದು ರೈತರು ಆಕ್ರೋಶ ಹೊರಹಾಕಿದರು.
ಕಣ್ಮುಚ್ಚಿ ಕುಳಿತ ಕೆಪಿಟಿಸಿಎಲ್ ಅಧಿಕಾರಿಗಳು: ವಿಮಾನ ನಿಲ್ದಾಣ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ತಡೆಗೋಡೆ ನಿರ್ಮಾಣಕ್ಕಾಗಿ 220 ಕೆವಿ ವಿದ್ಯುತ್ ಮಾರ್ಗದ ಅಡಿಯಲ್ಲಿ ಕೆಐಎಡಿಬಿ ಅಧಿಕಾರಿಗಳು ಬೃಹತ್ ಯಂತ್ರಗಳನ್ನು ಬಳಸಿ ಕಾಮಗಾರಿ ನಡೆಸುತ್ತಿದ್ದರೂ ಕೂಡ ನಮಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ಕೆಪಿಟಿಸಿಎಲ್ ಅಧಿಕಾರಿಗಳು ವರ್ತಿಸಿದ್ದು, ಅವರ ಕಾರ್ಯದಕ್ಷತೆಯನ್ನು ಸಾರ್ವಜನಿಕರು ಪ್ರಶ್ನಿಸುವಂತೆ ಮಾಡಿದೆ.