ಮಹಾರಾಷ್ಟ್ರದ ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಆರೋಪಿ ಅಕ್ಷಯ್ ಶಿಂಧೆ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದರು. ಆತನನ್ನು ಎನ್‌ಕೌಂಟರ್ ಮಾಡಿ, ಹತ್ಯೆಗೈಯಲು ಐವರು ಪೊಲೀಸರು ಕಾರಣ ಎಂದು ನ್ಯಾಯಾಂಗ ತನಿಖೆ ಹೇಳಿದೆ.
ಆರೋಪಿ ಅಕ್ಷಯ್ ಶಿಂಧೆಯನ್ನು ಪೊಲೀಸರು ನಕಲಿ ಎನ್‌ಕೌಂಟರ್ ಮಾಡಿದ್ದಾರೆಂದು ಆರೋಪಿಯ ತಂದೆ ಅಣ್ಣಾ ಶಿಂಧೆ ಆರೋಪಿಸಿದ್ದರು. ಪೊಲೀಸರ ವಿರುದ್ಧ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿತ್ತು. ಇದೀಗ, ತನಿಖೆ ಪೂರ್ಣಗೊಂಡಿದ್ದು, ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‌ನ ಸಲ್ಲಿಸಲಾಗಿದೆ.
ವರದಿಯಲ್ಲಿ, ಆರೋಪಿ ಅಕ್ಷಯ್ ಶಿಂಧೆ ಸಾವಿಗೆ ಐವರು ಪೊಲೀಸರು ಕಾರಣ ಎಂದು ಹೇಳಲಾಗಿದೆ. ವರದಿಯನ್ನು ಪರಿಶೀಲಿಸಿರುವ ನ್ಯಾಯಮೂರ್ತಿ ರೇವತಿ ಮೋಹಿತೆ ದೇರೆ ಮತ್ತು ನೀಲಾ ಗೋಖಲೆ ಅವರಿದ್ದ ಪೀಠ, ಪೊಲೀಸರ ವಿರುದ್ಧ ಪ್ರಕರಣ ದಾಖಲಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
“ವರದಿಯ ಆಧಾರದಲ್ಲಿ ಎಫ್‌ಐಆರ್ ದಾಖಲಿಸಲು ನೀವು (ಸರ್ಕಾರ) ಬದ್ಧರಾಗಿದ್ದೀರಿ. ಈ ಪ್ರಕರಣವನ್ನು ಯಾವ ಸಂಸ್ಥೆ ತನಿಖೆ ನಡೆಸುತ್ತದೆ ಎಂಬುದನ್ನು ನ್ಯಾಯಾಲಯಕ್ಕೆ ತಿಳಿಸಬೇಕು” ಎಂದು ಕೋರ್ಟ್ ಹೇಳಿದೆ.
2024ರ ಆಗಸ್ಟ್‌ನಲ್ಲಿ, ಬದ್ಲಾಪುರ ಶಾಲೆಯ ಶೌಚಾಲಯದಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಲಾಗಿತ್ತು. ಘಟನೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಹಲವಾರು ಪ್ರತಿಭಟನೆಗಳು ನಡೆದಿದ್ದವು. ಪ್ರಕರಣ ಸಂಬಂಧ ಶಾಲೆಯ ಸಹಾಯಕ ಸಿಬ್ಬಂದಿ ಅಕ್ಷಯ್ ಶಿಂಧೆಯನ್ನು ಪೊಲೀಸರು ಬಂಧಿಸಿದ್ದರು. ಆತನನ್ನು ವಿಚಾರಣೆಗಾಗಿ ತಲೋಜ್ ಕಾರಾಗೃಹಕ್ಕೆ ಕರೆದೊಯ್ಯುವಾಗ ಸೆಪ್ಪಂಬರ್ 23ರಂದು ಪೊಲೀಸರು ಎನ್‌ಕೌಂಟರ್ ಮಾಡಿ, ಹತ್ಯೆಗೈದಿದ್ದರು. ಪ್ರತಿಭಟನೆ ಮತ್ತು ಸಾರ್ವಜನಿಕ ಆಕ್ರೋಶ ತಣಿಸಲು ಎನ್‌ಕೌಂಟರ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.