ಅಪಘಾತದಲ್ಲಿ ತಂದೆ ಮೃತಪಟ್ಟಿದ್ದು, ವಿಷಯವೇ ಗೊತ್ತಿಲ್ಲದ ಮಗಳು ಹಸೆಮಣೆ ಏರಿದ ಮನಕಲಕುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ನಡೆದಿದೆ.
ಭಾನುವಾರ ಹಾಗೂ ಸೋಮವಾರ ತರೀಕೆರೆ ಪಟ್ಟಣದ ನಾಗಪ್ಪ ಕಾಲೋನಿ ನಿವಾಸಿ ಚಂದ್ರು ಅವರ ಮಗಳ ಮದುವೆ ನಿಶ್ಚಯವಾಗಿತ್ತು. ಆದರೆ ಆಪ್ತಮಿತ್ರನಿಗೆ ಲಗ್ನಪತ್ರಿಕೆ ಕೊಡಲು ಹೋದ ತಂದೆ ಮಾರ್ಗಮಧ್ಯೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಸಂಬಂಧಿಕರು ತಂದೆಯ ಸಾವಿನ ಸುದ್ದಿಯನ್ನು ಮುಚ್ಚಿಟ್ಟು ಮದುವೆ ಕಾರ್ಯ ಮಾಡಿ ಮುಗಿಸಿದ್ದಾರೆ.
ಚಂದ್ರು ಅವರು ತಮ್ಮ ಕೊನೆಯ ಮಗಳ ಮದುವೆ ಎಂದು ಮದುವೆ ಕಾರ್ಯವನ್ನು ಅದ್ಧೂರಿಯಾಗಿ ನಡೆಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಆದರೆ, ಮಗಳ ಮದುವೆ ಆರತಕ್ಷತೆ ದಿನ ಆತ್ಮೀಯ ಸ್ನೇಹಿತನಿಗೆ ಲಗ್ನ ಪತ್ರಿಕೆ ಕೊಟ್ಟಿಲ್ಲವೆಂದು ತರೀಕೆರೆ ತಾಲೂಕು ಹುಲಿ ತಿಮ್ಮಾಪುರಕ್ಕೆ ಹೋಗಿದ್ದರು. ಲಗ್ನಪತ್ರಿಕೆ ನೀಡಿ ಮನೆಗೆ ಬರುವ ವೇಳೆ ಮಾರ್ಗ ಮಧ್ಯೆ ಬೈಕ್ ಅಪಘಾತವಾಗಿದೆ.

ಅಪಘಾತದಿಂದ ತೀವ್ರ ಗಾಯಗೊಂಡಿದ್ದ ಚಂದ್ರು ಅವರನ್ನು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಚಂದ್ರು ಭಾನುವಾರ ಮಧ್ಯಾಹ್ನವೇ ಮೃತಪಟ್ಟಿದ್ದರು.
ಚಂದ್ರು ಮೃತಪಟ್ಟಿರುವ ವಿಷಯ ಮನೆಯವರಿಗೆ ತಿಳಿಸಿದರೆ ಮದುವೆ ಕಾರ್ಯ ನಿಲ್ಲುತ್ತದೆ ಎಂದು ಕುಟುಂಬಸ್ಥರು ಚಂದ್ರು ಪತ್ನಿ ಮತ್ತು ಮಗಳು ದೀಕ್ಷಾ ಅವರಿಗೆ ತಿಳಿಸಿಲ್ಲ. ‘ಅಪಘಾತವಾಗಿ ಆಸ್ಪತ್ರೆಯಲ್ಲಿದ್ದಾರೆ, ಜೀವಕ್ಕೇನೂ ತೊಂದರೆ ಇಲ್ಲ, ಚೆನ್ನಾಗಿದ್ದಾನೆ’ ಎಂದು ಹೇಳಿ ಭಾನುವಾರ ಆರತಕ್ಷತೆ ಮುಗಿಸಿ, ಸೋಮವಾರ ನಿಗದಿಯಾಗಿದ್ದ ಮುಹೂರ್ತದಲ್ಲಿ ಮದುವೆ ಕಾರ್ಯವನ್ನೂ ಮಾಡಿ ಮುಗಿಸಿದ್ದಾರೆ.
ಮದುವೆ ಕಾರ್ಯ ಮುಗಿಯುತ್ತಿದ್ದಂತೆ ಕುಟುಂಬಸ್ಥರು ಚಂದ್ರು ನಿಧನವಾಗಿರುವ ಸುದ್ದಿಯನ್ನು ಪತ್ನಿ ಹಾಗೂ ಮದುಮಗಳು ದೀಕ್ಷಾಗೆ ತಿಳಿಸಿದ್ದಾರೆ.

ಈ ವೇಳೆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಬೀರೂರು ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ಮದುವೆ ಕಾರ್ಯ ಮುಗಿಸಿಕೊಂಡು ಮನೆಗೆ ಬರುವ ವೇಳೆಗೆ ತಂದೆಯ ಮೃತದೇಹ ಕೂಡ ಮನೆಗೆ ಬಂದಿತ್ತು. ಈ ದೃಶ್ಯವನ್ನು ಕಂಡ ನೆರೆದಿದ್ದ ಸ್ಥಳೀಯ ಜನರು ಕಣ್ಣೀರು ಹಾಕಿದ್ದಾರೆ. ಇಡೀ ಕುಟುಂಬವೇ ಶೋಕ ಸಾಗರದಲ್ಲಿ ಮುಳುಗಿತ್ತು.
ಇದನ್ನು ಓದಿದ್ದೀರಾ? ಮಂಗಳೂರು | ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣ: ಮೂವರು ಆರೋಪಿಗಳ ಬಂಧನ
ಮೃತ ಚಂದ್ರು ಅವರಿಗೆ ಮೂರು ಜನ ಹೆಣ್ಣುಮಕ್ಕಳು. ಮೊದಲ ಮಗಳ ಮದುವೆ ವೇಳೆ ಕೋವಿಡ್‌ನಿಂದಾಗಿ ಸರಳವಾಗಿ ಮದುವೆ ಮಾಡಿದ್ದರು. ಹಾಗಾಗಿ ಕೊನೆಯ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕೆಂದು ಶಕ್ತಿಮೀರಿ ಸಿದ್ಧತೆಗಳನ್ನು ಮಾಡಿ ಕೊಂಡಿದ್ದರು. ಆದರೆ, ವಿಧಿ ಆಟವೇ ಬೇರೆಯಾಗಿತ್ತು. ಮಗಳನ್ನು ಸಂತೋಷವಾಗಿ ಧಾರೆ ಎರೆದುಕೊಡಬೇಕಾದ ಅಪ್ಪ ಮಗಳ ಕೊನೆಯ ಕ್ಷಣದಲ್ಲಿ ಹಾಗೂ ಮದುವೆಗೂ ಮುಂಚೆಯೇ ಸಾವಿನ ಮನೆ ಸೇರುವಂತಾಗಿದ್ದು ವಿಧಿಯಾಟವೇ ಸರಿ.
