ಆನ್‌ಲೈನ್ ಗೇಮಿಂಗ್‌ನಲ್ಲಿ ಹಣ ಕಳೆದುಕೊಂಡು ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ನಡೆದಿದೆ.
ಬೇಲೂರು ತಾಲೂಕಿನ ಚೋಕನಹಳ್ಳಿ ಗ್ರಾಮದ ರಾಕೇಶ್ ಗೌಡ(23) ಮೃತ ಯುವಕ. ರಾಕೇಶ್ ಫೈನಾನ್ಸ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿ ಇದೆ. ಹಲವಾರು ತಿಂಗಳಿಂದ ಆನ್‌ಲೈನ್ ಜೂಜಿನಲ್ಲಿ ಹಣ ಕಳೆದುಕೊಂಡಿದ್ದರು. ಇದರಿಂದ ಮನನೊಂದು ಜನವರಿ 18ರಂದು ಬೇಲೂರಿನ ಖಾಸಗಿ ಲಾಡ್ಜ್‌ನಲ್ಲಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ರಾಕೇಶ್ ಡೆತ್‌ನೋಟ್‌ನಲ್ಲಿ ಅವರ ತಾಯಿಗೆ ಕ್ಷಮೆ ಕೇಳಿದ್ದು, “ಆನ್‌ಲೈನ್ ಗೇಮ್ ನಿಷೇಧಿಸಬೇಕು, ಯಾರೂ ಆನ್‌ಲೈನ್ ಗೇಮ್ ಆಟ ಆಡಬೇಡಿ. ಬೇಲೂರು ಶಾಸಕ ಹುಲ್ಲಳ್ಳಿ ಸುರೇಶ್ ಅವರು ನನ್ನ ಅಂತಿಮ ದರ್ಶನಕ್ಕೆ ಬರಬೇಕು” ಎಂದು ಬರೆದಿಟ್ಟಿದ್ದಾರೆಂದು ಹೇಳಲಾಗಿದೆ.
ಅಂತಿಮ ದರ್ಶನ ಪಡೆದ ಶಾಸಕ ಎಚ್ ಕೆ ಸುರೇಶ :
ಆನ್‌ಲೈನ್ ಜೂಜಾಟದ ದುಷ್ಪರಿಣಾಮದಿಂದ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದು ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಹುಲ್ಲಳ್ಳಿ ಸುರೇಶ್ ಅವರು ಆಸ್ಪತ್ರೆಗೆ ತೆರಳಿ ರಾಕೇಶ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಆರ್ಥಿಕ ಸಹಾಯ ಮಾಡಿದರು.
“ಇತ್ತೀಚಿನ ದಿನಗಳಲ್ಲಿ ಯುವಸಮುದಾಯ ಆನ್‌ಲೈನ್ ಬೆಟ್ಟಿಂಗ್ ಪ್ರಭಾವಕ್ಕೆ ಒಳಗಾಗಿ, ಸಾಲ-ಶೂಲ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗುತ್ತಿರುವುದು ತೀವ್ರ ಆತಂಕಕಾರಿ ಸಂಗತಿಯಾಗಿದೆ. ಯುವ ಸಮುದಾಯ ಎಚ್ಚೆತ್ತು ಜೂಜಾಟದಿಂದ ಹೊರಬರಬೇಕು” ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿದ್ದೀರಾ?ಹಾಸನ | ತಡೆಯಾಜ್ಞೆ ಜಾಗದಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ ಮುಂದಾದ ಅಧಿಕಾರಿಗಳು; ರೈತರ ಆಕ್ರೋಶ
ಈ ಕುರಿತು ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

