ಬೌದ್ಧರ ಸರ್ವಾಂಗೀಣ ಅಭಿವೃದ್ಧಿ ಹಾಗೂ ಬೌದ್ಧ ಕ್ಷೇತ್ರಗಳ ಅಭಿವೃದ್ಧಿಗಾಗಿ ಈ ಸಾಲಿನ ರಾಜ್ಯ ಬಜೆಟ್‌ನಲ್ಲಿ ಕನಿಷ್ಟ ₹1000 ಕೋಟಿ ಅನುದಾನ ಮೀಸಲಿಡಬೇಕು ಎಂದು ಡಾ ಬಿ ಆರ್ ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ ಪಿ ತಿಪ್ಪೇಸ್ವಾಮಿ ಸರ್ಕಾರಕ್ಕೆ ಮನವಿ ಮಾಡಿದರು.
ಚಿತ್ರದುರ್ಗ ನಗರದ ʼಕೋಟೆ ನಾಡು ಬುದ್ದ ವಿಹಾರʼದಲ್ಲಿ ಗೌತಮ ಬುದ್ದ ಪ್ರತಿಷ್ಠಾನ ಆಯೋಜಿಸಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೂರ್ಣ ಪ್ರಮಾಣದಲ್ಲಿ ಬೌದ್ಧ ಕ್ಷೇತ್ರ ಸನ್ನತಿ ಅಭಿವೃದ್ಧಿ ಮಂಡಳಿ ರಚಿಸಬೇಕು. ಈ ಯೋಜನೆ ಆಂಧ್ರ ಪ್ರದೇಶದ ಬುದ್ಧವನ ಮಾದರಿಯಲ್ಲಿ ಕನಿಷ್ಠ 200 ಎಕರೆ ಪ್ರದೇಶದಲ್ಲಿ ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿಪಡಿಸಿ ಸನ್ನತಿಯನ್ನು ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಮಾಡಬೇಕು. ಪ್ರತಿ ವರ್ಷ ಬುದ್ಧ ಜಯಂತಿಗೆ ಸಾರ್ವತ್ರಿಕ ರಜೆ ಘೋಷಣೆ ಮಾಡಬೇ ಎಂದು ಆಗ್ರಹಿಸಿದರು.

ʼಬುದ್ಧಗಯಾದ ಆಡಳಿತ ಹಾಗೂ ಉಸ್ತುವಾರಿಯನ್ನು ಬೇರೆಯವರ ಹಿಡಿತಕ್ಕೆ ತರಲು ಕಾರಣವಾದ ಬೋಧಗಯ ಟೆಂಪಲ್ ಆಕ್ಟ್ 1949 ಅನ್ನು ರದ್ದುಗೊಳಿಸಿ ಬುದ್ಧಗಯಾದ ಮಹಾಬೋಧಿ ಮಹಾವಿಹಾರದ ಆಡಳಿತವನ್ನು ಸಂಪೂರ್ಣವಾಗಿ ಬೌದ್ಧರ ಸುಪರ್ದಿಗೆ ನೀಡಬೇಕೆಂದು ಕೇಂದ್ರ ಸರ್ಕಾರ ಮತ್ತು ಬಿಹಾರ ಸರ್ಕಾರಕ್ಕೆ ಸೂಕ್ತ ಶಿಫಾರಸ್ಸು ಮಾಡಬೇಕು. ಕರ್ನಾಟಕ ಸರ್ಕಾರ ಪ್ರತಿವರ್ಷ ಫೆ.12ರಂದು ಸಾಮ್ರಾಟ್ ಅಶೋಕ ಸನ್ನತಿ ಉತ್ಸವವನ್ನು ಆಚರಿಸಬೇಕು. 1990ರ ಸಂವಿಧಾನ ತಿದ್ದುಪಡಿ ಕಾಯ್ದೆ ಪ್ರಕಾರ ಪರಿಶಿಷ್ಟ ಜಾತಿಯಿಂದ ಬೌದ್ಧ ಧರ್ಮಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಪರಿಶಿಷ್ಟ ಜಾತಿ ವಿದ್ಯಾರ್ಥಿ ವೇತನ ಪಡೆಯಲು ಅನುಕೂಲವಾಗುವಂತೆ ಸಮಾಜ ಕಲ್ಯಾಣ ಇಲಾಖೆ ತಂತ್ರಾಂಶ ಸರಿಪಡಿಸಿ ವಿದ್ಯಾರ್ಥಿ ವೇತನ ನೀಡಬೇಕುʼ ಎಂದರು.
