ಜಿಲ್ಲೆಯಲ್ಲಿ ದಲಿತರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಈಡೇರಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿದೆ. ದಲಿತರ ಭೂಮಿ ಕನಸು ಕನಸಾಗಿಯೇ ಉಳಿದಿದೆ. ನಿವೇಶನ, ವಸತಿ, ಬಗರ್‌ಹುಕುಂ ಸಾಗುವಳಿ ಸಮಸ್ಯೆಗಳನ್ನು ಈಡೇರಿಸುತ್ತೇವೆ ಎಂದು ಜಿಲ್ಲಾಡಳಿತ ಲಿಖಿತ ಪತ್ರ ನೀಡುವವರೆಗೆ ಅನಿರ್ಧಿಷ್ಟಾವಧಿ ಧರಣಿ ಕೈಬಿಡುವುದಿಲ್ಲ ಎಂದು ದಸಂಸ ರಾಜ್ಯ ಸಂಚಾಲಕ ರಾಜಕಾಂತ್ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.
ನಗರದ ಜೈಭೀಮ್ ವಿದ್ಯಾರ್ಥಿ ನಿಲಯದಿಂದ ಮೆರವಣಿಗೆಯಲ್ಲಿ ಬಂದ ದಸಂಸ ಮುಖಂಡರು, ಕಾರ್ಯಕರ್ತರು ದಲಿತ ವಿರೋಧಿ ಜಿಲ್ಲಾಡಳಿತದ ವಿರುದ್ದ ನ್ಯಾಯಕ್ಕಾಗಿ ನಮ್ಮ ನಡಿಗೆ, ತಾಲೂಕು ಕಚೇರಿ ಮುಂದೆ ಅನಿರ್ಧಿಷ್ಟ ಧರಣಿ ಎಂಬ ಘೋಷಣೆಗಳನ್ನು ಮೊಳಗಿಸಿದರು.
ಜಿಲ್ಲೆಯ 7 ತಾಲೂಕುಗಳಲ್ಲಿ ಏಕಕಾಲಕ್ಕೆ ದಸಂಸ ವತಿಯಿಂದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಧರಣಿ ಹಮಿಕೊಳ್ಳಲಾಗಿದೆ. ಪ್ರತಿಭಟನೆಯ ಸ್ಥಳಕ್ಕೆ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್ ಭೇಟಿ ನೀಡಿ ಅಹವಾಲು ಸ್ವೀಕರಿಸಿ ಧರಣಿ ಕೈಬಿಡುವಂತೆ ಮನವಿ ಮಾಡಿದ್ದಾರೆ. ಬೇಡಿಕೆ ಈಡೇರಿಸುವ ಬಗ್ಗೆ ಲಿಖಿತವಾಗಿ ಪತ್ರ ನೀಡುವವರೆಗೂ ಧರಣಿ ಮುಂದುವರೆಸಲಾಗುವುದು ಎಂದು ಕರೆ ನೀಡಿದರು.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹೊರಗುತ್ತಿಗೆ ನೌಕರರ ಪ್ರತಿಭಟನೆ
ಭೂಮಿ ಮತ್ತು ವಸತಿ ವಂಚಿತರಿಗೆ ತಕ್ಷಣವೇ ಭೂಮಿ ಮತ್ತು ವಸತಿ ಕಲ್ಪಿಸುವುದು., ಎಸ್.ಸಿ.ಪಿ./ಟಿ.ಎಸ್.ಪಿ ಯೋಜನೆಯ ಹಣ ದುರ್ಬಳಕೆ ಆಗುತ್ತಿರುವುದನ್ನು ತನಿಖೆಗೆ ಒಳಪಡಿಸಿ, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳುವುದು. ನಮೂನೆ 50, 53, 57 ಅನ್ನು ಸಲ್ಲಿಸಿರುವ ಫಲಾನುಭವಿಗಳಿಗೆ ತ್ವರಿತಗತಿಯಲ್ಲಿ ಸರ್ಕಾರದ ನಿಯಮದಂತೆ ಸಾಗುವಳಿ ಚೀಟಿ ನೀಡುವುದು., ದಲಿತರ ಮೇಲಿನ ದೌರ್ಜನ್ಯಗಳನ್ನು ತಡೆಯುವಲ್ಲಿ ವಿಫಲರಾಗಿರುವ ಪೊಲೀಸ್ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವುದು., ಗೌರಿಬಿದನೂರು ತಾಲ್ಲೂಕಿನ ಜೋಡಿ ಗ್ರಾಮಗಳ ಗೇಣಿದಾರರ ಭೂ ಸಮಸ್ಯೆಯನ್ನು ಕೂಡಲೇ ಇತ್ಯರ್ಥಗೊಳಿಸಬೇಕು ಎಂದು ಆಗ್ರಹಿಸಿದರು.
