ಈಗಾಗಲೇ ಅತ್ಯಾಚಾರ, ಹನಿಟ್ರ್ಯಾಪ್, ಭ್ರಷ್ಟಾಚಾರ ಸೇರಿ ಹಲವು ಪ್ರಕರಣಗಳಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ದಿನಗೂಲಿ ಕಾರ್ಮಿಕರ ಮನೆಗಳನ್ನು ನೆಲಸಮ ಮಾಡಿರುವ ಆರೋಪದ ಮೇಲೆ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಪೀಣ್ಯ ಪ್ರಥಮ ದರ್ಜೆ ಕಾಲೇಜು ಬಳಿಯಿರುವ ಅಕ್ಕಮಹಾದೇವಿ ಕೊಳೆಗೇರಿಯಲ್ಲಿ ಸುಮಾರು 50 ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಶಾಸಕ ಮುನಿರತ್ನ ಮತ್ತು ಸಹಚರರು ಜೆಸಿಬಿ ತಂದು ಏಕಾಏಕಿ ಎಲ್ಲರ ಮನೆಯನ್ನು ನೆಲಸಮ ಮಾಡಿದ್ದಾರೆ ಎಂಬ ಗಂಭೀರ ಆರೋಪದ ಮೇಲೆ ದೂರು ನೀಡಲಾಗಿದೆ.
ವಸಂತ್ ಕುಮಾರ್, ಚನ್ನಕೇಶವ, ನವೀನ್, ರಾಮ , ಕಿಟ್ಟಿ , ಗಂಗಾ ಎಂಬುವವರು ಬಂದು ಮನೆ ನೆಲಸಮ ಮಾಡಿಸಿದ್ದಾರೆ. ಒಂದೊಂದು ಮನೆಯಲ್ಲಿ ಕೂಡಿಟ್ಟಿದ್ದ 20-70 ಸಾವಿರ ರೂ. ಹಣ 30 ಗ್ರಾಂ ಚಿನ್ನಾಭರಣ ಕೂಡ ನಾಶವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಶಾಸಕ ಮುನಿರತ್ನ ತಮ್ಮ ರಾಜಕೀಯ ಪ್ರಭಾವ ಬಳಸಿ ಕೂಲಿ ಕಾರ್ಮಿಕರ ಮೇಲೆ ದರ್ಪ ತೋರಿದ್ದಾರೆ ಎಂದು ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ರೋಹಿತ್ ಕಾಯ್ದೆ’ ಜಾರಿಗಾಗಿ ಆಗಬೇಕಿದೆ ‘ಜನಾಂದೋಲನ’
ಮುನಿರತ್ನ ವಿರುದ್ಧ ಈಗಾಗಲೇ ಸರಣಿ ಆರೋಪಗಳು ಕೇಳಿ ಬಂದಿದ್ದು, ಜೈಲಿಗೂ ಕೂಡ ಹೋಗಿ ಬಂದಿದ್ದಾರೆ. ರಾಜರಾಜೇಶ್ವರಿ ನಗರದ 40 ವರ್ಷದ ಮಹಿಳೆಯೊಬ್ಬರು ಶಾಸಕನ ವಿರುದ್ಧ ದೂರು ನೀಡಿದ್ದರು. 2020 ರಿಂದ 2022ರವರೆಗೆ ಶಾಸಕ ಮುನಿರತ್ನ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಮತ್ತು ಬೆದರಿಕೆ ಎಸಗಿದ್ದಾರೆ ಎಂದು ದೂರು ದಾಖಲಿಸಿದ್ದರು.
ಸಂತ್ರಸ್ತೆ ದೂರಿನ ಆಧಾರದ ಮೇಲೆ ರಾಮನಗರ ಜಿಲ್ಲೆಯ ಕಗ್ಗಲೀಪುರ ಠಾಣೆ ಪೊಲೀಸರು ಶಾಸಕ ಮುನಿರತ್ನ ವಿರುದ್ಧ ಎಫ್‌ಐಆರ್ ದಾಖಲಿಸಿ, ಮುನಿರತ್ನ ಅವರನ್ನು ಬಂಧನಕ್ಕೊಳಪಡಿಸಿದ್ದರು.
ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಗುತ್ತಿಗೆಯಲ್ಲಿ ಕಮಿಷನ್ ನೀಡುವಂತೆ ಗುತ್ತಿಗೆದಾರ ಚಲುವರಾಜ್ ಅವರಿಗೆ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಮಾಡಿದ ಆರೋಪದ ಮೇರೆಗೆ ವೈಯಾಲಿಕಾವಲ್ ಠಾಣೆಯಲ್ಲಿ ಮುನಿರತ್ನ ವಿರುದ್ಧ ಪ್ರತ್ಯೇಕ ಎಫ್‌ಐಆರ್ ದಾಖಲಾಗಿದ್ದವು.
ಈ ಕೃತ್ಯ ಬೆಳಕಿಗೆ ಬಂದ ನಂತರ ನಗರ ತೊರೆದು ಆಂಧ್ರ ಪ್ರದೇಶದತ್ತ ಹೊರಟಿದ್ದ ಮುನಿರತ್ನ ಅವರನ್ನು ಕೋಲಾರ ಜಿಲ್ಲೆ ಮುಳಬಾಗಿಲು ಸಮೀಪ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದ ಪೊಲೀಸರ ವಿಚಾರಣೆ ನಡುವಲ್ಲೇ ಶಾಸಕರ ವಿರುದ್ಧ ಅತ್ಯಾಚಾರ ಹಾಗೂ ಹನಿಟ್ರ್ಯಾಪ್ ಆರೋಪಗಳು ಕೇಳಿ ಬಂದವು. ಇದೀಗ ದಿನಗೂಲಿ ಕೆಲಸಗಾರರ ಮೇಲೂ ದೌರ್ಜನ್ಯ ನಡೆಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