ʼಸಂವಿಧಾನದ ಪ್ರಕಾರ ಪರಿಶಿಷ್ಟ ಜಾತಿಗಳು ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮಕ್ಕೆ ಸೇರಿದವರಾಗಿದ್ದಾರೆ. ಜಾತಿ ಪ್ರಮಾಣ ಪತ್ರದಲ್ಲಿ(ನಮೂನೆ-೧) ಧರ್ಮದ ಉಲ್ಲೇಖ ಇರುವಂತೆ ಮಾರ್ಪಾಡು ಮಾಡಬೇಕು. ಉದ್ಯೋಗವಕಾಶ ಸಂದರ್ಭದಲ್ಲಿ ಈ ಹಿಂದೆ ತಮ್ಮ ದಾಖಲೆಗಳಲ್ಲಿ ಉಪ ಜಾತಿ ನಮೂದಿಸದೆ ನವಬೌದ್ಧ ಎಂದು ದಾಖಲಿಸಿದ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳನ್ನು ಜಾತಿ ದೃಢೀಕರಣ ಸಂದರ್ಭದಲ್ಲಿ ತಿರಸ್ಕಾರ ಮಾಡುತ್ತಿದ್ದಾರೆ. ಕೂಡಲೇ ಸಮಾಜ ಕಲ್ಯಾಣ ಇಲಾಖೆ ಸ್ಪಷ್ಟೀಕರಣ ನೀಡಿ ಆದೇಶ ಹೊರಡಿಸಿ ನವಬೌದ್ಧರನ್ನು ಪರಿಶಿಷ್ಟ ಜಾತಿಯೆಂದು ಪರಿಗಣಿಸಬೇಕುʼ ಎಂದು ಮನವಿ ಮಾಡಿದರು.
ʼರಾಜ್ಯದ ಪ್ರತಿ ಪಂಚಾಯತಿ, ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಬುದ್ಧ ವಿಹಾರ ನಿರ್ಮಾಣ ಮಾಡಲು ಕನಿಷ್ಟ 5 ರಿಂದ 10 ಎಕರೆ ಜಮೀನು ಕಾಯ್ದಿರಿಸಬೇಕು. ರಾಜ್ಯದಲ್ಲಿರುವ ಸಾಮ್ರಾಟ್ ಅಶೋಕರ ಶಿಲಾ ಶಾಸನಗಳನ್ನು ಸಂರಕ್ಷಿಸಲು ವಿಶೇಷ ಯೋಜನೆ ರೂಪಿಸಬೇಕು. ರಾಜ್ಯದ ಹಲವೆಡೆ ಬುದ್ಧ ವಿಹಾರ ನಿರ್ಮಾಣಕ್ಕೆ ದಾನಿಗಳು ಭೂಮಿ ದಾನ ಮಾಡಿದ್ದು ಹಲವೆಡೆ ಸ್ಥಳೀಯ ಆಡಳಿತದಿಂದ ಭೂಮಿ ಕಾಯ್ದಿರಿಸಲಾಗಿದೆ. ಅಂತಹ ಸ್ಥಳಗಳಲ್ಲಿ ಬುದ್ಧವಿಹಾರ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡಬೇಕುʼ ಎಂದು ಹಲವು ಮನವಿಗಳನ್ನು ಸರ್ಕಾರದ ಮುಂದಿಟ್ಟರು.
ಈ ಸುದ್ದಿ ಓದಿದ್ದೀರಾ?: ಚಿತ್ರದುರ್ಗ | ʼನಟ ದರ್ಶನ್, ರೇಣುಕಸ್ವಾಮಿ ಕುಟುಂಬಕ್ಕೆ ದುಡ್ಡು ಕೊಟ್ಟಿದ್ದಾರೆʼ; ವದಂತಿಗೆ ಸ್ಪಷ್ಟನೆ
ಕಾರ್ಯಕ್ರಮದಲ್ಲಿ ಚಳ್ಳಕೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಪ್ರೊ. ಡಾ ಕರಿಬಸಪ್ಪ ಉಪನ್ಯಾಸಕ ಈ ನಾಗೇಂದ್ರಪ್ಪ, ಇಂದೂಧರ ಗೌತಮ್, ತಿಪಟೂರು ಮಂಜು, ಶಿಕ್ಷಕಿ ಲಕ್ಷ್ಮೀದೇವಿ, ಹರೀಶ್ ಗಿರಿಜಾ, ನಿವೃತ್ತ ಎಸ್‌ಐ ಕೃಷ್ಣಪ್ಪ, ಬೆಸ್ಕಾಂ ತಿಪೇಸ್ವಾಮಿ, ಬನ್ನಿಕೋಡ್ ರಮೇಶ್, ಶಾಂತಮ್ಮ, ತಿಪ್ಪಮ್ಮ ಇತರರು ಭಾಗವಹಿಸಿದ್ದರು.