5 ತಾಲೂಕು ಕೇಂದ್ರಗಳಲ್ಲೂ ಅಂಬೇಡ್ಕರ್ ಭವನ, ಬಾಬು ಜಗಜೀವನರಾಂ ಭವನ ಮತ್ತು ಮಹರ್ಷಿ ವಾಲ್ಮೀಕಿ ಭವನಗಳನ್ನು ನಿರ್ಮಿಸುವುದು. ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಮಹರ್ಷಿ ವಾಲ್ಮೀಕಿ ವರ್ಗಗಳ ಇಲಾಖೆಯ ವಿದ್ಯಾರ್ಥಿ ನಿಲಯದಲ್ಲಿ ಖಾಲಿ ಇರುವ ವಾರ್ಡನ್‌ಗಳನ್ನು ಕೂಡಲೇ ಭರ್ತಿ ಮಾಡಬೇಕು. ಜಿಲ್ಲೆಯಲ್ಲಿ ಹಾಲಿ ಕಂದಾಯ ಜಮೀನುಗಳಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಡೀಮ್ಡ್ ಫಾರೆಸ್ಟ್ ರದ್ದುಪಡಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಧರಣಿ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಪಿ ಎನ್ ರವೀಂದ್ರ ಮನವಿ ಸ್ವೀಕರಿಸಿ, ದಲಿತ ಸಂಘರ್ಷ ಸಮಿತಿ ಮುಖಂಡರು, ಪದಾಧಿಕಾರಿಗಳು ದಲಿತರಿಗೆ ಮೂಲಭೂತ ಸೌಕರ್ಯ ಒದಗಿಸುವುದು, ದಲಿತರ ಮೇಲಿನ ದೌರ್ಜನ್ಯ ತಡೆಯುವುದು ಸೇರಿದಂತೆ ಭೂಮಿ, ವಸತಿ ಸೇರಿ ಘನತೆಯ ಬದುಕಿಗಾಗಿ ಅನಿರ್ಧಿಷ್ಟಾವಧಿ ಮುಷ್ಕರದ ಹಾದಿ ತುಳಿದಿದ್ದಾರೆ. ಜಿಲ್ಲಾಡಳಿತ ಕೂಡಲೇ ಈ ಸಮಸ್ಯೆಗಳ ಬಗ್ಗೆ ಗಮನಹರಿಸಿ ಜಿಲ್ಲಾಡಳಿತದಿಂದ ಶೀಘ್ರ ಸಮಸ್ಯೆಗಳನ್ನು ಸರಿಪಡಿಸಲಾಗುವುದು. ಬಗರ್‌ಹುಕುಂ ಸಮಸ್ಯೆ, ಆಶ್ರಯ ಸಮಸ್ಯೆ, ಹಕ್ಕುಪತ್ರ ಸಮಸ್ಯೆ ಪರಿಹಾರ, ಸ್ಮಶಾನ ಭೂಮಿಗೆ ಮನವಿ ನೀಡಿದ್ದಾರೆ. ಇದನ್ನು ಪರಿಶೀಲಿಸಿ ಶೀಘ್ರವೇ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ‘ರೋಹಿತ್ ಕಾಯ್ದೆ’ ಜಾರಿಗಾಗಿ ಆಗಬೇಕಿದೆ ‘ಜನಾಂದೋಲನ’
ಈ ವೇಳೆ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿ.ಬಿ.ಗಂಗಪ್ಪ, ಸಂಘಟನಾ ಕಾರ್ಯದರ್ಶಿ ಬಿ.ವಿ.ವೆಂಕಟರಮಣ, ಜಿಲ್ಲಾ ಸಂಘಟನಾ ಸಂಚಾಲಕ ಎನ್.ಎ. ವೆಂಕಟೇಶ್, ಜಿಲ್ಲಾ ಖಜಾಂಚಿ ಜಿ.ವಿ.ಗಂಗಪ್ಪ, ತಾಲೂಕು ಸಂಚಾಲಕ ಪರಮೇಶ್, ತಾಲೂಕು ಸಂಘಟನಾ ಸಂಚಾಲಕ ಟೈಲರ್ ಮುನಿರಾಜು, ಡಾ.ನರಸಿಂಹಯ್ಯ, ತ್ಯಾಗರಾಜು, ತಾಲೂಕು ಖಜಾಂಚಿ ಮುನಿನಾರಾಯಣಪ್ಪ, ಚಿನ್ನಪ್ಪ, ಕರಗಪ್ಪ, ಕಣಿತಳ್ಳಿ ಮುನಿಯಪ್ಪ, ರಾಮಕೃಷ್ಣಪ್ಪ, ಮೂರ್ತಿ, ವೆಂಕಟೇಶ್, ಲಕ್ಷ್ಮಯ್ಯ, ವೈ.ನಾರಾಯಣ್, ಜಿಲ್ಲಾ ಗಡಿನಾಡು ರೈತಸಂಘದ ಅಧ್ಯಕ್ಷ ಉಪ್ಪಾರ್ ವೆಂಕಟೇಶ್, ತಾಲೂಕು ಅಧ್ಯಕ್ಷ ರಾಮಕೃಷ್ಣಪ್ಪ, ಜಿಲ್ಲಾ ಕಾರ್ಯದರ್ಶಿ ಟಿ.ಮುನಿರಾಜು ಇತರರಿದ್ದರು.