ರಾಯಚೂರು ಮಹಾನಗರ ಪಾಲಿಕೆ ರಸ್ತೆ ಬದಿಯ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಿದ್ದನ್ನು ಖಂಡಿಸಿ ಕರ್ನಾಟಕ ಬೀದಿಬದಿ ವ್ಯಾಪಾರಿಗಳ ಸಂಘದ ನೇತೃತ್ವದಲ್ಲಿ ವ್ಯಾಪಾರಿಗಳು ಪ್ರತಿಭಟನೆ ನಡೆಸಿದರು.
ನಗರದ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಧರಣಿ ನಡೆಸಿ, ಹೆದ್ದಾರಿಗಳನ್ನು ವಿಸ್ತರಣೆ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಬೀದಿ ವ್ಯಾಪಾರಿಗಳನ್ನು ಬೀದಿ ಪಾಲು ಮಾಡಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನದ ಅನುಚ್ಛೇದ 19(1)ಜೆ ಪ್ರಕಾರ ದೇಶದ ಪ್ರತಿಯೊಬ್ಬ ನಾಗರಿಕರಿಗೂ ವ್ಯಾಪಾರ ನಡೆಸುವ ಹಕ್ಕಿದೆ. ಆತ್ಮನಿರ್ಭರ ಯೋಜನೆ, ಕೌಶಲ ಅಭಿವೃದ್ಧಿ ಯೋಜನೆಗಳು ನಮ್ಮ ಬದುಕನ್ನು ಹಸನು ಮಾಡುವ ಬದಲು ನಮ್ಮ ನಾಶಕ್ಕೆ ಕಾರಣವಾಗುತ್ತಿವೆ. ಪಾಲಿಕೆ ಅಧಿಕಾರಿಗಳು ವ್ಯಾಪಾರಿಗಳ ಶೆಡ್‌ಗಳನ್ನು ಜೆಸಿಬಿಯಿಂದ ಧ್ವಂಸ ಮಾಡಿ ನಮಗೆ ಸಾಕಷ್ಟು ನಷ್ಟ ಉಂಟು ಮಾಡಿದ್ದಾರೆ. ವ್ಯಾಪಾರ ನಡೆಸಲು ಯಾವುದೇ ರೀತಿಯ ಅನುಕೂಲವಾಗದಂತೆ ಮಾಡಿದ್ದಾರೆ. ಜಿಲ್ಲಾಡಳಿತ ತಕ್ಷಣ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಬೀದಿಬದಿ ವ್ಯಾಪಾರ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ?: ರಾಯಚೂರು | ಮನುಷ್ಯತ್ವ ಇಲ್ಲದವರಿಂದ ಕಾರ್ಮಿಕರ ಮೇಲೆ ಹಲ್ಲೆ: ಸಚಿವ ಸಂತೋಷ್ ಲಾಡ್
ಧರಣಿಯಲ್ಲಿ ಗಂಗಾಧರ, ಜಿ. ಅಮರೇಶ, ಪಾಷಾ ಮತ್ತಿತರರು ಇದ್ದರು.
